ಹೇರ್ಡೈನಿಂದ ಹೆಚ್ಚುವ ಕ್ಯಾನ್ಸರ್! ಕೂದಲು ಶಾಶ್ವತ ಕಪ್ಪಾಗಿಸಲು ಯೋಗ ಗುರು ಸಿಂಪಲ್ ಟಿಪ್ಸ್ ಕೇಳಿ...
ರಾಸಾಯನಿಕಗಳನ್ನು ಬಳಸುವ ಹೇರ್ಡೈಗಳು ಪ್ರಾಣಕ್ಕೆ ಅಪಾಯವಾಗಿದ್ದು, ಮನೆಯಲ್ಲಿಯೇ ಶಾಶ್ವತವಾಗಿ ಕೂದಲನ್ನು ಕಪ್ಪಾಗಿಸುವ ಬಗೆ ತಿಳಿಸಿದ್ದಾರೆ ಯೋಗ ಗುರು. ಡಿಟೇಲ್ಸ್ ಇಲ್ಲಿದೆ...
ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ... ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 25-30 ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ. ಆದರೆ ನಿಮಗೆ ಗೊತ್ತೆ? ಹೇರ್ಡೈ ಅತಿಯಾದ ಬಳಕೆಯಿಂದ ಪ್ರಾಣಕ್ಕೂ ಅಪಾಯ ಆಗಬಹುದು ಎಂದು ಇದಾಗಲೇ ಹಲವು ಅಧ್ಯಯನಗಳಿಂದ ಸಾಬೀತಾಗಿವೆ.
ಹೇರ್ ಕಲರ್ನಿಂದ ಕ್ಯಾನ್ಸರ್ ಬರುತ್ತಿವೆ. ಬ್ಲಡ್ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ. ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್ಗಳು ಟಿಪ್ಸ್ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್ ಆಗಿರುತ್ತದೆ. ಒಂದಿಷ್ಟು ಲೈಕ್ಸ್, ವ್ಯೂಸ್ಗೋಸ್ಕರ್ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.
ಉರಿ ಮೂತ್ರಕ್ಕೆ ಐದೇ ನಿಮಿಷಗಳಲ್ಲಿ ಪರಿಹಾರ: ಸದ್ಗುರು ಜಗ್ಗಿ ವಾಸುದೇವ ಟಿಪ್ಸ್ ಕೇಳಿ...
ಆದರೆ ಇದೀಗ ಯೋಗಗುರು ವೈದ್ಯ ಶ್ರೀ ಚನ್ನಬಸವಣ್ಣ ಅವರು ವಿವಿಧ ಮಂದಿಯ ಮೇಲೆ ಪ್ರಯೋಗ ಮಾಡಿ, ಪರ್ಮನೆಂಟ್ ಆಗಿ ತಲೆಗೂದಲನ್ನು ಕಪ್ಪಗಾಗಿಸುರುವುದಾಗಿ ಹೇಳಿದ್ದು ಅದರ ಟಿಪ್ಸ್ ಕೊಟ್ಟಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ನಲ್ಲಿ ಇದರ ಬಗ್ಗೆ ತಿಳಿಸಲಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ತಾವು