ಸಿನಿಮಾ ನಟ, ನಟಿಯ ಹಸಿಬಿಸಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಗಿಬಿಡುತ್ತವೆ. ಕೆಲವೊಮ್ಮೆ ಈ ದೃಶ್ಯಗಳು ಆ ಕಲಾವಿದನ ವೈಯಕ್ತಿಕ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹದೇ ಒಂದು ಕಹಿ ಘಟನೆಯನ್ನ ಬಾಲಿವುಡ್ ನಟಿಯೊಬ್ಬರು ಹೇಗೆ ಎದುರಿಸಿದೆ ಎಂಬುದನ್ನ ವಿವರಿಸಿದ್ದಾರೆ.
ಸಿನಿಮಾ, ನಾಟಕ ಅಂತಾ ಬಂದಾಗ ಕಲಾವಿದರು ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. ಪಾತ್ರದ ತೀವ್ರತೆಗೆ ತಕ್ಕಂತೆ ನಟಿಸುತ್ತಾರೆ. ನಟನೆಯಲ್ಲಿ ತಮ್ಮನ್ನು ತಾವೇ ಕಳೆದುಹೋಗಿಬಿಡುತ್ತಾರೆ. ಇಂಥ ಸಂದರ್ಭದಲ್ಲಿ ಕಂಟ್ರೋಲ್ ತಪ್ಪಿ ಕೆಲವು ದೃಶ್ಯಗಳು ಸಾರ್ವಜನಿಕವಾಗಿ ಸೋರಿಕೆ ಆದಾಗ ಆ ಕಲಾವಿದ ಸಂಕಷ್ಟ ಎದುರಿಸುತ್ತಾರೆ. ಅಂತಹ ಪರಿಸ್ಥಿಗಳು ಕಲಾವಿದನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನ ಬಾಲಿವುಡ್‌ನ ಖ್ಯಾತ ನಟಿ ರಾಧಿಕಾ ಆಪ್ಟೆ ತಿಳಿಸಿದ್ದಾರೆ..
ಈ ಹಿಂದೆ ರಾಧಿಕಾ ಆಪ್ಟೆ ನಟನೆಯ ಚಿತ್ರವೊಂದರ ಖಾಸಗಿ ದೃಶ್ಯ ಲೀಕ್ ಆಗಿತ್ತು. ಆಗ ತಾವು ಅನುಭವಿಸಿದ ತೀವ್ರ ನೋವು ಮತ್ತು ಆಘಾತದ ಬಗ್ಗೆ ಆಪ್ಟೆ ಮಾತನ್ನಾಡಿದ್ದಾರೆ. ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು.. ನಾವು ಕಲಾವಿದರಾಗಿ ಕಥೆಯ ಅಗತ್ಯಕ್ಕೆ ತಕ್ಕಂತೆ ಕೆಲವು ದೃಶ್ಯಗಳಲ್ಲಿ ನಟಿಸಲು ಒಪ್ಪಿಕೊಂಡಿರುತ್ತೇವೆ. ಆದರೆ ಆ ತುಣುಕುಗಳು ನಮ್ಮ ಗಮನಕ್ಕೆ ಬಾರದಂತೆ ಅನಧಿಕೃತವಾಗಿ ಸೋರಿಕೆ ಆಗಿಬಿಡುತ್ತದೆ. ಆಗ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತದೆ. ಚಿತ್ರೀಕರಣದ ವಿಷಯವೊಂದು ವೈಯಕ್ತಿಕ ಜೀವನದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನ ಆ ಘಟನೆ ಕಲಿಸಿತು. ಆ ದೃಶ್ಯ ಲೀಕ್ ಆದಾಗ ನನಗೆ ತೀವ್ರ ಮಾನಸಿಕ ಒತ್ತಡ ಆಯಿತು. ಬರೋಬ್ಬರಿ 4 ದಿನಗಳ ಕಾಲ ಮನೆಯಿಂದ ಹೊರಗೆ ಬರಲಿಲ್ಲ ಎಂದು ಭಾವುಕರಾಗಿದ್ದಾರೆ.
ಕುಟುಂಬದ ಸುರಕ್ಷತೆಗಾಗಿ ಸಿನಿಮಾ ಬಿಟ್ಟಿದ್ದೆ
ನನ್ನ ಸುತ್ತಮುತ್ತಲಿನವರೇ ಆ ವಿಡಿಯೋ ನೋಡಿದ್ದರು, ಇದು ನನಗೆ ತೀವ್ರ ಆಘಾತ ತಂದಿತ್ತು. ಮನೆಯ ವಾಚ್‌ಮನ್ ಮತ್ತು ಕಾರು ಚಾಲಕ ಕೂಡ ಆ ದೃಶ್ಯವನ್ನು ನೋಡಿದ್ದರು. ಇಂತಹ ವಿಷಯಗಳು ಕೇವಲ ಇಂಟರ್ನೆಟ್ ಅಥವಾ ಸಾಮಾಜಿಕ ಜಾಲತಾಣದ ಕಮೆಂಟ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಮನೆ ಬಾಗಿಲಿಗೂ ಬರುತ್ತದೆ ಎಂಬುದನ್ನು ಅರಿತುಕೊಂಡೆ. ಆ ಸಮಯದಲ್ಲಿ ಮುಂಬೈನಲ್ಲಿ ಒಬ್ಬಳೇ ವಾಸವಿದ್ದೆ. ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಮನೆ ಬಳಿ ಬಂದರೆ ಏನು ಕತೆ ಎಂಬ ಭಯ ಕಾಡಿತ್ತು..
ಹಾಗಿದ್ದೂ ನಾನು ನನ್ನ ಮನೆಯ ಸೆಕ್ಯೂರಿಟಿ, ಕಾರು ಡ್ರೈವರ್, ಸಿಬ್ಬಂದಿ ಜೊತೆ ಮುಕ್ತ ಮಾತುಕತೆ ನಡೆಸಲು ಧೈರ್ಯ ಮಾಡಿದ್ದೆ. ಅವರನ್ನು ಕರೆದು ಈ ವಿಷಯದ ಬಗ್ಗೆ ನೇರವಾಗಿ ಮಾತನಾಡಿದೆ. ಅವರ ಬಳಿ ಆ ವಿಡಿಯೋ ನೀವು ನೋಡಿದ್ದೀರಾ? ನೋಡಿದ ಮೇಲೂ ನೀವು ನನ್ನೊಂದಿಗೆ ಮುಕ್ತವಾಗಿ ಕೆಲಸ ಮಾಡಲು ಒಪ್ಪಿಗೆ ಇದೆಯೇ? ನನಗೆ ನೀವು ಸುರಕ್ಷತೆಯ ಜವಾಬ್ದಾರಿ ಹೊರಬಲ್ಲಿರೇ ಎಂದು ಕೇಳಿದ್ದೆ. ಅದಕ್ಕೆ ಅವರೆಲ್ಲರೂ ನನಗೆ ಧೈರ್ಯ ತುಂಬಿ, ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು. ಅವರು ಆಡಿದ ಆ ಮಾತು ಸಮಾಧಾನ ತಂದಿತ್ತು.
ಇದೇ ಭಯದಿಂದಾಗಿಯೇ ನಾನು ಮತ್ತೊಂದು ಸಿನಿಮಾ ಕೈಬಿಟ್ಟೆ. ನನಗೆ ತುಂಬಾನೇ ಇಷ್ಟವಾಗಿದ್ದ ಮತ್ತು ಯಾವುದೇ ಕಾರಣಕ್ಕೂ ಬಿಡಬಾರದು ಎಂದುಕೊಂಡಿದ್ದ ಉತ್ತಮ ಪಾತ್ರವನ್ನು ಅನಿವಾರ್ಯವಾಗಿ ಅಂದು ಬಿಟ್ಟೆ. ಆ ಪಾತ್ರದಲ್ಲಿ ನಟಿಸಿದರೆ ನನ್ನ ಕುಟುಂಬಕ್ಕೆ ತೊಂದರೆ ಅಥವಾ ಬೆದರಿಕೆಗಳು ಬರಬಹುದು ಎಂಬ ಭಯ ನನ್ನಲ್ಲಿತ್ತು. ನಿರ್ದೇಶಕ ಅನುರಾಗ್ ಕಶ್ಯಪ್ ಜೊತೆ ಚರ್ಚಿಸಿ.. ಸಲಹೆಯಂತೆ ಕುಟುಂಬದ ಸುರಕ್ಷತೆಯ ಹಿತದೃಷ್ಟಿಯಿಂದ ಆ ಚಿತ್ರದಿಂದ ಹಿಂದೆ ಸರಿದೆ.
ರಾಧಿಕಾ ಆಪ್ಟೆ, ಬಾಲಿವುಡ್ ನಟಿ


