2003-04ರ ದೇಶಿ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದ ಧೀರಜ್ ಜಾಧವ್, ಭಾರತ 'ಎ' ತಂಡದಲ್ಲೂ ಮಿಂಚಿದ್ದರು. ಗೌತಮ್ ಗಂಭೀರ್, ಎಂ ಎಸ್ ಧೋನಿ ಅವರಂತಹ ಆಟಗಾರರ ಜೊತೆಗಾರನಾಗಿದ್ದರೂ, ಟೀಂ ಇಂಡಿಯಾಗೆ ಆಯ್ಕೆಯಾದ ಬಳಿಕವೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಬೆಂಗಳೂರು: ಅದು 2003-04ರ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಹಲವು ಪ್ರತಿಭಾನ್ವಿತ ಕ್ರಿಕೆಟಿಗರು ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಬಾಗಿಲು ಬಡಿಯಾಲಾರಂಭಿಸಿದ ದಿನಗಳು. ಈ ಎಲ್ಲರ ಪೈಕಿ ಓರ್ವ ಎಡಗೈ ಬ್ಯಾಟರ್ ಆ ಸೀಸನ್‌ನಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಉಳಿದೆಲ್ಲರಿಗಿಂತ ಎತ್ತರದಲ್ಲಿ ನಿಂತಿದ್ದರು. ರಣಜಿ ಟ್ರೋಫಿ ಹಾಗೂ ದುಲೀಪ್ ಟ್ರೋಫಿ ಹೀಗೆ ಒಂದೇ ಋತುವಿನಲ್ಲಿ ಈ ಆಟಗಾರ ಕೇವಲ 15 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 103.75 ಬ್ಯಾಟಿಂಗ್ ಸರಾಸರಿಯಲ್ಲಿ 1,245 ರನ್ ಸಿಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ. ಇದರಲ್ಲಿ ಐದು ಶತಕಗಳ ಪೈಕಿ ಮೂರು ದ್ವಿಶತಕಗಳು ಸೇರಿದ್ದವು. ಇನ್ನು ಅದೇ ಸೀಸನ್‌ನಲ್ಲಿ 877 ರನ್ ಸಿಡಿಸಿದ್ದ ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು.
ಧೀರಜ್ ಜಾಧವ್ ಎನ್ನುವ ನತದೃಷ್ಟ ಕ್ರಿಕೆಟಿಗ
ಹೌದು, ನಾವಿಂದು ಹೇಳುತ್ತಿರುವುದು ಧೀರಜ್ ಜಾಧವ್ ಎನ್ನುವ ಅಸಾಧಾರಣ ಪ್ರತಿಭೆಯ ಬಗ್ಗೆ. ದೀರಜ್ ಜಾಧವ್ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿದ್ದರಿಂದ ಅವರು ಕೆಲವು ತಿಂಗಳ ಬಳಿಕ ಭಾರತ 'ಎ' ತಂಡದ ಜತೆಗೆ ಆಫ್ರಿಕಾ ಪ್ರವಾಸ ಮಾಡಿದರು. ಆ ಸರಣಿಯಲ್ಲಿ ಎಂ ಎಸ್ ಧೋನಿ ಕೂಡಾ ಭಾರತ 'ಎ' ತಂಡದ ಜತೆಗಿದ್ದು, ಅಲ್ಲಿ ಮಿಂಚಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟರು. ಆ ತ್ರಿಪಕ್ಷೀಯ ಸರಣಿಯಲ್ಲಿ ಮಹಾರಾಷ್ಟ್ರ ಮೂಲದ ಧೀರಜ್ ಜಾಧವ್ 257 ರನ್ ಸಿಡಿಸಿ ಮಿಂಚಿದ್ದರು. ಅದರಲ್ಲೂ ಪಾಕಿಸ್ತಾನ 'ಎ' ಎದುರಿನ ಫೈನಲ್ ಪಂದ್ಯದಲ್ಲಿ ಗಂಭೀರ್ 12, ಧೋನಿ 15 ರನ್‌ಗಳಿಗೆ ವಿಕೆಟ್ ಒಪ್ಪಿಸಿ ತಂಡ ಸಂಕಷ್ಟದಲ್ಲಿದ್ದಾಗ ಧೀರಜ್ ಜಾಧವ್ 112 ಎಸೆತಗಳಲ್ಲಿ 89 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಕೀನ್ಯಾ ಎದುರಿನ ಮೂರು ದಿನಗಳ ಪಂದ್ಯದಲ್ಲಿ ಧೀರಜ್ ಜಾಧವ್ ಏಕಾಂಗಿಯಾಗಿ ಅಜೇಯ 260 ರನ್ ಸಿಡಿಸಿ ಗಮನ ಸೆಳೆದಿದ್ದರು.
