Kannada YouTuber Madhu Gowda: 25ನೇ ವಯಸ್ಸಿನಲ್ಲಿ ತಾಯಿಯಾದ ಜನಪ್ರಿಯ ಯೂಟ್ಯೂಬರ್‌ ಮಧು ಗೌಡ. ನಿಖಿಲ್‌ ರವೀಂದ್ರ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.

ಕನ್ನಡದ ಜನಪ್ರಿಯ ಯೂಟ್ಯೂಬರ್‌ ಮಧು ಗೌಡ ಇದೀಗ ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ. ಮದುವೆಯಾಗಿ ಎರಡು ವರ್ಷಗಳ ಬಳಿಕ 25ನೇ ವಯಸ್ಸಿನಲ್ಲೇ ಮಧು ಗೌಡ ತಾಯಿಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿ ಹೊರಬೀಳುತ್ತಿದ್ದಂತೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

25ನೇ ವಯಸ್ಸಿನಲ್ಲಿ ಮಧು ಗೌಡ ತಾಯಿಯಾದ ಸಂಭ್ರಮ!

ಮಧು ಗೌಡ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಖುಷಿಯ ವಿಚಾರವನ್ನು ಕುಟುಂಬದವರು ಹಾಗೂ ಆಪ್ತರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. 'ಮಧು ಅವರಿಗೆ ಕೊನೆಗೂ ನಾರ್ಮಲ್ ಡೆಲಿವರಿ ಆಯ್ತು' ಎಂಬ ಸಂತಸದ ಮಾತುಗಳೊಂದಿಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಮಧು ಹಾಗೂ ಮಗು ಆರೋಗ್ಯವಾಗಿರುವ ವಿಚಾರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ತಂದಿದೆ.

ಮನೆಗೆ ಹೆಣ್ಣು ಮಗು ಬಂದಿರುವುದರಿಂದ ಕುಟುಂಬಸ್ಥರು ಸಂಭ್ರಮದಲ್ಲಿದ್ದು, 'ನಮ್ಮನೆಗೆ ಲಕ್ಷ್ಮಿ ಬಂದಿದ್ದಾಳೆ' ಎಂದು ಸಂತಸ ಹಂಚಿಕೊಂಡಿದ್ದಾರೆ. ಈ ವಿಶೇಷ ಕ್ಷಣಕ್ಕೆ ನೆಟ್ಟಿಗರೂ ಪ್ರೀತಿಯಿಂದ ಶುಭ ಹಾರೈಸುತ್ತಿದ್ದಾರೆ.

ಬೇಬಿ ಬಂಪ್ ಫೋಟೋಶೂಟ್ ಮೂಲಕ ಗುಡ್‌ನ್ಯೂಸ್ ಕೊಟ್ಟಿದ್ದರು

ಇತ್ತೀಚೆಗಷ್ಟೇ ಮಧು ಗೌಡ ತಮ್ಮ ಬೇಬಿ ಬಂಪ್ ಫೋಟೋಶೂಟ್‌ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವುದನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದ ಮಧು, ಇದೀಗ ಮುದ್ದು ಮಗಳನ್ನು ಬರಮಾಡಿಕೊಂಡಿದ್ದಾರೆ. ಮಧು ಗೌಡ ಅವರ ಈ ಮಾತೃತ್ವದ ಪಯಣಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಪ್ರೀತಿಯಿಂದ ದಾಂಪತ್ಯಕ್ಕೆ ಕಾಲಿಟ್ಟ ಮಧು-ನಿಖಿಲ್

ಮಧು ಗೌಡ ಯೂಟ್ಯೂಬರ್‌ ನಿಖಿಲ್ ರವೀಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿದ್ದು, ಹಲವು ದಿನಗಳ ಕಾಲ ನಡೆದ ವಿವಾಹ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದಿದ್ದವು. ನಿಖಿಲ್ ಅವರ ತಂಗಿ ನಿಶಾ ಹಾಗೂ ಮಧು ಗೌಡ ಮೊದಲಿನಿಂದಲೂ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಇದೇ ಸ್ನೇಹದ ಮೂಲಕ ಮಧು ಹಾಗೂ ನಿಖಿಲ್ ಪರಿಚಯವಾಗಿದ್ದು, ಬಳಿಕ ಸ್ನೇಹ ಪ್ರೀತಿಯಾಗಿ, ಅಂತಿಮವಾಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಯೂಟ್ಯೂಬ್‌ ಜೊತೆಗೆ ಸೀರೆ ಬ್ಯುಸಿನೆಸ್‌ನಲ್ಲೂ ಸಕ್ಸಸ್

ಮಧು ಗೌಡ ಮತ್ತು ನಿಖಿಲ್ ರವೀಂದ್ರ ಯೂಟ್ಯೂಬ್‌ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುವ ಜೋಡಿ. ತಮ್ಮ ವೈಯಕ್ತಿಕ ಜೀವನ, ಪ್ರವಾಸ ಹಾಗೂ ದಿನನಿತ್ಯದ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಅಪಾರ ಫಾಲೋವರ್ಸ್‌ ಹೊಂದಿದ್ದಾರೆ. ಯೂಟ್ಯೂಬ್‌ ಜೊತೆಗೆ ಈ ಜೋಡಿ ತಮ್ಮದೇ ಸೀರೆ ಬ್ಯುಸಿನೆಸ್‌ನ್ನೂ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಉದ್ಯಮವನ್ನು ಪ್ರಮೋಟ್ ಮಾಡುತ್ತಿದ್ದು, ಬ್ಯುಸಿನೆಸ್‌ನಲ್ಲೂ ಉತ್ತಮವಾಗಿ ಮುನ್ನಡೆಯುತ್ತಿದ್ದಾರೆ ಎನ್ನಲಾಗಿದೆ.

ಯೂಟ್ಯೂಬರ್‌ನಿಂದ ಉದ್ಯಮಿಯಾಗಿ... ಇದೀಗ ತಾಯಿಯಾಗಿ ಹೊಸ ಅಧ್ಯಾಯ

ಯೂಟ್ಯೂಬ್‌ನಲ್ಲಿ ಯಶಸ್ಸು, ಸ್ವಂತ ಉದ್ಯಮದಲ್ಲಿ ಸಕ್ಸಸ್‌ ಹಾಗೂ ಇದೀಗ 25ನೇ ವಯಸ್ಸಿನಲ್ಲೇ ತಾಯಿಯಾಗಿರುವ ಸಂಭ್ರಮ-ಮಧು ಗೌಡ ಅವರ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಸಂತಸದ ಕ್ಷಣಗಳು ಎದುರಾಗುತ್ತಿವೆ. ಮುದ್ದಾದ ಹೆಣ್ಣು ಮಗುವಿನ ಆಗಮನದೊಂದಿಗೆ ಮಧು-ನಿಖಿಲ್ ದಾಂಪತ್ಯ ಜೀವನ ಮತ್ತಷ್ಟು ಸಂತಸದಿಂದ ಕೂಡಿದೆ. ತಮ್ಮ ಜೀವನದ ಈ ಹೊಸ ಅಧ್ಯಾಯಕ್ಕೆ ಕಾಲಿಟ್ಟಿರುವ ಮಧು ಗೌಡ ಅವರಿಗೆ ಅಭಿಮಾನಿಗಳು 'ಅಮ್ಮ-ಮಗಳಿಗೆ ಶುಭವಾಗಲಿ' ಎಂದು ಹಾರೈಸುತ್ತಿದ್ದಾರೆ.