- Home
- Entertainment
- TV Talk
- ಕನ್ನಡ ಕಿರುತೆರೆ ಮತ್ತೊಬ್ಬ ನಟನ ಹೆಂಡತಿಗೆ ಅಶ್ಲೀಲ ಮೆಸೇಜ್! ಪವಿತ್ರಾಗೌಡ ಆಗಲಿಲ್ಲ ಪಲ್ಲವಿ!
ಕನ್ನಡ ಕಿರುತೆರೆ ಮತ್ತೊಬ್ಬ ನಟನ ಹೆಂಡತಿಗೆ ಅಶ್ಲೀಲ ಮೆಸೇಜ್! ಪವಿತ್ರಾಗೌಡ ಆಗಲಿಲ್ಲ ಪಲ್ಲವಿ!
ಹಾಸ್ಯ ಕಲಾವಿದ ಸಂಜು ಬಸಯ್ಯ ಅವರ ಪತ್ನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಯುವಕನಿಗೆ ಪೊಲೀಸರು ಮತ್ತು ಸಂಜು ಬಸಯ್ಯ ಬುದ್ಧಿವಾದ ಹೇಳಿದ್ದಾರೆ. ಯುವಕನ ಭವಿಷ್ಯದ ಹಿತದೃಷ್ಟಿಯಿಂದ ಕೇಸ್ ವಾಪಸ್ ಪಡೆಯುವುದಾಗಿ ಸಂಜು ಬಸಯ್ಯ ತಿಳಿಸಿದ್ದಾರೆ.

ಬೆಳಗಾವಿ (ಜು.11): ಕನ್ನಡ ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿಯಾಗಿರುವ ಹಾಸ್ಯಕಲಾವಿದ ಸಂಜು ಬಸಯ್ಯ ಅವರ ಪತ್ನಿ ಪ್ಪಲವಿ ಅವರಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಮೂಲಕ ವಿಜಯನಗರ ಜಿಲ್ಲೆಯ ಪಿಯುಸಿ ಓದುವ ವಿದ್ಯಾರ್ಥಿಯೊಬ್ಬ ಅಶ್ಲೀಲವಾಗಿ ಮೆಸೇಜ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಮೊದಲು ಪೊಲೀಸರಿಗೆ ತಿಳಿಸಿದ ಸಂಜು ಬಸಯ್ಯ ಅವರು, ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಹಾಜರಾದ ಸಂಜು ಬಸಯ್ಯ ಅವರು ವಿದ್ಯಾರ್ಥಿಗೆ ಬೈದು ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಜೊತೆಗೆ, ಅಶ್ಲೀಲವಾಗಿ ಮೆಸೇಜ್ ಮಾಡಿದವನು ವಿದ್ಯಾರ್ಥಿ ಆಗಿದ್ದು, ಅವನ ಭವಿಷ್ಯ ಹಾಳಾಗಬಾರದು ಎನ್ನುವ ಉದ್ದೇಶದಿಂದ ಕೇಸ್ ವಾಪಸ್ ಪಡೆಯುತ್ತೇನೆ. ವಿದ್ಯಾರ್ಥಿಗೆ ಬುದ್ಧಿ ಹೇಳಿ ಕಳಿಸುವಂತೆ ಪೊಲೀಸರಿಗೂ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಬಳಕೆ ನಿಯಂತ್ರಣವಿಲ್ಲದೇ ಹೋಗುತ್ತಿರುವ ಬೆನ್ನಲ್ಲೇ, ಬೆಳಗಾವಿಯ ಹಾಸ್ಯ ನಟ ಸಂಜು ಬಸಯ್ಯ ಅವರ ಪತ್ನಿಗೆ ಅಶ್ಲೀಲ ಸಂದೇಶ ಕಳಿಸಿದ ಯುವಕನಿಗೆ ಬುದ್ಧಿ ಕಲಿಸಿದ ಘಟನೆ ಬೆಳಕಿಗೆ ಬಂದಿದೆ. ಪಿಯು ಓದುತ್ತಿರುವ ಈ ಯುವಕ, ಇನ್ಸ್ಟಾಗ್ರಾಂ ಮೂಲಕ ಪಲ್ಲವಿ ಸಂಜು ಬಸಯ್ಯ ಅವರಿಗೆ ಅಶ್ಲೀಲ ಸಂದೇಶಗಳ ಜೊತೆಗೆ ಫೋಟೋಗಳನ್ನು ಕಳಿಸಿದ್ದಾನೆ.
