- Home
- Karnataka Districts
- Bengaluru Urban
- ಸರ್ಕಾರವೇ ಬ್ಯಾನ್ ಮಾಡಿದ ಗಿಡಗಳು ಲಾಲ್‌ಬಾಗ್‌ನಲ್ಲಿ ಮಾರಾಟ; ಈ ಗಿಡವಿದ್ದರೆ ಉಸಿರಾಟಕ್ಕೆ ಸಮಸ್ಯೆ ಖಚಿತ!
ಸರ್ಕಾರವೇ ಬ್ಯಾನ್ ಮಾಡಿದ ಗಿಡಗಳು ಲಾಲ್‌ಬಾಗ್‌ನಲ್ಲಿ ಮಾರಾಟ; ಈ ಗಿಡವಿದ್ದರೆ ಉಸಿರಾಟಕ್ಕೆ ಸಮಸ್ಯೆ ಖಚಿತ!
ಸರ್ಕಾರದಿಂದ ನಿಷೇಧಿಸಲ್ಪಟ್ಟ, ಪರಿಸರ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ 'ಕಾನೋಕಾರ್ಪೋಸ್' ಗಿಡಗಳನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನರ್ಸರಿಯೊಂದು ಈ ಮಾರಕ ಗಿಡಗಳನ್ನು ಮಾರುತ್ತಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರದಿಂದ ಈಗಾಗಲೇ ಅಧಿಕೃತವಾಗಿ ನಿಷೇಧಿಸಲ್ಪಟ್ಟಿರುವ 'ಕಾನೋಕಾರ್ಪೋಸ್' (Conocarpus) ಗಿಡಗಳನ್ನು ರಾಜಧಾನಿಯ ಪ್ರತಿಷ್ಠಿತ ಲಾಲ್‌ಬಾಗ್‌ನಲ್ಲಿ ಬಹಿರಂಗವಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರಿಂದ ಹಾಗೂ ಪರಿಸರವಾದಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಲಾಲ್‌ಬಾಗ್‌ನಲ್ಲಿ ₹600ಗೆ ಮಾರಾಟ:
ರಾಜ್ಯದಲ್ಲಿ ನಿಷೇಧವಿದ್ದರೂ ಸಹ, ಅನಧಿಕೃತವಾಗಿ ಗಿಡಗಳನ್ನು ಬೆಳೆಸಿ ಪೋಷಿಸಿರುವ 'ಲಾಲ್ ಬಾಗ್ ದಿ ನರ್ಸರಿ ಮೇನ್ ಕೋ-ಆಪರೇಟಿವ್ ಸೊಸೈಟಿ', ಈ ಮಾರಕ ಗಿಡವೊಂದಕ್ಕೆ ಬರೋಬ್ಬರಿ 600 ರೂಪಾಯಿ ಬೆಲೆ ನಿಗದಿಪಡಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಲಾಲ್‌ಬಾಗ್‌ನಂತಹ ಐತಿಹಾಸಿಕ ತಾಣದಲ್ಲೇ ಈ ವ್ಯಾಪಾರ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಇದರ ಹಿಂದೆ ಬೆಂಗಳೂರಿನಲ್ಲಿ ಜನರ ಆರೋಗ್ಯ ಹಾಳು ಮಾಡುವುದೇ ಇವರ ಉದ್ದೇಶ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯಗಳಿಂದಲೂ ನಿಷೇಧ:
ಕಾನೋಕಾರ್ಪೋಸ್ ಮರಗಳು ಅಂತರ್ಜಲವನ್ನು ಬೇಗನೆ ಬತ್ತುವಂತೆ ಮಾಡುವುದು ಮಾತ್ರವಲ್ಲದೆ, ಇದರ ಪರಾಗಸ್ಪರ್ಶದಿಂದ ಜನರಲ್ಲಿ ಉಸಿರಾಟದ ತೊಂದರೆ, ಅಲರ್ಜಿಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಹೀಗಾಗಿ ಕೇಂದ್ರ ಸರ್ಕಾರದ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಕರ್ನಾಟಕ ಸೇರಿದಂತೆ ಗುಜರಾತ್, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಈ ಗಿಡವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದರೂ, ನಿಯಮಗಳನ್ನು ಲೆಕ್ಕಿಸದೆ ನರ್ಸರಿಯೊಂದು ಗಿಡಗಳನ್ನು ಮಾರಾಟ ಮಾಡುತ್ತಿರುವುದನ್ನು ಖಂಡಿಸಿರುವ 'ವೃಕ್ಷ ಬಚಾವೋ ಆಂದೋಲನ ಸಮಿತಿ', ತಕ್ಷಣವೇ ಸಂಬಂಧಪಟ್ಟ ನರ್ಸರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಕರಾರುಪೂರ ಆಗ್ರಹಿಸಿದೆ. ಪರಿಸರ ಮಾರಕವಾದ ಈ ಗಿಡಗಳ ಮಾರಾಟಕ್ಕೆ ಕಡಿವಾಣ ಹಾಕುತ್ತಾರಾ ಕಾದು ನೋಡಬೇಕಿದೆ.

