ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 13’ ರಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ಖ್ಯಾತಿಯ ಜಗ್ಗ ಮಮ್ಮಿ ಅಲಿಯಾಸ್ ಜಗದೀಶ್ ಸ್ಪರ್ಧಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಜಗದೀಶ್ ತಮ್ಮದೇ ಆದ ಸರಳತೆ ಮತ್ತು ಸ್ವಭಾವದಿಂದ ಗಮನ ಸೆಳೆಯುತ್ತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 13’ ರಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ಖ್ಯಾತಿಯ ಜಗ್ಗ ಮಮ್ಮಿ ಅಲಿಯಾಸ್ ಜಗದೀಶ್ ಸ್ಪರ್ಧಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಜಗದೀಶ್ ತಮ್ಮದೇ ಆದ ಸರಳತೆ ಮತ್ತು ಸ್ವಭಾವದಿಂದ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಅಡುಗೆ ಮನೆಯಲ್ಲಿ ಅವರು ತೋರಿಸುತ್ತಿರುವ ಆಸಕ್ತಿ ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ. ಆದರೆ, ಇಂದು ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿರುವ ಜಗದೀಶ್ ಅವರ ಹಿಂದಿನ ಜೀವನದ ಕಥೆ ಅಷ್ಟು ಸುಲಭವಾಗಿರಲಿಲ್ಲ. ಎಂಟನೇ ತರಗತಿಯಲ್ಲೇ ಶಾಲೆ ತೊರೆದು, ಕುಟುಂಬದ ಜವಾಬ್ದಾರಿ ಹೊತ್ತು ದುಡಿಯಲು ಆರಂಭಿಸಿದ ಅವರು, ಹಲವು ವರ್ಷಗಳ ಕಾಲ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು. ನಂತರ ಅದೇ ಅಡುಗೆ ಕೆಲಸವೇ ಅವರನ್ನು ಚಿತ್ರರಂಗದತ್ತ ಕರೆತಂದಿತು.

ಎಂಟನೇ ತರಗತಿಗೇ ವಿದ್ಯಾಭ್ಯಾಸಕ್ಕೆ ಗುಡ್‌ಬೈ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶೂಟಿಂಗ್ ಮಹಾದೇವಪುರ ಜಗದೀಶ್ ಅವರ ಸ್ವಗ್ರಾಮ. ಮನೆಯಲ್ಲಿ ಆರ್ಥಿಕ ಸಮಸ್ಯೆ, ವಯಸ್ಸಾದ ತಂದೆ-ತಾಯಿ ಮತ್ತು ಮನೆಗೆ ಒಬ್ಬನೇ ಮಗ ಎಂಬ ಜವಾಬ್ದಾರಿ ಅವರ ಮೇಲಿತ್ತು. ಓದಬೇಕು ಎಂಬ ಆಸೆ ಇದ್ದರೂ ಕುಟುಂಬದ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಕೇವಲ ಎಂಟನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ ದುಡಿಯಲು ಆರಂಭಿಸಿದರು. ಜಗದೀಶ್ ಅವರು ಕೆಎಂಎಫ್‌ನ ನಂದಿನಿ ಡೈರಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯೇ ಅವರ ಬದುಕಿನ ಮೊದಲ ಆದ್ಯತೆಯಾಗಿತ್ತು.

ದಿನಕ್ಕೆ 18 ಗಂಟೆ ದುಡಿಮೆ!

ಚಿಕ್ಕಂದಿನಿಂದಲೂ ಅಡುಗೆ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದ ಜಗದೀಶ್, ಡೈರಿ ಕೆಲಸದ ಜೊತೆಗೆ ಅಡುಗೆ ಕೆಲಸವನ್ನೂ ಮಾಡುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಆರಂಭವಾಗುತ್ತಿದ್ದ ಅವರ ಕೆಲಸ ರಾತ್ರಿ 12-1 ಗಂಟೆಯವರೆಗೂ ಮುಂದುವರಿಯುತ್ತಿತ್ತು. ಒಂದಲ್ಲ, ಎರಡಲ್ಲ... ಒಂದೇ ದಿನದಲ್ಲಿ ಹಲವು ಮನೆಗಳಿಗೆ ತೆರಳಿ ಅಡುಗೆ ಮಾಡುತ್ತಿದ್ದರು. ಜೋಳದ ರೊಟ್ಟಿ, ಆಲೂ ಪರೋಟ, ನಾನ್‌ವೆಜ್‌, ಮಂಡ್ಯ ಶೈಲಿಯ ಮುದ್ದೆ ಸಾಂಬಾರ್ ಸೇರಿದಂತೆ ಹಲವು ಬಗೆಯ ಅಡುಗೆಗಳನ್ನು ಅವರು ಕಲಿತಿದ್ದರು. ತಮ್ಮ ಕೈರುಚಿಯಿಂದ ಮನೆ ಮಾಲೀಕರಿಂದಲೂ ಮೆಚ್ಚುಗೆ ಪಡೆಯುತ್ತಿದ್ದರು.

ಡಾರ್ಲಿಂಗ್ ಕೃಷ್ಣ ಅವರ ಅಕ್ಕನ ಮನೆಯಲ್ಲಿ ಅಡುಗೆ ಕೆಲಸ

ಜಗದೀಶ್ ಅವರ ಜೀವನದ ದಿಕ್ಕನ್ನೇ ಬದಲಿಸಿದ ತಿರುವು ಅಡುಗೆ ಕೆಲಸದ ಮೂಲಕವೇ ಬಂದಿತ್ತು. ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ಅಕ್ಕ ನಂದಿನಿ ಅವರ ಮನೆಯಲ್ಲಿ ಜಗದೀಶ್ ಅಡುಗೆ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಾಗ ಹಾಡು ಹೇಳುವುದು, ಡ್ಯಾನ್ಸ್ ಮಾಡುವುದು ಹಾಗೂ ತಮ್ಮದೇ ಆದ ಹಳ್ಳಿ ಭಾಷೆಯಲ್ಲಿ ಹಾಸ್ಯವಾಗಿ ಮಾತನಾಡುವುದು ಅವರ ಅಭ್ಯಾಸವಾಗಿತ್ತು. ಇದನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಗಮನಿಸಿದ್ದರು. ಅದೇ ಸಹಜ ಅಭಿನಯ ಮತ್ತು ಹಳ್ಳಿ ಸೊಗಡಿನ ಮಾತು ಮುಂದೆ ‘ಲವ್ ಮಾಕ್ಟೇಲ್ 3’ ಸಿನಿಮಾದ ‘ಜಗ್ಗಮ’ ಅಥವಾ ‘ಜಗಮಮ್ಮಿ’ ಪಾತ್ರಕ್ಕೆ ಜಗದೀಶ್ ಅವರನ್ನು ಕರೆತರುವಂತೆ ಮಾಡಿತು.

ಮೊದಲ ದಿನವೇ ಶೂಟಿಂಗ್‌ನಿಂದ ಓಡಿಹೋಗಲು ನಿರ್ಧರಿಸಿದ್ದರಂತೆ!

ಸಿನಿಮಾದಲ್ಲಿ ಅವಕಾಶ ಸಿಕ್ಕರೂ ಕ್ಯಾಮೆರಾ ಮುಂದೆ ನಿಲ್ಲುವುದು ಜಗದೀಶ್ ಅವರಿಗೆ ಸುಲಭವಾಗಿರಲಿಲ್ಲ. ಮೊದಲ ದಿನ ಶೂಟಿಂಗ್‌ಗೆ ಹೋದಾಗ ಅವರಿಗೆ ಗಲಿಬಿಲಿಯಾಯಿತು. ಹೆಂಡತಿ, ಮಗಳು, ತಂದೆ-ತಾಯಿ ಮತ್ತು ಊರಿನ ನೆನಪು ಕಾಡಿತು. ಶೂಟಿಂಗ್ ಸ್ಥಳದಲ್ಲೇ ಕುಳಿತು ಕಣ್ಣೀರಿಟ್ಟಿದ್ದ ಜಗದೀಶ್, ‘ಇದೆಲ್ಲ ನಮಗೆ ಯಾಕೆ ಬೇಕು?’ ಎಂದುಕೊಂಡು ಊರಿಗೆ ಮರಳಲು ನಿರ್ಧರಿಸಿದ್ದರಂತೆ. ಆದರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರಿಗೆ ಧೈರ್ಯ ತುಂಬಿದರು. ಡೈಲಾಗ್ ಪ್ರಾಕ್ಟೀಸ್ ಮಾಡಿಸಿ, ಅವರಿಂದ ಅಭಿನಯ ಹೊರತೆಗೆದರು. ಅಂದು ಜಗದೀಶ್ ಶೂಟಿಂಗ್‌ನಿಂದ ಓಡಿಹೋಗಿದ್ದರೆ, ಇಂದು ‘ಜಗಮಮ್ಮಿ’ಯಾಗಿ ಇಷ್ಟೊಂದು ಜನರಿಗೆ ಪರಿಚಿತರಾಗುತ್ತಿರಲಿಲ್ಲ.

