ಬೆಂಗಳೂರಿನಲ್ಲಿ ಇನ್ನು ಮುಂದೆ 'ನಮ್ಮ ಮೆಟ್ರೋ'ದ NCMC ಕಾರ್ಡ್‌ ಬಳಸಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದು. ಇದರ ಜೊತೆಗೆ, ಬಸ್ ಮತ್ತು ಮೆಟ್ರೋ ಪ್ರಯಾಣವನ್ನು ಒಂದೇ ವೇದಿಕೆಯಲ್ಲಿ ತರುವ 'ನಮ್ಮ ಬಿಎಂಟಿಸಿ 2.0' ಮೊಬೈಲ್ ಆಪ್ ಅನ್ನು ಲೋಕಾರ್ಪಣೆ ಮಾಡಲಾಗಿದೆ.

ಬೆಂಗಳೂರು (ಸೆ.10): ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಸಮಗ್ರ ಹಾಗೂ ಡಿಜಿಟಲ್ ಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಬೃಹತ್ ಹೆಜ್ಜೆಯಿಟ್ಟಿದೆ. ಇನ್ಮುಂದೆ ಬೆಂಗಳೂರಿನ ಪ್ರಯಾಣಿಕರು 'ನಮ್ಮ ಮೆಟ್ರೋ' (Namma Metro) ಪ್ರಯಾಣಕ್ಕಾಗಿ ಬಳಸಲಾಗುವ ಆರ್‌ಬಿಎಲ್ ಬ್ಯಾಂಕ್‌ನ (RBL Bank) 'ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' (NCMC) ಅನ್ನು ಬಿಎಂಟಿಸಿ ಬಸ್‌ಗಳ ಪ್ರಯಾಣಕ್ಕೂ ಸುಲಭವಾಗಿ ಬಳಸಬಹುದಾಗಿದೆ.

ಇದರ ಜೊತೆಗೆ, ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಪ್ರಯಾಣವನ್ನು ಒಂದೇ ಡಿಜಿಟಲ್ ವೇದಿಕೆಯಡಿಯಲ್ಲಿ ತರುವ ಉದ್ದೇಶದಿಂದ 'ನಮ್ಮ ಬಿಎಂಟಿಸಿ ಮೊಬೈಲ್ ಆಪ್ 2.0' ಅನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗಿದೆ.

ಬಸ್ ಮತ್ತು ಮೆಟ್ರೋಗೆ ಒಂದೇ ಕಾಮನ್ ಮೊಬಿಲಿಟಿ ಕಾರ್ಡ್

ಎನ್‌ಸಿಎಂಸಿ (NCMC) ಎಂಬುದು ರಾಷ್ಟ್ರೀಯ ಮಟ್ಟದ ಪರಸ್ಪರ ಕಾರ್ಯಸಾಧ್ಯವಾದ (Interoperable) ಕಾರ್ಡ್ ಮಾನದಂಡವಾಗಿದ್ದು, ಸಾರ್ವಜನಿಕರು ಒಂದೇ ಕಾರ್ಡ್ ಮೂಲಕ ವಿವಿಧ ಸಾರಿಗೆ ವ್ಯವಸ್ಥೆಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಮೆಟ್ರೋ ಮತ್ತು ಬಿಎಂಟಿಸಿ ಬಸ್ ಎರಡನ್ನೂ ಬಳಸುವ ಪ್ರಯಾಣಿಕರಿಗೆ ಈ ಮಲ್ಟಿಮಾಡೆಲ್ (Multimodal) ಪಾವತಿ ವ್ಯವಸ್ಥೆಯು ಅತ್ಯಂತ ಅನುಕೂಲಕರವಾಗಲಿದೆ.

