ಬಿಗ್​ಬಾಸ್​ 13ರ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿ ಧನುಷ್​ ಮಂಜುನಾಥ್ ತಮ್ಮ ಗಿನ್ನೆಸ್​ ದಾಖಲೆ ಹರಿದು ಹಾಕಿದ್ದು ಭಾರೀ ಟ್ರೋಲ್​ಗೆ ಕಾರಣವಾಗಿತ್ತು. ಆದರೆ, ತಾನು ಹರಿದಿದ್ದು ನಕಲಿ ದಾಖಲೆ ಎಂದು ಸ್ಪಷ್ಟನೆ ನೀಡಿರುವ ಧನುಷ್, ಬಿಗ್​ಬಾಸ್​ಗೆ ಹೋಗುವ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಸಿಗುತ್ತದೆ ಎಂದಿದ್ದಾರೆ. ಈ ಘಟನೆಯು ಬಿಗ್​ಬಾಸ್​ಗೆ ಹೋಗಲು ಜನರು ಹೊಂದಿರುವ ಕನಸು ಮತ್ತು ಭ್ರಮೆಗಳನ್ನು ತೆರೆದಿಡುತ್ತದೆ.

ಬಿಗ್​ಬಾಸ್​ 13 (Bigg Boss 13) ಅಗ್ನಿಪರೀಕ್ಷೆ ಮಾಡಿ ಸಾಮಾನ್ಯ ಜನರನ್ನು ಈ ಬಾರಿ ಒಳಗೆ ಕಳಿಸಲಾಗುತ್ತಿದೆ. ಈ ಸಮಯದಲ್ಲಿ ನಡೆದ ಅಗ್ನಿಪರೀಕ್ಷೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದೆ. ಸ್ಪರ್ಧೆಯ ಹೆಸರಿನಲ್ಲಿ ಮುಖಕ್ಕೆ ಸೆಗಣಿ ಬಳಿದುಕೊಳ್ಳುವಂತೆ ಮಾಡುವುದು, ಕೆಲಸ ಬಿಡುವಂತೆ ಹೇಳುವುದು, ಇನ್ನೂ ಏನೇನೋ ಟಾಸ್ಕ್​ ಮಾಡಿಸುವುದು... ಹೀಗೆ ಇಲ್ಲಿ ನಡೆದ ಟಾಸ್ಕ್​ಗಳ ಬಗ್ಗೆ ಸಿಕ್ಕಾಪಟ್ಟೆ ಟೀಕೆಗಳು ಕೇಳಿಬರುತ್ತಿವೆ. ಅಷ್ಟಕ್ಕೂ ಇವೆಲ್ಲಾ ರಿಯಾಲಿಟಿ ಷೋ ನಡೆಸುವವರಿಗೆ ತಿಳಿಯದೇ ಇರುವ ವಿಷಯವೇನಲ್ಲ. ಆದರೆ ಜನರನ್ನು ಆಕರ್ಷಿಸಲು ನೆಗೆಟಿವ್​ ಕಮೆಂಟ್ಸ್​ಗಳು ಸೋಷಿಯಲ್​ ಮೀಡಿಯಾಕ್ಕೆ ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ಇದು ಕೂಡ ಅದರ ಒಂದು ಭಾಗವಾಗಿರಲಿಕ್ಕೆ ಸಾಕು.

ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ ಭಾರಿ ಟ್ರೋಲ್​ ಆಗಿದ್ದು ಮಾತ್ರವಲ್ಲದೇ ಸ್ಪರ್ಧಿಯ ನಡವಳಿಕೆಯ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದ್ದು, ಧನುಷ್​ ಮಂಜುನಾಥ್​ ಎನ್ನುವ ಸ್ಪರ್ಧಿ ತಮ್ಮ ಗಿನ್ನೆಸ್​ ದಾಖಲೆ ಹರಿದು ಹಾಕಿದ್ದು. ಇಂಥ ದಾಖಲೆ ಜೀವನದಲ್ಲಿ ಮಾಡುವುದು ಎಷ್ಟೋ ಮಂದಿಗೆ ಒಂದೇ ಬಾರಿಯಾಗಿರುತ್ತದೆ. ಆದರೆ ಬಿಗ್​ಬಾಸ್​​ ಷೋಗೆ ಹೋಗುವುದಕ್ಕಾಗಿ ಜೀವಮಾನದ ಸಾಧನೆಯನ್ನೇ ಪಣಕ್ಕಿಡುವಂತೆ ಹೇಳಿದ್ದು, ಹಾಗೂ ರಿಯಾಲಿಟಿ ಷೋದಿಂದ ಫೇಮಸ್​ ಆಗಿಯೇ ತೀರುತ್ತೇವೆ ಎನ್ನುವ ಭ್ರಮೆಯಿಂದ ಕೆಲವರು ಈ ರೀತಿ ದಾಖಲೆ ಹರಿದು ಹಾಕಿದ್ದು ಎಷ್ಟರಮಟ್ಟಿಗೆ ಸರಿ ಎಂದು ಸಾಕಷ್ಟು ಮಂದಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಧನುಷ್​ ಸ್ಪಷ್ಟನೆ

ಆದರೆ, ಅದಕ್ಕೀಗ ಖುದ್ದು ಧನುಷ್​ ಅವರೇ ಸ್ಪಷ್ಟನೆ ನೀಡಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ನೀವು ನೋಡಿದ್ದೆಲ್ಲಾ ಸತ್ಯವಲ್ಲ. ಅದು ನನ್ನ ಒರಿಜಿನಲ್​ ದಾಖಲೆಯಲ್ಲ. ನನಗೆ ದಾಖಲೆಯ ನಕಲಿ ಪ್ರತಿಯನ್ನು ನೀಡಲಾಗಿತ್ತು. ಒರಿಜಿನಲ್​ ನನ್ನ ಬಳಿಯೇ ಇದೆ. ಅಷ್ಟಕ್ಕೂ ಇಂಥದ್ದೊಂದು ದಾಖಲೆಯನ್ನು ಇನ್ನೊಂದು ಬಾರಿ ಬೇಕಾದ್ರೂ ಮಾಡಬಹುದು. ಆದರೆ ಬಿಗ್​ಬಾಸ್​ಗೆ ಹೋಗುವ ಅವಕಾಶ ಸಿಗುವುದು ಜೀವನದಲ್ಲಿ ಒಂದೇ ಬಾರಿ. ಎಷ್ಟೋ ಮಂದಿಯಲ್ಲಿ ಸೆಲೆಕ್ಟ್​ ಆಗಿರುವಾಗ ಇಂಥ ಅವಕಾಶವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮೂಲಕ, ಅಸಲಿ ದಾಖಲೆ ಹರಿದು ಹಾಕಿದರೂ ತಮಗೆ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

ಬಿಗ್​ಬಾಸ್ ಎನ್ನುವ ಕನಸು...

ಇವರ ಮಾತಿನಿಂದ ಬಿಗ್​ಬಾಸ್​​ಗೆ ಹೋಗುವುದು ಅದೆಷ್ಟು ಮಂದಿಯ ದೊಡ್ಡ ಕನಸು ಎನ್ನುವುದು ತಿಳಿಯುತ್ತದೆ. ಬಿಗ್​ಬಾಸ್​ಗೆ ಹೋಗಿ ಬಂದರೆ ಅದರ ಲೆವೆಲ್ಲೇ ಬೇರೆಯದ್ದು ಎನ್ನುವ ಕಲ್ಪನೆ ಹಲವರಿಗೆ ಇದೆ. ಗಿನ್ನೆಸ್​ ದಾಖಲೆ ಮಾಡಿದರೂ ಸಿಗದ ಮರ್ಯಾದೆ ಬಿಗ್​ಬಾಸ್​ಗೆ ಹೋಗಿ ಬಂದರೆ ತಮಗೆ ಸಿಕ್ಕಾಪಟ್ಟೆ ಸಿಗುತ್ತದೆ, ಇದರಿಂದ ಮುಂದೆ ದೊಡ್ಡ ದೊಡ್ಡ ಅವಕಾಶಗಳು ಹುಡುಕಿ ಬರುತ್ತವೆ, ಜನರು ನಮ್ಮ ಹಿಂದೆ ಬೀಳುತ್ತಾರೆ, ಹೋದಲ್ಲಿ, ಬಂದಲ್ಲಿ ಆಟೋಗ್ರಾಫ್​ ಕೇಳುತ್ತಾರೆ. ಮುಂದೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ.... ಹೀಗೆ ಹಲವರ ಕಲ್ಪನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ, ಅವರ ಅದೃಷ್ಟ ಕಾಲವೇ ನಿರ್ಧರಿಸಬೇಕಷ್ಟೇ.