- Home
- Karnataka Districts
- ಭತ್ತದ ಕಣಜ ಗಂಗಾವತಿಯಲ್ಲಿ ತೆಲಂಗಾಣದ ‘ಅನ್ನಭಾಗ್ಯ’ ಅಕ್ಕಿ ಪತ್ತೆ! ರೈಸ್ ಮಿಲ್‌ನಲ್ಲಿ ಭಾರಿ ಗೋಲ್‌ಮಾಲ್!
ಭತ್ತದ ಕಣಜ ಗಂಗಾವತಿಯಲ್ಲಿ ತೆಲಂಗಾಣದ ‘ಅನ್ನಭಾಗ್ಯ’ ಅಕ್ಕಿ ಪತ್ತೆ! ರೈಸ್ ಮಿಲ್‌ನಲ್ಲಿ ಭಾರಿ ಗೋಲ್‌ಮಾಲ್!
ಭತ್ತದ ಕಣಜ ಗಂಗಾವತಿಯ ರೈಸ್ ಮಿಲ್‌ಗಳಲ್ಲಿ ನೆರೆಯ ತೆಲಂಗಾಣದ ಪಡಿತರ ಅಕ್ಕಿ ಅಕ್ರಮವಾಗಿ ಪತ್ತೆಯಾಗಿದೆ. ಈ ಅಕ್ಕಿಯನ್ನು ಪಾಲಿಶ್ ಮಾಡಿ, ಹೊಸ ಬ್ರ್ಯಾಂಡ್ ಹೆಸರಿನಲ್ಲಿ ದುಬಾರಿ ಬೆಲೆಗೆ ಮರು-ಮಾರಾಟ ಮಾಡುವ ಅಂತರರಾಜ್ಯ ಜಾಲದ ಶಂಕೆ ವ್ಯಕ್ತವಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕೊಪ್ಪಳ (ಆ.26): ಭತ್ತದ ಕಣಜ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಂತರರಾಜ್ಯ ಪಡಿತರ ಅಕ್ಕಿಯ ಅಕ್ರಮ ದಂಧೆಯೊಂದು ಬಯಲಿಗೆ ಬಂದಿದೆ. ಗಂಗಾವತಿಯ ಕೆಲ ಪ್ರಮುಖ ರೈಸ್ ಮಿಲ್‌ಗಳಲ್ಲಿ ನೆರೆಯ ತೆಲಂಗಾಣ ಸರ್ಕಾರದ 'ಅನ್ನಭಾಗ್ಯ' (ಪಡಿತರ) ಅಕ್ಕಿ ಮೂಟೆಗಳು ನೂರಾರು ಸಂಖ್ಯೆಯಲ್ಲಿ ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ತೀವ್ರ ಸಂಚಲನ ಹಾಗೂ ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಉತ್ತಮ ಗುಣಮಟ್ಟದ ಸೋನಾ ಮಸೂರಿ ಭತ್ತಕ್ಕೆ ಹೆಸರಾದ ಗಂಗಾವತಿಗೆ ನೆರೆಯ ರಾಜ್ಯದಿಂದ ಪಡಿತರ ಅಕ್ಕಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂದಿದ್ದು ಯಾಕೆ ಎಂಬ ಪ್ರಶ್ನೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಪಾಲಿಶ್ ಮಾಡಿ ರೀ-ಪ್ಯಾಕ್ ಮಾಡುವ ಶಂಕೆ!
ಮೂಲಗಳ ಪ್ರಕಾರ, ತೆಲಂಗಾಣದಲ್ಲಿ ಬಡವರಿಗೆ ವಿತರಿಸಲಾಗುವ ಉಚಿತ/ರಿಯಾಯಿತಿ ದರದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಕಲೆಕ್ಟ್ ಮಾಡಿ, ಲಾರಿಗಳ ಮೂಲಕ ಗಂಗಾವತಿಯ ರೈಸ್ ಮಿಲ್‌ಗಳಿಗೆ ತರಲಾಗುತ್ತಿದೆ. ಇಲ್ಲಿನ ಮಿಲ್‌ಗಳಲ್ಲಿ ಆ ಪಡಿತರ ಅಕ್ಕಿಯನ್ನು ಪಾಲಿಶ್ (Polish) ಮಾಡಿ, ಹೊಸ ಬ್ರ್ಯಾಂಡೆಡ್ ಚೀಲಗಳಿಗೆ ತುಂಬಿ, ಪ್ರೀಮಿಯಂ ಕ್ವಾಲಿಟಿ ಅಕ್ಕಿಯ ಹೆಸರಿನಲ್ಲಿ ಮುಕ್ತ ಮಾರುಕಟ್ಟೆಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳ ದೌಡು: ತೀವ್ರ ಪರಿಶೀಲನೆ
ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತಂಡವು ಗಂಗಾವತಿಯ ರೈಸ್ ಮಿಲ್‌ಗಳಿಗೆ ದಾಳಿ ನಡೆಸಿದ್ದು, ಪತ್ತೆಯಾಗಿರುವ ಅಕ್ಕಿ ಮೂಟೆಗಳು ಎಲ್ಲಿಂದ ಬಂದವು? ಇದಕ್ಕೆ ಸಂಬಂಧಿಸಿದ ಬಿಲ್ ಮತ್ತು ಇ-ವೇ ಬಿಲ್‌ಗಳು ಇವೆಯೇ? ಎಂಬ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುತ್ತಿದೆ.
ರೈಸ್ ಮಿಲ್‌ನಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಪ್ರತ್ಯಕ್ಷ!
ಈ ಅಕ್ಕಿ ಪತ್ತೆಯಾದ ರೈಸ್ ಮಿಲ್‌ನಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ ಅವರು ದಿಢೀರ್ ಪ್ರತ್ಯಕ್ಷರಾಗಿರುವುದು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಹುಬ್ಬೇರಿಸಿದೆ.
ಪಡಿತರ ಅಕ್ಕಿ ಮೂಟೆಗಳು ಪತ್ತೆಯಾದ ಜಾಗದಲ್ಲಿ ಆಡಳಿತಾರೂಢ ಪಕ್ಷದ ಪ್ರಮುಖ ಮುಖಂಡ ಹಾಗೂ ಗ್ಯಾರಂಟಿ ಸಮಿತಿಯ ಅಧ್ಯಕ್ಷರೇ ಹಾಜರಿದ್ದದ್ದು ಹಲವು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಈ ಅಂತರರಾಜ್ಯ ಅಕ್ರಮ ದಂಧೆಯ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

