ಪಕ್ಕಾ ದಾವಣಗೆರೆ ಸ್ಟೈಲ್ ಬೆಣ್ಣೆ ದೋಸೆ ಮನೆಯಲ್ಲೇ ಮಾಡ್ಬೇಕಾ? ಮರಿದೇ ಈ ಪದಾರ್ಥ ಹಾಕಿ
Davangere Benne Dosa Recipe ಪಕ್ಕಾ ದಾವಣಗೆರೆ ಸ್ಟೈಲ್‌ನಲ್ಲಿ ಬೆಣ್ಣೆ ದೋಸೆ ಮನೆಯಲ್ಲಿ ಮಾಡಬೇಕಾ? ಇಲ್ಲಿದೆ ಸುಲಭ ವಿಧಾನ. ಫೋಟೋಗಳೊಂದಿಗೆ ಹಂತ ಹಂತವಾಗಿ ಬೆಣ್ಣೆ ದೋಸೆ ಮಾಡುವ ವಿಧಾನ ತಿಳಿಸಲಾಗಿದೆ. ನೀವೂ ಪ್ರಯತ್ನಿಸಬಹುದು.

ದಾವಣಗೆರೆಯ ಗರಿಗರಿ ಬೆಣ್ಣೆ ದೋಸೆ ಮಾಡೋದೇಗೆ? ಇಲ್ಲಿದೆ ರೆಸಿಪಿ
ದಾವಣಗೆರೆಗೂ ಬೆಣ್ಣೆ ದೋಸೆಗೆ ಬಿಡಿಸಲಾಗದ ನಂಟು. ಬೆಣ್ಣೆ ದೋಸೆ ಎಂದರೆ ದಾವಣಗೆರೆ ನೆನಪಾಗುತ್ತೆ, ದಾವಣಗೆರೆ ಎಂದರೆ ಬೆಣ್ಣೆ ದೋಸೆ ನೆನೆದು ಬಾಯಲ್ಲಿ ನೀರೂರಿಸುತ್ತೆ. ದಾವಣಗೆರೆ ಬೆಣ್ಣೆ ದೋಸೆ ಎಂದರೆ ಕರ್ನಾಟಕದಲ್ಲೇ ಪ್ರಸಿದ್ಧ. ಬೆಣ್ಣೆ ದೋಸೆ ಸವಿಯದ ಜನರೇ ಇಲ್ಲ. ಪ್ರತಿಯೊಬ್ಬರು ಬೆಣ್ಣೆ ದೋಸೆಯನ್ನ ಆರ್ಡರ್ ಮಾಡೋದು. ಬಹುತೇಕರು ಮನೆಯಲ್ಲೇ ದೋಸೆ ಮಾಡಿದ್ರೂ, ಬೆಣ್ಣೆ ದೋಸೆ ತಿನ್ನೋಕೆ ಹೋಟೆಲ್‌ಗಳಿಗೆ ಹೋಗೋದು. ಇದಕ್ಕೆ ಕಾರಣ ಮನೆಯಲ್ಲಿ ಬೆಣ್ಣೆ ದೋಸೆ ಮಾಡುವ ವಿಧಾನವೇ ಬಹುತೇಕರಿಗೆ ಗೊತ್ತಿಲ್ಲ. ಹೀಗಾಗಿ ಅದರ ನಿಜವಾದ ರುಚಿ ಸವಿಯಲು ಬೆಣ್ಣೆ ದೋಸೆ ಸಿಗುವ ಹೋಟೆಲ್‌ಗಳಿಗೆ ಹೋಗುತ್ತಾರೆ. ಆದರೆ ಬೆಣ್ಣೆ ದೋಸೆ ಮನೆಯಲ್ಲೇ ಮಾಡುವುದು ಸುಲಭ. ಗರಿಗರಿ ಬೆಣ್ಣೆದೋಸೆ ಹೇಗೆ ಮಾಡಬೇಕು ಎನ್ನುವ ವಿಧಾನ (ರೆಸಿಪಿ) ಇಲ್ಲಿ ಫೋಟೋ ಸಹಿತ ಕೊಡಲಾಗಿದೆ. ನೀವೂ ಪ್ರಯತ್ನಿಸಬಹುದು.
ದಾವಣಗೆರೆ ಬೆಣ್ಣೆ ದೋಸೆ ರೆಸಿಪಿ: ವಿಶೇಷತೆ ಏನು?