ಪತ್ನಿಗೆ ಆಗಿರುವ ಅಶ್ಲೀಲ ಮೆಸೇಜ್ ಕಳಿಸಿದ್ದಕ್ಕೆ ಸಹಜವಾಗಿಯೇ ಕೋಪ ಬಂದಿತ್ತು. ಆದರೆ, ಹಾಸ್ಯ ನಟ ಸಂಜು ಬಸಯ್ಯ ಅವರು ಶಾಂತವಾಗಿರುವ ಮೂಲಕ ಪೊಲೀಸರನ್ನ ಸಂಪರ್ಕಿಸಿ ಕಾನೂನು ಕ್ರಮಕ್ಕೆ ಮುಂದಾದರು. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಈ ಯುವಕನ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕೂಡ ತಕ್ಷಣವೇ ಕ್ರಮ ಕೈಗೊಂಡರು.
ಅಶ್ಲೀಲ ಮೆಸೇಜ್ ಕಳಿಸಿದ ಯುವಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡ ಪೊಲೀಸರು, ಅವನ ಬಾಲ್ಯ, ಭವಿಷ್ಯ ಹಾಳಾಗಬಾರದೆಂದು ಬುದ್ಧಿ ಹೇಳಿದ್ದಾರೆ. ಇದೇ ವೇಳೆ, ಸಂಜು ಬಸಯ್ಯ ಕೂಡ ಯುವಕನಿಗೆ ಬುದ್ಧಿಮಾತು ಹೇಳಿ, 'ನಿನ್ನ ನಡವಳಿಕೆಯಿಂದ ನಿಮ್ಮ ಅಪ್ಪ ಅಮ್ಮನಿಗೆ ನಾಚಿಕೆ ಆಗುತ್ತದೆ. ಸಾಮಾಜಿಕ ಜಾಲತಾಣವೇ ಜೀವನವಲ್ಲ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯವನ್ನು ಮಾಡಬೇಡ' ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಈ ಘಟನೆಯು ಇತ್ತೀಚೆಗೆ ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಮಾಡಿದ ಪ್ರಕರಣವನ್ನು ನೆನಪಿಗೆ ಬರುವಂತೆ ಮಾಡಿದೆ. ಆದರೆ, ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಭೀಕರವಾಗಿ ಥಳಿಸಿ ಕೊಲೆ ಮಾಡಿ ಬೀದಿ ಹೆಣವಾಗಿ ಬೀಸಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಕೋರ್ಟ್‌ನಲ್ಲಿ ಕೇಸ್ ವಿಚಾರಣೆ ನಡೆಯುತ್ತಿದೆ. ದರ್ಶನ್, ಪವಿತ್ರಾಗೌಡ ಸೇರಿದಂತೆ 14 ಜನರ ಗ್ಯಾಂಗ್ ಕೋರ್ಟ್‌ಗೆ ಅಲೆದಾಡುತ್ತಿದೆ.
ಆದರೆ, ಇಲ್ಲಿ ಹಾಸ್ಯ ಕಲಾವಿದ ಸಂಜು ಬಸಯ್ಯ ಹೆಂಡತಿಗೆ ಯುವಕನೊಬ್ಬ ಅಶ್ಲೀಲ ಮೆಸೇಜ್ ಮಾಡಿದ್ದರೂ ಬುದ್ಧಿವಾದ ಹೇಳಿ ಕಳಿಸುವ ಮೂಲಕ ಸಮಾಜಕ್ಕೆ ಮಾದರಿ ಆಗಿದ್ದಾರೆ. ಎಲ್ಲರೂ ಸಮಸ್ಯೆ ಬಂದಾಗ ನಿಧಾನವಾಗಿ ಆಲೋಚನೆ ಮಾಡಿ ಕಾನೂನಾತ್ಮಕವಾಗಿ ಕ್ರಮಗಳನ್ನು ಕೈಗೊಂಡಲ್ಲಿ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂಬುದಕ್ಕೆ ಸಂಜು ಬಸಯ್ಯ ಅವರ ನಡೆ ಸ್ಪಷ್ಟ ಉದಾಹರಣೆ ಆಗಿದೆ.
ಅಶ್ಲೀಲ ಮೆಸೇಜ್ ಕಳಿಸುವಂತಹ ಕೃತ್ಯಗಳಿಗೆ ಕಠಿಣ ಪ್ರತಿಕ್ರಿಯೆ ಬೇಕಾಗಿದ್ದರೂ, ಹಾಸ್ಯ ನಟ ಸಂಜು ಬಸಯ್ಯ ಅವರು ಬುದ್ಧಿವಾದದ ಮೂಲಕ ಒಬ್ಬ ಯುವಕನ ಭವಿಷ್ಯ ರಕ್ಷಿಸಲು ಪ್ರಯತ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಶಿಸ್ತಿನ ಅವಶ್ಯಕತೆ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳ ಪ್ರಾಮುಖ್ಯತೆ ಈ ಘಟನೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.