- Home
- Karnataka Districts
- Bengaluru Urban
- ದೇಶದಲ್ಲಿ ವಿಶೇಷ 'ಇತಿಹಾಸ ಸೃಷ್ಟಿಸಿದ' ಈಜಿಪುರ ಫ್ಲೈಓವರ್; 6 ಸಿಎಂ ವೀಕ್ಷಿಸಿದರೂ ಮುಗಿಯದ ಕಾಮಗಾರಿ!
ದೇಶದಲ್ಲಿ ವಿಶೇಷ 'ಇತಿಹಾಸ ಸೃಷ್ಟಿಸಿದ' ಈಜಿಪುರ ಫ್ಲೈಓವರ್; 6 ಸಿಎಂ ವೀಕ್ಷಿಸಿದರೂ ಮುಗಿಯದ ಕಾಮಗಾರಿ!
ಬೆಂಗಳೂರಿನ 2.5 ಕಿ.ಮೀ. ಉದ್ದದ ಈಜಿಪುರ ಮೇಲ್ಸೇತುವೆ ಕಾಮಗಾರಿ ಕಳೆದ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೆಟ್ರೋ, ಏರ್‌ಪೋರ್ಟ್‌ನಂತಹ ಬೃಹತ್ ಯೋಜನೆಗಳು ಪೂರ್ಣಗೊಂಡರೂ, 6 ಮುಖ್ಯಮಂತ್ರಿಗಳು ಬದಲಾದರೂ ಈ ಕಾಮಗಾರಿ ಮಾತ್ರ ಮುಗಿದಿಲ್ಲ. ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿವೆ ನೊಡಿ…

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹತ್ವದ ಹೆಗ್ಗುರುತಾಗಬೇಕಿದ್ದ ಈಜಿಪುರ ಮೇಲ್ಸೇತುವೆ (Ejipura Flyover) ಕಾಮಗಾರಿಯು ದೇಶದ ಇತಿಹಾಸದಲ್ಲೇ ಅತ್ಯಂತ ವಿಳಂಬವಾದ ಯೋಜನೆಗಳಲ್ಲಿ ಒಂದಾಗಿ ದಾಖಲಾಗುತ್ತಿದೆ. ಕಳೆದ 10 ವರ್ಷಗಳಿಂದ ಹಂತ ಹಂತವಾಗಿ ನನೆಗುದಿಗೆ ಬಿದ್ದಿರುವ ಈ 2.5 ಕಿ.ಮೀ. ಉದ್ದದ ಫ್ಲೈಓವರ್ ಕಾಮಗಾರಿ, ಈ ವರ್ಷವೂ (ಡಿಸೆಂಬರ್ ವೇಳೆಗೆ) ಪೂರ್ಣಗೊಳ್ಳುವುದು ಸಂಪೂರ್ಣ ಅನುಮಾನವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ಈ ವರ್ಷದ ಡಿಸೆಂಬರ್‌ಗೆ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ವಾಸ್ತವ ಪರಿಸ್ಥಿತಿ ನೋಡಿದರೆ ಈ ಬಾರಿಯೂ ಇದು ಈಡೇರುವುದು ಕಷ್ಟ ಎಂಬುದು ಸ್ಪಷ್ಟವಾಗಿದೆ.
2017ರ ಮೇ 4ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ ಈ ಕಾಮಗಾರಿ, ಮೂಲಯೋಜನೆಯ ಪ್ರಕಾರ 2019ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಆಡಳಿತಾತ್ಮಕ ವೈಫಲ್ಯ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ 2019ರಲ್ಲಿ ಮುಕ್ತಾಯಗೊಳ್ಳಬೇಕಿದ್ದ ಈ ಯೋಜನೆ ಇಂದಿಗೂ (ಹತ್ತು ವರ್ಷ ಕಳೆದರೂ) ಕುಂಟುತ್ತಾ ಸಾಗುತ್ತಿದೆ.
ಇತರೆ ದೊಡ್ಡ ಯೋಜನೆಗಳು ಮುಕ್ತಾಯಗೊಂಡರೂ ಮುಗಿಯದ ಈಜೀಪುರ ಮೇಲ್ಸೇತುವೆ:
ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಬೃಹತ್ ಯೋಜನೆಗಳು ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡ ಉದಾಹರಣೆಗಳು ನಮ್ಮ ಕಣ್ಣಮುಂದಿವೆ.
ಹಳದಿ ಮೆಟ್ರೋ ಮಾರ್ಗ: 2017ರಲ್ಲಿ ಆರಂಭಗೊಂಡಿದ್ದ 19.15 ಕಿ.ಮೀ. ಉದ್ದದ (16 ನಿಲ್ದಾಣಗಳನ್ನು ಒಳಗೊಂಡ) ಹಳದಿ ಮೆಟ್ರೋ ಮಾರ್ಗ ಕಾಮಗಾರಿ ಮುಕ್ತಾಯಗೊಂಡು, 2025ರ ಆಗಸ್ಟ್ ವೇಳೆಗೆ ಜನಸಂಚಾರಕ್ಕೂ ಮುಕ್ತವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿ2 ಟರ್ಮಿನಲ್: 2018ರ ಅಕ್ಟೋಬರ್‌ನಲ್ಲಿ ಆರಂಭಗೊಂಡಿದ್ದ ಅಂದಾಜು ₹5,000 ಕೋಟಿ ವೆಚ್ಚದ ಭವ್ಯವಾದ T2 ಏರ್‌ಪೋರ್ಟ್ ಕಾಮಗಾರಿ ಕೇವಲ 5 ವರ್ಷಗಳಲ್ಲಿ ಅಂದರೆ 2023ರಲ್ಲೇ ಪೂರ್ಣಗೊಂಡು ಜನರ ಸೇವೆಗೆ ಲಭ್ಯವಾಗಿದೆ.
ಆದರೆ, ಈ ಎಲ್ಲಾ ಬೃಹತ್ ಮತ್ತು ಸಂಕೀರ್ಣ ಯೋಜನೆಗಳು ನಿಗದಿತ ಅವಧಿಯಲ್ಲಿ ಅಥವಾ ಸ್ವಲ್ಪ ತಡವಾಗಿ ಪೂರ್ಣಗೊಂಡಿದ್ದರೂ, ಕೇವಲ 2.50 ಕಿ.ಮೀ. ಉದ್ದದ ಈಜೀಪುರ ಫ್ಲೈಓವರ್ ಕಾಮಗಾರಿ ಮಾತ್ರ ಇನ್ನೂ ಹಳಿಗೆ ಬಂದಿಲ್ಲ. ವಿಶೇಷವೆಂದರೆ, 2017ರಿಂದ ಇಲ್ಲಿಯವರೆಗೆ ಬರೋಬ್ಬರಿ 6 ಜನ ಮುಖ್ಯಮಂತ್ರಿಗಳು ಬದಲಾಗಿದ್ದಾರೆ, ಸರ್ಕಾರಗಳು ಬಂದಿವೆ-ಹೋಗಿವೆ, ಆದರೆ ಈಜಿಪುರ ಫ್ಲೈಓವರ್ ಮಾತ್ರ ಇಂದಿಗೂ ಹಾಗೆಯೇ ಉಳಿದುಕೊಂಡಿದೆ! ಸ್ಥಳೀಯ ಸಾರ್ವಜನಿಕರು ಮತ್ತು ವಾಹನ ಸವಾರರು ಪ್ರತಿದಿನ ಟ್ರಾಫಿಕ್ ಜಾಮ್‌ನಲ್ಲಿ ನರಕಯಾತನೆ ಅನುಭವಿಸುವಂತಾಗಿದೆ.

