ಮಂಗಳೂರು ರೈಲು ನಿಲ್ದಾಣವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಕೇರಳದ ಸಂಸದರು ಪ್ರತಿಭಟನೆಗೆ ಮುಂದಾಗಿದ್ದಾರೆ. ಓಣಂ ಹಬ್ಬದ ದಿನದಂದೇ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ, ಈ ನಿರ್ಧಾರದಿಂದ ಪಾಲಕ್ಕಾಡ್ ವಿಭಾಗಕ್ಕೆ ಆಗುವ ಆದಾಯ ನಷ್ಟದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.
ತಿರುವನಂತಪುರಂ: ಮಂಗಳೂರು ನಿಲ್ದಾಣವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಬಿಜೆಪಿ ಹಿರಿಯ ನಾಯಕ ಪಿ.ಕೆ. ಕೃಷ್ಣದಾಸ್ ಸಮರ್ಥಿಸಿಕೊಂಡಿದ್ದಾರೆ. ‘ಮೈಸೂರು ವಿಭಾಗವೇನು ಅಮೆರಿಕದಲ್ಲಿದೆಯೇ? ಅದೂ ಕೂಡ ಭಾರತೀಯ ರೈಲ್ವೆಯ ಭಾಗವೇ ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಪಾಲಕ್ಕಾಡ್ ರೈಲ್ವೆ ವಿಭಾಗವನ್ನು ವಿಭಜಿಸಿ, ಮಂಗಳೂರು ಸೇರಿದಂತೆ ಕೆಲ ರೈಲು ನಿಲ್ದಾಣಗಳನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕೇರಳದ ಸಂಸದರು ಓಣಂ ಹಬ್ಬದ ದಿನದಂದು (ಆ.26ರಂದು) ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿಥಾನ್ ಮತ್ತು ಪಾಲಕ್ಕಾಡ್ ಸಂಸದ ವಿ.ಕೆ. ಶ್ರೀಕಂಠನ್ ಈ ಕುರಿತು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಕೇರಳಂ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯ
‘ಓಣಂ ಹಬ್ಬವು ಕೇರಳದ ಜನರಿಗೆ ವಿಶೇಷ. ಅಂದು ತಮ್ಮ ಆಸ್ತಿ ಮಾರಿಯಾದರೂ ಓಣಂ ಹಬ್ಬ ಆಚರಿಸಿ ಭೋಜನ ಸವಿಯಬೇಕು ಎಂಬುದು ಸಂಪ್ರದಾಯ. ಆದರೆ ಆ ದಿನದಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪಾಲಕ್ಕಾಡ್ ರೈಲ್ವೆ ವಿಭಾಗೀಯ ವಾಣಿಜ್ಯ ಸೂಪರಿಂಟೆಂಡೆಂಟ್ ಕಚೇರಿಯ ಮುಂಭಾಗದಲ್ಲಿ ನಾವು ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಮಲಬಾರ್ (ಉತ್ತರ ಕೇರಳ), ಕಾಸರಗೋಡು ಹಾಗೂ ಇಡೀ ಕೇರಳ ರಾಜ್ಯಕ್ಕೆ ಕೇಂದ್ರ ಮಾಡುತ್ತಿರುವ ಅನ್ಯಾಯದ ವಿರುದ್ಧ ಇದು ಮೊದಲ ಹಂತದ ಪ್ರತಿಭಟನೆಯಾಗಿದೆ’ ಎಂದು ಅವರು ತಿಳಿಸಿದರು.
ಪಾಲಕ್ಕಾಡ್ ಆದಾಯಕ್ಕೆ ಹೊಡೆತ
‘ಈ ವಿಭಜನೆಯಿಂದಾಗಿ ಕಾಸರಗೋಡಿನ ಜನರು ತೀವ್ರ ತೊಂದರೆಗೆ ಒಳಗಾಗಲಿದ್ದಾರೆ. 2007ರಲ್ಲಿ ಸೇಲಂ ವಿಭಾಗವನ್ನು ರಚಿಸಿದಾಗಲೇ ಪಾಲಕ್ಕಾಡ್ ವಿಭಾಗದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ನಂತರ ಮಂಗಳೂರು ಬಂದರಿನ ಮೂಲಕ ನಡೆಯುತ್ತಿದ್ದ ತೈಲ, ಕಲ್ಲಿದ್ದಲು ಮತ್ತು ರಾಸಾಯನಿಕ ರಸಗೊಬ್ಬರಗಳ ಸಾಗಣೆಯಿಂದ ಬರುವ ಸುಮಾರು 600 ಕೋಟಿ ರು. ಆದಾಯವೇ ಪಾಲಕ್ಕಾಡ್ ವಿಭಾಗಕ್ಕೆ ಮುಖ್ಯ ಆಧಾರವಾಗಿತ್ತು. ಈಗ ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸಿದರೆ ಈ ಆದಾಯ ಸಂಪೂರ್ಣವಾಗಿ ಕೈತಪ್ಪಿ ಹೋಗಲಿದೆ’ ಎಂದು ಸಂಸದರು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ದೆಹಲಿಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಸದರು ಎಚ್ಚರಿಸಿದರು.
ಇದನ್ನೂ ಓದಿ: ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಕೇರಳಂ ಸಿಎಂ ಕಿರಿಕ್; ಯಾಕೆ ಈ ವಿರೋಧ?
ಭಾರತೀಯ ರೈಲ್ವೆಯ ಪ್ರಯಾಣಿಕರ ಸೌಲಭ್ಯ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಕೃಷ್ಣದಾಸ್ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೃಷ್ಣದಾಸ್, ‘ಮೈಸೂರು ವಿಭಾಗವೇನು ಅಮೆರಿಕದಲ್ಲಿದೆಯೇ? ಅದೂ ಕೂಡ ಭಾರತೀಯ ರೈಲ್ವೆಯ ಭಾಗವೇ ಅಲ್ಲವೇ? ಭಾರತೀಯ ರೈಲ್ವೆ ಒಂದೇ ಹಣಕಾಸು ಖಾತೆಯನ್ನು ನಿರ್ವಹಿಸುತ್ತದೆ. ಇಲ್ಲಿ ಏನಾದರೂ ಆದಾಯದ ಕೊರತೆಯಾದರೆ, ಅದು ಇನ್ನೊಂದು ಬದಿಯಲ್ಲಿ (ಮೈಸೂರು ವಿಭಾಗದಲ್ಲಿ) ಆದಾಯವಾಗಿ ಹೆಚ್ಚಾಗುತ್ತದೆ. ಅಂತಿಮವಾಗಿ ಇಡೀ ಆದಾಯವು ಭಾರತೀಯ ರೈಲ್ವೆಗೇ ಸೇರುತ್ತದೆ’ ಎಂದು ತಿರುಗೇಟು ನೀಡಿದರು.