ವಾಸ್ತವವಾಗಿ ಈ ಎನ್‌ಸಿಎಂಸಿ ಕಾರ್ಡ್ ಸೇವೆಯನ್ನು ಜೂನ್ 2026 ರಲ್ಲೇ ಪ್ರಾರಂಭಿಸಲು ಉದ್ದೇಶಿಸಲಾಗಿತ್ತು, ಆದರೆ ವಿವಿಧ ಕಾರಣಗಳಿಂದಾಗಿ ಇದರ ಬಿಡುಗಡೆ ವಿಳಂಬವಾಗಿತ್ತು.

'ನಮ್ಮ ಬಿಎಂಟಿಸಿ 2.0' ಆಪ್ ಅನಾವರಣ

ಗುರುವಾರ ವಿಧಾನಸೌಧದಲ್ಲಿ ನಡೆದ ಆಕರ್ಷಕ ಕಾರ್ಯಕ್ರಮದಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ನೂತನ 'ನಮ್ಮ ಬಿಎಂಟಿಸಿ ಮೊಬೈಲ್ ಆಪ್ 2.0' ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ಬಿ.ಎಸ್. ಸುರೇಶ್) ಉಪಸ್ಥಿತರಿದ್ದರು.

ಈ ಆಪ್ ಮೂಲಕ ಪ್ರಯಾಣಿಕರು ಡಿಜಿಟಲ್ ಬಸ್ ಟಿಕೆಟ್‌ಗಳು, ಮೆಟ್ರೋ ಕ್ಯೂಆರ್ ಟಿಕೆಟ್‌ಗಳು (Metro QR Tickets), ವಿವಿಧ ಬಸ್ ಪಾಸ್‌ಗಳು, ಲೈವ್ ಬಸ್ ಟ್ರ್ಯಾಕಿಂಗ್, ಪ್ರಯಾಣದ ಯೋಜನಾ ನಕ್ಷೆ (Journey Planning) ಹಾಗೂ ಡಿಜಿಟಲ್ ಪಾವತಿಗಳನ್ನು ಒಂದೇ ಸೂರಿನಡಿ ಪಡೆಯಬಹುದು. ಒಂದೇ ಆಪ್‌ನಲ್ಲಿ ಬಿಎಂಟಿಸಿ ಬಸ್ ಹಾಗೂ ಬಿಎಂಆರ್‌ಸಿಎಲ್ (BMRCL) ಮೆಟ್ರೋ ಪ್ರಯಾಣ ಎರಡಕ್ಕೂ ಟಿಕೆಟ್ ಕಾಯ್ದಿರಿಸಲು ಮತ್ತು ಪಾವತಿಸಲು ಇದು ನೆರವಾಗಲಿದೆ.

ಲೈವ್ ಬಸ್ ಟ್ರ್ಯಾಕಿಂಗ್ ಹಾಗೂ ಜರ್ನಿ ಪ್ಲಾನರ್ ಫೀಚರ್ಸ್‌

ಬಸ್ ಲೈವ್ ಲೋಕೇಶನ್: ಆಪ್‌ನಲ್ಲಿ ಬಿಎಂಟಿಸಿ ಬಸ್‌ಗಳ ನೈಜ ಸಮಯದ (Live location) ಮಾಹಿತಿ, ಬಸ್ ಆಗಮನದ ಅಂದಾಜು ಸಮಯ (ETA), ಮಾರ್ಗಗಳು ಹಾಗೂ ನಿಲ್ದಾಣವಾರು ಸೇವೆಗಳ ವಿವರ ಲಭ್ಯವಿರಲಿದೆ. ಸಮೀಪದ ಬಸ್ ತಂಗುದಾಣಗಳನ್ನು ಪತ್ತೆಹಚ್ಚಲು ಹಾಗೂ ಅಲ್ಲಿಂದ ಚಲಿಸುವ ಬಸ್‌ಗಳನ್ನು ವೀಕ್ಷಿಸಲು ಅವಕಾಶವಿದೆ.