ಇನ್ನು ಆಸ್ಟ್ರೇಲಿಯಾ ತಂಡವು 2004ರಲ್ಲಿ ಟೆಸ್ಟ್ ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಂಡಿತ್ತು. ಈ ಸರಣಿಗೂ ಮೊದಲು ಭಾರತ ಹಿರಿಯರ ತಂಡವು ಭಾರತ 'ಎ' ತಂಡದ ವಿರುದ್ದ ಅಭ್ಯಾಸ ಪಂದ್ಯವನ್ನಾಡಿತು. ಈ ಅಭ್ಯಾಸ ಪಂದ್ಯದಲ್ಲಿ ಅನಿಲ್ ಕುಂಬ್ಳೆ, ಜಹೀರ್ ಖಾನ್, ಹರ್ಭಜನ್ ಸಿಂಗ್ ಹಾಗೂ ಇರ್ಫಾನ್ ಪಠಾಣ್ ಅವರಂತಹ ಬೌಲರ್‌ಗಳ ಎದುರು ಭಾರತ 'ಎ' ಪರ ಆರಂಭಿಕನಾಗಿ ಕಣಕ್ಕಿಳಿದ ಧೀರಜ್ ಜಾಧವ್ ಆಕರ್ಷಕ 113 ರನ್ ಸಿಡಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಆಸ್ಟ್ರೇಲಿಯಾ ಎದುರು ಮುಂಬೈನಲ್ಲಿ ಆಯೋಜನೆಗೊಂಡಿದ್ದ ನಾಲ್ಕನೇ ಟೆಸ್ಟ್‌ಗೆ ಆಕಾಶ್ ಚೋಪ್ರಾ ಬದಲಿಗೆ ಆರಂಭಿಕರಾಗಿ ಗೌತಮ್ ಗಂಭೀರ್ ಹಾಗೂ ಧೀರಜ್ ಜಾಧವ್‌ಗೆ ಭಾರತ ತಂಡದಿಂದ ಕರೆ ಬಂದಿತು. ಈ ಪೈಕಿ ಅಂತಿಮವಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದದ್ದು ಮಾತ್ರ ಗೌತಮ್ ಗಂಭೀರ್.
ದೇಶಿ ಕ್ರಿಕೆಟ್‌ನ ರನ್ ಮಷೀನ್ ಧೀರಜ್ ಜಾಧವ್:
ಧೀರಜ್ ಜಾಧವ್ ಓರ್ವ ನತದೃಷ್ಟ ಆಟಗಾರ ಎಂದರೇ ಅತಿಶಯೋಕ್ತಿಯಾಗಲಾರದು. ಯಾಕೆಂದರೆ, ಟೀಂ ಇಂಡಿಯಾ ಪ್ರತಿನಿಧಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದ ಜಾಧವ್ ಕ್ರಿಕೆಟ್ ವೃತ್ತಿಬದುಕು ದೇಶಿ ಕ್ರಿಕೆಟ್‌ನಲ್ಲಿ ಕೊನೆಗೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ. ಧೀರಜ್ ಜಾಧವ್ ಜತೆಯೇ ಆಡಿದ ಧೋನಿ, ಆಫ್ರಿಕಾ ಪ್ರವಾಸದ ಬಳಿಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಇನ್ನು ಗೌತಮ್ ಗಂಭೀರ್ ಕೂಡಾ ಟೀಂ ಇಂಡಿಯಾಗೆ ಆರಂಭಿಕನಾಗಿ ಎಂಟ್ರಿಕೊಟ್ಟು ತಮ್ಮ ಸ್ಥಾನ ಭದ್ರಪಡಿಸಿಕೊಂಡರು.
ಭಾರತ ಸೀನಿಯರ್ಸ್ ತಂಡದ ಎದುರಿನ ಪಂದ್ಯದಲ್ಲಿ ಗೌತಮ್ ಗಂಭೀರ್ ಶೂನ್ಯ ಸುತ್ತಿದರೇ, ಜಹೀರ್ ಖಾನ್, ಕುಂಬ್ಳೆ, ಭಜ್ಜಿ ಅವರಂತಹ ಅಂತಾರಾಷ್ಟ್ರೀಯ ಬೌಲರ್‌ಗಳ ಎದುರು ದಿಟ್ಟ ಹೋರಾಟ ತೋರಿದ್ದ ಧೀರಜ್ ಜಾಧವ್ ಆಕರ್ಷಕ ಶತಕ ಸಿಡಿಸಿದ್ದರು. ಇನ್ನು 2005ರಲ್ಲಿ ಗಾಯದ ಸಮಸ್ಯೆಯಿಂದ ಸಚಿನ್ ತೆಂಡೂಲ್ಕರ್ ಜಿಂಬಾಬ್ವೆ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹಿಂದೆ ಸರಿದರು. ಆಗ ಧೀರಜ್ ಜಾಧವ್ ಭಾರತ ತಂಡಕ್ಕೆ ಸೆಲೆಕ್ಟ್ ಆದರು. ಆದರೆ ಅಷ್ಟರಲ್ಲಾಗಲೇ ಸೆಹ್ವಾಗ್ ಹಾಗೂ ಗಂಭೀರ್ ಜೋಡಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರಿಂದ ಜಾಧವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲೇಯಿಲ್ಲ.
ಧೀರಜ್ ಜಾಧವ್ ಒಟ್ಟಾರೆ 111 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 50.85ರ ಬ್ಯಾಟಿಂಗ್ ಸರಾಸರಿಯಲ್ಲಿ 23 ಶತಕ ಹಾಗೂ 31 ಅರ್ಧಶತಕ ಸಹಿತ 7,679 ರನ್ ಸಿಡಿಸಿದ್ದರು. ಇನ್ನು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಐದು ಶತಕ ಸಹಿತ 2,075 ರನ್ ಬಾರಿಸಿದ್ದರು. ಅಂತಿಮವಾಗಿ ಧೀರಜ್ ಜಾಧವ್ 2015-16ರ ರಣಜಿ ಟೂರ್ನಿ ಬಳಿಕ ಕೊನೆಗೂ ಭಾರತ ತಂಡವನ್ನು ಪ್ರತಿನಿಧಿಸದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.


