Crime News: ಅಪ್ರಾಪ್ತ ಪುತ್ರಿಯ ಮೇಲೆ ಸ್ವತಃ ತಂದೆ ಮೂರು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಗರ್ಭಿಣಿಯಾದ ಮಗಳಿಗೆ ಡೆಲಿವರಿ ಮಾಡಿಸಿ, ಮಗುವನ್ನು ಮಾರಾಟ ಕೂಡ ಮಾಡಲಾಗಿದೆ. ಸದ್ಯ ಎಂಟು ಮಂದಿಯನ್ನು ಬಂಧಿಸಲಾಗಿದೆ.
ರಾಯ್‌ಪುರ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಮಗಳ ಮೇಲೆ ಆಕೆಯ ತಂದೆಯೇ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ನವಜಾತ ಶಿಶುವನ್ನು ಮಾರಾಟ ಮಾಡಿರುವ ಪ್ರಕರಣದಲ್ಲಿ ಅಪ್ರಾಪ್ತೆಯ ತಂದೆ, ಅತ್ತೆ, ಇಬ್ಬರು ನರ್ಸ್‌ಗಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
2023ರಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ
ಪೊಲೀಸರ ಪ್ರಕಾರ, 2023ರಲ್ಲಿ ಆರೋಪಿಯ ಪತ್ನಿ ಆತನಿಂದ ಬೇರ್ಪಟ್ಟು ತನ್ನ ಮೂವರು ಹೆಣ್ಣುಮಕ್ಕಳನ್ನು ಆತನ ಬಳಿ ಬಿಟ್ಟು ಹೋಗಿದ್ದರು. ಇದೇ ಸಮಯದಲ್ಲಿ ಪಾಪಿ ತಂದೆ ತನ್ನ ಹಿರಿಯ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಂದುಬಿಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎಂದು ರಾಯ್‌ಪುರದ ನ್ಯೂ ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗರ್ಭಿಣಿಯಾದ ಬಾಲಕಿ; ಗರ್ಭಪಾತ
ನಿರಂತರ ಅತ್ಯಾ*ಚಾರದಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ವಿಷಯವನ್ನು ಆಕೆ ತನ್ನ ಅತ್ತೆಗೆ ತಿಳಿಸಿದಾಗ, ಅತ್ತೆ ಅದನ್ನು ತಂದೆಗೆ ತಿಳಿಸಿದ್ದಾಳೆ. ನಂತರ ತಂದೆ ಮತ್ತು ಅತ್ತೆ ಸೇರಿ ಬಾಲಕಿಗೆ ಔಷಧಿ ನೀಡಿ, ಗರ್ಭಪಾತ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗರ್ಭಪಾತದ ಬಳಿಕವೂ ದೌರ್ಜನ್ಯ ಮುಂದುವರಿದಿದ್ದು, 2025ರಲ್ಲಿ ಬಾಲಕಿ ಮತ್ತೆ ಗರ್ಭಿಣಿಯಾಗಿದ್ದಾಳೆ. ನಂತರ ಆಕೆಯನ್ನು ವರ್ಷಾ ಮಂಡಲ್ ಎಂಬ ನರ್ಸ್ ಮನೆಗೆ ಕರೆದೊಯ್ಯಲಾಗಿದೆ. ಸುರಕ್ಷಿತ ಹೆರಿಗೆಗೆ ವ್ಯವಸ್ಥೆ ಮಾಡುವುದಾಗಿ ನರ್ಸ್ ಭರವಸೆ ನೀಡಿದ್ದಳು ಎನ್ನಲಾಗಿದೆ. ಬಳಿಕ ಬಾಲಕಿಯನ್ನು ಮತ್ತೊಬ್ಬ ನರ್ಸ್ ಗೀತಾ ರೈ ಅವರ ಮನೆಗೆ ಕಳುಹಿಸಲಾಗಿದ್ದು, ಅಲ್ಲಿ ಸುಮಾರು ಎರಡು ತಿಂಗಳು ಉಳಿದಿದ್ದಳು.
