1996ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ತಮಗೆ ಹೇಳಿದ ಸ್ಪೂರ್ತಿದಾಯಕ ಮಾತೊಂದನ್ನು ಸೌರವ್ ಗಂಗೂಲಿ ನೆನಪಿಸಿಕೊಂಡಿದ್ದಾರೆ. ವೇಗದ ಬೌಲರ್‌ಗಳನ್ನು ಎದುರಿಸುವ ಭಯದ ಬಗ್ಗೆ ಕೇಳಿದಾಗ, ಅದನ್ನು ಸವಾಲಾಗಿ ಸ್ವೀಕರಿಸಿ ವಿಶ್ವದ ಅತ್ಯುತ್ತಮ ಬ್ಯಾಟರ್ ಆಗುವ ಅವಕಾಶ ಎಂದಿದ್ದರು.
ಬೆಂಗಳೂರು (ಆ.27): ಭಾರತೀಯ ಕ್ರಿಕೆಟ್ ಇತಿಹಾಸದ ಇಬ್ಬರು ದಿಗ್ಗಜರಾದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರ ನಡುವಿನ ಸ್ನೇಹ ಹಾಗೂ ಪರಸ್ಪರ ಗೌರವ ಅಪಾರವಾದದ್ದು. ಇತ್ತೀಚೆಗೆ ಸೌರವ್ ಗಂಗೂಲಿ, 1996 ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲಿ ದ್ರಾವಿಡ್ ತಮಗೆ ಹೇಳಿದ್ದ ವಿಶೇಷ ಮತ್ತು ಸ್ಪೂರ್ತಿದಾಯಕ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ಭಾರತ ತಂಡದಲ್ಲಿ ಸೌರವ್ ಗಂಗೂಲಿ ಆರಂಭದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ, ಹಳೆಯ ಚೆಂಡಿನಲ್ಲಿ ಸಿಕ್ಸರ್ ಬಾರಿಸುವ ಸಾಮರ್ಥ್ಯವಿದೆ ಎಂಬ ಕಾರಣಕ್ಕೆ ಅಂದಿನ ನಾಯಕ ಗಂಗೂಲಿಯವರನ್ನು 6ನೇ ಕ್ರಮಾಂಕಕ್ಕೆ ಇಳಿಸಿದ್ದರು. ಸಿಕ್ಸರ್ ಬಾರಿಸುವುದೇ ನನ್ನ ಪಾಲಿಗೆ ಹಿನ್ನಡೆಯಾಗುತ್ತದೆ ಮತ್ತು 3ನೇ ಕ್ರಮಾಂಕದಿಂದ 6ಕ್ಕೆ ಹೋಗಬೇಕಾಗುತ್ತದೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ ಎಂದು ಗಂಗೂಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ನನಗೂ ಭಯವಾಗುತ್ತದೆ, ಆದರೆ ಅದು ನನಗೆ ಸಿಕ್ಕ ಅವಕಾಶ
1996ರ ದಕ್ಷಿಣ ಆಫ್ರಿಕಾ ಸರಣಿಯನ್ನು ಯಶಸ್ವಿಗೊಳಿಸಲು ಗಂಗೂಲಿ ಮತ್ತು ದ್ರಾವಿಡ್ ಬೆಳಿಗ್ಗೆ 7 ಗಂಟೆಗೆ ಎದ್ದು ಜೊತೆಯಾಗಿ ರನ್ನಿಂಗ್ ಮಾಡಲು ನಿರ್ಧರಿಸಿದ್ದರು. ದ್ರಾವಿಡ್ ಸದಾ ಗಂಗೂಲಿಗಿಂತ ಮುಂಚಿತವಾಗಿಯೇ ಎದ್ದು ರೆಡಿಯಾಗಿ ಗಂಗೂಲಿಯನ್ನು ಕರೆಯುತ್ತಿದ್ದರು.
ಆ ಪ್ರವಾಸದ ಅಭ್ಯಾಸದ ವೇಳೆ ಗಂಗೂಲಿ, ದ್ರಾವಿಡ್ ಅವರಿಗೆ ಒಂದು ಪ್ರಶ್ನೆ ಕೇಳಿದ್ದರು: ನೀವು 90 ಮೈಲಿ ವೇಗದಲ್ಲಿ ಬೌಲಿಂಗ್ ಮಾಡುವ ಶಾನ್ ಪೊಲಾಕ್, ಅಲಾನ್ ಡೊನಾಲ್ಡ್, ಲ್ಯಾನ್ಸ್ ಕ್ಲೂಸ್ನರ್, ಜಾಕ್ಸ್ ಕಾಲಿಸ್ ಹಾಗೂ ಮಖಾಯ ಎನ್‍ಟಿನಿ ಅವರಂತಹ ಭೀಕರ ಬೌಲರ್‌ಗಳ ವಿರುದ್ಧ ಹೊಸ ಚೆಂಡಿನಲ್ಲಿ ದಿನವಿಡೀ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೀರಲ್ಲ, ನಿಮಗೇಂದಾದರೂ 'ಯಶಸ್ವಿಯಾಗದಿದ್ದರೆ ಏನು ಕಥೆ?' ಎಂಬ ಭಯ ಅಥವಾ ಸಂಶಯ ಬಂದಿದೆಯೇ?' ಎಂದು ಕೇಳಿದ್ದರು.
ಇದಕ್ಕೆ ರಾಹುಲ್ ದ್ರಾವಿಡ್ ನೀಡಿದ ಉತ್ತರ ಗಂಗೂಲಿಯವರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತು. "ಹೌದು ಸೌರವ್, ನನಗೂ ಹಾಗೆ ಅನ್ನಿಸುತ್ತದೆ. ಆದರೆ ಅದನ್ನು ನಾನು ನೋಡುವ ರೀತಿಯೇ ಬೇರೆ. ಇದನ್ನು ನಾನು ನನಗೆ ಸಿಕ್ಕ ದೊಡ್ಡ ಅವಕಾಶ ಎಂದು ಭಾವಿಸುತ್ತೇನೆ. ಇನ್ನು ಈ ಅವಕಾಶವನ್ನು ನಾನು ಎರಡು ರೀತಿಯಲ್ಲಿ ನೋಡುತ್ತೇನೆ. ಒಂದು ಬೌಲರ್‌ಗಳು ದಣಿದಾಗ, ಚೆಂಡು ಹಳೆಯದಾದಾಗ, ಮೇಲಿನ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಿದ ನಂತರ 6ನೇ ಕ್ರಮಾಂಕದಲ್ಲಿ ಬಂದು ಆಡುವುದಕ್ಕೆ ಸಂತೋಷಪಡುವುದು. ಇಲ್ಲವೇ 3ನೇ ಕ್ರಮಾಂಕದಲ್ಲೇ ಕ್ರೀಸ್‌ಗೆ ಇಳಿದು, ಟೆಸ್ಟ್ ಶತಕಗಳನ್ನು ಬಾರಿಸಿ, ಹೊಸ ಚೆಂಡನ್ನು ಎದುರಿಸುವ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬನೆನಿಸಿಕೊಂಡು ಸ್ವಂತ ಗುರುತು ಮೂಡಿಸುವುದು. ನಾನು ಎರಡನೇ ಹಾದಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ' ಎಂದಿದ್ದರು.
ದ್ರಾವಿಡ್ ಅವರ ಈ ಕಠಿಣ ಪರಿಶ್ರಮ, ಸವಾಲುಗಳನ್ನು ಸ್ವೀಕರಿಸುವ ಸಕಾರಾತ್ಮಕ ಮನೋಭಾವ ಹಾಗೂ ಧನಾತ್ಮಕ ಚಿಂತನೆಯೇ ಅವರನ್ನು ಕ್ರಿಕೆಟ್ ಜಗತ್ತಿನಲ್ಲಿ 'ದಿ ವಾಲ್' (The Wall) ಆಗಿ ಬೆಳೆಸಿತು ಎಂಬುದನ್ನು ಗಂಗೂಲಿ ಹೆಮ್ಮೆಯಿಂದ ಸ್ಮರಿಸಿದ್ದಾರೆ.


