ಭಾರತ ಕ್ರಿಕೆಟ್ ತಂಡದ ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಮುಂಗಡ ಟಿಕೆಟ್ ಮಾರಾಟ ಆರಂಭವಾದ 48 ಗಂಟೆಗಳಲ್ಲಿ 26,000 ಟಿಕೆಟ್‌ಗಳು ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಇದು ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಮುಂಗಡ ಮಾರಾಟ ಇದಾಗಿದೆ.

ಆಕ್ಲೆಂಡ್ (ಆ.27): ಭಾರತ ಕ್ರಿಕೆಟ್ ತಂಡದ ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಮುಂಗಡ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭವಾದ ಕೇವಲ 48 ಗಂಟೆಗಳಲ್ಲಿ ಬರೋಬ್ಬರಿ 26,000 ಟಿಕೆಟ್‌ಗಳು ಮಾರಾಟವಾಗಿ ದಾಖಲೆ ನಿರ್ಮಿಸಿವೆ. ನ್ಯೂಜಿಲೆಂಡ್ ಕ್ರಿಕೆಟ್ (NZC) ಇತಿಹಾಸದಲ್ಲೇ ಮುಂಗಡ (Pre-sale) ಹಂತದಲ್ಲಿ ಈ ಪ್ರಮಾಣದ ಟಿಕೆಟ್‌ಗಳು ಮಾರಾಟವಾಗಿರುವುದು ಇದೇ ಮೊದಲು. ಅಕ್ಟೋಬರ್ 22 ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ ಭಾರತ ತಂಡವು ಒಟ್ಟು 12 ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್ ಕ್ರಿಕೆಟ್‌ನ 'ಕ್ರಿಕೆಟ್ ನೇಷನ್' (Cricket Nation) ಸದಸ್ಯರಿಗೆ ನೀಡಲಾದ ವಿಶೇಷ ಮುಂಗಡ ಮಾರಾಟದಲ್ಲಿ ಟಿಕೆಟ್‌ಗಳಿಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.

ಸ್ಟೇಡಿಯಂಗಳಲ್ಲಿ ಟಿಕೆಟ್ ಹೌಸ್‌ಫುಲ್: ಕ್ರೈಸ್ಟ್‌ಚರ್ಚ್‌, ಆಕ್ಲೆಂಡ್‌ನಲ್ಲಿ ಭಾರಿ ಡಿಮ್ಯಾಂಡ್

ವಿಶೇಷವಾಗಿ ಆಕ್ಲೆಂಡ್‌ನ ಐತಿಹಾಸಿಕ ಈಡನ್ ಪಾರ್ಕ್ (Eden Park) ಮೈದಾನದಲ್ಲಿ ನಡೆಯಲಿರುವ ನಿಗದಿತ ಓವರ್‌ಗಳ (ಟಿ20 ಮತ್ತು ಏಕದಿನ) ಪಂದ್ಯಗಳ ಟಿಕೆಟ್‌ಗಳು ಬಹುತೇಕ ಖಾಲಿಯಾಗಿವೆ.

ಸುಮಾರು 9,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲೆ ಓವಲ್ ಮೈದಾನದಲ್ಲಿ ಅಕ್ಟೋಬರ್ 22 ಮತ್ತು 24 ರಂದು ನಡೆಯಲಿರುವ ಮೊದಲ ಎರಡು ಟಿ20 ಪಂದ್ಯಗಳ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗಿವೆ. ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ಇಲ್ಲಿ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಟಿಕೆಟ್‌ಗಳಿಗೂ ಭಾರಿ ಬೇಡಿಕೆ ವ್ಯಕ್ತವಾಗಿದೆ.

ವೆಲ್ಲಿಂಗ್ಟನ್ (Sky Stadium & Basin Reserve): ಮೂರನೇ ಟಿ20 ಮತ್ತು ಎರಡನೇ ಏಕದಿನ ಪಂದ್ಯ ನಡೆಯಲಿರುವ ಸ್ಕೈ ಸ್ಟೇಡಿಯಂ ಹಾಗೂ ನವೆಂಬರ್ 19 ರಿಂದ ಮೊದಲ ಟೆಸ್ಟ್ ಪಂದ್ಯಕ್ಕೆ ವೇದಿಕೆಯಾಗಲಿರುವ ಪ್ರಸಿದ್ಧ ಸೆಲ್ಲೋ ಬೇಸಿನ್ ರಿಸರ್ವ್ ಮೈದಾನಗಳ ಟಿಕೆಟ್‌ಗಳೂ ವೇಗವಾಗಿ ಮಾರಾಟವಾಗುತ್ತಿವೆ.

ಟಿಕೆಟ್ ದರ ಏರಿಕೆ ಮಾಡಿಲ್ಲ: ನ್ಯೂಜಿಲೆಂಡ್ ಕ್ರಿಕೆಟ್ ಸ್ಪಷ್ಟನೆ

ಈ ಕುರಿತು ಮಾಹಿತಿ ನೀಡಿರುವ ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆಯ ಮುಖ್ಯ ಮಾರ್ಕೆಟಿಂಗ್ ಹಾಗೂ ವಾಣಿಜ್ಯ ಅಧಿಕಾರಿ ಗ್ಲೆನ್ ಕ್ರಿಚ್ಲಿ (Glenn Critchley), "ಅಭಿಮಾನಿಗಳಿಗೆ ಆರಂಭದಲ್ಲೇ ಟಿಕೆಟ್ ಕಾಯ್ದಿರಿಸಲು ಮನವಿ ಮಾಡಿದ್ದೆವು. ಈ ದಾಖಲೆ ಮಟ್ಟದ ಮಾರಾಟವು ಅಭಿಮಾನಿಗಳ ಕಾತುರತೆಯನ್ನು ತೋರಿಸುತ್ತದೆ. ಭಾರತ ತಂಡ ನ್ಯೂಜಿಲೆಂಡ್‌ನಲ್ಲಿ ಆಡುವುದು ಅಪರೂಪದ ಕ್ಷಣ ಹಾಗೂ ಆ ವಾತಾವರಣವೇ ಅದ್ಭುತವಾಗಿರುತ್ತದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

