ಎಂ.ಎಸ್. ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ನಡುವೆ ಷೇರುಗಳ ವಿಚಾರವಾಗಿ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಹಬ್ಬಿವೆ. ಧೋನಿ ಕೇಳಿದ ಷೇರು ಪಾಲು ಮತ್ತು ಸಿಎಸ್‌ಕೆ ನೀಡಿದ ಆಫರ್‌ಗೆ ಒಮ್ಮತ ಮೂಡದ ಕಾರಣ ಮಾತುಕತೆ ಮುರಿದುಬಿದ್ದಿದೆ ಎನ್ನಲಾಗಿದ್ದು, ಈ ಸುದ್ದಿಯನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕಟ್ಟುಕಥೆ ಎಂದು ತಳ್ಳಿಹಾಕಿದ್ದಾರೆ.
ಚೆನ್ನೈ: 2008ರಿಂದಲೂ ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ 'ತಲ' ಆಗಿದ್ದಾರೆ. ಐಪಿಎಲ್ ಶುರುವಾದಾಗಿನಿಂದ CSK ಮುಖ ಅಂದ್ರೆ ಅದು ಧೋನಿಯೇ. ಅವರ ನಾಯಕತ್ವದಲ್ಲಿ ಚೆನ್ನೈ ತಂಡ ಐದು ಐಪಿಎಲ್ ಟ್ರೋಫಿ ಮತ್ತು ಎರಡು ಚಾಂಪಿಯನ್ಸ್ ಲೀಗ್ ಟಿ20 ಕಿರೀಟಗಳನ್ನು ಗೆದ್ದುಕೊಂಡಿದೆ.
ಚೆನ್ನೈ ಫ್ರಾಂಚೈಸಿಗೆ ದೇಶದಾದ್ಯಂತ ಅಭಿಮಾನಿಗಳನ್ನು ತಂದುಕೊಟ್ಟಿದ್ದೇ ಧೋನಿಯ ಕ್ಯಾಪ್ಟನ್ಸಿ. ಎರಡು ವರ್ಷಗಳ ಹಿಂದೆ, ಧೋನಿ ತನ್ನ ಉತ್ತರಾಧಿಕಾರಿಯಾಗಿ ಋತುರಾಜ್ ಗಾಯಕ್ವಾಡ್ ಅವರನ್ನು ನೇಮಿಸಿದರು. ಅಂದಿನಿಂದ ಅವರು ನಿಧಾನವಾಗಿ ಪಂದ್ಯಗಳಿಂದ ಹಿಂದೆ ಸರಿಯುತ್ತಿರುವುದನ್ನು ಕ್ರಿಕೆಟ್ ಜಗತ್ತು ನೋಡಿದೆ. ಕಳೆದ ಸೀಸನ್‌ನಲ್ಲಿ ತಂಡದ ಭಾಗವಾಗಿದ್ದರೂ, ಧೋನಿ ತಮ್ಮ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿಕೊಂಡು, CSKಯಿಂದ ಸ್ವತಂತ್ರರಾಗಲು ಪ್ರಯತ್ನಿಸುತ್ತಿದ್ದರು.
ಧೋನಿ ಹಾಗೂ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮನಸ್ತಾಪ?
ಇದೀಗ ಎಂ.ಎಸ್. ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ನಡುವೆ ಷೇರುಗಳ ವಿಚಾರವಾಗಿ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಹಬ್ಬಿವೆ. ವರದಿಗಳ ಪ್ರಕಾರ, ಧೋನಿ ಮೊದಲು 25% ಷೇರುಗಳನ್ನು ಕೇಳಿದ್ದರಂತೆ, ನಂತರ ಅದನ್ನು 18%ಗೆ ಇಳಿಸಿದ್ದರಂತೆ. ಇದಕ್ಕೆ ಪ್ರತಿಯಾಗಿ, CSK ಮ್ಯಾನೇಜ್ಮೆಂಟ್ ಮೊದಲು 3% ಮತ್ತು ಮಾತುಕತೆಯ ನಂತರ ಗರಿಷ್ಠ 5.5% ಶೇರುಗಳನ್ನು ನೀಡುವುದಾಗಿ ಹೇಳಿದೆ. ಆದರೆ, ಇಬ್ಬರ ನಡುವೆ ಒಮ್ಮತ ಮೂಡದ ಕಾರಣ ಮಾತುಕತೆ ಮುರಿದುಬಿದ್ದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಧೋನಿ ಆಗಲಿ, ತಂಡದ ಮ್ಯಾನೇಜ್ಮೆಂಟ್ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಆದರೆ, ಕ್ರಿಕೆಟ್ ಜಗತ್ತಿನಲ್ಲಿ ಈ ಸುದ್ದಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಅಚ್ಚರಿಯಿಂದ ಮಾತನಾಡಿದ್ದಾರೆ. "ಯಾವುದೇ ಫ್ರಾಂಚೈಸಿ ತನ್ನ ಮಾಜಿ ಆಟಗಾರನಿಗೆ 400 ಮಿಲಿಯನ್ ಡಾಲರ್ ಕೊಡುತ್ತಾ?" ಎಂದು ಅವರು ಪ್ರಶ್ನಿಸಿದ್ದಾರೆ. "ಈ ಚರ್ಚೆಗಳು ನಿಜವಾಗಲು ಸಾಧ್ಯವೇ ಇಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಒಂದು ದೊಡ್ಡ ಬ್ರ್ಯಾಂಡ್. 1.8 ಬಿಲಿಯನ್ ಡಾಲರ್ ಮೌಲ್ಯದ CSK ಬಳಿ ಧೋನಿ 25% ಶೇರು ಕೇಳಿದ್ದಾರೆ ಅನ್ನೋದು ಹೇಗೆ ನಿಜವಾಗುತ್ತೆ? ಇದು ಅಸಾಧ್ಯ. ಯಾರೂ ಒಬ್ಬ ವ್ಯಕ್ತಿಗೆ 400 ಮಿಲಿಯನ್ ಡಾಲರ್ ಕೊಡಲ್ಲ," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಒಂದು ವೇಳೆ CSK ಆಫರ್ ಮಾಡಿದ 5.5% ಶೇರುಗಳನ್ನು ಪರಿಗಣಿಸಿದರೂ ಅದು ಕೂಡಾ ಬಹಳ ದೊಡ್ಡ ಮೊತ್ತವಾಗುತ್ತದೆ. ಹಾಗಾಗಿ, ಇದೆಲ್ಲಾ ಯಾರೋ ಸೃಷ್ಟಿಸಿದ ಕಟ್ಟುಕಥೆಯಂತೆ ನನಗೆ ಅನಿಸುತ್ತಿದೆ," ಎಂದು ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
CSKಯ ಬ್ರ್ಯಾಂಡ್ ಮೌಲ್ಯವನ್ನು ಲೆಕ್ಕ ಹಾಕಿದರೆ, ಧೋನಿ ಕೇಳಿದ್ದಾರೆ ಎನ್ನಲಾದ ಮೊತ್ತ ಸುಮಾರು 3,300 ಕೋಟಿ ರೂಪಾಯಿಗೂ ಅಧಿಕವಾಗುತ್ತದೆ. ಕಾರ್ಪೊರೇಟ್ ಜಗತ್ತಿನಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಯಾರೂ ಸುಮ್ಮನೆ ಕೊಡುವುದಿಲ್ಲ ಎಂದು ತಮ್ಮ ಕಾರ್ಪೊರೇಟ್ ಬಿಸಿನೆಸ್ ಅನುಭವದ ಮೇಲೆ ಆಕಾಶ್ ಚೋಪ್ರಾ ಹೇಳುತ್ತಾ, ಈ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ್ದಾರೆ.
ಸಿಎಸ್‌ಕೆ ಫ್ರಾಂಚೈಸಿಯಿಂದ ಧೋನಿಗೆ ಮೋಸ?
ಇನ್ನು ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ ಧೋನಿ, 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಐಪಿಎಲ್‌ಗೆ ವಿದಾಯ ಹೇಳಲು ಮುಂದಾಗಿದ್ದರಂತೆ. ಆದರೆ ಸಿಎಸ್‌ಕೆ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್ ಟೀಮ್ ಹಾಗೂ ಮೀಡಿಯಾ ಟೀಮ್, ಧೋನಿಗೆ ಇನ್ನೂ 2-3 ವರ್ಷ ಐಪಿಎಲ್ ಆಡಲು ಒತ್ತಡ ಹೇರಿದರಂತೆ. ಒಂದು ವೇಳೆ ಇನ್ನೂ ಎರಡು ಮೂರು ವರ್ಷ ಸಿಎಸ್‌ಕೆ ಪರ ಐಪಿಎಲ್ ಆಡಿದರೇ, ನಿವೃತ್ತಿ ಬಳಿಕ ನಿಮಗೆ ಸಿಎಸ್‌ಕೆ ತಂಡದ 30-35 ಸ್ಟೇಕ್ಸ್(ಷೇರು)ಗಳನ್ನು ನೀಡುವುದಾಗಿ ಮಾತು ಕೊಟ್ಟಿತ್ತಂತೆ. ಆದರೆ ಈ ಸಂಬಂಧ ಯಾವುದೇ ಅಧಿಕೃತ ಒಪ್ಪಂದವಾಗಿರಲಿಲ್ಲವಂತೆ ಎನ್ನಲಾಗುತ್ತಿದೆ.


