ಅಂದು ಆಡಿಷನ್‌ಗಳಲ್ಲಿ ಹಲವು ಬಾರಿ ರಿಜೆಕ್ಟ್ ಆಗಿದ್ದ ಕಿಯಾರಾ ಅಡ್ವಾಣಿ, ಇಂದು ‘ಟಾಕ್ಸಿಕ್’ ಸಿನಿಮಾದ ನಾಡಿಯಾ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರ ಅಭಿನಯಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.
ಒಂದು ಪಾತ್ರಕ್ಕಾಗಿ ಅವಕಾಶ ಹುಡುಕುತ್ತಾ ಅಲೆದಾಡಿದ ದಿನಗಳು... ಆಡಿಷನ್ ಕೊಟ್ಟಾಗಲೆಲ್ಲ ‘Rejected’ ಎಂಬ ಉತ್ತರ ಕೇಳಿ ಬೇಸತ್ತ ಕ್ಷಣಗಳು... ಆದರೆ ಅದೇ ನಟಿ ಇಂದು ಒಂದು ಪಾತ್ರದ ಮೂಲಕ ಇಡೀ ಸಿನಿಮಾವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆ ನಟಿಯೇ ಕಿಯಾರಾ ಅಡ್ವಾಣಿ. ‘ಟಾಕ್ಸಿಕ್’ ಸಿನಿಮಾದ ನಾಡಿಯಾ ಪಾತ್ರದಲ್ಲಿ ಕಿಯಾರಾ ನೀಡಿರುವ ಅಭಿನಯ ಇದೀಗ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ.
‘ನಾಡಿಯಾ’ ಆಗಿ ಕಿಯಾರಾ... ಪರದೆ ಮೇಲೆ ಸಖತ್ ಅಬ್ಬರ!
‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳುವ ನಾಡಿಯಾ ಪಾತ್ರ ಸಾಮಾನ್ಯ ಪಾತ್ರವಲ್ಲ. ಸಿನಿಮಾದ ಆರಂಭದಿಂದಲೇ ಪ್ರೇಕ್ಷಕರ ಮನಸ್ಸಿನಲ್ಲಿ ಒಂದು ರೀತಿಯ ಕುತೂಹಲ ಮೂಡಿಸುವ ಈ ಪಾತ್ರ, ಕಥೆ ಮುಂದುವರಿದಂತೆ ಇನ್ನಷ್ಟು ಗಾಢವಾಗುತ್ತಾ ಹೋಗುತ್ತದೆ. ವಿಶೇಷವೆಂದರೆ, ನಾಡಿಯಾ ಪಾತ್ರಕ್ಕೆ ಕಿಯಾರಾ ನೀಡಿರುವ ಜೀವ.
ಸರ್ಕಸ್ ಕಲಾವಿದೆ, ಪ್ರೇಯಸಿ, ಗೆಳತಿ, ತಾಯಿ... ಕೊನೆಗೆ ಭಗ್ನ ಪ್ರೇಮಿಯಾಗಿ ನಾಡಿಯಾ ಹಲವು ಭಾವನೆಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಾಳೆ. ಈ ಎಲ್ಲಾ ಶೇಡ್‌ಗಳನ್ನು ಕಿಯಾರಾ ಅಡ್ವಾಣಿ ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
ಕಣ್ಣಲ್ಲೇ ಕಥೆ ಹೇಳಿದ ಕಿಯಾರಾ!
ಕಿಯಾರಾ ಅವರ ಅಭಿನಯದ ದೊಡ್ಡ ಶಕ್ತಿ ಡೈಲಾಗ್‌ಗಳಿಗಿಂತ ಅವರ ಕಣ್ಣುಗಳು ಎನ್ನಬಹುದು. ಸಂತೋಷ, ನೋವು, ಭಯ, ಅಸಹಾಯಕತೆ, ಪ್ರೀತಿ... ಪ್ರತಿಯೊಂದು ಭಾವನೆಯನ್ನೂ ಕಣ್ಣಿನ ಮೂಲಕವೇ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಮಗನ ಎದುರು ಅಸಹಾಯಕತೆಯಿಂದ ಕಣ್ಣೀರಿಡುವ ದೃಶ್ಯ ಕಿಯಾರಾ ಅವರ ಅಭಿನಯ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆ. ಆ ಒಂದು ದೃಶ್ಯದಲ್ಲೇ ನಾಡಿಯಾ ಪಾತ್ರದ ನೋವು, ಅಸಹಾಯಕತೆ ಮತ್ತು ಒಳಗಿನ ತೊಳಲಾಟ ಪ್ರೇಕ್ಷಕರಿಗೆ ಅರ್ಥವಾಗುತ್ತದೆ.
ಸಿನಿಮಾ ಬಿಟ್ಟು ಹೋದರೂ ನಾಡಿಯಾ ಕಾಡುತ್ತಾಳೆ!
‘ಟಾಕ್ಸಿಕ್’ನಲ್ಲಿ ನಾಡಿಯಾ ಪಾತ್ರದ ಸ್ಕ್ರೀನ್‌ಟೈಮ್ ಎಷ್ಟೇ ಇರಲಿ, ಪಾತ್ರದ ಪ್ರಭಾವ ಮಾತ್ರ ಸಿನಿಮಾದ ಕೊನೆಯವರೆಗೂ ಉಳಿಯುವಂತೆ ಮಾಡಿದ್ದಾರೆ ಕಿಯಾರಾ. ಕಥೆಯಿಂದ ಒಂದು ಹಂತದಲ್ಲಿ ಪಾತ್ರ ದೂರವಾದರೂ, ನಾಡಿಯಾ ಎಂಬ ಹೆಸರನ್ನು ಪ್ರೇಕ್ಷಕರು ಮರೆಯದಂತೆ ಮಾಡಿರುವುದು ಅವರ ಅಭಿನಯ.
