ಭಾರತದ ಮಾಜಿ ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರ, ತಮ್ಮ ಸಾರ್ವಕಾಲಿಕ ಶ್ರೇಷ್ಠ ಐವರು ಭಾರತೀಯ ವೇಗದ ಬೌಲರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಕಪಿಲ್ ದೇವ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್, ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದು, ಮೊಹಮ್ಮದ್ ಸಿರಾಜ್ ಮತ್ತು ಶಮಿಗೆ ಸ್ಥಾನ ಸಿಕ್ಕಿಲ್ಲ. ಜೊತೆಗೆ, ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯ ಫಲಿತಾಂಶದ ವಿವರಗಳೂ ಇವೆ.
ಕೊಲಂಬೊ: 2010ರಿಂದ 2023ರವರೆಗೆ ಭಾರತ ಟೆಸ್ಟ್ ತಂಡದ ಪ್ರಮುಖ ಆಟಗಾರನಾಗಿದ್ದ ಚೇತೇಶ್ವರ್ ಪೂಜಾರ, ವಿಶ್ವದ ಘಟಾನುಘಟಿ ವೇಗದ ಬೌಲರ್‌ಗಳನ್ನು ಎದುರಿಸಿದ ಅನುಭವಿ. ಸದ್ಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಕಾಮೆಂಟೇಟರ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವ ಪೂಜಾರ, ಇದೀಗ ಭಾರತದ ಸಾರ್ವಕಾಲಿಕ ಶ್ರೇಷ್ಠ ಐವರು ವೇಗದ ಬೌಲರ್‌ಗಳ ಪಟ್ಟಿಯೊಂದನ್ನು ಆಯ್ಕೆ ಮಾಡಿದ್ದಾರೆ.
ಅಚ್ಚರಿ ಅಂದ್ರೆ, ಸದ್ಯದ ಟೀಂ ಇಂಡಿಯಾದ ಪ್ರಮುಖ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗೆ ಪೂಜಾರ ಅವರ ಟಾಪ್ 5 ಲಿಸ್ಟ್‌ನಲ್ಲಿ ಸ್ಥಾನ ಸಿಕ್ಕಿಲ್ಲ. ಆದರೂ, ಇವರಿಬ್ಬರೂ ತಮ್ಮ ಟಾಪ್ 10 ಪಟ್ಟಿಯಲ್ಲಿ ಖಂಡಿತಾ ಇರುತ್ತಾರೆ ಎಂದು ಪೂಜಾರ ಹೇಳಿದ್ದಾರೆ.
ಪೂಜಾರ ಆಯ್ಕೆಯ ಟಾಪ್ 5 ವೇಗಿಗಳು:
ಕಪಿಲ್ ದೇವ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್, ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾ ಅವರನ್ನು ಪೂಜಾರ ತಮ್ಮ ಮೊದಲ ಐದು ಸ್ಥಾನಗಳಲ್ಲಿ ಹೆಸರಿಸಿದ್ದಾರೆ. ಮೊಹಮ್ಮದ್ ಸಿರಾಜ್ ನಿಮ್ಮ ಟಾಪ್ 20 ಭಾರತೀಯ ವೇಗಿಗಳ ಪಟ್ಟಿಯಲ್ಲಿದ್ದಾರಾ ಎಂದು ಕೇಳಿದಾಗ, 'ಖಂಡಿತವಾಗಿಯೂ ಇದ್ದಾರೆ' ಎಂದು ಪೂಜಾರ ಉತ್ತರಿಸಿದರು. ಹಾಗಾದರೆ ಟಾಪ್ 10ರಲ್ಲಿದ್ದಾರಾ? ಎಂಬ ಪ್ರಶ್ನೆಗೆ, 'ಹೌದು, ಹಾಗಂತ ಹೇಳಬಹುದು. ವಿದೇಶ ಹಾಗೂ ಭಾರತದಲ್ಲಿ ಅವರು ನೀಡಿರುವ ಪ್ರದರ್ಶನ ಮತ್ತು ತಂಡಕ್ಕಾಗಿ ಅವರ ಕಠಿಣ ಶ್ರಮವನ್ನು ಪರಿಗಣಿಸಿದರೆ, ಸಿರಾಜ್ ಖಂಡಿತವಾಗಿಯೂ ಟಾಪ್ 10ರಲ್ಲಿ ಸ್ಥಾನ ಪಡೆಯುತ್ತಾರೆ' ಎಂದು ಪೂಜಾರ ಸ್ಪಷ್ಟಪಡಿಸಿದರು. ಆದರೆ, ಸಿರಾಜ್ ಟಾಪ್ 5 ಬೌಲರ್‌ಗಳಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆಗೆ, 'ಬಹುಶಃ ಇಲ್ಲ' ಎಂದು ಹೇಳಿ ತಮ್ಮ ಟಾಪ್ 5 ಪಟ್ಟಿಯನ್ನು ಹಂಚಿಕೊಂಡರು.
