ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿದಿದ್ದರಿಂದ ಬೆಳಗಾವಿಯಲ್ಲಿ ರೈತರು ಬೆಳೆಯನ್ನು ರಸ್ತೆಗೆ ಎಸೆದರೆ, ದಾವಣಗೆರೆಯಲ್ಲಿ ಟೊಮ್ಯಾಟೋಗೆ ಕೆಜಿಗೆ ಕೇವಲ 1 ರೂ. ಸಿಕ್ಕಿದ್ದರಿಂದ ಕಟಾವು ಮಾಡದೆ ಗಿಡದಲ್ಲೇ ಬಿಟ್ಟಿದ್ದಾರೆ.
ಬೆಳಗಾವಿ/ ದಾವಣಗೆರೆ: ಹಾಕಿದ ಬಂಡವಾಳವೂ ಬಾರದೆ ರೈತರು ತಾವು ಬೆಳೆದ ಕೊತ್ತಂಬರಿ ಸೊಪ್ಪು ಮತ್ತು ಟೊಮ್ಯಾಟೋ ಬೆಳೆಯನ್ನು ರಸ್ತೆ ಬಿಸಾಡಿದ ಘಟನೆಯು ಭಾನುವಾರ ನಡೆದಿದೆ.
ಬೆಳಗಾವಿಯ ರಾಯಭಾಗದಲ್ಲಿ 2 ದಿನಗಳ ಹಿಂದೆ ಕಟ್ಟಿಗೆ 10ರಿಂದ 15 ರು.ವರೆಗೆ ಮಾರಾಟವಾಗುತ್ತಿದ್ದ ಕೊತ್ತಂಬರಿ ಸೊಪ್ಪಿಗೆ ಶನಿವಾರ ಸಂಜೆ 10 ರು.ಗೆ ಮೂರು ಕಟ್ಟುಗಳು ಮಾರಾಟವಾಗುತ್ತಿದ್ದವು. ಆದರೆ ಭಾನುವಾರ 3ರಿಂದ 5 ರು.ಗೆ ಕುಸಿತವಾಗಿದೆ. ಪರಿಣಾಮ ಖರ್ಚು ಮಾಡಿದ್ದ ಮೊತ್ತವೂ ಬಾರದ ಹಿನ್ನೆಲೆ ಅಸಮಾಧಾನದಿಂದ ರೈತರು, ಸೊಪ್ಪನ್ನು ರಸ್ತೆ ಬಿಸಾಡಿದ್ದಾರೆ.
ಟೊಮ್ಯಾಟೋ ಕೇಜಿಗೆ ₹1:
ಮತ್ತೊಂದೆಡೆ ದಾವಣಗೆರೆಯಲ್ಲಿ ಟೊಮ್ಯಾಟೋ ಬೆಲೆ ದಿಢೀರ್ ಕುಸಿತವು ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಕೇಜಿಗೆ ಕೇವಲ 1 ರು.ಗೆ ಕುಸಿತದಿಂದಾಗಿ 80 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ಬಂಡವಾಳ ಹೂಡಿದ್ದ ಕಿಂಚಿತ್ತೂ ಮೊತ್ತ ದೊರೆಯದ ಕಾರಣ ಕಟಾವು ಮಾಡದೆ ಗಿಡಗಳಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಕೈಗೆ ಬಂದಿದ್ದ ಟೊಮ್ಯಾಟೋ ಫಸಲು ಮಣ್ಣುಪಾಲಾಗುತ್ತಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ತಾಲೂಕುಗಳಲ್ಲಿ ರೈತರಿಗೆ ದಿಕ್ಕು ತೋಚದಂತಾಗಿದೆ.


