ಬಿಗ್‌ಬಾಸ್ ಅಗ್ನಿಪರೀಕ್ಷೆ ಟಾಸ್ಕ್‌ನಲ್ಲಿ ಜನಸಾಮಾನ್ಯರು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ, ಐತಿಹಾಸಿಕ ಜಯ ಸಾಧಿಸಿದ್ದ ಗಿಲ್ಲಿ ನಟನನ್ನು ತೀರ್ಪುಗಾರರಾಗಿ ಆಹ್ವಾನಿಸದಿರುವುದು ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ಬಗ್ಗೆ ಗಿಲ್ಲಿ ನಟ ನೀಡಿದ ಜಾಣ್ಮೆಯ ಉತ್ತರ ಇಲ್ಲಿದೆ.

ಬಿಗ್‌ಬಾಸ್‌ನಲ್ಲಿ ಈ ಬಾರಿ ಷೋ ಪ್ರಿಯರಿಗೆ ಎಲ್ಲರಿಗೂ ತಿಳಿದಿರುವಂತೆ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಮಂದಿ ತಾವೂ ಷೋಗೆ ಹೋಗಲು ವಿಡಿಯೋ ಮಾಡಿ ಕಳುಹಿಸಿದ್ದರು. ಕೊನೆಗೆ ಅದರಲ್ಲಿ ಸೆಲೆಕ್ಟ್‌ ಆಗಿದ್ದು ಅರವತ್ತು ಮಂದಿ. ಈ 60 ಮಂದಿಗೆ ವಿವಿಧ ರೀತಿಯ ಟಾಸ್ಕ್‌ ನೀಡಲಾಗಿತ್ತು. ಚಿತ್ರ-ವಿಚಿತ್ರ, ಟಫ್‌ ಟಾಸ್ಕ್‌ಗಳನ್ನೆಲ್ಲಾ ಈ ಸ್ಪರ್ಧಿಗಳು ಮಾಡುತ್ತಿದ್ದಾರೆ. ಮುಖಕ್ಕೆ ಸೆಗಣಿ ಬಳಿದುಕೊಳ್ಳುವುದು, ದಾಖಲೆ ಹರಿಯುವುದು, ಮೊಬೈಲ್‌ ಫೋನ್‌ ಒಡೆಯುವುದು ಸೇರಿದಂತೆ ವಿವಿಧ ಟಾಸ್ಕ್ ಮಾಡುತ್ತಿದ್ದಾರೆ. ತಮ್ಮ ಈ ಎಲ್ಲ ವಸ್ತು, ದಾಖಲೆಗಳಿಗಿಂತಲೂ ಮುಖ್ಯವಾದದ್ದು ಬಿಗ್‌ಬಾಸ್‌ ಮನೆಗೆ ಹೋಗುವುದು ಎನ್ನುವುದು ಅವರ ಭಾವನೆಯಾಗಿರುವ ಹಿನ್ನೆಲೆಯಲ್ಲಿ, ಪ್ರಯತ್ನ ಮೀರಿ ಟಾಸ್ಕ್‌ ಮಾಡುತ್ತಿದ್ದಾರೆ.

ಗಿಲ್ಲಿ ನಟನಿಗೆ ಸಿಕ್ಕಿಲ್ಲ ಅವಕಾಶ

ಆದರೆ, ಇಲ್ಲಿ ವೀಕ್ಷಕರಿಗೆ ತೀವ್ರವಾಗಿ ಅಸಮಾಧಾನ ಉಂಟು ಮಾಡಿದ್ದು, ಬಿಗ್‌ಬಾಸ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಗಿಲ್ಲಿ ನಟನನ್ನು ಜಡ್ಜ್‌ ಮಾಡದೇ ಇರುವುದು. ಅಗ್ನಿಪರೀಕ್ಷೆ (Bigg Boss Agni Pareeksha) ತೀರ್ಪುಗಾರರಾಗಿ ಬಿಗ್‌ಬಾಸ್‌ನ ವಿನ್ನರ್‌ ಹಾಗೂ ಸ್ಪರ್ಧಿಗಳಿಗೆ ಆಹ್ವಾನ ನೀಡಲಾಗಿತ್ತು. ಚಂದನ್‌ ಶೆಟ್ಟಿ ಮತ್ತು ಶ್ರುತಿ ವಿನ್ನರ್‌ ಆಗಿದ್ದರೆ, ವಿನಯ್‌ ಗೌಡ ಹಾಗೂ ಸಂಗೀತಾ ಶೃಂಗೇರಿ ರನ್ನರ್‌ ಅಪ್‌ ಆಗಿದ್ದರು. ಆದರೆ ಐತಿಹಾಸಿಕ ಜಯ ಸಾಧಿಸಿದ ಗಿಲ್ಲಿ ನಟನನ್ನು ತೀರ್ಪುಗಾರರನ್ನಾಗಿ ಮಾಡದೇ ಇರುವುದು ಗಿಲ್ಲಿ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಅಸಮಾಧಾನ ತಂದಿದ್ದು, ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಕೂಡ ಸಾಕಷ್ಟು ಚರ್ಚೆಯಾಗಿತ್ತು.

ಈಗ ಈ ಬಗ್ಗೆ ಖುದ್ದು ಗಿಲ್ಲಿ ಅವರಿಗೆ ಪ್ರಶ್ನೆ ಕೇಳಲಾಗಿದೆ. ಹೇಳಿ ಕೇಳಿ ಅವರು ಗಿಲ್ಲಿ ನಟ. ಎಲ್ಲಿ ಹೇಗೆ ಮಾತನಾಡಬೇಕು, ಎಲ್ಲಿಯೂ ಹೇಗೆ ಸಿಕ್ಕಿಹಾಕಿಕೊಳ್ಳಬಾರದು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅದೇ ರೀತಿಯ ಉತ್ತರವನ್ನೂ ಅವರು ಈ ಪ್ರಶ್ನೆಗೆ ಕೊಟ್ಟಿದ್ದಾರೆ.

ಗಿಲ್ಲಿ ಹೇಳಿದ್ದೇನು?

ಎಲ್ಲರೂ ಎಲ್ಲದಕ್ಕೂ ಜಡ್ಜ್‌ ಆಗಲು ಆಗುವುದಿಲ್ಲ. ವಿನ್ನರ್‌ ಆದ ಮಾತ್ರಕ್ಕೆ ಜಡ್ಜ್‌ ಆಗಬಹುದು ಎಂದಲ್ಲ. ಡಾನ್ಸ್‌ ಷೋಗೆ ಹೋಗಿ ನನ್ನನ್ನು ಜಡ್ಜ್‌ ಮಾಡಲು ಆಗಲ್ವೋ, ಹಾಗೆಯೇ ಯಾವುದಕ್ಕೆ ಯಾರನ್ನು ಜಡ್ಜ್‌ ಮಾಡಬೇಕು ಎನ್ನುವುದು ಅವರಿಗೆ ತಿಳಿದಿರುತ್ತದೆ. ಅದಕ್ಕೇ ನನ್ನನ್ನು ಮಾಡಿಲ್ಲ ಎಂದಿದ್ದಾರೆ. ಇವರ ಈ ಮಾತಿಗೆ ಫ್ಯಾನ್ಸ್‌ ಬೇಸರಗೊಂಡರೂ, ಅವರ ಉತ್ತರಕ್ಕೆ ಸಮಾಧಾನ ಪಟ್ಟುಕೊಂಡಿದ್ದಾರೆ.