ರಾಯನಂತಹ ಕ್ರೂರ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿಕೊಳ್ಳುವುದು, ಆತನ ಮಗುವಿಗೆ ತಾಯಿಯಾಗುವುದು, ಕೊನೆಗೆ ತನ್ನ ಅನುಪಸ್ಥಿತಿಯಲ್ಲೂ ರಾಯನ ಮನಸ್ಸಿನಲ್ಲಿ ಒಂದು ರೀತಿಯ ಭ್ರಮೆ ಮತ್ತು ನೆನಪಾಗಿ ಉಳಿಯುವುದು... ನಾಡಿಯಾ ಪಾತ್ರದಲ್ಲಿ ದುರಂತದ ಹಲವು ಪದರಗಳಿವೆ.
ಅವಳು ಮಾಯಗಾತಿಯೂ ಅಲ್ಲ, ಮಾಟಗಾತಿಯೂ ಅಲ್ಲ. ತನ್ನನ್ನು ಸೆಳೆದ ವ್ಯಕ್ತಿಯನ್ನು ಪ್ರೀತಿಸಿದ ಒಬ್ಬ ಹೆಣ್ಣು. ಆದರೆ ಆ ಪ್ರೀತಿಯೇ ಆಕೆಯ ಬದುಕನ್ನು ದುರಂತದತ್ತ ಕೊಂಡೊಯ್ಯುತ್ತದೆ. ಈ ಸೂಕ್ಷ್ಮತೆಯನ್ನು ಕಿಯಾರಾ ತಮ್ಮ ಅಭಿನಯದಲ್ಲಿ ಹಿಡಿದಿಟ್ಟಿರುವುದು ಪಾತ್ರಕ್ಕೆ ಮತ್ತಷ್ಟು ತೂಕ ನೀಡಿದೆ.
ಆಡಿಷನ್‌ಗಳಲ್ಲಿ ರಿಜೆಕ್ಟ್... ಈಗ ಅದೇ ನಟಿಗೆ ಭರ್ಜರಿ ಮೆಚ್ಚುಗೆ!
ಒಂದು ಕಾಲದಲ್ಲಿ ಅವಕಾಶಕ್ಕಾಗಿ ಆಡಿಷನ್‌ಗಳ ಹಿಂದೆ ಆಡಿಷನ್ ಕೊಡುತ್ತಿದ್ದ ಕಿಯಾರಾ ಅಡ್ವಾಣಿ, ಹಲವು ಬಾರಿ ನಿರಾಕರಣೆಯನ್ನು ಎದುರಿಸಿದ್ದರು. ಆದರೆ ಇಂದು ಅದೇ ಕಿಯಾರಾ, ಬಾಲಿವುಡ್ ಮಾತ್ರವಲ್ಲದೆ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದ್ದಾರೆ. ‘ಟಾಕ್ಸಿಕ್’ ಕುರಿತು ಉತ್ತಮ ಅಭಿಪ್ರಾಯಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಕಿಯಾರಾ ಅವರ ನಾಡಿಯಾ ಪಾತ್ರವೂ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಕಿಯಾರಾ ಅವರ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವುದು ವಿಶೇಷ.
‘Just Unbelievable’ ಅನ್ನಿಸುವ ಅಭಿನಯ!
ಗ್ಲಾಮರ್ ಮಾತ್ರವಲ್ಲ, ಪಾತ್ರದ ಒಳಗಿನ ನೋವು ಮತ್ತು ಭಾವನೆಗಳನ್ನೂ ಪರದೆಯ ಮೇಲೆ ತರುವ ಸಾಮರ್ಥ್ಯ ಕಿಯಾರಾ ಅವರ ಈ ಅಭಿನಯದಲ್ಲಿ ಮತ್ತೊಮ್ಮೆ ಕಾಣಿಸಿದೆ. ನಾಡಿಯಾ ಪಾತ್ರದ ಪ್ರತಿಯೊಂದು ಹಂತದಲ್ಲೂ ಅವರು ತೋರಿಸಿರುವ ಭಾವನಾತ್ಮಕ ಏರಿಳಿತವೇ ಪಾತ್ರವನ್ನು ನೆನಪಿನಲ್ಲಿ ಉಳಿಸುವಂತೆ ಮಾಡಿದೆ.
ಇನ್ನು ಸಿನಿಮಾ ಮುಗಿದ ಮೇಲೂ ನಾಡಿಯಾ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಎಂದಾದರೆ, ಅದರ ಬಹುಪಾಲು ಕ್ರೆಡಿಟ್ ಕಿಯಾರಾ ಅಡ್ವಾಣಿಗೆ ಸಲ್ಲಬೇಕು. ಕೆಲವೊಮ್ಮೆ ಪಾತ್ರ ದೊಡ್ಡದಾಗಿರಬೇಕಿಲ್ಲ... ಅದನ್ನು ನಿರ್ವಹಿಸುವ ಕಲಾವಿದ ದೊಡ್ಡವನಾಗಿದ್ದರೆ ಸಾಕು. ‘ಟಾಕ್ಸಿಕ್’ನಲ್ಲಿ ಕಿಯಾರಾ ಅದನ್ನೇ ಸಾಬೀತುಪಡಿಸಿದ್ದಾರೆ.


