ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ತನ್ನನ್ನು ನಿರ್ಲಕ್ಷಿಸಿದ ಬೆನ್ನಲ್ಲೇ, ಕೃನಾಲ್ ಪಾಂಡ್ಯ 'ಭರವಸೆ ಇನ್ನೂ ಜೀವಂತವಾಗಿದೆ' ಎಂದು ಎಮೋಷನಲ್ ಸ್ಟೋರಿ ಹಂಚಿಕೊಳ್ಳುವ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಅನುಭವಿ ಆಲ್-ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ತನ್ನನ್ನು ಕಡೆಗಣಿಸಿರುವ ಬಗ್ಗೆ ಕೃನಾಲ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಎಮೋಷನಲ್ ಆಗಿ ಪ್ರತಿಕ್ರಿಯಿಸಿದ್ದಾರೆ.
ತಂಡ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಕೃನಾಲ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾರತದ ತ್ರಿವರ್ಣ ಧ್ವಜದ ಎಮೋಜಿಯೊಂದಿಗೆ ಭರವಸೆ ಇನ್ನೂ ಜೀವಂತವಾಗಿದೆ (Hope is Still Alive) ಎಂದು ಬರೆದುಕೊಂಡಿದ್ದಾರೆ. ಈ ಸಾಲುಗಳು ಅವರ ಮನದ ಆಳದಲ್ಲಿರುವ ನೋವು ಮತ್ತು ಮತ್ತೆ ಟೀಮ್ ಇಂಡಿಯಾಗೆ ಮರಳುವ ಛಲವನ್ನು ಎತ್ತಿ ತೋರಿಸುತ್ತಿವೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕೃನಾಲ್ ಪಾಂಡ್ಯ ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಆರ್‌ಸಿಬಿ (RCB) ತಂಡ ಚಾಂಪಿಯನ್ ಆಗುವಲ್ಲಿ ಕೃನಾಲ್ ಪ್ರಮುಖ ಪಾತ್ರ ವಹಿಸಿದ್ದರು. 2025ರ ಐಪಿಎಲ್‌ನಲ್ಲಿ 15 ಪಂದ್ಯಗಳಲ್ಲಿ 17 ವಿಕೆಟ್ ಹಾಗೂ 7 ಇನಿಂಗ್ಸ್‌ಗಳಲ್ಲಿ 109 ರನ್ (ದೆಹಲಿ ವಿರುದ್ಧ 73 ರನ್‌ಗಳ ಭರ್ಜರಿ ಬ್ಯಾಟಿಂಗ್) ಗಳಿಸಿದ್ದರು. 2026ರ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 14 ವಿಕೆಟ್ ಹಾಗೂ 226 ರನ್ (ಮುಂಬೈ ಇಂಡಿಯನ್ಸ್ ವಿರುದ್ಧ 73 ರನ್) ಗಳಿಸಿದ್ದಾರೆ.
ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮ್ಯಾಜಿಕ್ ಮಾಡಿದ್ದರೂ ಬಿಸಿಸಿಐ ಮಾತ್ರ ಅವರತ್ತ ತಿರುಗಿಯೂ ನೋಡದಿರುವುದು ಕೃನಾಲ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕೃನಾಲ್ ಪಾಂಡ್ಯ ಇದುವರೆಗೆ ಭಾರತದ ಪರ 5 ಏಕದಿನ ಮತ್ತು 19 ಟಿ20 ಪಂದ್ಯಗಳನ್ನು ಆಡಿದ್ದಾರೆ. 2021ರಲ್ಲಿ ಅವರು ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅಂದಿನಿಂದ ಇಂದಿನವರೆಗೆ ಅವರು ತಂಡಕ್ಕೆ ಮರಳಲು ಕಠಿಣ ಶ್ರಮ ಪಡುತ್ತಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಶ್ರೇಯಸ್ ಅಯ್ಯರ್ ನಾಯಕರಾಗಿದ್ದು, ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಅವರಿಗೂ ಸ್ಥಾನ ಸಿಕ್ಕಿದೆ. ಸತತ ಪರಿಶ್ರಮದ ನಂತರವೂ ಅವಕಾಶ ವಂಚಿತರಾಗಿರುವ ಕೃನಾಲ್ ಪಾಂಡ್ಯ, ತಮ್ಮ ನೋವನ್ನು ನುಂಗಿಕೊಂಡು ಭರವಸೆಯನ್ನೇ ನಂಬಿ ಕುಳಿತಿದ್ದಾರೆ. ಕೃನಾಲ್ ಪಾಂಡ್ಯರ ಈ ಎಮೋಷನಲ್ ಪೋಸ್ಟ್ ನೋಡಿದರೆ, ಅವರು ಎಷ್ಟರ ಮಟ್ಟಿಗೆ ಟೀಮ್ ಇಂಡಿಯಾ ಜರ್ಸಿಗಾಗಿ ಕಾತರರಾಗಿದ್ದಾರೆ ಎಂಬುದು ತಿಳಿಯುತ್ತದೆ. ಮುಂದಿನ ದಿನಗಳಲ್ಲಾದರೂ ಬಿಸಿಸಿಐ ಈ ಹೋರಾಟಗಾರನಿಗೆ ಮಣೆ ಹಾಕುತ್ತದೆಯೇ ಎಂದು ಕಾದು ನೋಡಬೇಕಿದೆ.


