ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ನಾಯಕ ಶುಭಮನ್ ಗಿಲ್ ಅವರ ಅನುಭವದ ಕೊರತೆಯಿಂದಾಗಿ ಭಾರತ ಗೆಲ್ಲಬಹುದಾದ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಗಿಲ್ ಅವರ ತಂತ್ರಗಳು ಮತ್ತು ನಿರ್ಧಾರಗಳನ್ನು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಟೀಕಿಸಿದ್ದು, ಈ ಡ್ರಾದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ.

ಹೊಸದಿಲ್ಲಿ: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾಯಕನಾಗಿ ಪರದಾಡುತ್ತಿದ್ದರು ಎಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತಾಡಿದ ಕೈಫ್, ಗಿಲ್ ಅವರ ಅನುಭವದ ಕೊರತೆ ಹಾಗೂ ತಂಡದಲ್ಲಿ ಸಲಹೆ ನೀಡುವಂತಹ ಹಿರಿಯ ಆಟಗಾರರಿಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 503/9 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡವನ್ನು 290 ರನ್‌ಗಳಿಗೆ ಆಲೌಟ್ ಮಾಡಿತ್ತು. ಹೀಗಾಗಿ ಲಂಕಾ ತಂಡ ಫಾಲೋ-ಆನ್‌ಗೆ ಸಿಲುಕಿದಾಗ ಭಾರತ ಸುಲಭವಾಗಿ ಗೆಲ್ಲುತ್ತೆ ಅಂದ್ಕೊಂಡಿದ್ದರು. ಆದರೆ, ಸೋನಾಲ್ ದಿನುಷಾ ಅವರ ಅದ್ಭುತ ಆಟದ ಮುಂದೆ ಭಾರತದ ಬೌಲರ್‌ಗಳು ಏನು ಮಾಡಲಾಗಲಿಲ್ಲ. ಎರಡು ದಿನಗಳಲ್ಲಿ ಎರಡು ಶತಕ ಸಿಡಿಸಿದ ದಿನುಷಾ, ಶ್ರೀಲಂಕಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 429/9ಕ್ಕೆ ಡಿಕ್ಲೇರ್ ಮಾಡಲು ಕಾರಣರಾದರು.

ಲಂಕಾದ ಸೋನಾಲ್ ದಿನುಷಾಗೆ ಸ್ಟ್ರೈಕ್ ತಪ್ಪಿಸಲು ವೈಡ್ ಬಾಲ್!

ಲಂಕಾದ ಸೋನಾಲ್ ದಿನುಷಾ ಅವರನ್ನು ಔಟ್ ಮಾಡಲು ಭಾರತ ತಂಡ ಪ್ರಯತ್ನಿಸಲೇ ಇಲ್ಲ. ಬದಲಾಗಿ, ದಿನುಷಾ ಬ್ಯಾಟಿಂಗ್ ಮಾಡುವಾಗ ಓವರ್‌ನ ಕೊನೆಯ ಎಸೆತಗಳಲ್ಲಿ ಉದ್ದೇಶಪೂರ್ವಕವಾಗಿ ವೈಡ್‌ಗಳನ್ನು ಎಸೆದು, ಅವರಿಗೆ ಸ್ಟ್ರೈಕ್ ಸಿಗದಂತೆ ನಾಯಕ ಶುಭಮನ್ ಗಿಲ್ ತಂತ್ರ ಹೆಣೆದಿದ್ದರು. "ಭಾರತ ತಂಡ ಇಷ್ಟೊಂದು ಅಸಹಾಯಕ ಸ್ಥಿತಿಗೆ ತಲುಪಿದ್ದು ನನಗೆ ನೆನಪೇ ಇಲ್ಲ," ಎಂದು ಕೈಫ್ ವಿವರಿಸಿದ್ದಾರೆ.

