ಆರ್‌ಸಿಬಿ ತಂಡದ ಮಾಲೀಕತ್ವ ಬದಲಾದ ನಂತರ ತಂಡದ ಹೆಸರು ಬದಲಾಗಲಿದೆ ಎಂಬ ಊಹಾಪೋಹಗಳಿಗೆ ನೂತನ ಅಧ್ಯಕ್ಷ ಆರ್ಯಮನ್ ಬಿರ್ಲಾ ತೆರೆ ಎಳೆದಿದ್ದಾರೆ. 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಎಂಬುದು ಜಾಗತಿಕ ಬ್ರ್ಯಾಂಡ್ ಆಗಿದ್ದು, ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ಇತಿಹಾಸದ ಅತ್ಯಂತ ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕತ್ವ ಬದಲಾದ ಬೆನ್ನಲ್ಲೇ, ತಂಡದ ಹೆಸರು ಕೂಡ ಬದಲಾಗಲಿದೆಯೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಆರ್‌ಸಿಬಿ ನೂತನ ಅಧ್ಯಕ್ಷ ಆರ್ಯಮನ್ ಬಿರ್ಲಾ (Aryaman Birla) ಅಧಿಕೃತವಾಗಿ ತೆರೆ ಎಳೆದಿದ್ದಾರೆ.

ಖ್ಯಾತ ಕ್ರೀಡಾ ಮಾಧ್ಯಮ ‘ರೆವ್‌ಸ್ಪೋರ್ಟ್ಸ್’ (Revsportz) ಜೊತೆ ಮಾತನಾಡಿದ ಆರ್ಯಮನ್ ಬಿರ್ಲಾ, 'ಮಾಲೀಕತ್ವ ಬದಲಾಗಿದೆ ಎಂದ ಮಾತ್ರಕ್ಕೆ ತಂಡದ ಹೆಸರಿನಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬುದು ಕೇವಲ ಹೆಸರಲ್ಲ, ಅದೊಂದು ಜಾಗತಿಕ ಬೃಹತ್ ಬ್ರ್ಯಾಂಡ್. ನಾವೆಲ್ಲರೂ ಈ ಹೆಸರನ್ನು ಅತಿಯಾಗಿ ಇಷ್ಟಪಡುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ತಂಡದ ಹೆಸರು ಬದಲಾಗಬಹುದೇ ಎಂದು ಆತಂಕದಲ್ಲಿದ್ದ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ.

ಮಾಲೀಕತ್ವ ಬದಲಾಗಿದ್ದು ಹೇಗೆ?

ಕಳೆದ ಸೀಸನ್‌ಗೂ ಮುನ್ನವೇ ಆರ್‌ಸಿಬಿ ಫ್ರಾಂಚೈಸಿಯ ಮಾರಾಟ ಪ್ರಕ್ರಿಯೆ ನಡೆದಿತ್ತು. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲ್ಯಾಕ್‌ಸ್ಟೋನ್ ಮತ್ತು ಬೋಲ್ಟ್ ವೆಂಚರ್ಸ್ ಜಂಟಿಯಾಗಿ ಸೇರಿ ಆರ್‌ಸಿಬಿ ಫ್ರಾಂಚೈಸಿಯ ಶೇ. 100ರಷ್ಟು ಪಾಲನ್ನು ಖರೀದಿ ಮಾಡಿದ್ದವು. ಹೊಸ ಕಾರ್ಪೊರೇಟ್ ಮಾಲೀಕರು ತಂಡವನ್ನು ವಶಪಡಿಸಿಕೊಂಡ ನಂತರ, ತಮ್ಮದೇ ಆದ ಹೊಸ ಗುರುತನ್ನು ನೀಡಲು ತಂಡದ ಹೆಸರನ್ನು ಬದಲಾಯಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಆಡಳಿತ ಮಂಡಳಿಯು ಬ್ರ್ಯಾಂಡ್‌ ಮೌಲ್ಯಕ್ಕೆ ಧಕ್ಕೆ ತರದಿರಲು ನಿರ್ಧರಿಸಿದೆ.

ಸತತ 2 ಬಾರಿಯ ಚಾಂಪಿಯನ್ ಆರ್‌ಸಿಬಿ!

2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ 2024 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವುದೇ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ವಿರಾಟ್ ಕೊಹ್ಲಿ ಸೇರಿದಂತೆ ದಿಗ್ಗಜ ಆಟಗಾರರು ತಂಡವನ್ನು ಮುನ್ನಡೆಸಿದರೂ ಪ್ರಶಸ್ತಿ ಮರೀಚಿಕೆಯಾಗಿಯೇ ಉಳಿದಿತ್ತು. ಆದರೂ, ತಂಡದ ಅಭಿಮಾನಿ ಬಳಗ (Fan Following) ಜಗತ್ತಿನ ಯಾವುದೇ ತಂಡಕ್ಕೂ ಕಡಿಮೆಯಿರದಂತೆ ನಿರಂತರವಾಗಿ ಬೆಳೆಯುತ್ತಲೇ ಇತ್ತು. ಬಳಿಕ ಭಾರತೀಯ ಯುವ ಬ್ಯಾಟರ್ ರಜತ್ ಪಾಟೀದಾರ್ ಅವರಿಗೆ ನಾಯಕತ್ವದ ಚುಕ್ಕಾಣಿ ನೀಡಲಾಯಿತು. ಅವರ ಅದ್ಭುತ ನಾಯಕತ್ವದಲ್ಲಿ ತಂಡವು 2025 ರಲ್ಲಿ ತನ್ನ 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇಷ್ಟಕ್ಕೇ ತೃಪ್ತರಾಗದ ಪಾಟೀದಾರ್ ಪಡೆ, ನಂತರದ ಸೀಸನ್ 2026 ರಲ್ಲೂ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ಮೂಲಕ ಸತತ ಎರಡು ಬಾರಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ.

ಸದ್ಯ ಸತತ ಗೆಲುವಿನ ಸಂಭ್ರಮದಲ್ಲಿರುವ ಆರ್‌ಸಿಬಿ ಅಭಿಮಾನಿಗಳಿಗೆ, ತಂಡದ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬ ಮ್ಯಾನೇಜ್‌ಮೆಂಟ್‌ನ ಸ್ಪಷ್ಟನೆ ಡಬಲ್ ಧಮಾಕ ನೀಡಿದೆ.