ದಾವಣಗೆರೆ ಬೆಣ್ಣೆ ದೋಸೆ
ಅಕ್ಕಿ, ಉದ್ದಿನ ಬೆಳೆ, ಮಂಡಕ್ಕಿ ಬಳಸಿ ತಯಾರಿಸುವ ಈ ದೋಸೆ ಮೇಲ್ಮೈ ಗರಿಗರಿಯಾಗಿದ್ದರೆ ಒಳಗೆ ಮಾತ್ರ ಬಾಯಲ್ಲಿಟ್ಟರೆ ಕರಗುವಷ್ಟು ಮೃದುವಾಗಿರುತ್ತೆ. ಮೇಲಿನಿಂದ ಬೆಣ್ಣೆ ಹಾಕುವುದರಿಂದ ಅದರ ರುಚಿ ಇನ್ನಷ್ಟು ಹೆಚ್ಚಿಸುತ್ತೆ. ಸಾಮಾನ್ಯವಾಗಿ ಇದನ್ನು ಆಲೂ ಪಲ್ಯ ಇತರೆ ಖಾರವಾದ ತೆಂಗಿನ ಚಟ್ನಿಯೊಂದಿಗೆ ಬಡಿಸಲಾಗುತ್ತೆ.
ದಾವಣಗೆರೆ ಬೆಣ್ಣೆ ದೋಸೆಯ ವಿಶೇಷತೆ ಏನು?
ದೋಸೆಗಳಲ್ಲಿ ಸಾಕಷ್ಟು ವರೈಟಿಗಳಿವೆ, ಸೆಟ್ ದೋಸೆ, ಮಸಾಲ ದೋಸೆ, ಸೆಟ್ ದೊಸೆ.. ಆದರೆ ಇವ್ಯಾವೂ ಸ್ವಾದ ರಚಿಯಲ್ಲಿ ಬೆಣ್ಣೆ ದೋಸೆಯನ್ನ ಸರಿಗಟ್ಟಲಾರವು! ಬೆಣ್ಣೆ ದೋಸೆಯೇ ರುಚಿಯೇ ಅಂತದ್ದು. ಇದು ದಾವಣಗೆರೆ ಕರ್ನಾಟಕದ ಮಧ್ಯಭಾಗದಲ್ಲಿ ಈ ತಿಂಡಿ ಪ್ರಸಿದ್ಧವಾಗಿದ್ದರಿಂದಲೇ ಅದಕ್ಕೆ ದಾವಣಗೆರೆ ಬೆಣ್ಣೆ ದೋಸೆ ಎಂದೇ ಹೆಸರು.
ದೋಸೆಯನ್ನು ಸಾಮಾನ್ಯವಾಗಿ ಅಕ್ಕಿ, ಬೇಳೆ ರಾತ್ರಿ ನೆನೆಸಿ, ರುಬ್ಬಿ, ಹುದುಗಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇತರೆ ದೋಸೆಗಗಳಿಗೆ ಎಣ್ಣೆ ಹಾಕಿದರೆ ಇದಕ್ಕೆ ಬೆಣ್ಣೆ ಹಚ್ಚಲಾಗುತ್ತೆ ಇದೇ ಇದರ ವಿಶೇಷತೆ. ದಾವಣಗೆರೆ ಬೆಣ್ಣೆ ದೋಸೆ ಸಾಮಾನ್ಯ ದೋಸೆಯಂತಿರುವುದಿಲ್ಲ. ಇದರ ರುಚಿ, ಘಮ ಎರಡೂ ವಿಭಿನ್ನವಾಗಿರುತ್ತವೆ. ಹೊರಭಾಗ ಗರಿಗರಿಯಾಗಿದ್ದರೂ ದೋಸೆ ಒಳಭಾಗದಲ್ಲಿ ಮೃದುವಾಗಿ ಮತ್ತು ಹಗುರವಾಗಿರುತ್ತದೆ.