ಭಾರತ ಪರ ಅತಿಹೆಚ್ಚು ಟೆಸ್ಟ್ ವಿಕೆಟ್ ಕಬಳಿಸಿದ ವೇಗದ ಬೌಲರ್ ಪಟ್ಟಿಯಲ್ಲಿ ಮಾಜಿ ನಾಯಕ ಕಪಿಲ್ ದೇವ್ ಮೊದಲ ಸ್ಥಾನದಲ್ಲಿದ್ದಾರೆ. ಹರ್ಯಾಣದ ಹರಿಕೇನ್ ಖ್ಯಾತಿಯ ಕಪಿಲ್ ದೇವ್ 434 ವಿಕೆಟ್ ಕಬಳಿಸಿದ್ದಾರೆ. ಇನ್ನು ಇಶಾಂತ್ ಶರ್ಮಾ ಹಾಗೂ ಜಹೀರ್ ಖಾನ್ ತಲಾ 311 ವಿಕೆಟ್ ಕಬಳಿಸುವ ಮೂಲಕ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಕನ್ನಡಿಗ ಜಾವಗಲ್ ಶ್ರೀನಾಥ್ 236 ವಿಕೆಟ್ ಕಬಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೇ, ಜಸ್ಪ್ರೀತ್ ಬುಮ್ರಾ 234 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ 229 ವಿಕೆಟ್ ಕಬಳಿಸಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಭಾರತ ಟೆಸ್ಟ್ ತಂಡದಲ್ಲಿ ಶಮಿ ಸ್ಥಾನ ಪಡೆಯಲು ವಿಫಲವಾಗುತ್ತಿದ್ದಾರೆ.
ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಜಯ
ಇನ್ನು, ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫಾಲೋ-ಆನ್‌ಗೆ ಸಿಲುಕಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ, ಭಾರತೀಯ ಬೌಲರ್‌ಗಳಿಗೆ ಇನ್ನಿಲ್ಲದಂತೆ ಕಾಡಿತು. 264 ಎಸೆತಗಳಲ್ಲಿ ಅಜೇಯ 133 ರನ್ ಗಳಿಸಿದ ಸೋನಲ್ ದಿನುಷಾ, ಲಂಕಾ ತಂಡಕ್ಕೆ ಸೋಲಿನಿಂದ ಪಾರು ಮಾಡಿದರು. ಕೊನೆಯಲ್ಲಿ ಲಹಿರು ಕುಮಾರ (90 ಎಸೆತಗಳಲ್ಲಿ 2 ರನ್) ತೋರಿದ ಪ್ರತಿರೋಧವೂ ನಿರ್ಣಾಯಕವಾಯಿತು. ಭಾರತದ ಪರ ರವೀಂದ್ರ ಜಡೇಜಾ ಮತ್ತು ಮಾನವ್ ಸುತಾರ್ ತಲಾ ಮೂರು ವಿಕೆಟ್ ಪಡೆದರು.
ಇದಕ್ಕೂ ಮೊದಲು, ಭಾರತದ ಮೊದಲ ಇನ್ನಿಂಗ್ಸ್ 503 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ 290 ರನ್‌ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲೂ ದಿನುಷಾ (103) ಶತಕ ಸಿಡಿಸಿದ್ದರು. ಭಾರತದ ಪರ ಪ್ರಸಿದ್ಧ್ ಕೃಷ್ಣ ಮತ್ತು ಮಾನವ್ ಸುತಾರ್ ತಲಾ ಮೂರು ವಿಕೆಟ್ ಕಿತ್ತಿದ್ದರು. ಈ ಡ್ರಾದೊಂದಿಗೆ, ಎರಡು ಪಂದ್ಯಗಳ ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದುಕೊಂಡಿತು.


