Asianet Suvarna News Asianet Suvarna News

ಒಲಿಸುವ ಕಲೆಗಾರ ರಿಷಿ ಕಪೂರ್‌ ಬಗ್ಗೆ ಜಯಂತ ಕಾಯ್ಕಿಣಿ ಮಾತು!

ಇವತ್ತು ಲಾಕ್‌ಡೌನ್‌ ಸಮಯದಲ್ಲಿ ನಾವೆಲ್ಲ ನಮ್ಮನಮ್ಮ ಕಮರೆಗಳಲ್ಲಿ ಬಂಧಿಗಳಾಗಿದ್ದೇವೆ. ಇಂಥಾ ಟೈಮ್‌ನಲ್ಲಿ ರಿಷಿ ಕಪೂರ್‌ ಚಾವಿ ಇಲ್ಲದೆಯೂ ಕೂಡ ಮುಕ್ತವಾಗಿ, ಲಹರಿಯಾಗಿ, ಅಲೆಯಾಗಿ ಸುಂದರ ನೆನಪಾಗಿ ಮನೆಯಿಂದ ಆಚೆ ಹೋಗಿದ್ದಾರೆ. ಅವರ ನೆನಪನ್ನು ಸಂಭ್ರಮಿಸೋಣ

Rememberence for vetern late actor Rishi kapoor by Jayant Kaikini
Author
Bangalore, First Published May 1, 2020, 8:48 AM IST

- ಜಯಂತ ಕಾಯ್ಕಿಣಿ

ರಿಷಿ ಕಪೂರ್‌ ಅಂದ ತಕ್ಷಣ ನನ್ನ ವಯಸ್ಸಿನವರಿಗೆ ಹಾಗೂ ನನ್ನ ಜಾಯಮಾನದವರಿಗೆ ಕಣ್ಣೆದುರು ಬರುವುದು ಒಂದು ಹದಿಹರೆಯದ ಜೀವನ್ಮುಖಿ ಸ್ಪಿರಿಟ್‌. ನನಗಿಂತ ಬಹುಶಃ ಒಂದೆರಡು ವರ್ಷ ದೊಡ್ಡವನಾತ. ಅವನ ‘ಬಾಬಿ’ ಸಿನಿಮಾ ಬಂದದ್ದು 1973ರಲ್ಲಿ. ಬಿಎಸ್‌ಸಿ ಪರೀಕ್ಷೆ ಮುಗಿಸಿದ ಖುಷಿಯನ್ನು ಗೆಳೆಯರೆಲ್ಲ ಸೇರಿ ‘ಬಾಬಿ’ ಜೊತೆಗೆ ಸೆಲೆಬ್ರೇಟ್‌ ಮಾಡಿದ್ದೆವು. ಹೀಗೆ ನಾವು ಟೀನೇಜ್‌ ದಾಟಿ ಪ್ರೌಢಾವಸ್ಥೆಗೆ ಬಂದ ಸಮಯ ಹಾಗೂ ರಿಷಿಯ ಬಾಬಿ ಸಿನಿಮಾ ಬಂದ ಸಮಯ ಒಂದೇ ಆದ ಕಾರಣ ರಿಷಿ ಕಪೂರ್‌ ಅಂದಾಕ್ಷಣ ಟೀನೇಜ್‌ ಹುರುಪು ಮನಸ್ಸನ್ನಾವರಿಸುತ್ತದೆ. ಆಮೇಲೆ ಅದೇ ರಿಷಿ ಪಾತ್ರಗಳ ಬ್ರ್ಯಾಂಡ್‌ ಕೂಡ ಆಯ್ತು.