‘ಜಗಮಮ್ಮಿ’ ಪಾತ್ರದಿಂದ ರಾತ್ರೋರಾತ್ರಿ ಜನಪ್ರಿಯತೆ

ಲವ್ ಮಾಕ್ಟೇಲ್ 3’ ಬಿಡುಗಡೆಯಾದ ಬಳಿಕ ಜಗದೀಶ್ ಅವರ ಜೀವನವೇ ಬದಲಾಯಿತು. ಸಿನಿಮಾದಲ್ಲಿನ ಅವರ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿತು. ಸೋಶಿಯಲ್ ಮೀಡಿಯಾದಲ್ಲಿ ‘ಜಗಮಮ್ಮಿ’ ಪಾತ್ರದ ರೀಲ್ಸ್‌ಗಳು ವೈರಲ್ ಆಗತೊಡಗಿದವು. ಅವರ ಹಳ್ಳಿ ಭಾಷೆ, ಸಹಜ ಅಭಿನಯ ಮತ್ತು ಹಾಸ್ಯಮಯ ಶೈಲಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಸಿನಿಮಾದಲ್ಲಿ ಪುಟ್ಟ ಮಗುವಿನೊಂದಿಗೆ ಜಗಮಮ್ಮಿ ಹೊಂದಿರುವ ಭಾವನಾತ್ಮಕ ಬಾಂಧವ್ಯ ಪ್ರೇಕ್ಷಕರ ಗಮನ ಸೆಳೆಯಿತು. ಜಗದೀಶ್ ಅವರಿಗೆ ತಮ್ಮದೇ ಆದ 3.5 ವರ್ಷದ ‘ತನ್ವಿ’ ಎಂಬ ಮಗಳಿದ್ದು, ಸಿನಿಮಾದಲ್ಲಿ ಆ ದೃಶ್ಯಗಳನ್ನು ಮಾಡುವಾಗ ತಮ್ಮ ಮಗಳೇ ನೆನಪಾಗುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.

ಸ್ಟಾರ್ ಆದರೂ ಬದಲಾಗದ ಸರಳತೆ

ಚಿತ್ರರಂಗದಲ್ಲಿ ಜನಪ್ರಿಯತೆ ಸಿಕ್ಕ ಬಳಿಕವೂ ಜಗದೀಶ್ ತಮ್ಮ ಹಳೆಯ ಜೀವನವನ್ನು ಮರೆತಿಲ್ಲ. ಊರಿನಲ್ಲಿ ಇಂದಿಗೂ ಮನೆಯ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ನೀರು ಹೊರುವುದು ಸೇರಿದಂತೆ ಮನೆ ಕೆಲಸಗಳನ್ನು ಮಾಡುತ್ತಾರೆ. ‘ಸ್ಟಾರ್ ಆದ ಮೇಲೂ ಈ ಕೆಲಸ ಮಾಡುತ್ತೀರಾ?’ ಎಂದು ಯಾರಾದರೂ ಕೇಳಿದರೆ, ದುಡಿದು ತಿನ್ನುವುದು ತಮ್ಮ ಅಭ್ಯಾಸ, ಅದನ್ನು ಬಿಡಲು ಸಾಧ್ಯವಿಲ್ಲ ಎಂಬುದು ಅವರ ಸರಳ ಉತ್ತರ. ಈ ಕಾರಣಕ್ಕಾಗಿಯೇ ಜಗದೀಶ್ ಅವರ ಯಶಸ್ಸಿನ ಕಥೆ ಕೇವಲ ಸಿನಿಮಾ ಅವಕಾಶದ ಕಥೆಯಾಗದೆ, ಕಷ್ಟ, ಪರಿಶ್ರಮ ಮತ್ತು ಸರಳತೆಯ ಕಥೆಯಾಗಿ ಗುರುತಿಸಿಕೊಂಡಿದೆ.