ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಎಗ್‌ರೈಸ್ ಖಾಲಿಯಾಗಿದೆ ಎಂದಿದ್ದಕ್ಕೆ ಪುಂಡರ ಗ್ಯಾಂಗ್ ಪಕ್ಕದಲ್ಲಿದ್ದ ಅಮಾಯಕ ಪೈಂಟರ್ ಮೇಲೆ ತಲ್ವಾರ್‌ನಿಂದ ಹಲ್ಲೆ. ಈ ಘೋರ ಕೃತ್ಯದಲ್ಲಿ ಮಂಜುನಾಥ್ ಎಂಬುವವರ ಕೈ ಛಿದ್ರಗೊಂಡಿದ್ದು, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರೌಡಿಗಳ ಅಟ್ಟಹಾಸಕ್ಕೆ ಇದು ಮತ್ತೊಂದು ಸಾಕ್ಷಿ.

ಬನ್ನೇರುಘಟ್ಟ (ಸೆ.15): ಬೆಂಗಳೂರಿನಲ್ಲಿ ಗೂಂಡಾಗಳು ಕ್ರಿಮಿನಲ್‌ಗಳ ಹಾವಳಿ ಮಿತಿ ಮೀರಿದೆ. ಕ್ರಿಮಿನಲ್‌ಗಳಿಗೆ ಪೊಲೀಸ್, ಕಾನೂನು ಭಯ ಕಿಂಚಿತ್ ಇಲ್ಲದಂತಾಗಿದೆ. ಕ್ಷುಲ್ಲಕ ಕಾರಣಕ್ಕೂ ತಲ್ವಾರ್‌ನಿಂದ ಹಲ್ಲೆಗೆ ಮುಂದಾಗ್ತಾರೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣಪುಟ್ಟ ಹೋಟೆಲ್, ಅಂಗಡಿ ಬೇಕರಿಗಳೇ ಕ್ರಿಮಿನಲ್‌ಗಳ ಟಾರ್ಗೆಟ್. ತಡರಾತ್ರಿ ಕಂಠಪೂರ್ತಿ ಕುಡಿದು ಬರ್ತಾರೆ. ಕೇಳಿದ್ದೆಲ್ಲ ಮಾಡಿಕೊಡಬೇಕು. ಅಂಗಡಿ ಮುಚ್ಚಿದೆ, ಖಾಲಿಯಾಗಿದೆ ಅಂದ್ರೋ ಮಚ್ಚಿನೇಟು ಬೀಳುತ್ತೆ! ಹೌದು, ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಮತ್ತೊಂದು ಕೃತ್ಯ ಸೇರ್ಪಡೆಯಾಗಿದೆ.

ಎಗ್‌ರೈಸ್ ಖಾಲಿಯಾಗಿದೆ ಎಂದಿದ್ದಕ್ಕೆ ಮಚ್ಚಿನೇಟು!

ಎಗ್‌ರೈಸ್ ಖಾಲಿಯಾಗಿದೆ ಎಂದಿದ್ದಕ್ಕೆ ಅಮಾಯಕನ ಮೇಲೆ ಪುಂಡರು ಸಿನಿಮಾ ಸ್ಟೈಲ್‌ನಲ್ಲಿ ತಲ್ವಾರ್‌ನಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಬೇಗಿಹಳ್ಳಿಯಲ್ಲಿ ನಡೆದಿದೆ.

ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ ಗ್ಯಾಂಗ್

ರಾತ್ರಿ ಕಂಠಪೂರ್ತಿ ಕುಡಿದು ಎಗ್‌ರೈಸ್ ತಿನ್ನಲು ಆಟೋದಲ್ಲಿ ಬಂದಿದ್ದ ರೌಡಿ ಕನಕರಾಜು ಅಂಡ್ ಗ್ಯಾಂಗ್. ಆದರೆ ಆ ವೇಳೆಗೆ ಎಗ್‌ರೈಸ್ ಖಾಲಿಯಾಗಿ ಅಂಗಡಿ ಮುಚ್ಚುತ್ತಿದ್ದ ಅಮಾಯಕ. ಇದೇ ವೇಳೆಗೆ ಕನಕರಾಜು ಗ್ಯಾಂಗ್ ಎಂಟ್ರಿಯಾಗಿದೆ. ಎಗ್‌ರೈಸ್ ಕೇಳಿದ್ದಾರೆ. ಇದಕ್ಕೆ ಅಂಗಡಿ ಮಾಲೀಕ ಎಗ್ ರೈಸ್ ಖಾಲಿಯಾಗಿದೆ ಎಂದಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಪುಂಡರು ಅಷ್ಟಕ್ಕೆ ಸುಮ್ಮನಾಗಿಯಾರೆ? ಎಗ್‌ರೈಸ್ ಬೇಕೇಬೇಕು ಅಂತಾ ಬೆದರಿಕೆ ಹಾಕಲು ಶುರು ಮಾಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕನೊಂದಿಗೆ ಕಿರಿಕ್ ಮಾಡಿದ್ದಾರೆ.

ಬಡಪಾಯಿ ಮೇಲೆ ಹಲ್ಲೆ!

ಯಾವಾಗ ಪುಂಡರು ಬೆದರಿಕೆ ಹಾಕಲು ಶುರು ಮಾಡಿದರೋ ಮಾಲೀಕ ಅಂಗಡಿ ಬಂದ್ ಮಾಡಿಕೊಂಡಿದ್ದಾರೆ. ಎಗ್‌ರೈಸ್ ಮಾಡಿಕೊಡದೆ ಅಂಗಡಿ ಮುಚ್ಚಿದ್ದರಿಂದ ಆಕ್ರೋಶಗೊಂಡಿರುವ ಪಾನಮತ್ತ ಕನಕರಾಜು ಅಂಡ್ ಗ್ಯಾಂಗ್ ಆವೇಶದಲ್ಲಿ ಪಕ್ಕದ ಅಂಗಡಿಗೆ ಪೇಟಿಂಗ್ ಮಾಡುತ್ತಿದ್ದ ಮಂಜುನಾಥ್ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಏಕಾಏಕಿ ತಲ್ವಾರ್ ಬೀಸಿದ ಏಟಿಗೆ ಮಂಜುನಾಥ ಎಂಬುವವರ ಕೈ ಛಿದ್ರಗೊಂಡಿದೆ. ಗಂಭೀರ ಗಾಯಗೊಂಡಿರುವ ಮಂಜುನಾಥ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಫ್‌ಐಆರ್ ದಾಖಲು

ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ, ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾದ ದೃಶ್ಯಗಳನ್ನ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಪಾಡಿಗೆ ದುಡಿಯುವ ಬಡಪಾಯಿ ವ್ಯಾಪಾರಿಗಳಿಗೂ ರೌಡಿಗಳ ಕಾಟ, ರಾಜಧಾನಿ ಬೆಂಗಳೂರಿನಲ್ಲಿ ಪುಡಿರೌಡಿಗಳಿಂದ ಜನಸಾಮಾನ್ಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಪೊಲೀಸರು ಬಿಗಿ ಕ್ರಮ ಕೇವಲ ಬಾಯಲ್ಲಿ, ಕಾಗದಕ್ಕೆ ಮಾತ್ರಕ್ಕೆ ಸೀಮಿತವಾಗಿರುವ ಪರಿಣಾಮ ಇರಬಹುದೇ? ಈಗಲಾದರೂ ಬೆಂಗಳೂರಿನಲ್ಲಿ ನಡೆಯುವ ಕ್ರಿಮಿನಲ್ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ರೌಡಿಗಳು, ಪುಂಡರ ಮೇಲೆ ಕಠಿಣ ಕ್ರಮ ಜರುಗಿಸಬೇಕಿದೆ.