₹ 27 ಲಕ್ಷದ ಶೂ ಕಂಡು ಹೌಹಾರಿದ ರಿಷಿ ಕಪೂರ್‌

ಮೂರು ಹಂತಗಳಲ್ಲಿ ರಿಷಿ ಅವರ ಚಿತ್ರಯಾತ್ರೆಯನ್ನು ನೋಡಬಹುದು. ಮೊದಲ ಹಂತದ ಚಿತ್ರಗಳೆಲ್ಲವೂ ಈ ಟೀನೇಜ್‌ ಸ್ಪಿರಿಟ್‌ನ ಹುರುಪಿನ ಹುಡುಗ ಹುಡುಗಿಯರ ಸಿನಿಮಾಗಳು. ಹಿನ್ನೆಲೆ ನೋಡಿದರೆ ಇವರ ತಂದೆ ರಾಜ್‌ ಕಪೂರ್‌ ಭಗ್ನ ಪ್ರೇಮಿಯ ದೊಡ್ಡ ಮಾಡೆಲ್‌. ರಾಜ್‌ ಕಪೂರ್‌ ಅವರ ‘ಶ್ರೀ420’, ‘ಆವಾರಾ’, ‘ಮೇರಾ ನಾಮ್‌ ಜೋಕರ್‌’ ಹೀಗೆ ಯಾವ ಚಿತ್ರ ತೆಗೆದುಕೊಂಡರೂ ನನಗಂತೂ ಅವರು ವಯಸ್ಸಿಗೆ ಮೀರಿದ ಪ್ರೌಢರಂತೆ ಕಾಣುತ್ತಿದ್ದರು. ವಯಸ್ಸಿಗೆ ಮೀರಿದ ನೋವು, ಆತ್ಮ ಮರುಕದ ಭಗ್ನಪ್ರೇಮಿಯ ಪಾತ್ರಗಳೆ ಜಾಸ್ತಿ. ಹಿಂದಿಯಲ್ಲಿ ‘ಗಮ್‌’ ಅಂದರೆ ನೋವು. ರಾಜ್‌ಕಪೂರ್‌ ಇದನ್ನು ಚ್ಯುಯಿಂಗ್‌ ಗಮ್‌ ಮಾಡಿದ್ರು ಅಂತ ನನಗೆ ಅನಿಸುತ್ತಿತ್ತು. ಅದು ವಿರಹದ ನಿರಂತರ ಆಲಾಪ. ಪ್ರೇಮಿಗಳಿಗೆ ಅದೂ ಬಹಳ ಇಷ್ಟಆಗಿರುತ್ತದೆ.

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಇನ್ನಿಲ್ಲ!

ಹೀಗೆ ರಾಜ್‌ ಕಪೂರ್‌ ಅವರದು ವಿರಹದ ಯಾನವಾಗಿದ್ದರೆ, ರಿಷಿ ಕಪೂರ್‌ ಅವರದು ಮಿಲನದ ಸೆಲೆಬ್ರೇಶನ್‌. ಲವಲವಿಕೆ, ಚಡಪಡಿಕೆ, ಹುಡುಗಾಟಿಕೆ. ‘ಬಾಬಿ’, ‘ಖೇಲ್‌ ಖೇಲ್‌ ಮೆ’, ‘ರಫä ಚಕ್ಕರ್‌’ ಇತ್ಯಾದಿ ಸಿನಿಮಾಗಳಲ್ಲಿ ಅವು ದಟ್ಟವಾಗಿ ಕಾಣುತ್ತವೆ. ‘ಅಮರ್‌ ಅಕ್ಬರ್‌ ಆಂತೋನಿ’ಯಂಥಾ ಮಲ್ಟಿಸ್ಟಾರ್‌ ಸಿನಿಮಾದಲ್ಲಂತೂ ಅಮಿತಾಬ್‌, ವಿನೋದ್‌ ಖನ್ನಾ ಪ್ರೌಢ ನಾಯಕರಾದರೆ, ರಿಷಿ ಎಂದಿನ ಹುಡುಗಾಟಿಕೆಯ ಲವರ್‌ ಬಾಯ್‌. ಇಲ್ಲೂ ಟೀನೇಜ್‌ ಸ್ಪಿರಿಟ್ಟೇ ಮುಂದುವರಿಯಿತು. ‘ಲೈಲಾ ಮಜ್ನೂ’, ‘ಪ್ರೇಮ್‌ ರೋಗ್‌’ ಮೂಲಕ ಅದು ಇನ್ನೂ ಸಕ್ರಮಗೊಂಡಿತು. ಹೀಗೆ ಮೊದಲ ಹಂತದಲ್ಲಿ ರಿಷಿ ಒಬ್ಬ ಜೀವನೋಲ್ಲಾಸದ ಪ್ರೇಮಿ.

Rememberence for vetern late actor Rishi kapoor by Jayant Kaikini

ಯಾವ ನಟನೇ ಆದರೂ ಟೀನೇಜರ್‌ ಆಗಿ ಕೊನೆಯವರೆಗೂ ಇರೋದಕ್ಕಾಗಲ್ಲವಲ್ಲ. ಕಾಲ ಮುಂದೆ ಹೋದಂತೆ ದೈಹಿಕವಾಗಿ, ಮಾನಸಿಕವಾಗಿ ಒಂದು ತೇರ್ಗಡೆ ಆಗಲೇಬೇಕು. ಇಲ್ಲದೇ ಹೋದರೆ ಶಪಿತ ಗಂಧರ್ವನಂತಾಗಿ ಬಿಡಬಹುದು. ಈ ಹಂತದಲ್ಲಿ ಕೆಲವರು ತಪ್ಪು ನಿರ್ಧಾರ ತಗೊಳ್ತಾರೆ. ರಿಷಿ ಕಪೂರ್‌ ಅಂಥಾ ಒಂದು ರಾಂಗ್‌ ಡಿಸಿಷನ್‌ ತಗೊಂಡರು. ಅದಕ್ಕೆ ಒಂದು ಉದಾಹರಣೆ ಕನ್ನಡದ ನಾಗರಹಾವು ಚಿತ್ರದ ಹಿಂದಿ ವರ್ಶನ್‌ ‘ಝೆಹ್ರೀಲಾ ಇನ್‌ಸಾನ್‌’. ಇದನ್ನೂ ಪುಟ್ಟಣ್ಣ ಕಣಗಾಲ್‌ ಅವರೇ ನಿರ್ದೇಶಿಸಿದ್ದರು. ಇದರಲ್ಲಿ ರಿಷಿ ಕಪೂರ್‌ ಹೀರೋ. ಆದರೆ ಮುದ್ದು ಮುದ್ದಾಗಿರುವ, ತಾರುಣ್ಯದ ಹದಿ ಹರೆಯದ ಸೂಕ್ಷ್ಮ ಹೀರೋ ರಿಷಿಗೆ, ನಾಗರಹಾವು ಸಿನಿಮಾದಲ್ಲಿ ವಿಷ್ಣುವರ್ಧನ್‌ ಮಾಡಿದ ಖಡಕ್‌ ಬಂಡಾಯಗಾರನ ಪಾತ್ರ ಹೊಂದಿಕೆಯೇ ಆಗುತ್ತಿರಲಿಲ್ಲ. ಆ ರೋಷ, ಆವೇಶದ ಡೈಲಾಗ್‌ಗಳನ್ನು ರಿಷಿ ಕಪೂರ್‌ ಹೇಳಿದರೆ ಸಣ್ಣ ಮಕ್ಕಳು ಚಾಕ್ಲೇಟಿಗಾಗಿ ಕೂಗಿದ ಹಾಗನಿಸುತ್ತಿತ್ತು. ಹೀಗಾಗಿ ಹಿಂದಿಯಲ್ಲಿ ಈ ಸಿನಿಮಾ ಓಡಲೇ ಇಲ್ಲ. ಇಂಥಾ ಒಂದೆರಡು ತಪ್ಪು ನಿರ್ಧಾರದ ಬಳಿಕ ರಿಷಿ ಮತ್ತೆ ಚೇತರಿಸಿಕೊಂಡ. ಮುಂದಿನ ಹಂತದಲ್ಲಿ ತನ್ನ ಹೆಗಲ ಮೇಲೆ ತಾನೇ ಹೊತ್ತುಕೊಂಡು ದೊಡ್ಡ ದೊಡ್ಡ ಹಿಟ್‌ ಸಿನಿಮಾಗಳನ್ನು ಕೊಟ್ಟ. ಅದರಲ್ಲಿ ನಾಸಿರ್‌ ಹುಸೇನ್‌ರ ‘ಹಮ್‌ ಕಿಸೀಸೆ ಕಮ್‌ ನಹೀ’ ಬಹಳ ಮಹತ್ವದ್ದು. ಇದರಲ್ಲಿ ರಿಷಿ ಪ್ರೌಢಾವಸ್ಥೆಯ, ಹಾಡುವ ಡ್ಯಾನ್ಸಿಂಗ್‌ ಹೀರೋ. ಆಮೇಲೆ ಸುಭಾಷ್‌ ಗಾಯ್‌ ಅವರ ‘ಕಜ್‌ರ್‍’, ‘ಸಾಗರ್‌’, ‘ಚಾಂದನಿ’ ‘ದಾಮಿನಿ’, ‘ದೂಸ್ರಾ ಆದ್ಮೀ’ ಯಂಥಾ ಸಿನಿಮಾಗಳು ಬಂದವು. ಇವುಗಳೆಲ್ಲ ಖಚಿತ ನಿಲುವಿನ ಭಾವನಾತ್ಮಕ ಸಂಘರ್ಷಗಳಿರುವ ಪಾತ್ರಗಳು.

