ಲಾಲ್‌ಬಾಗ್‌ಗೆ ಇಂದಿನ ರೂಪ ನೀಡಿದ ಗುಸ್ತಾವ್ ಕ್ರುಂಬಿಗಲ್ ಅವರ ಸಮಾಧಿ ಹೊಸೂರು ರಸ್ತೆ ಸ್ಮಶಾನದಲ್ಲಿ ತೀವ್ರವಾಗಿ ಜಖಂಗೊಂಡಿದೆ. ಈ ಘಟನೆಯ ಬಗ್ಗೆ 'ಹೆರಿಟೇಜ್ ಬೇಕು' ಸಂಘಟನೆಯು ತನಿಖೆಗೆ ಆಗ್ರಹಿಸಿದ್ದು, ತೋಟಗಾರಿಕೆ ಇಲಾಖೆ ಮತ್ತು ಪೊಲೀಸರಿಗೆ ಪತ್ರ ಬರೆದು ಸಮಾಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದೆ.

ಬೆಂಗಳೂರು (ಆ.28): ಲಾಲ್‌ಬಾಗ್‌ ಸಸ್ಯತೋಟಕ್ಕೆ ಇಂದಿನ ಅಪರೂಪದ ಹಾಗೂ ರಮಣೀಯ ಶೈಲಿಯನ್ನು ನೀಡಿದ ಖ್ಯಾತ ಲ್ಯಾಂಡ್‌ಸ್ಕೇಪ್ ರೂವಾರಿ ಗುಸ್ತಾವ್ ಕ್ರುಂಬಿಗಲ್ ಅವರ ಸಮಾಧಿ ಹೊಸೂರು ರಸ್ತೆಯಲ್ಲಿರುವ ಸ್ಮಶಾನದಲ್ಲಿ ತೀವ್ರವಾಗಿ ಜಖಂಗೊಂಡಿರುವುದು ಬೆಳಕಿಗೆ ಬಂದಿದೆ. ಈ ಘಟನೆ ನಗರದ ಇತಿಹಾಸ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣವೇ ತನಿಖೆ ನಡೆಸಿ, ಸಮಾಧಿ ಕಲ್ಲನ್ನು ಮರುಸ್ಥಾಪಿಸುವಂತೆ ಅವರು ಆಗ್ರಹಿಸಿದ್ದಾರೆ. ಹೊಸೂರು ರಸ್ತೆ ಸಿಮೆಟ್ರಿಯ ಗೇಟ್ 1, ಪ್ಲಾಟ್ 6, ಸಾಲು 7ರ ಸಮಾಧಿ 6ರಲ್ಲಿರುವ ಈ ಸಮಾಧಿ ಕಲ್ಲು ಜಖಂಗೊಂಡಿರುವುದು ನಗರದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಗೆ ಉಂಟಾದ ಬಹುದೊಡ್ಡ ನಷ್ಟ ಎಂದು ನಾಗರಿಕ ಸಂಘಟನೆ ‘ಹೆರಿಟೇಜ್ ಬೇಕು’ (Heritage Beku) ತೀವ್ರ ಕಳವಳ ವ್ಯಕ್ತಪಡಿಸಿದೆ.

ಪೊಲೀಸ್ ಮತ್ತು ತೋಟಗಾರಿಕೆ ಇಲಾಖೆಗೆ ಪತ್ರ

ಈ ಸಂಬಂಧ ‘ಹೆರಿಟೇಜ್ ಬೇಕು’ ಸಂಘಟನೆಯು ನಗರ ಪೊಲೀಸ್ ಆಯುಕ್ತರು ಹಾಗೂ ತೋಟಗಾರಿಕೆ ಇಲಾಖೆಗೆ ಸುದೀರ್ಘ ಪತ್ರವೊಂದನ್ನು ಬರೆದಿದೆ. "ಬೆಂಗಳೂರಿನ ಸೌಂದರ್ಯಕ್ಕೆ, ವಿಶೇಷವಾಗಿ ಲಾಲ್‌ಬಾಗ್‌ಗೆ ಐಕಾನಿಕ್ ರೂಪುರೇಷೆ ನೀಡುವಲ್ಲಿ ಕ್ರುಂಬಿಗಲ್ ಅವರ ಕೊಡುಗೆ ಅಮೂಲ್ಯವಾದದ್ದು. ಅವರ ನೆನಪನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ" ಎಂದು ಸಂಘಟನೆ ಪತ್ರದಲ್ಲಿ ಉಲ್ಲೇಖಿಸಿದೆ.

ಪ್ರಿಯಾ ಶೆಟ್ಟಿ ರಾಜಗೋಪಾಲ್ ನೇತೃತ್ವದ 'ಹೆರಿಟೇಜ್ ಬೇಕು' ಬಳಗವು, ಘಟನೆ ನಡೆದ ಸ್ಥಳ ಪರಿಶೀಲನೆಗೆ ಪೊಲೀಸ್ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ತಪಾಸಣೆ ನಡೆಸಬೇಕು ಎಂದು ಒತ್ತಾಯಿಸಿದೆ. ಈ ಹಾನಿಯು ಯಾವುದೇ ಅಪಘಾತದಿಂದಾಗಿದೆಯೇ, ಪ್ರಾಕೃತಿಕವಾಗಿ ಕಾಲಕ್ರಮೇಣ ಸಂಭವಿಸಿದ ನಷ್ಟವೇ ಅಥವಾ ಯಾರಾದರೂ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆಯೇ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಬೇಕು ಎಂದು ಸಂಘಟನೆ ಮನವಿ ಮಾಡಿದೆ.

ಒಂದು ವೇಳೆ ಇದು ಕಿಡಿಗೇಡಿಗಳ ಕೃತ್ಯವೆಂದು ಕಂಡುಬಂದರೆ, ತಪ್ಪಿತಸ್ಥರನ್ನು ಪತ್ತೆಹಚ್ಚಲು ಸೂಕ್ತ ಪೊಲೀಸ್ ತನಿಖೆ ನಡೆಸಬೇಕು ಹಾಗೂ ತೋಟಗಾರಿಕೆ ಇಲಾಖೆಯು ತಜ್ಞರ ನೆರವಿನಿಂದ ಈ ಸಮಾಧಿ ಕಲ್ಲನ್ನು ತಕ್ಷಣವೇ ವೃತ್ತಿಪರವಾಗಿ ಮರುಸ್ಥಾಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಕುಟುಂಬಸ್ಥರ ಕಳವಳ

ಗುಸ್ತಾವ್ ಕ್ರುಂಬಿಗಲ್ ಅವರ ಮರಿಮೊಮ್ಮಗಳು ಹಾಗೂ 'ಹೆರಿಟೇಜ್ ಬೇಕು' ಸಂಘಟನೆಯ ಸಕ್ರಿಯ ಸದಸ್ಯೆಯಾಗಿರುವ ಅಲಿಯಾ ಕ್ರುಂಬಿಗಲ್ ಅವರು ತಮ್ಮ ಮುತ್ತಜ್ಜನ ಸಮಾಧಿ ಸ್ಥಿತಿಯನ್ನು ಕಂಡು ತೀವ್ರ ದುಃಖಿತರಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.