ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತೇಶ್ವರ್ ಪೂಜಾರ, ತಮ್ಮ ಸಹ ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿಯೆಂದರೆ, ಈ ತಂಡದಲ್ಲಿ ಎಂ.ಎಸ್. ಧೋನಿ, ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆಯಂತಹ ಪ್ರಮುಖ ಆಟಗಾರರಿಗೆ ಸ್ಥಾನ ನೀಡಿಲ್ಲ. ವಿಕೆಟ್ ಕೀಪರ್ ಆಗಿ ರಿಷಭ್ ಪಂತ್‌ಗೆ ಮಣೆ ಹಾಕಿದ್ದು, ತಮ್ಮನ್ನು ತಾವೇ ಮೂರನೇ ಕ್ರಮಾಂಕದಲ್ಲಿರಿಸಿಕೊಂಡಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದ ಚೇತೇಶ್ವರ್ ಪೂಜಾರ, ತಮ್ಮ ಸಹ ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಚೇತೇಶ್ವರ್ ಪೂಜಾರ ಆಯ್ಕೆ ಮಾಡಿದ ಭಾರತ ತಂಡದಲ್ಲಿ ಸದ್ಯ ಐವರು ಹಾಲಿ ಆಟಗಾರರಿದ್ದರೆ, ಆರು ಮಾಜಿ ಆಟಗಾರರಿಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಿದ್ದಾರೆ.
ಮೂವರು ಪ್ರಮುಖ ಆಟಗಾರರಿಗಿಲ್ಲ ಸ್ಥಾನ:
ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ಚೇತೇಶ್ವರ್ ಪೂಜಾರ ಆಯ್ಕೆ ಮಾಡಿದ ಬಲಿಷ್ಠ ಭಾರತ ತಂಡದಲ್ಲಿ ಕ್ರಿಕೆಟ್ ದಿಗ್ಗಜರಾಗಿ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. 2010ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಒಂದು ದಶಕದ ಬಳಿಕ ಅಂದರೆ 2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 13 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಪೂಜಾರ 103 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಚೇತೇಶ್ವರ್ ಪೂಜಾರ ಆಯ್ಕೆ ಮಾಡಿದ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?
Cricinfo ಜತೆಗಿನ ಮಾತುಕತೆ ವೇಳೆ ತಮ್ಮ ಜತೆ ಆಡಿದ ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಚೇತೇಶ್ವರ್ ಪೂಜಾರ ಆಯ್ಕೆ ಮಾಡಿದ್ದಾರೆ. ಈ ವೇಳೆ ಆರಂಭಿಕರಾಗಿ ತಮ್ಮ ಗುರು ಹಾಗೂ ಆದರ್ಶ ಎಂದೇ ಕರೆಯುತ್ತಾ ಬಂದಿರುವ ರಾಹುಲ್ ದ್ರಾವಿಡ್ ಹಾಗೂ ವಿರೇಂದ್ರ ಸೆಹ್ವಾಗ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೇ ಮೂರನೇ ಕ್ರಮಾಂಕಕ್ಕೆ ತಮ್ಮ ಹೆಸರನ್ನೇ ಅಂತಿಮಗೊಳಿಸಿದ್ದಾರೆ. ಸಾಮಾನ್ಯವಾಗಿ ರಾಹುಲ್ ದ್ರಾವಿಡ್ ಮೂರನೇ ಕ್ರಮಾಂಕದಲ್ಲಿ ಹೆಚ್ಚು ಗಮನ ಸೆಳೆದ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಸಹಜವಾಗಿಯೇ ನಾಲ್ಕು ಹಾಗೂ ಐದನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವಿವಿಎಸ್ ಲಕ್ಷ್ಮಣ್ ಅವರಿಗೆ ಪೂಜಾರ ಆರನೇ ಕ್ರಮಾಂಕದ ಸ್ಥಾನ ನೀಡಿದ್ದಾರೆ. ಆದರೆ ತಮ್ಮ ಜತೆ ಬಹುತೇಕ ಎಲ್ಲಾ ಟೆಸ್ಟ್ ಪಂದ್ಯಗಳಲ್ಲೂ ಜತೆಯಾಟ ನಿಭಾಯಿಸಿರುವ ಅಜಿಂಕ್ಯ ರಹಾನೆ ಅವರಿಗೆ ಈ ತಂಡದಲ್ಲಿ ಪೂಜಾರ ಸ್ಥಾನ ನೀಡದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಧೋನಿ ಬಿಟ್ಟು ಪಂತ್‌ಗೆ ಮಣೆ ಹಾಕಿದ ಪೂಜಾರ:
ಇನ್ನು ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ವಿಕೆಟ್ ಕೀಪರ್ ಬ್ಯಾಟರ್ ಆಗಿ ಮಹೇಂದ್ರ ಧೋನಿ ಬದಲಿಗೆ ರಿಷಭ್ ಪಂತ್‌ಗೆ ಮಣೆ ಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿಗಿಂತ ಪಂತ್ ಹೆಚ್ಚು ಹೆಜ್ಜೆಗುರುತು ದಾಖಲಿಸಿದ್ದಾರೆ ಎನ್ನುವುದು ಪೂಜಾರ ಲೆಕ್ಕಾಚಾರವಾಗಿದೆ. ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲಿ ಇಬ್ಬರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗಿಗಳಿಗೆ ಮಣೆ ಹಾಕಿದ್ದಾರೆ. ಸ್ಪಿನ್ ಆಲ್ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್‌ಗೆ ಸ್ಥಾನ ನೀಡಿದರೇ, ತಜ್ಞವೇಗಿಗಳಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನುಳಿದಂತೆ 12ನೇ ಆಟಗಾರನಾಗಿ ಅನುಭವಿ ವೇಗಿ ಇಶಾನ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ.
ಪರಿಸ್ಥಿತಿಗೆ ತಕ್ಕಂತೆ ವೇಗದ ಬೌಲರ್‌ಗಳಿಗೆ ಪಿಚ್ ನೆರವಾಗುವಂತಿದ್ದರೇ, ಮೂರನೇ ವೇಗಿಯಾಗಿ ಇಶಾಂತ್ ಶರ್ಮಾ ಅವರನ್ನು ಆರಿಸಿಕೊಳ್ಳುತ್ತೇನೆ. ನಾನು ಈ ತಂಡದಲ್ಲಿ ವೇಗದ ಬೌಲಿಂಗ್ ಆಲ್ರೌಂಡರ್ ಆಯ್ಕೆ ಮಾಡಿಲ್ಲ. ಒಂದು ವೇಳೆ ವೇಗದ ಬೌಲಿಂಗ್ ಆಲ್ರೌಂಡರ್ ಬೇಕಿದ್ದರೇ ನನ್ನ ಆಯ್ಕೆ ಹಾರ್ದಿಕ್ ಪಾಂಡ್ಯ ಆಗಿರಲಿದ್ದಾರೆ ಎಂದು ಚೇತೇಶ್ವರ್ ಪೂಜಾರ ಮಾತು ಮುಗಿಸಿದ್ದಾರೆ.
ಚೇತೇಶ್ವರ್ ಪೂಜಾರ ಟೀಮ್‌ಮೇಟ್ ಇಲೆವನ್ ಹೀಗಿದೆ:
ರಾಹುಲ್ ದ್ರಾವಿಡ್, ವಿರೇಂದ್ರ ಸೆಹ್ವಾಗ್, ಚೇತೇಶ್ವರ್ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ
12ನೇ ಆಟಗಾರ: ಇಶಾಂತ್ ಶರ್ಮಾ/ಹಾರ್ದಿಕ್ ಪಾಂಡ್ಯ