"ತಂಡದಲ್ಲಿ ಕೆಎಲ್ ರಾಹುಲ್ (ಉಪನಾಯಕ), ರಿಷಭ್ ಪಂತ್, 90 ಟೆಸ್ಟ್ ಆಡಿದ ರವೀಂದ್ರ ಜಡೇಜಾ ಅವರಂತಹ ಆಟಗಾರರಿದ್ದರು. ಗಿಲ್ ಇವರ ಜೊತೆ ಚರ್ಚಿಸಬಹುದಿತ್ತು. ಆದರೆ ಗಿಲ್ ನಾಯಕನಾಗಿ ಬೆಳೆಯಲು ವಿಫಲರಾಗಿದ್ದು ದುರದೃಷ್ಟಕರ. ಗಿಲ್ ಸುತ್ತ ನಾಯಕತ್ವದ ಗುಣಗಳಿರುವ ಆಟಗಾರರು ಹೆಚ್ಚಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ," ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಶುಭಮನ್ ಗಿಲ್ ರಣಜಿ ಟ್ರೋಫಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ನಾಯಕನಾಗಿದ್ದರು. ಅವರಿಗೆ ನಾಲ್ಕು ದಿನಗಳ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ತೀರಾ ಕಡಿಮೆ. ಟೆಸ್ಟ್‌ನಲ್ಲಿ 11 ಪಂದ್ಯಗಳಿಗೆ ನಾಯಕನಾಗಿರುವ ಗಿಲ್, 6 ಗೆಲುವು, 3 ಸೋಲು ಹಾಗೂ 2 ಡ್ರಾಗಳನ್ನು ಕಂಡಿದ್ದಾರೆ.

2 ಪಂದ್ಯದಲ್ಲಿ ದಿನುಶಾ 3 ಸೆಂಚುರಿ, 420 ರನ್‌

25 ವರ್ಷದ ಯುವ ಬ್ಯಾಟರ್‌ ಸೋನಲ್‌ ದಿನುಶಾ ಈ ಸರಣಿಯ 2 ಪಂದ್ಯಗಳಲ್ಲಿ ಒಟ್ಟು 420 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 3 ಶತಕ, 1 ಅರ್ಧಶತಕ ಒಳಗೊಂಡಿವೆ. ಮೊದಲ ಪಂದ್ಯದಲ್ಲಿ 100 ಹಾಗೂ 84 ರನ್‌ ಗಳಿಸಿದ್ದ ದಿನುಶಾ, 2ನೇ ಪಂದ್ಯದಲ್ಲಿ 103 ಹಾಗೂ ಔಟಾಗದೆ 133 ರನ್‌ ಗಳಿಸಿದ್ದಾರೆ. ಒಟ್ಟಾರೆ ಈವರೆಗೆ ಅವರು ಆಡಿರುವ 5 ಟೆಸ್ಟ್‌ಗಳಲ್ಲಿ 603 ರನ್‌ ಕಲೆ ಹಾಕಿದ್ದಾರೆ. ಇದು ಮೊದಲ 5 ಟೆಸ್ಟ್‌ನಲ್ಲಿ ಲಂಕಾ ಪರ 2ನೇ ಗರಿಷ್ಠ. ಕಮಿಂಡು ಮೆಂಡಿಸ್‌ ತಮ್ಮ ಮೊದಲ 5 ಟೆಸ್ಟ್‌ನಲ್ಲಿ 631 ರನ್‌ ಗಳಿಸಿದ್ದರು.

ಗೆಲುವನ್ನು ಕೈಚೆಲ್ಲಿದ ಭಾರತ: ವಿಶ್ವ ಟೆಸ್ಟ್‌ ಅಂಕದಲ್ಲಿ ಹಿನ್ನಡೆ

ಕೊಲಂಬೊ: ಲಂಕಾ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟ ಭಾರತ ತಂಡಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಹಿನ್ನಡೆ ಉಂಟಾಗಿದೆ.

ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆದು ಫೈನಲ್‌ಗೇರಲು ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿತ್ತು. ಆದರೆ ಡ್ರಾ ಮಾಡಿಕೊಂಡ ಭಾರತ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ತಂಡ ಆಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, ಶೇ.51.52 ಗೆಲುವಿನ ದಾಖಲೆ ಹೊಂದಿದೆ. ತಂಡಕ್ಕೆ ಇನ್ನು ನ್ಯೂಜಿಲೆಂಡ್‌ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳಿವೆ. ಅದರಲ್ಲಿ ಕನಿಷ್ಠ 6 ಪಂದ್ಯಗಳಲ್ಲಿ ಭಾರತ ಗೆದ್ದರೆ ಮಾತ್ರ ಡಬ್ಲ್ಯುಟಿಸಿ ಫೈನಲ್‌ಗೇರಬಹುದು.

ಇನ್ನು, ಲಂಕಾ ತಂಡ ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, ಶೇ.33.33 ಗೆಲುವಿನ ದಾಖಲೆಯೊಂದಿಗೆ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಬಾಂಗ್ಲಾದೇಶ ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿವೆ.