ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ತೆಲುಗು ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಝ್ನೋವಾ ಅಂತಾನೇ ಎಲ್ಲರಿಗೂ ಗೊತ್ತು. ಆದರೆ, ಅವರು ಈಗ ಅಧಿಕೃತವಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅವರ ಹೊಸ ಹೆಸರೇನು ಅಂತ ತಿಳಿದುಕೊಳ್ಳೋಣ ಬನ್ನಿ.

ಅನ್ನಾ ಲೆಝ್ನೋವಾ... ರಷ್ಯಾದಲ್ಲಿ ಹುಟ್ಟಿ ಬೆಳೆದ ಇವರು, ಕೊನಿದೆಲಾ ಮನೆ ಸೊಸೆಯಾಗಿ ತೆಲುಗು ಜನರಿಗೆ ಪರಿಚಯವಾದರು. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಪತ್ನಿಯಾಗಿ ಅವರಿಗೆ ವಿಶೇಷ ಸ್ಥಾನವಿದೆ. ಆದರೆ ಅವರ ವಿದೇಶಿ ಹೆಸರು ತೆಲುಗು ಜನರಿಗೆ ಅಷ್ಟಾಗಿ ಕನೆಕ್ಟ್ ಆಗುತ್ತಿರಲಿಲ್ಲ. ಇದೀಗ ಅವರು ತಮ್ಮ ಹೆಸರನ್ನು ಬದಲಿಸಿಕೊಂಡು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅನ್ನಾ ಲೆಝ್ನೋವಾ ಅವರ ಹೊಸ ಹೆಸರೇನು? ಮುಂದೆ ಓದಿ.

ಮದುವೆಯ ನಂತರ ಸಾಮಾನ್ಯವಾಗಿ ಹೆಣ್ಣುಮಕ್ಕಳ ಸರ್‌ನೇಮ್ ಬದಲಾಗುತ್ತದೆ. ಪವನ್ ಕಲ್ಯಾಣ್ ಅವರನ್ನು ಮದುವೆಯಾದ ನಂತರವೂ ಎಲ್ಲರೂ ಅನ್ನಾ ಲೆಝ್ನೋವಾ ಎಂದೇ ಕರೆಯುತ್ತಿದ್ದರು. ಇದೀಗ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ನು ಮುಂದೆ ತನ್ನನ್ನು 'ಅನ್ನಾ ಕೊನಿದೆಲಾ' ಎಂದು ಕರೆಯುವಂತೆ ಅವರು ವಿನಂತಿಸಿದ್ದಾರೆ. ಪತಿಯ ಸರ್‌ನೇಮ್ ತನ್ನ ಹೆಸರಿನ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

'ಶೀಘ್ರದಲ್ಲೇ ನನ್ನ ಹುಟ್ಟುಹಬ್ಬ ಬರಲಿದೆ. ಹಾಗಾಗಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ಇದು ಸರಿಯಾದ ಸಮಯ. ಇನ್‌ಸ್ಟಾಗ್ರಾಮ್ ಖಾತೆ ತೆರೆದಾಗಿನಿಂದ ಈ ವಿಷಯ ಹೇಳಬೇಕೆಂದುಕೊಂಡಿದ್ದೆ. ಹಲವು ಬಾರಿ ಟೈಪ್ ಮಾಡಿ ಡಿಲೀಟ್ ಮಾಡಿದ್ದೆ. ಈಗ ಸರಿಯಾದ ಸಮಯ ಬಂದಿದೆ' ಎಂದು ಅನ್ನಾ ಬರೆದುಕೊಂಡಿದ್ದಾರೆ. ನಾನು ಪವನ್ ಕಲ್ಯಾಣ್ ಅವರನ್ನು ಮದುವೆಯಾದಾಗ ನನ್ನ ಹೆಸರು ಅನ್ನಾ ಲೆಝ್ನೋವಾ ಆಗಿತ್ತು. ಆದರೆ ಮದುವೆಯ ನಂತರ ನನ್ನ ಹೆಸರು ಅನ್ನಾ ಕೊನಿದೆಲಾ ಎಂದು ಬದಲಾಗಿದೆ. ಇನ್ನು ಮುಂದೆ ನನ್ನನ್ನು ಅನ್ನಾ ಕೊನಿದೆಲಾ ಎಂದೇ ಕರೆಯಿರಿ.

ಈ ಹೆಸರು ನನಗೆ ತುಂಬಾ ವಿಶೇಷ ಎಂದು ಆಂಧ್ರದ ಡಿಸಿಎಂ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಹೆಸರು ಬದಲಾವಣೆಯ ಪೋಸ್ಟ್ ಜೊತೆಗೆ, ಅನ್ನಾ ಕೊನಿದೆಲಾ ತಮ್ಮ ಪತಿ ಪವನ್ ಕಲ್ಯಾಣ್ ಜೊತೆಗಿನ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ಹೊಸದರಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಪವನ್ ಮತ್ತು ಅನ್ನಾ ಜೋಡಿ ಯಂಗ್ ಆಗಿ, ಮುದ್ದಾಗಿ ಕಾಣುತ್ತಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.

ಪೋಸ್ಟ್ ವೈರಲ್

ತನ್ನನ್ನು ಅನ್ನಾ ಲೆಝ್ನೋವಾ ಬದಲಿಗೆ ಅನ್ನಾ ಕೊನಿದೆಲಾ ಎಂದು ಕರೆಯುವಂತೆ ಅವರು ಮಾಡಿದ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದೆ. ಪವನ್ ಕಲ್ಯಾಣ್ ಅಭಿಮಾನಿಗಳು, 'ನಮ್ಮ ಅಣ್ಣನಿಗಾಗಿ ವದಿನಮ್ಮ (ಅತ್ತಿಗೆ) ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್‌ಗೆ 90 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಸಾವಿರಾರು ಕಾಮೆಂಟ್‌ಗಳು ಹರಿದುಬರುತ್ತಿವೆ.