ಟೀಂ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಘೋಷಿಸಿದ ಜಯ್ ಶಾ!
ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಕೋಚ್ ಯಾರಾಗುತ್ತಾರೆ ಅನ್ನೋ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಮುಂಬೈ(ಜು.09) ರಾಹುಲ್ ದ್ರಾವಿಡ್ ಮಾರ್ಗದರ್ಶನದ ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ಇದೀಗ ಈ ಲೆಗಸಿಯನ್ನು ಮುಂದುವರಿಸಿ ಮತ್ತಷ್ಟು ಟ್ರೋಫಿ ಕೈವಶ ಮಾಡಲು ಟೀಂ ಇಂಡಿಯಾ ನೂತನ ಕೋಚ್ ಜವಾಬ್ದಾರಿ ಯಾರು ವಹಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಟೀಂ ಇಂಡಿಯಾ ಪ್ರಧಾನ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಣೆ ಮಾಡಿದ್ದಾರೆ.
ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಸ್ವಾಗತಿಸಲು ಅಪಾರ ಸಂತೋಷವಾಗುತ್ತಿದೆ. ಆಧುನಿಕ ಕ್ರಿಕೆಟ್ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಗೌತಮ್ ಗಂಭೀರ್ ಈ ಬದಲಾವಣೆಯನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ತಮ್ಮ ಕ್ರಿಕೆಟ್ ಕರಿಯರ್‌ನಲ್ಲಿ ಗೌತಮ್ ಗಂಭೀರ್ ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಗೌತಮ್ ಗಂಭೀರ್, ಮುಖ್ಯ ಕೋಚ್ ಆಗಿ ಟೀಂ ಇಂಡಿಯಾವನ್ನು ಮುನ್ನಡೆಸಲು ಗೌತಮ್ ಗಂಭೀರ್ ಸೂಕ್ತ ವ್ಯಕ್ತಿ ಅನ್ನೋ ವಿಶ್ವಾಸ ನನಗಿದೆ. ಟೀಂ ಇಂಡಿಯಾ ಮುಂದಿನ ಪಯಣದ ಕುರಿತು ಗಂಭೀರ್‌ಗೆ ಇರುವ ದೂರದೃಷ್ಟಿ, ಅವರ ಅನುಭವ ತಂಡಕ್ಕೆ ನೆರವಾಗಲಿದೆ. ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಗೌತಮ್ ಗಂಭೀರ್‌ಗೆ ಬಿಸಿಸಿಐ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ರಾಹುಲ್ ದ್ರಾವಿಡ್ ಕೋಚ್ ಅವಧಿ ಟಿ20 ವಿಶ್ವಕಪ್ ಟೂರ್ನಿಯೊಂದಿಗೆ ಅಂತ್ಯಗೊಂಡಿತು. ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ನೇಮಕ ಮಾಡಿತ್ತು. ಲಕ್ಷ್ಮಣ್ ನೇತೃತ್ವದ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ದ ಪಂದ್ಯ ಆಡುತ್ತಿದೆ. ಇದೀಗ ಬಿಸಿಸಿಐ ಹಲವು ಸುತ್ತಿನ ಸಂದರ್ಶನದ ಬಳಿಕ ಗೌತಮ್ ಗಂಭೀರ್‌ಗೆ ನೂತನ ಕೋಚ್ ಪಟ್ಟ ಕಟ್ಟಿದೆ.
2024ರ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಕೋಲ್ಕತಾ ನೈಟ್ ರೈಡರ್ಸ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಮೂಲಕ ಕೆಕೆಆರ್ ಸರಿಸುಮಾರು 10 ವರ್ಷಗಳ ಬಳಿಕ ಟ್ರೋಫಿ ಗೆದ್ದುಕೊಂಡಿತ್ತು. ಗೌತಮ್ ಗಂಭೀರ್ ಕೋಚಿಂಗ್‌ನಿಂದ ಕೆಕೆಆರ್ ಚಾಂಪಿಯನ್ ಆಗಿ ಕುಣಿದಾಟಿತ್ತು. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಕೋಚ್ ಆಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿತ್ತು. ಟಿ20 ವಿಶ್ವಕಪ್ ಟೂರ್ನಿ ನಡುವೆ ಬಿಸಿಸಿಐ ಕೋಚ್ ಆಯ್ಕೆಗೆ ಹುಡುಕಾಟ ತೀವ್ರಗೊಳಿಸಿತ್ತು. ಹಲವು ಅರ್ಜಿಗಳಲ್ಲಿ ಕೆಲವರನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಿತ್ತು. ಆದರೆ ಗಂಭೀರ್ ಮುಂದಿನ ಕೋಚ್ ಅನ್ನೋ ಮಾತುಗಳು ಎಲ್ಲೆಡೆ ಹರಿದಾಡಿತ್ತು. ಇದೀಗ ಕೋಚ್ ಆಯ್ಕೆ ಅಂತಿಮಗೊಂಡಿದ್ದು, ಗೌತಮ್ ಗಂಭೀರ್ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಸಂಭ್ರಮಾಚರಣೆಗೆ ಬನ್ನಿ: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಮಾಲ್ಡೀವ್ಸ್ ಆಹ್ವಾನ!