ಹೇಳಿದಂತೆಯೇ ಮಾಡಿದರೆ ಖಂಡಿತವಾಗಿಯೂ ಫಲಿತಾಂಶ ಸಿಗುತ್ತದೆ ಎನ್ನುವುದು ಅವರ ಮಾತು. ಯೋಗಗುರು ಹೇಳಿದ್ದು ಇಷ್ಟು: ಸೀಬೆ ಗಿಡದ ಎಲೆಯನ್ನು ತೆಗೆದು ಸುಮಾರು 50 ಗ್ರಾಮ್ನಷ್ಟು ಪೇಸ್ಟ್ ತಯಾರಿಸಿಕೊಳ್ಳಬೇಕು. ಅಷ್ಟೇ ಸಮ ಪ್ರಮಾಣದಲ್ಲಿ ಮೆಹಂದಿ ಪೌಡರ್ ಸೇರಿಸಿಕೊಳ್ಳಬೇಕು. 40-50 ಎಂಎಲ್ನಷ್ಟು ಲಿಂಬೆಹಣ್ಣಿನ ರಸ ಸೇರಿಸಬೇಕು. ಕಬ್ಬಿಣದ ಪಾತ್ರೆಯಲ್ಲಿಯೇ ಹಾಕಿ ಮುಚ್ಚಿಡಬೇಕು. 2-3 ದಿನ ಹಾಗೆಯೇ ಇಡಬೇಕು. ನಡುನಡುವೆ ನೋಡುತ್ತಾ ತಿರುಗಿಸುತ್ತಾ ಇರಬೇಕು. ಇಲ್ಲದಿದ್ದರೆ ಬೂಸ್ಟ್ ಬರುತ್ತದೆ. ಹಾಗೆಯೇ ಮತ್ತೆ ಮುಚ್ಚಿಟ್ಟು ಮತ್ತೆ 2-3 ದಿನಕ್ಕೊಮ್ಮೆ ನೋಡಿ ಮಿಶ್ರಣವನ್ನು ತಿರುಗಿಸುತ್ತಾ ಇರಬೇಕು. 9ನೇ ದಿನದವರೆಗೂ ಹೀಗೆಯೇ ಮಾಡಬೇಕು. 9ನೇ ದಿನ ಸಿಕ್ಕಾಪಟ್ಟೆ ಕಪ್ಪು ಆಗಿರುತ್ತದೆ. ಅದರ ಬಣ್ಣ ಏನಾದ್ರೂ ಬಟ್ಟೆಯ ಮೇಲೆ ಬಿದ್ದರೆ ಕಲೆ ಹೋಗುವುದಿಲ್ಲ, ಅಷ್ಟು ಕಪ್ಪಾಗಿರುತ್ತದೆ.
ಅದನ್ನು ತಲೆಗೆ ಅಪ್ಲೈ ಮಾಡಬೇಕು. ಆದರೆ ಅದಕ್ಕೂ ಒಂದು ವಿಧಾನವಿದೆ. ನೀವು ಬಳಸಿರುವ ಕೆಮಿಕಲ್ ಹೇರ್ಡೈ ಸಂಪೂರ್ಣವಾಗಿ ಕೂದಲಿನಿಂದ ಹೋಗಿ ಕೂದಲು ಬಿಳಿಯಾಗಿರಬೇಕು. ಸ್ವಲ್ಪವೇ ಕೆಮಿಕಲ್ ಇದ್ದರೂ ಈ ಲೇಪನ ವರ್ಕ್ ಆಗುವುದಿಲ್ಲ. ಆದ್ದರಿಂದ ಸಂಪೂರ್ಣವಾಗಿ ಕೆಮಿಕಲ್ ಹೋಗಬೇಕು. ರಾತ್ರಿ ತಲೆಗೆ ಬೇರಿನಿಂದ ತುದಿಯವರೆಗೂ ಸರಿಯಾಗಿ ಲೇಪಿಸಿ ಬೆಳಿಗ್ಗೆ ಎದ್ದು ಕೊಬ್ಬರಿ ಎಣ್ಣೆ ಹಚ್ಚಿ ಉಗುರು ಬೆಚ್ಚಗಿನ ನೀರಿನಿಂದ ತಲೆ ತೊಳೆಯಬೇಕು. ಮಧ್ಯಾಹ್ನದ ಹೊತ್ತು ಅಂಟವಾಳದ ಕಾಯಿ ಅಥವಾ ಮುಲ್ತಾನಿ ಮಿಟ್ಟಿಯಿಂದ ತಲೆ ತೊಳೆದುಕೊಳ್ಳಬೇಕು. ಮೂರ್ನಾಲ್ಕು ದಿನ ಬಿಟ್ಟು ಮತ್ತೆ ತಲೆ ತೊಳೆದುಕೊಂಡರೆ, ಶಾಶ್ವತವಾಗಿ ಕೂದಲು ಕಪ್ಪಾಗುತ್ತದೆ. ಅದು ಹೋಗುವುದೇ ಇಲ್ಲ ಎಂದಿದ್ದಾರೆ.