2020ರ ಆಗಸ್ಟ್ 15 ರಂದು ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಒಟ್ಟಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ತಮ್ಮ ಜೆರ್ಸಿ ಸಂಖ್ಯೆ 7 ಮತ್ತು 3 ಸೇರಿ 73 ಆಗುವುದರಿಂದ, ಭಾರತದ 73ನೇ ಸ್ವಾತಂತ್ರ್ಯ ದಿನದಂದೇ ವಿದಾಯ ಹೇಳಲು ನಿರ್ಧರಿಸಿದ್ದೆವು ಎಂದು ರೈನಾ ಈ ನಿರ್ಧಾರದ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಬೆಂಗಳೂರು: ಆಗಸ್ಟ್ 15 ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದುಕೊಂಡ ದಿನ. ಇಡೀ ದೇಶವೇ ಅಂದು ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಮಿಂದೇಳುತ್ತದೆ. ಈ ಆಗಸ್ಟ್ 15ರಂದೇ ಭಾರತದ ಇಬ್ಬರು ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಹೌದು, ಧೋನಿ ಹಾಗೂ ರೈನಾ 2020ರ ಆಗಸ್ಟ್ 15ರಂದು ಒಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
2020ರ ಮಧ್ಯ ಭಾಗದಲ್ಲಿ ಭಾರತದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿತ್ತು. ಆಗಸ್ಟ್ ವೇಳೆಯಲ್ಲಿ ಧೋನಿ ಹಾಗೂ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜತೆಗೆ ಬಯೋ-ಬಬಲ್‌ನಲ್ಲಿದ್ದರು. ಹೀಗಿರುವಾಗಲೇ ಧೋನಿ, 2020ರ ಆಗಸ್ಟ್ 15ರ ಸಂಜೆ 7.29ಕ್ಕೆ ಅಚ್ಚರಿಯ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು ಇದಾಗಿ ಕೆಲವೇ ನಿಮಿಷಗಳಲ್ಲಿ ಧೋನಿಯ ಆಪ್ತ ಗೆಳೆಯ ಹಾಗೂ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುವ ಮುನ್ನ ಕೊನೆಯ ಬಾರಿಗೆ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಇನ್ನು ಸುರೇಶ್ ರೈನಾ 2018ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು.
ಒಂದೇ ದಿನ ಇಬ್ಬರ ನಿವೃತ್ತಿ ಗುಟ್ಟು ಬಿಚ್ಚಿಟ್ಟ ಸುರೇಶ್ ರೈನಾ:
ದೈನಿಕ್ ಜಾಗರಣ್ ಸುದ್ದಿವಾಹಿನಿಯ ಜತೆಗಿನ ಮಾತುಕತೆ ವೇಳೆಯಲ್ಲಿ ಧೋನಿ ಹಾಗೂ ತಾವು ಒಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರ ಬಗ್ಗೆ ಸುರೇಶ್ ರೈನಾ ತುಟಿಬಿಚ್ಚಿದ್ದಾರೆ. 'ನಾವು ಮೊದಲೇ ಶನಿವಾರ(ಆಗಸ್ಟ್ 15)ದಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬೇಕು ಎಂದು ನಿರ್ಧರಿಸಿದ್ದೆವು. ಧೋನಿ ಜೆರ್ಸಿ ನಂಬರ್ 7 ಹಾಗೂ ನನ್ನ ಜೆರ್ಸಿ ನಂಬರ್ 3 ಆಗಿತ್ತು. ಎರಡನ್ನು ಒಟ್ಟಿಗೆ ಸೇರಿಸಿದರೆ 73 ಆಗುತ್ತೆ. ಮತ್ತೆ 2020ರ ಆಗಸ್ಟ್ 15 ಭಾರತದ 73ನೇ ಸ್ವಾತಂತ್ರ್ಯೋತ್ಸವಾಗಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಲು ಅದಕ್ಕಿಂತ ಉತ್ತಮ ದಿನ ಮತ್ತೊಂದು ಇರಲಿಲ್ಲ ಎನ್ನುವ ಇಂಟ್ರೆಸ್ಟಿಂಗ್ ಸಂಗತಿಯನ್ನು ಸುರೇಶ್ ರೈನಾ ಬಿಚ್ಚಿಟ್ಟಿದ್ದಾರೆ.
ಧೋನಿ 2004ರ ಡಿಸೆಂಬರ್ 23ರಂದು ಬಾಂಗ್ಲಾದೇಶ ಎದುರು ಚಿತ್ತಗಾಂಗ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಾನು 2005ರ ಜುಲೈ 30ರಂದು ಶ್ರೀಲಂಕಾ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದೆ. ಇಬ್ಬರು ಬಹುತೇಕ ಒಟ್ಟಿಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದೆವು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಒಟ್ಟಿಗೆ ಆಡಿದೆವು ಹಾಗೂ ಒಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದೆವು' ಎಂದು ರೈನಾ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ, ಐಪಿಎಲ್‌ನಲ್ಲಿ ಇನ್ನೂ ಸಕ್ರಿಯವಾಗಿದ್ದಾರೆ. ಇನ್ನೊಂದೆಡೆ ಸುರೇಶ್ ರೈನಾ 2022ರ ಐಪಿಎಲ್‌ನಲ್ಲಿ ಅನ್‌ಸೋಲ್ಡ್ ಆದ ಬಳಿಕ ಸದ್ಯ ಹಂಗಾಮಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಧೋನಿ-ರೈನಾ ಕ್ರಿಕೆಟ್ ಟ್ರ್ಯಾಕ್ ರೆಕಾರ್ಡ್:
ಧೋನಿ ಟೀಂ ಇಂಡಿಯಾ ಪರ 2004ರಿಂದ 2019ರ ತನಕ 90 ಟೆಸ್ಟ್, 350 ಏಕದಿನ ಹಾಗೂ 98 ಟಿ20 ಪಂದ್ಯಗಳನ್ನಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007ರ ಐಸಿಸಿ ಟಿ20 ವಿಶ್ವಕಪ್ಮ 2011ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿದೆ. ಈ ಮೂಲಕ ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ಕ್ಯಾಪ್ಟನ್ ಎನ್ನುವ ಹೆಗ್ಗಳಿಕೆ ಧೋನಿಗಿದೆ.
ಇನ್ನೊಂದೆಡೆ ಸುರೇಶ್ ರೈನಾ 2005ರಿಂದ 2018ರ ವರೆಗೆ ಭಾರತ ಪರ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. ರೈನಾ ಭಾರತ ಕಂಡ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲೂ ರೈನಾ ಪ್ರಮುಖ ಪಾತ್ರ ವಹಿಸಿದ್ದರು.


