Toxic pre release event ಕಾರ್ಯಕ್ರಮದಲ್ಲಿ ಸೆಲ್ಫಿ ಹಾಗೂ ಆಟೋಗ್ರಾಫ್‌ಗಾಗಿ ಯಶ್‌ ಅವರನ್ನು ಭೇಟಿಯಾಗಲು ಬಂದ ಅಭಿಮಾನಿಯನ್ನು ಬಾಡಿಗಾರ್ಡ್‌ ಹಿಂದೆ ಸರಿಸಲು ಮುಂದಾದಾಗ, ಯಶ್‌ ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ.

‘ಟಾಕ್ಸಿಕ್‌’ ಕಾರ್ಯಕ್ರಮದಲ್ಲಿ ಅಭಿಮಾನಿಯೊಂದಿಗೆ ಯಶ್‌ ವರ್ತಿಸಿದ ರೀತಿ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಸೆಲ್ಫಿ ಹಾಗೂ ಆಟೋಗ್ರಾಫ್‌ಗಾಗಿ ಯಶ್‌ ಅವರನ್ನು ಭೇಟಿಯಾಗಲು ಬಂದ ಅಭಿಮಾನಿಯನ್ನು ಬಾಡಿಗಾರ್ಡ್‌ ಹಿಂದೆ ಸರಿಸಲು ಮುಂದಾದಾಗ, ಯಶ್‌ ತಕ್ಷಣವೇ ಮಧ್ಯಪ್ರವೇಶಿಸಿ ಅಭಿಮಾನಿಯನ್ನು ತಮ್ಮ ಬಳಿಗೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ‘ಯಶ್‌ ಅಂದರೆ ಇದೇ ಕಾರಣಕ್ಕೆ ಅಭಿಮಾನಿಗಳ ಪ್ರೀತಿ’ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಅಭಿಮಾನಿಯನ್ನು ತಡೆಯದಂತೆ ಬಾಡಿಗಾರ್ಡ್‌ಗೆ ಯಶ್‌ ಸೂಚನೆ!

ಹೈದರಾಬಾದ್‌ನಲ್ಲಿ ನಡೆದ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌-ಅಪ್ಸ್‌’ ಪ್ರೀ-ರಿಲೀಸ್‌ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಓರ್ವ ಅಭಿಮಾನಿ ಯಶ್‌ ಅವರನ್ನು ಭೇಟಿಯಾಗಿ ಸೆಲ್ಫಿ ಹಾಗೂ ಆಟೋಗ್ರಾಫ್‌ ಪಡೆಯಲು ಮುಂದಾಗಿದ್ದಾರೆ. ಭದ್ರತಾ ಸಿಬ್ಬಂದಿ ಅವರನ್ನು ಹಿಂದೆ ಸರಿಸಲು ಪ್ರಯತ್ನಿಸಿದಾಗ, ಯಶ್‌ ಅದನ್ನು ಗಮನಿಸಿ ಅಭಿಮಾನಿಯನ್ನು ತಡೆಯದಂತೆ ಸೂಚಿಸಿದ್ದಾರೆ.

ಅಷ್ಟೇ ಅಲ್ಲ, ಅಭಿಮಾನಿ ತಮ್ಮ ಬಳಿ ಬರುವಂತೆ ಅವಕಾಶ ನೀಡಿದ ಯಶ್‌, ಖುಷಿಯಿಂದ ಅವರೊಂದಿಗೆ ಫೋಟೋಗೆ ಪೋಸ್‌ ನೀಡಿದ್ದಾರೆ. ಪಕ್ಕದಲ್ಲೇ ಇದ್ದ ಚಿತ್ರದ ಸಹನಟಿ ಹುಮಾ ಖುರೇಷಿ ಕೂಡ ಈ ಕ್ಷಣವನ್ನು ನೋಡಿ ನಗುಮುಖದಿಂದ ಪ್ರತಿಕ್ರಿಯಿಸಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