ಜರ್ನಿ ಪ್ಲಾನರ್: ಪ್ರಯಾಣಿಕರು ತಮ್ಮ ಹೊರಡುವ ಸ್ಥಳ (Origin) ಮತ್ತು ತಲುಪಬೇಕಾದ ಸ್ಥಳವನ್ನು (Destination) ನಮೂದಿಸಿದರೆ, ಬಿಎಂಟಿಸಿ ಬಸ್, ಮೆಟ್ರೋ ಅಥವಾ ಬಸ್-ಮೆಟ್ರೋ ಎರಡನ್ನೂ ಒಳಗೊಂಡ ಅತ್ಯುತ್ತಮ ಪ್ರಯಾಣದ ಆಯ್ಕೆಗಳನ್ನು ಆಪ್ ತೋರಿಸುತ್ತದೆ.

ಡಿಜಿಟಲ್ ಟಿಕೆಟ್, ಪಾಸ್ ಹಾಗೂ ಪಾವತಿ ವ್ಯವಸ್ಥೆ

ಪ್ರಯಾಣಿಕರು ಅಪ್ಲಿಕೇಶನ್ ಮೂಲಕ ಡಿಜಿಟಲ್ ಬಸ್ ಟಿಕೆಟ್‌ಗಳನ್ನು ಖರೀದಿಸಬಹುದು ಹಾಗೂ ತಮ್ಮ ಸಕ್ರಿಯ ಟಿಕೆಟ್‌ಗಳು/ಪಾಸ್‌ಗಳನ್ನು ವೀಕ್ಷಿಸಬಹುದು. ಅಲ್ಲದೆ, ಮೆಟ್ರೋ ಕ್ಯೂಆರ್ ಟಿಕೆಟ್‌ಗಳನ್ನು ಸಹ ನೇರವಾಗಿ ಖರೀದಿಸಬಹುದು.

ವಿಸ್ತಾರ ಪಾಸ್, ವಜ್ರ ಗೋಲ್ಡ್ ಪಾಸ್, ಜನರಲ್ ವಿಸ್ತಾರ ಪಾಸ್, ವಾಯು ವಜ್ರ ಪಾಸ್ ಮತ್ತು ನೈಸ್ ರೋಡ್ (NICE Road) ಪಾಸ್‌ಗಳು ಸೇರಿದಂತೆ ವಿವಿಧ ಬಸ್ ಪಾಸ್‌ಗಳನ್ನು ಈ ಆಪ್ ಮೂಲಕ ಖರೀದಿಸಬಹುದಾಗಿದೆ. ಯುಪಿಐ (UPI) ಮತ್ತು ಮೊಬೈಲ್ ವ್ಯಾಲೆಟ್‌ಗಳ ಮೂಲಕ ಡಿಜಿಟಲ್ ಪಾವತಿ ಮಾಡಬಹುದಾಗಿದ್ದು, ಹಳೆಯ ವ್ಯವಹಾರಗಳ ವಿವರಗಳು ಹಾಗೂ ಡಿಜಿಟಲ್ ರಸೀದಿಗಳನ್ನು ಪಡೆಯಬಹುದು.

ಕನ್ನಡ ಮತ್ತು ಇಂಗ್ಲಿಷ್ ಬೆಂಬಲ

ಈ ಆಪ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದ್ದು, ಬಸ್ ನಿಲ್ದಾಣಗಳ ಹೆಸರುಗಳು, ಶೀರ್ಷಿಕೆಗಳು ಹಾಗೂ ರಸೀದಿಗಳು ಕನ್ನಡದಲ್ಲಿ ಲಭ್ಯವಿರಲಿವೆ. ನಗರದ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಡಿಜಿಟಲ್, ನಗದುರಹಿತ ಮತ್ತು ಪ್ರಯಾಣಿಕ ಸ್ನೇಹಿಯಾಗಿಸುವ ಉದ್ದೇಶದಿಂದ ಈ ಆಪ್ ರೂಪಿಸಲಾಗಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ 'Namma BMTC 2.0' ಹೆಸರಿನಲ್ಲಿ ಲಭ್ಯವಿದೆ.