ಈ ದೋಸೆಗೆ ಸಾಮಾನ್ಯವಾಗಿ ತಾಜಾ ಬಿಳಿ ಬೆಣ್ಣೆಯನ್ನು ಬಳಸಲಾಗುತ್ತದೆ. ಇದರಿಂದ ವಿಶೇಷ ರುಚಿ ಬರುತ್ತದೆ. ಬಿಳಿ ಬೆಣ್ಣೆ ಸಿಗದಿದ್ದರೆ ಹಳದಿ ಬೆಣ್ಣೆಯನ್ನೂ ಬಳಸಬಹುದು. ಬೆಣ್ಣೆ ಬಳಸಲು ಇಷ್ಟವಿಲ್ಲದವರು ಎಣ್ಣೆ ಹಾಕಿಯೂ ದೋಸೆ ತಯಾರಿಸಬಹುದು. ದಾವಣಗೆರೆ ಬೆಣ್ಣೆ ದೋಸೆಯನ್ನು ಸಾಮಾನ್ಯವಾಗಿ ಆಲೂಗಡ್ಡೆ ಪಲ್ಯ ಮತ್ತು ಖಾರವಾದ ತೆಂಗಿನಕಾಯಿ ಚಟ್ನಿ ಜೊತೆ ಬಡಿಸಲಾಗುತ್ತದೆ. ಆಲೂಗಡ್ಡೆ ಪಲ್ಯಕ್ಕೆ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ನೀಡಬಹುದು. ಚಟ್ನಿ ಸ್ವಲ್ಪ ಖಾರವಾಗಿರುತ್ತದೆ. ಕಡಿಮೆ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ಚಟ್ನಿ, ಆಲೂಗಡ್ಡೆಯ ವಿಶಿಷ್ಟ ರುಚಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಬೆಣ್ಣೆ ದೋಸೆಯನ್ನು ಬಿಸಿಬಿಸಿಯಾಗಿ ತಿಂದರೆ ಹೆಚ್ಚು ರುಚಿಯಾಗಿರುತ್ತದೆ. ಆದರೆ ದೋಸೆ ತಣ್ಣಗಾದ ನಂತರವೂ ಮೃದುವಾಗಿಯೇ ಇರುವುದರಿಂದ ಟಿಫಿನ್ ಬಾಕ್ಸ್‌ಗೂ ಹಾಕಿಕೊಂಡು ಹೋಗಬಹುದು.
ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ ತಿಳಿಯೋಣ
ಚೆನ್ನಾಗಿ ತೊಳೆಯಿರಿ:
ಮೊದಲಿಗೆ ಒಂದು ಪಾತ್ರೆಯಲ್ಲಿ 1 ಕಪ್ ಇಡ್ಲಿ ದೋಸೆ ಅಕ್ಕಿ ಅಥವಾ ಪಾರ್ಬಾಯ್ಲ್ಡ್ ಅಕ್ಕಿ (ಸುಮಾರು 200 ಗ್ರಾಂ), ¼ ಕಪ್ ಉದ್ದಿನ ಬೇಳೆ (ಸುಮಾರು 50 ಗ್ರಾಂ) ಮತ್ತು ¼ ಟೀ ಸ್ಪೂನ್ ಮೆಂತ್ಯ ಕಾಳು ತೆಗೆದುಕೊಳ್ಳಿ. ನಂತರ ಚೆನ್ನಾಗಿ ತೊಳೆಯಿರಿ. ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯ ಕಾಳನ್ನು 2 ಬಾರಿ ಚೆನ್ನಾಗಿ ತೊಳೆಯಿರಿ.
ತೊಳೆದ ನಂತರ ಅದರಲ್ಲಿರುವ ನೀರನ್ನು ಸಂಪೂರ್ಣವಾಗಿ ಸೋಸಿ ಪಕ್ಕಕ್ಕೆ ಇಡಿ. ಈಗ ಮಂಡಕ್ಕಿ ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ 1½ ಕಪ್ ಮಂಡಕ್ಕಿ (ಸುಮಾರು 50 ಗ್ರಾಂ) ತೆಗೆದುಕೊಳ್ಳಿ. ಬೇಕಾದರೆ ಮಂಡಕ್ಕಿಯನ್ನೂ ಒಮ್ಮೆ ನೀರಿನಲ್ಲಿ ತೊಳೆಯಬಹುದು. ಆದರೆ ತೊಳೆದ ಮಂಡಕ್ಕಿ ಸ್ವಲ್ಪ ಅಂಟಿಕೊಳ್ಳುವಂತಾಗುತ್ತದೆ. ಹಾಗಾಗಿ ನೇರವಾಗಿಯೂ ನೆನೆಸಬಹುದು.
ತೊಳೆದ ಪದಾರ್ಥ ಸೇರಿಸಿ ನೆನಸಿ
ಈಗ ತೊಳೆದ ಅಕ್ಕಿ, ಉದ್ದಿನ ಬೆಳೆ, ಮಂತ್ಯೆ ಕಾಳು ಇರುವ ಪಾತ್ರೆ ಮಂಡಕ್ಕಿ ಸೇರಿಸಿ ನೆನಸಿಡಿ. 3ರಿಂದ 3½ ಕಪ್ ನೀರು ಹಾಕಿ ಚೆನ್ನಾಗಿ ಕಲಸಿ. ಪಾತ್ರೆಯನ್ನು ಮುಚ್ಚಿ 5ರಿಂದ 6 ಗಂಟೆಗಳ ಕಾಲ ನೆನೆಸಿಡಿ. ಇದು ರಾತ್ರಿಯೇ ನೆನಸಿಟ್ಟುಕೊಂಡರೆ ಬೆಳಗ್ಗೆ ಬೆಣ್ಣೆ ದೋಸೆ ಮಾಡಲು ಉತ್ತಮ.
ಸುಮಾರು 6 ಗಂಟೆಗಳ ನಂತರ ಅಕ್ಕಿ, ಬೇಳೆ, ಮೆಂತ್ಯ ಮಂಡಕ್ಕಿ ಚೆನ್ನಾಗಿ ನೆನೆದಿರುತ್ತವೆ. ನೀರನ್ನು ಚೆನ್ನಾಗಿ ಸೋಸಿ, ನೆನೆಸಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ. ಮಂಡಕ್ಕಿಯಲ್ಲಿ ಹೆಚ್ಚು ನೀರು ಉಳಿಯದಂತೆ ನೋಡಿಕೊಳ್ಳಿ. ಇದಕ್ಕೆ 1 ಟೇಬಲ್ ಸ್ಪೂನ್ ಮೈದಾ ಸೇರಿಸಿ. ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಎಲ್ಲವನ್ನೂ ನುಣ್ಣಗೆ ರುಬ್ಬಿಕೊಳ್ಳಿ. ಅಕ್ಕಿ ಸ್ವಲ್ಪ ರವೆ ರೀತಿಯ ಕಣಕಣವಾಗಿದ್ದರೂ ಪರವಾಗಿಲ್ಲ. ಬೇಕಾದರೆ ಹಿಟ್ಟನ್ನು ಎರಡು ಹಂತದಲ್ಲಿ ರುಬ್ಬಬಹುದು. ಮೊದಲ ಹಂತದಲ್ಲಿ ½ ಕಪ್ ನೀರು ಮತ್ತು ಎರಡನೇ ಹಂತದಲ್ಲಿ ¼ ಕಪ್ ನೀರು ಹಾಕಬಹುದು. ಒಟ್ಟು ಸುಮಾರು ¾ ಕಪ್ ನೀರು ರುಬ್ಬಲು ಬೇಕಾಗಬಹುದು.
ಮಿಕ್ಸರ್ ಹೆಚ್ಚು ಬಿಸಿಯಾದರೆ ಸ್ವಲ್ಪ ಸಮಯ ನಿಲ್ಲಿಸಿ, ತಣ್ಣಗಾದ ನಂತರ ಮತ್ತೆ ರುಬ್ಬಿ.
ಈಗ ರುಬ್ಬಿದ ಹಿಟ್ಟನ್ನು ದೊಡ್ಡ ಪಾತ್ರೆಗೆ ಹಾಕಿ. ಎರಡು ಹಂತದಲ್ಲಿ ರುಬ್ಬಿದ್ದರೆ ಎರಡೂ ಹಿಟ್ಟನ್ನು ಒಂದೇ ಪಾತ್ರೆಯಲ್ಲಿ ಸೇರಿಸಿ. ¼ ಟೀ ಸ್ಪೂನ್ ಸಕ್ಕರೆ ಹಾಕಿ. ಒಂದು ವೇಳೆ ನೀವು ಬಿಸಿ, ಹೆಚ್ಚು ಬಿಸಿಲಿರುವ ಉಷ್ಣದ ವಾತಾವರಣದಲ್ಲಿ ವಾಸಿಸುತ್ತಿದ್ದರೆ ಸಕ್ಕರೆ ಹಾಕುವುದು ಬೇಡ. ಆ ಸಂದರ್ಭದಲ್ಲಿ ಹುದುಗಿಸುವ ಮೊದಲು ಉಪ್ಪು ಹಾಕಿ, ಹುದುಗಿದ ನಂತರ ದೋಸೆ ಮಾಡುವ ಮುನ್ನ ಸಕ್ಕರೆ ಸೇರಿಸಬಹುದು. ಬಳಿಕ ಹಿಟ್ಟನ್ನು ಚೆನ್ನಾಗಿ ಕಲಸಿ.
ಪಾತ್ರೆಯನ್ನು ಮುಚ್ಚಿ 8ರಿಂದ 9 ಗಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ. ನಿಮ್ಮ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ಹೆಚ್ಚು ಸಮಯವೂ ಬೇಕಾಗಬಹುದು. ಚಳಿ ಹೆಚ್ಚಿದ್ದರೆ 16ರಿಂದ 20 ಗಂಟೆಗಳವರೆಗೆ ಹುದುಗಿಸಬೇಕಾಗಬಹುದು. ಬಿಸಿಯಾದ ವಾತಾವರಣದಲ್ಲಿ 8 ಗಂಟೆಯಲ್ಲಿಯೇ ಹುದುಗಬಹುದು. ಹಿಟ್ಟು ಚೆನ್ನಾಗಿ ಹುದುಗಿದ ನಂತರ ಅದರ ಪ್ರಮಾಣ ಸ್ವಲ್ಪ ಹೆಚ್ಚಾಗಿ ಕಾಣಿಸುತ್ತದೆ. ಈಗ ಅಡುಗೆ ಸೋಡಾ ಮತ್ತು ಉಪ್ಪು ಸೇರಿಸಿ.
ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ
ದೋಸೆ ಮಾಡುವ ಮುನ್ನ
ದೋಸೆ ಮಾಡುವ ಮುನ್ನ ಒಂದು ¼ ಟೀ ಸ್ಪೂನ್ ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಯುವಂತೆ ಕಲಸಿ. ಬಳಿಕ ದೋಸೆ ಮಾಡಲು ಪ್ರಾರಂಭಿಸಿ.
ಈಗ ಬೆಣ್ಣೆ ದೋಸೆ ಮಾಡುವ ವಿಧಾನ:
ಈಗ ಬೆಣ್ಣೆ ದೋಸೆ ಮಾಡಲು ಎಲ್ಲವೂ ಸಿದ್ಧವಾದ ಬಳಿಕ ಈಗ ಕಬ್ಬಿಣದ ತವಾ ಬಿಸಿ ಮಾಡಲು ಇಡಿ. ಬಿಸಿಯಾದ ನಂತರ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಚಮಚ ಅಥವಾ ಅರ್ಧ ಈರುಳ್ಳಿಯಿಂದ ತವಾದ ಸುತ್ತಲೂ ಹರಡಿ. ನಾನ್‌ಸ್ಟಿಕ್ ತವಾ ಬಳಸುತ್ತಿದ್ದರೆ ಎಣ್ಣೆ ಹಚ್ಚುವ ಅಗತ್ಯವಿಲ್ಲ. ಕಬ್ಬಿಣದ ತವಾ ಬಳಸುತ್ತಿದ್ದರೆ ಅದು ಚೆನ್ನಾಗಿ ಸೀಸನ್ ಆಗಿರುವ ತವಾ ಆಗಿರಬೇಕು. ಆಗ ದೋಸೆ ತವಾಕ್ಕೆ ಅಂಟಿಕೊಳ್ಳುವುದಿಲ್ಲ. ತವಾದ ಮೇಲೆ ನೆನೆಸಿದ ಹಿಟ್ಟನ್ನು ಹಾಕಿ ಸ್ವಲ್ಪ ದಪ್ಪವಾಗಿ ದೋಸೆ ಹರಡಿ. ಬೇಕಾದರೆ ತೆಳುವಾಗಿಯೂ ಹರಡಬಹುದು. ಉರಿಯನ್ನು ಹೆಚ್ಚಿಸದೆ ಮಾಧ್ಯಮ ಪ್ರಮಾಣಕ್ಕೆ ಇಳಿಸಿ. ದೋಸೆಯಲ್ಲಿ ಸಣ್ಣ ರಂಧ್ರಗಳು ಕಾಣಿಸಲಾರಂಭಿಸುತ್ತವೆ. ಆಗ ದೋಸೆ ಸರಿಯಾಗಿ ಬೇಯುತ್ತಿದೆ ಎಂದರ್ಥ. ಮಧ್ಯಮ ಉರಿಯಲ್ಲಿ ದೋಸೆಯ ಮೇಲ್ಭಾಗ ಗಟ್ಟಿಯಾಗಿ ಬೇಯುವವರೆಗೆ ಬೇಯಿಸಿ.
ಈಗ ಬೆಣ್ಣೆ ಹಾಕಿ:
ದೋಸೆಯ ಮೇಲ್ಭಾಗ ಬೆಂದ ನಂತರ ಅದರ ಮೇಲೆ ಸ್ವಲ್ಪ ಮೃದುವಾದ ಬೆಣ್ಣೆ ಹಾಕಿ. ಬಿಳಿ ಬೆಣ್ಣೆ ಇದ್ದರೆ ಅದನ್ನು ಬಳಸಬಹುದು. ಇಲ್ಲದಿದ್ದರೆ ಹಳದಿ ಬೆಣ್ಣೆಯನ್ನೂ ಬಳಸಬಹುದು. ಚಮಚ ಅಥವಾ ಸ್ಪ್ಯಾಚುಲಾ ಬಳಸಿ ಬೆಣ್ಣೆಯನ್ನು ದೋಸೆಯ ಮೇಲೆ ಎಲ್ಲೆಡೆ ನಿಧಾನವಾಗಿ ಹರಡಿ. ಸ್ಪ್ಯಾಚುಲಾ ಬಳಸಿ ದೋಸೆಯನ್ನು ನಿಧಾನವಾಗಿ ತಿರುಗಿಸಿ. ದೋಸೆ ಇನ್ನಷ್ಟು ಕಂದು ಬಣ್ಣದಲ್ಲಿ ಗರಿಗರಿಯಾಗಬೇಕಾದರೆ ತಿರುಗಿಸುವ ಮೊದಲು ಸ್ವಲ್ಪ ಹೆಚ್ಚು ಸಮಯ ಬೇಯಿಸಬಹುದು. ದೋಸೆಯನ್ನು ಇನ್ನೂ ಕೆಲವು ಸೆಕೆಂಡ್‌ಗಳು ಅಥವಾ ಸುಮಾರು ಒಂದು ನಿಮಿಷ ಬೇಯಿಸಿ. ನಂತರ ದೋಸೆಯನ್ನು ಮಡಚಿ.
ಈಗ ಬೆಣ್ಣೆ ದೋಸೆ ರೆಡಿ
ಈಗ ಬಿಸಿಬಿಸಿಯಾದ ದಾವಣಗೆರೆ ಬೆಣ್ಣೆ ದೋಸೆ ರೆಡಿ ಆಗುತ್ತೆ. ಆಲೂಗಡ್ಡೆ ಪಲ್ಯ ಮತ್ತು ಖಾರವಾದ ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿ ಸೇರಿಸಿ. ದೋಸೆಯನ್ನು ತಕ್ಷಣ ಬಡಿಸಲು ಸಾಧ್ಯವಾಗದಿದ್ದರೆ ರೊಟ್ಟಿ ಇಡುವ ಬುಟ್ಟಿ ಅಥವಾ ಕ್ಯಾಸರೋಲ್‌ನಲ್ಲಿ ಒಂದರ ಮೇಲೊಂದು ಇಟ್ಟು ಬೆಚ್ಚಗೆ ಬಡಿಸಬಹುದು. ಬಡಿಸುವಾಗ ದೋಸೆಯ ಮೇಲೆ ಮತ್ತಷ್ಟು ಬೆಣ್ಣೆ ಹಾಕಬಹುದು. ಆಲೂಗಡ್ಡೆ ಪಲ್ಯವನ್ನು ದೋಸೆಯೊಳಗೆ ಇಟ್ಟು ಮಡಚಿ ಬಡಿಸಬಹುದು ಅಥವಾ ಪಲ್ಯವನ್ನು ಪ್ರತ್ಯೇಕವಾಗಿಯೂ ಬಡಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.