"ಕಳೆದ ಋತುವಿಗೆ ಹೋಲಿಸಿದರೆ ನಾವು ಈ ಬಾರಿಯೂ ಟಿಕೆಟ್ ದರಗಳನ್ನು ಹೆಚ್ಚಿಸಿಲ್ಲ. 'ಕ್ರಿಕೆಟ್ ನೇಷನ್' ಸದಸ್ಯರು ತಮ್ಮ ರಿಯಾಯಿತಿ ಕೋಡ್ ಬಳಸಿ 30 ನ್ಯೂಜಿಲೆಂಡ್ ಡಾಲರ್‌ಗಿಂತ ಕಡಿಮೆ ಬೆಲೆಯಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಸಾರ್ವಜನಿಕ ಟಿಕೆಟ್ ಮಾರಾಟ ಆರಂಭವಾಗಲು ಇನ್ನು 11 ದಿನಗಳ ಬಾಕಿ ಇದ್ದು, ಅಭಿಮಾನಿಗಳು ಬೇಗನೆ ಟಿಕೆಟ್ ಕಾಯ್ದಿರಿಸಿಕೊಳ್ಳುವುದು ಒಳಿತು ಎಂದಿದ್ದಾರೆ.

ಸೆಪ್ಟೆಂಬರ್ 7 ರಿಂದ ಸಾರ್ವಜನಿಕರಿಗೆ ಟಿಕೆಟ್ ಲಭ್ಯ

ಮುಂಗಡ ಹಂತದ ಮಾರಾಟದ ಬಳಿಕ, ಸೆಪ್ಟೆಂಬರ್ 7 ರಿಂದ ಸಾರ್ವಜನಿಕರಿಗೆ ಟಿಕೆಟ್ ಮಾರಾಟ ಮುಕ್ತವಾಗಲಿದೆ. ಆದರೆ, 'ಕ್ರಿಕೆಟ್ ನೇಷನ್' ಸದಸ್ಯರು ಮೊದಲ ಆದ್ಯತೆ ಹಾಗೂ ಶೇಕಡಾ 15 ರಷ್ಟು ವಿಶೇಷ ರಿಯಾಯಿತಿಯನ್ನು ಪಡೆಯಲಿದ್ದಾರೆ. ಗುಂಪುಗಳಲ್ಲಿ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗಾಗಿ ಎನ್‌ಝಡ್‌ಸಿ (NZC) ವಿಶೇಷ ಆಫರ್‌ಗಳನ್ನು ಘೋಷಿಸಿದೆ. 'ದಿ ಫೋರ್' (The Four - ನಾಲ್ವರು ವಯಸ್ಕರಿಗೆ) ಮತ್ತು 'ದಿ ಸಿಕ್ಸ್' (The Six - ಆರು ಮಂದಿಗೆ) ಎಂಬ ಗ್ರೂಪ್ ಪ್ಯಾಕೇಜ್‌ಗಳನ್ನು ರಿಯಾಯಿತಿ ದರದಲ್ಲಿ ಪರಿಚಯಿಸಲಾಗಿದ್ದು, ಹಲವು ಮೈದಾನಗಳ ಪಂದ್ಯಗಳಿಗೆ ಬಂಡಲ್ ಟಿಕೆಟ್‌ಗಳನ್ನೂ ನೀಡಲಾಗುತ್ತಿದೆ.

2019/20 ರ ಬಳಿಕ ಸುದೀರ್ಘ ಪ್ರವಾಸ: ವಿಶ್ವಕಪ್‌ಗೆ ಪ್ರಮುಖ ತಯಾರಿ

ನ್ಯೂಜಿಲೆಂಡ್ ಮಣ್ಣಿನಲ್ಲಿ ಭಾರತ ಆಡಲಿರುವ ಅತ್ಯಂತ ಸುದೀರ್ಘ (12 ಪಂದ್ಯಗಳು) ಪ್ರವಾಸ ಇದಾಗಿದೆ. 2019/20 ರ ಋತುವಿನ ಬಳಿಕ ಭಾರತ ತಂಡವು ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿವೆ. ಅಲ್ಲದೆ, ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ (ODI World Cup) ದೃಷ್ಟಿಯಿಂದ ಈ ಸರಣಿಯ ಏಕದಿನ ಪಂದ್ಯಗಳು ಎರಡೂ ತಂಡಗಳಿಗೆ ಅತ್ಯಂತ ಪ್ರಮುಖ ತಯಾರಿಯ ಭಾಗವಾಗಲಿವೆ. ವಿಶ್ವದ ಅಗ್ರಮಾನ್ಯ ಕ್ರಿಕೆಟ್ ತಾರೆಯರ ಆಟವನ್ನು ಕಣ್ಣುಂಬಿಕೊಳ್ಳಲು ನ್ಯೂಜಿಲೆಂಡ್‌ನ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.