ಖ್ಯಾತ ನಟ ರಿಷಿ ಕಪೂರ್‌ ಬಗ್ಗೆ ಯಾರಿಗೂ ತಿಳಿಯದ ಬ್ಯಾಕ್‌ಗ್ರೌಂಡ್ ಇದು!

‘ದೂಸ್ರಾ ಆದ್ಮಿ’ ತ್ರಿಕೋನ ಪ್ರೇಮ ಕತೆ. ಆ ಕಾಲಕ್ಕೆ ವಿವಾಹಿತ ಮಹಿಳೆಯೊಬ್ಬಳು ಯುವಕನೊಂದಿಗೆ ಪ್ರೀತಿಯಲ್ಲಿ ಬೀಳುವ ಕತೆ. ಅದರಲ್ಲಿ ರಿಷಿ ಆ ಯುವಕ. ಆ ಕಾಲದ ಮಹತ್ವದ ಚಿತ್ರವಿದು. ಶೋಲೆ ನಿರ್ದೇಶಕ ರಮೇಶ್‌ ಸಿಪ್ಪಿ ಅವರ ‘ಸಾಗರ್‌’ ಚಿತ್ರದಲ್ಲಿ ಕಮಲಹಾಸನ್‌ ಮತ್ತು ರಿಷಿ ಕಪೂರ್‌, ಡಿಂಪಲ್‌ ಕಪಾಡಿಯಾ ಅವರದು ತ್ರಿಕೋನ ಪ್ರೇಮ ಕತೆ.

ಈಗಲೂ ರಿಷಿ ಕಪೂರ್‌ ಅಂದಾಗ ಅವರ ಅಭಿಮಾನಿಗಳಿಗೆ ಮೊದಲು ನೆನಪಾಗೋದು ಅವರ ಹಾಡು ಮತ್ತು ಡ್ಯಾನ್ಸ್‌. ಅವರ ಯಾವುದೇ ಹಾಡುಗಳಲ್ಲಿ ಅವರದೇ ಒಂದು ಆಂಗಿಕ ವಿನ್ಯಾಸ ಇರುತ್ತಿತ್ತು. ಆಗ ಈಗಿನಂತೆ ಕೊರಿಯೋಗ್ರಾಫರ್‌ಗಳಿರಲಿಲ್ಲ. ನೃತ್ಯವೇ ಪ್ರಧಾನವಾಗಿರುವ ಚಿತ್ರಗಳಿಗೆ ಮಾತ್ರ ಕೊರಿಯೋಗ್ರಾಫರ್‌ಗಳಿರುತ್ತಿದ್ದರು. ಹೀಗಾಗಿ ಆ ಕಾಲದ ನಟರಾದ ದೇವಾನಂದ್‌, ಶಮ್ಮಿ ಕಪೂರ್‌, ರಾಜೇಶ್‌ ಖನ್ನಾ ಅವರಿಗೆಲ್ಲ ಅವರದೇ ಆದ ಒಂದು ಡ್ಯಾನ್ಸಿಂಗ್‌ ಸ್ಟೈಲ್‌ ರೂಪಿಸಿಕೊಳ್ಳೋದು ಸಾಧ್ಯವಾಯ್ತು. ಕೊರಿಯೋಗ್ರಾಫರ್‌ ಬಂದು ಡ್ಯಾನ್ಸ್‌ ಹೇಳಿಕೊಡುತ್ತಿದ್ದರೆ ಬಹುಶಃ ಈ ಅನನ್ಯತೆ ಇರುತ್ತಿರಲಿಲ್ಲ. ರಿಷಿ ಕಪೂರ್‌ ಆಂಗಿಕವೂ ಅಷ್ಟೇ ಯುನಿಕ್‌ ಆದದ್ದು. ‘ಜಮಾನೆ ಕೋ ದಿಖಾನಾ ಹೈ’ ದಲ್ಲಿ ‘ಹಮ್‌ ಕೊ ತುಮ್‌ ಸೆ ಪ್ಯಾರಾ ಕೌನ್‌’ ಅನ್ನುವ ಒಂದು ಹಾಡಿದೆ. ಅದನ್ನು ಓಡುವ ರೈಲಿನಲ್ಲಿ ಚಿತ್ರೀಕರಿಸಲಾಗಿದೆ. ಊಟಿಯಲ್ಲಿ ಟ್ರೈನ್‌ ಬೋಗಿಯ ಮೇಲೆ ನಿಂತು, ಮತ್ತೊಂದು ಕಡೆ ಕೂತ ತನ್ನ ಮನದನ್ನೆಯನ್ನು ಉದ್ದೇಶಿಸಿ ಹಾಡೋದು. ಸೀಮಿತ ತಾಂತ್ರಿಕ ಸೌಲಭ್ಯದಲ್ಲೇ ಸಾಧಿಸಿರುವ ಈ ಹಾಡಿನ ಚಿತ್ರೀಕರಣ ಈಗ ನೋಡಿದರೂ ಮೈಮರೆಸುವಂತಿದೆ. ‘ದೀವಾನಾ’ದ ‘ಸೋಚೇಂಗೆ ತುಮ್ಹೇ ಪ್ಯಾರ್‌ ಕರೆ ಕೆ ನಹೀ’ ನನಗೆ ಬಹಳ ಇಷ್ಟವಾದ ಹಾಡು. ನಿನ್ನನ್ನು ಪ್ರೀತಿ ಮಾಡಲೋ ಬೇಡವೋ ಅಂತ ನಾನು ವಿಚಾರದಲ್ಲಿದ್ದೇನೆ... ಅಂತ ಆಕರ್ಷಕವಾಗಿ ಅರ್ಜಿ ಎಸೆಯುವ ಈ ಹಾಡು ನಮಗೆಲ್ಲ ಹುಚ್ಚು ಹಿಡಿಸಿತ್ತು. ಆಲಿಸುವಾಗ ಕೂತಲ್ಲೇ ನಾವು ಕಾಲು ಕುಣಿಸುವಂತೆ ಮಾಡುವ ಅದರ ಬೀಟ್ಸ್‌, ಲಯ, ಜೊತೆಗೆ ರಿಷಿ ಕಪೂರ್‌ ಅದನ್ನು ಅಭಿನಯಿಸಿದಂಥಾ ರೀತಿ ಸಮ್ಮೋಹಕ.