‘ಗೋಲ್ಡನ್‌ ಹಾರ್ಟ್‌’ ಯಶ್‌ ಎಂದ ಅಭಿಮಾನಿಗಳು

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಯಶ್‌ ಅವರ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರೀ ಜನಸ್ತೋಮ ಹಾಗೂ ಬಿಗಿ ಭದ್ರತೆಯ ನಡುವೆಯೂ ಅಭಿಮಾನಿಯ ಉತ್ಸಾಹಕ್ಕೆ ಬೆಲೆ ನೀಡಿದ ಯಶ್‌ ಅವರನ್ನು ನೆಟ್ಟಿಗರು ಹಾಡಿಹೊಗಳಿದ್ದಾರೆ.

‘ಮ್ಯಾನ್‌ ವಿತ್‌ ಎ ಗೋಲ್ಡನ್‌ ಹಾರ್ಟ್‌’, ‘ಅದಕ್ಕೇ ಯಶಸ್ಸು ಮತ್ತೆ ಮತ್ತೆ ಯಶ್‌ ಅವರ ಕಾಲಿಗೆ ಮುತ್ತಿಡುತ್ತದೆ’ ಎಂಬಂತಹ ಕಾಮೆಂಟ್‌ಗಳು ವೈರಲ್‌ ಆಗಿವೆ. ಕೆಲವರು ಯಶ್‌ ಅವರ ಅಭಿಮಾನಿಗಳೊಂದಿಗೆ ಹೊಂದಿರುವ ಬಾಂಧವ್ಯವನ್ನು ಕೊಂಡಾಡಿದ್ದಾರೆ.

ಒಡಿಶಾದಿಂದ ಬಂದ ಅಭಿಮಾನಿಯನ್ನೂ ಗುರುತಿಸಿದ ಯಶ್‌

ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ಪ್ರೇಕ್ಷಕರ ನಡುವೆ ಒಡಿಶಾದಿಂದ ಬಂದಿದ್ದ ಯುವ ಅಭಿಮಾನಿಯೊಬ್ಬರು ಯಶ್‌ ಅವರ ಕೈಯಿಂದ ಬಿಡಿಸಿದ ಚಿತ್ರವನ್ನು ತಂದಿದ್ದರು. ಇದನ್ನು ಗಮನಿಸಿದ ಯಶ್‌, ಆ ಅಭಿಮಾನಿಯನ್ನು ತಮ್ಮ ಬಳಿಗೆ ಕರೆಸಿಕೊಂಡು, ಆ ಚಿತ್ರಕ್ಕೆ ಆಟೋಗ್ರಾಫ್‌ ಹಾಕಿ, ಅವರೊಂದಿಗೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಯಶ್‌ ಅವರ ಈ ನಡೆ ಅಭಿಮಾನಿಗಳ ಮನಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ.

ಆಗಸ್ಟ್‌ 26ಕ್ಕೆ ‘ಟಾಕ್ಸಿಕ್‌’ ಗ್ರ್ಯಾಂಡ್‌ ಎಂಟ್ರಿ

ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌-ಅಪ್ಸ್‌’ ಸಿನಿಮಾದಲ್ಲಿ ಯಶ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್‌ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಯಶ್‌ ಅವರೇ ಬರಹಗಾರ ಹಾಗೂ ನಿರ್ಮಾಪಕರಾಗಿಯೂ ಸಿನಿಮಾದೊಂದಿಗೆ ಕೈಜೋಡಿಸಿದ್ದಾರೆ. ‘ಕೆಜಿಎಫ್‌: ಚಾಪ್ಟರ್‌ 2’ ಬಳಿಕ ಯಶ್‌ ಅವರ ಬಹುನಿರೀಕ್ಷಿತ ಕಮ್‌ಬ್ಯಾಕ್‌ ಸಿನಿಮಾ ಇದಾಗಿದ್ದು, ಆಗಸ್ಟ್‌ 26ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಅಡ್ವಾನ್ಸ್‌ ಬುಕಿಂಗ್‌ಗೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.