ನಕಲಿ ದಾಖಲೆ ಬಳಸಿ ಆಸ್ಪತ್ರೆಗೆ ದಾಖಲಿಸಿದ ಆರೋಪ-ನವಜಾತ ಶಿಶು ಮಾರಾಟದ ಆರೋಪ
ಪೊಲೀಸರ ಪ್ರಕಾರ, ಗೀತಾ ರೈ ಬಾಲಕಿಯ ನಿಜವಾದ ವಯಸ್ಸನ್ನು ಮರೆಮಾಚಿ, ಆಕೆ ಪ್ರಾಪ್ತವಯಸ್ಕಳು ಮತ್ತು ವಿವಾಹಿತಳು ಎಂದು ಹೇಳಿದ್ದಾಳೆ ಎನ್ನಲಾಗಿದೆ. ಆಧಾರ್ ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳನ್ನು ಬಳಸಿ ರಾಯ್‌ಪುರದ ಡಂಗನಿಯಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಬಳಿಕ ಬಾಲಕಿ ಶಸ್ತ್ರಚಿಕಿತ್ಸೆಯ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯ ಬಳಿಕ ವೈದ್ಯರು, ಬಾಲಕಿಯ ತಂದೆ ಹಾಗೂ ಇತರ ಆರೋಪಿಗಳು ಸೇರಿ ನವಜಾತ ಶಿಶುವನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಹೆರಿಗೆಯ ನಂತರ ಬಾಲಕಿಯನ್ನು ಸುಮಾರು 15 ದಿನಗಳ ಕಾಲ ಗೀತಾ ರೈ ಅವರ ಮನೆಯಲ್ಲಿ ಇರಿಸಲಾಗಿತ್ತು. ನಂತರ ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬರಲಾಗಿತ್ತು ಎನ್ನಲಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ತಾಯಿಗೆ ವಿಷಯ ತಿಳಿಸಿದ ಬಾಲಕಿ
ನಂತರ ಸಂತ್ರಸ್ತೆ ಸೋಶಿಯಲ್ ಮೀಡಿಯಾ ಮೂಲಕ ತನ್ನ ತಾಯಿಯನ್ನು ಸಂಪರ್ಕಿಸಿ ತನ್ನ ಮೇಲೆ ನಡೆದ ಘಟನೆಗಳನ್ನು ವಿವರಿಸಿದ್ದಾಳೆ. ಪೊಲೀಸರ ಪ್ರಕಾರ, ಸೋಮವಾರ ಆಕೆಯ ತಾಯಿ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಬಳಿಕ ದೂರು ದಾಖಲಿಸಲಾಗಿದೆ. ನಂತರ ನ್ಯೂ ರಾಜೇಂದ್ರ ನಗರ ಪೊಲೀಸ್ ಠಾಣೆಯ ಪೊಲೀಸರು ಹಲವು ಕಾಯ್ದೆಗಳ ಅಡಿಯಲ್ಲಿ ಆರೋಪಿ ಮತ್ತು ಆತನಿಗೆ ಸಹಕರಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತೆಯ ತಂದೆ ಮತ್ತು ಅತ್ತೆ ಸೇರಿದಂತೆ ರೋಹಿತ್ ಕುಮಾರ್ ರೈ, ಅವರ ಪತ್ನಿ ಯೋಗಿತಾ ರೈ ಅಲಿಯಾಸ್ ಗೀತಾ, ಖಾಸಗಿ ಆಸ್ಪತ್ರೆಯ ಸೂಪರ್‌ವೈಸರ್ ಸಾಹೇಬ್ ಮಂಡಲ್, ಅವರ ಪತ್ನಿ ವರ್ಷಾ ಮಂಡಲ್, ನವಜಾತ ಮಗುವನ್ನು ಖರೀದಿಸಿದರೆಂದು ಆರೋಪಿಸಲಾದ ವ್ಯಕ್ತಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