ರೋಮ್ಯಾಂಟಿಕ್‌ ಮ್ಯಾನ್‌ ರಿಷಿ ಕಪೂರ್‌ ಪಡೆದ ಪ್ರಶಸ್ತಿಗಳಿವು...

ರಿಷಿ ಕಪೂರ್‌ ಇದ್ದಾರೆ ಅಂದಾಗ ಆರ್‌ಡಿ ಬರ್ಮನ್‌ನಂಥಾ ಸಂಗೀತ ನಿರ್ದೇಶಕರಿಗೂ ಹೊಸ ಪ್ರಯೋಗಶೀಲತೆ ಹೊಳೆಯುತ್ತಿತ್ತು. ಇವರು ಒಂದೇ ವೇಳೆಗೆ ಗುಲ್ಜಾರ್‌ಗಾಗಿಯೂ , ರಿಷಿ ಅಭಿನಯದ ನಾಸಿರ್‌ ಹುಸೈನ್‌ ಚಿತ್ರಕ್ಕಾಗಿಯೂ ಸಂಗೀತ ನೀಡುತ್ತಿದ್ದರು. ಎರಡರ ಒಕ್ಕಣಿಕೆ ತೀರಾ ಬೇರೆಯಾಗಿರುತ್ತಿತ್ತು. ಗುಲ್ಜಾರ್‌ಗೆ ಮಾಡಿದಾಗ ಗಜಲ್‌ ಶೈಲಿಯ ಹಾಡುಗಳಿದ್ದರೆ, ಇವರಿಗೆ ‘ಹಮ್‌ ಕೊ ತೋ ಯಾರಾ ತೆರೀ ಯಾರೀ.. ಜಾನ್‌ ಸೆ ಪ್ಯಾರೀ’ಯಂಥಾ ಕೇಳಿದರೇ ಕುಣಿಯುವಂತೆ ಅನಿಸುವ ಥರದ ಹಾಡುಗಳನ್ನು ಮಾಡುತ್ತಿದ್ದರು. ರಿಷಿಯಂಥಾ ನಟ ಪಾತ್ರಪೋಷಣೆಯ ಜೊತೆಗೆ ಸಂಗೀತದ ಒಕ್ಕಣಿಕೆಯನ್ನೂ ಪ್ರಭಾವಿಸುತ್ತಾನೆ ಎಂಬುದಕ್ಕೆ ಇದು ಉದಾಹರಣೆ.

ಗರ್ಭಿಣಿ ಪತ್ನಿನೇ ಡಿಪ್ರೆಶನ್‌ಗೆ ಕಾರಣ; ರಿಷಿ ಕಪೂರ್‌ ನಿಜಕ್ಕೂ ಹೀಗ್ ಹೇಳಿದ್ರಾ?

ಒಂದು ರೀತಿಯ ಹಾಡುಗಾರಿಕೆ, ಅವರದ್ದೇ ಆದಂಥಾ ನರ್ತನ ಮತ್ತು ಗಂಭೀರವಾದ ಭಾವನಾತ್ಮಕ ಸಂಘರ್ಷಗಳ ರಿಷಿ ಕಪೂರ್‌ನ ಚಿತ್ರಯಾನದ ಈ ಎರಡನೇ ಹಂತ ಬಹಳ ಮಹತ್ವದ್ದು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಅವರ ಮೂರನೇ ಘಟ್ಟದ ಸಿನಿಮಾಗಳು ಬಂದವು. ಆ ಘಟ್ಟದಲ್ಲಿ ವಯಸ್ಸಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಈ ಅವಧಿಯಲ್ಲಿ ಅವರು ಹೆಚ್ಚು ಚಿತ್ರಗಳಲ್ಲಿ ಮಾಡಿಲ್ಲ. ಆದರೆ ಮಾಡಿದ್ದೆಲ್ಲಾ ಜನರ ಮನಸೂರೆಗೊಳ್ಳುವ ಹಾಗೆ ಆಯಿತು. ಇವುಗಳಲ್ಲಿ ಬಹಳ ಮುಖ್ಯವಾದದ್ದು ‘ಅಗ್ನಿಪಥ್‌’ . ಹೃತಿಕ್‌ ರೋಶನ್‌ ಹೀರೋ ಆಗಿರುವ ಈ ಚಿತ್ರದಲ್ಲಿ ಇವರೊಬ್ಬ ಪಿಂಪ್‌. ಆ ಪಾತ್ರಕ್ಕೆ ಬೇಕಾದ ದಾರುಣ ನಿಷ್ಠುರತೆ, ಅಮಾನುಷತೆ, ವ್ಯವಹಾರಿಕತೆ ಇವೆಲ್ಲವನ್ನೂ ಕಣ್ಣಿನಲ್ಲೇ ಹೊಮ್ಮಿಸಿದ್ದ ಈ ಪಾತ್ರ ಪ್ರಭಾವೀ ಕಮ್‌ಬ್ಯಾಕ್‌ ಆಯ್ತು. ಟೀನೇಜ್‌ ಹೀರೋ ಆಗಿ ಬಂದಂಥಾ, ಆಮೇಲೆ ಪ್ರೌಢ ಹೀರೋ ಆಗಿ ಮೆರೆದು ಜನಮಾನಸದಲ್ಲಿ ಕೂತ ಒಬ್ಬ ವ್ಯಕ್ತಿ ಸಡನ್ನಾಗಿ ಒಂದು ಆ ಇಮೇಜನ್ನು ಮುರಿದು ಹೊಸ ಪಾತ್ರದಲ್ಲಿ ವಾಪಸ್‌ ಬಂದಿದ್ದು ಮಹತ್ವದ ತಿರುವು. ಆ ಬಳಿಕ ‘ಒನ್‌ ನಾಟ್‌ ಟು ನಾಟ್‌ ಔಟ್‌’ ನಲ್ಲಿ ಅಮಿತಾಬ್‌ ಮಗನಾಗಿ ನಟಿಸಿದ್ದರು. ‘ಕಪೂರ್‌ ಆಂಡ್‌ ಸನ್ಸ್‌’, ‘ಲವ್‌ ಆಜ್‌ ಕಲ್‌’, ‘ಫನಾ’ ಇದರಲ್ಲೆಲ್ಲಾ ಹೊಸ ರೀತಿಯ ,ತಂದೆ, ಅಜ್ಜನ ಪಾತ್ರಗಳಲ್ಲೆಲ್ಲ ಕಾಣಿಸಿಕೊಂಡರು. ನಮಗೆಲ್ಲಾ ಅವರ ಈ ಅವತಾರ ನೋಡಿ ಅವರ ಅಪ್ಪನ ನೆನಪಾಗುತ್ತಿತ್ತು, ದಪ್ಪಗಾದಾಗ ಅವರ ಅಜ್ಜನ ನೆನಪಾಗ್ತಾ ಇತ್ತು. ಅಂದರೆ ಅವರ ಖಾನ್‌ದಾನ್‌ ನಮ್ಮ ತಲೆಯಲ್ಲಿ ಕೂತುಬಿಟ್ಟಿದೆಯಲ್ಲಾ..ಈಗ ಇವರ ಮಗ ರಣಬೀರ್‌ ಹೊಸ ರೀತಿಯಲ್ಲಿ ಎಲ್ಲರ ಮನಸ್ಸು ಆವರಿಸಿಕೊಂಡಿದ್ದಾನೆ. ಹೀಗಾಗಿ ರಿಷಿ ಕಪೂರ್‌ ಅಂದಾಕ್ಷಣ ಅದೊಂದು.. ಜೀವನವನ್ನು ಸೆಲೆಬ್ರೇಟ್‌ ಮಾಡುವ, ಇದ್ದದ್ದರಲ್ಲಿ ಖುಷಿ ಪಡುವ, ಈ ಸಂತೋಷವನ್ನು ಅಲೆ ಅಲೆಯಾಗಿ ಹಬ್ಬಿಸುವ ಜೀವನ್ಮುಖಿ ಚೈತನ್ಯ. ಈವರೆಗೆ ಒಟ್ಟು 154 ಸಿನಿಮಾಗಳಲ್ಲಿ ರಿಷಿ ಅಭಿನಯಿಸಿದ್ದಾರೆ.

Rememberence for vetern late actor Rishi kapoor by Jayant Kaikini

ಸಾಮಾನ್ಯವಾಗಿ ಕಲಾವಿದರ ಕುಟುಂಬದಿಂದ ಬರುವ ಆರ್ಟಿಸ್ಟ್‌ಗಳಿಗೆ ತುಂಬ ಸೌಕರ್ಯಗಳಿರುತ್ತವೆ. ಆದರೆ ಒಂದು ನಾವು ನೆನಪಿಟ್ಟುಕೊಳ್ಳಬೇಕು, ಕೇವಲ ಸೌಕರ್ಯಗಳಿಂದ ಜನ ಯಾರನ್ನೂ ಯಾವತ್ತೂ ಸ್ವೀಕರಿಸುವುದಿಲ್ಲ. ಇದು ಬಹಳ ಸಲ ಪ್ರೂವ್‌ ಆಗಿದೆ. ನೀವು ಎಂಥವರ ಮಗನೇ ಆಗಿರಬಹುದು, ಎಂಥಾ ಹಿನ್ನೆಲೆಯಿಂದಲೇ ಬಂದಿರಬಹುದು, ನಿಮಗೊಂದು ಪರ್ಫೆಕ್ಟ್ ಲಾಂಚಿಂಗ್‌ ಸಿಕ್ಕಿರಬಹುದು, ಆದರೆ ನಿಮ್ಮಲ್ಲಿ ನಿಮ್ಮದೇ ಆದಂತಹ ಒಂದು ಕಿಡಿ, ಹೊಣೆಗಾರಿಕೆಯಿಂದ ಕರಿಯರ್‌ ನಡೆಸುವ ಶಕ್ತಿ ಇಲ್ಲದಿದ್ದರೆ ಅದೆಲ್ಲ ಮುಂದುವರಿಯುವುದಿಲ್ಲ. ರಿಷಿ ಕಪೂರ್‌ ಒಳ್ಳೊಳ್ಳೆ ಚಿತ್ರಗಳನ್ನು ಮಾಡಿ ತನ್ನ ಸ್ವಂತಿಕೆಯಿಂದ ಮೇಲೆ ಬಂದು ತನ್ನದೇ ವೀಕ್ಷಕ ಬಳಗವನ್ನು ಪಡೆದುಕೊಂಡ. ಹೀಗಾಗಿ ಅವನ ಯಾತ್ರೆ ವಿಶಿಷ್ಟವಾಗಿದೆ.

ಭಾರತ ಕಂಡ The Eternal Lover Boy ರಿಷಿ ಕಪೂರ್!

ಬಾಬಿ ಚಿತ್ರದ ಅವನ ಹಾಡು ‘ಹಮ್‌ ತುಮ್‌ ಏಕ್‌ ಕಮರೆ ಮೆ ಬಂದ್‌ ಹೊ..ಔರ್‌ ಚಾವಿ ಖೋ ಜಾಯ್‌’. ಇದು ಆ ಕಾಲಕ್ಕೆ ಆನಂದ ಭಕ್ಷಿ ಬರೆದಿರೋದು, ಆ ಕನಸು ನೋಡಿ ಎಷ್ಟುಚಂದ, ‘ನಾನು ಮತ್ತು ನೀನು ಒಂದು ಕೋಣೆಯಲ್ಲಿ ಬಂಧಿಯಾಗಬೇಕು. ಆ ಕೋಣೆಯನ್ನು ಯಾರೋ ಲಾಕ್‌ ಮಾಡಬೇಕು. ಅದರ ಕೀಲಿ ಕಳೆದು ಹೋಗಬೇಕು..’ ಅನ್ನೋದು ಎಂಥಾ ಸುಂದರ ಕಲ್ಪನೆ!

ಇವತ್ತು ಲಾಕ್‌ಡೌನ್‌ ಸಮಯದಲ್ಲಿ ನಾವೆಲ್ಲ ನಮ್ಮನಮ್ಮ ಕಮರೆಗಳಲ್ಲಿ ಬಂಧಿಗಳಾಗಿದ್ದೇವೆ. ಇಂಥಾ ಟೈಮ್‌ನಲ್ಲಿ ರಿಷಿ ಕಪೂರ್‌ ಚಾವಿ ಇಲ್ಲದೆಯೂ ಕೂಡ ಮುಕ್ತವಾಗಿ, ಲಹರಿಯಾಗಿ, ಅಲೆಯಾಗಿ ಸುಂದರ ನೆನಪಾಗಿ ಮನೆಯಿಂದ ಆಚೆ ಹೋಗಿದ್ದಾರೆ. ಅವರ ನೆನಪನ್ನು ಸಂಭ್ರಮಿಸೋಣ.

ರಿಷಿ ಕಪೂರ್‌ ನೆನಪು ಮಾತ್ರ - ಚಿಂಟುವಿನ ಬಾಲ್ಯದ ಝಲಕ್

ಇವರು ಸಾಮಾಜಿಕವಾಗಿಯೂ ಬಹಳ ಸ್ಪಂದಿಸುತ್ತಿದ್ದರು. ಲಾಕ್‌ಡೌನ್‌ ಟೈಮ್‌ನಲ್ಲಿ ಕುಡುಕರ ಪರವಾಗಿ ಒಂದು ಮನವಿ ಸಲ್ಲಿಸಿದ್ದರು, ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಕೆಲವು ಹೊತ್ತು ತೀರ್ಥಯಾತ್ರೆಗೆ ಅವಕಾಶ ಮಾಡಿಕೊಡಬೇಕು ಅಂತ. ರಾಜಕಾರಣಿಗಳ ಹೆಸರನ್ನು ರಸ್ತೆಗಳಿಗೆ ಇಡುವುದರ ಬಗ್ಗೆ ಅವರ ವಿರೋಧ ಇತ್ತು. ರಸ್ತೆ, ಸ್ಟೇಡಿಯಂ, ಚೌಕಗಳಿಗೆಲ್ಲ ಬರೀ ರಾಜಕಾರಣಿಗಳ ಹೆಸರನ್ನೇ ಇಟ್ಟರೆ ನಮ್ಮ ಜನ ಸಾಧಕರನ್ನು ನೆನಪಿಸಿಕೊಳ್ಳೋದು ಹೇಗೆ.. ಅಂತಿದ್ರು. ಬದಲಾಗಿ ವಿಜ್ಞಾನಿಗಳ, ಬೇರೆ ಸಾಧಕರ ಹೆಸರಿಡಿ ಅಂತ ಅವರು ತಕರಾರು ಎತ್ತಿದ್ದರು.

ಆಸ್ಪತ್ರೆಯಲ್ಲಿದ್ದ ಬಾಲಿವುಡ್ ನಟ ರಿಷಿ ಕಪೂರ್ ವಿಡಿಯೋ ವೈರಲ್!

ಈ ರೀತಿ ಕಾಲದ ಸಾಮಾಜಿಕ ಸ್ಪಂದನವನ್ನೂ ಹೊಂದಿದ್ದ, ಬದುಕನ್ನೂ ಪ್ರೀತಿಸಿದ ರಿಷಿ ಕಪೂರ್‌ಗೆ ಹುರುಪಿನ ಒಂದು ಗಾಳಿ ಮುತ್ತು .. ಆಭಾರಪೂರ್ವಕ ನಮಸ್ಕಾರ.

Follow Us:
Download App:
  • android
  • ios