'ಡಿಜಿಟಲ್ ಅರೆಸ್ಟ್'ನಂತಹ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ಹೊಸ ಸಿಮ್ ಕಾರ್ಡ್ ಪಡೆಯುವ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಹೊಸ ಸಿಮ್ ಸಕ್ರಿಯಗೊಳಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು 'ರಿಯಲ್-ಟೈಮ್ ಡಿಜಿಟಲ್ ಇಂಟೆಲಿಜೆನ್ಸ್ ಪೋರ್ಟಲ್' ಮೂಲಕ ಪರಿಶೀಲಿಸುವುದು ಕಡ್ಡಾಯವಾಗಲಿದೆ.

ನವದೆಹಲಿ (ಆ.19): ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ 'ಡಿಜಿಟಲ್ ಅರೆಸ್ಟ್' ಸೇರಿದಂತೆ ವಿವಿಧ ರೀತಿಯ ಸೈಬರ್ ವಂಚನೆ ಹಾಗೂ ಆನ್‌ಲೈನ್ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ನಕಲಿ ಮತ್ತು ಅಕ್ರಮ ಸಿಮ್‌ ಕಾರ್ಡ್‌ಗಳ ಹಾವಳಿ ತಡೆಯಲು ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳುವ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲು ಸರ್ಕಾರ ನಿರ್ಧರಿಸಿದೆ. ಸಿಮ್ ಕಾರ್ಡ್ ದುರ್ಬಳಕೆಯಾದ ನಂತರ ಕ್ರಮ ಕೈಗೊಳ್ಳುವ ಬದಲು, ಅಕ್ರಮ ಅಥವಾ ನಕಲಿ ಮೊಬೈಲ್ ಸಂಪರ್ಕಗಳು ಜಾರಿಗೆ ಬರುವುದಕ್ಕೂ ಮುನ್ನವೇ ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಪ್ರಮುಖ ನಿರ್ಧಾರ ಕೈಗೊಂಡಿದೆ.

ರಿಯಲ್-ಟೈಮ್ ಡಿಜಿಟಲ್ ಪರಿಶೀಲನೆ ಕಡ್ಡಾಯ

ಪ್ರಸ್ತಾವಿತ ಹೊಸ ನಿಯಮಗಳ ಪ್ರಕಾರ, ಟೆಲಿಕಾಂ ಕಂಪನಿಗಳು ಹೊಸ ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸುವ (ಆಕ್ಟಿವೇಟ್) ಮುನ್ನ 'ರಿಯಲ್-ಟೈಮ್ ಡಿಜಿಟಲ್ ಇಂಟೆಲಿಜೆನ್ಸ್ ಪೋರ್ಟಲ್' (Real-time Digital Intelligence Portal) ಮೂಲಕ ಗ್ರಾಹಕರ ಮಾಹಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕಾಗುತ್ತದೆ.

ಪರಿಶೀಲನೆಯ ವೇಳೆ ಗ್ರಾಹಕರ ಗುರುತಿನಲ್ಲಿ ಯಾವುದೇ ಸಂಶಯ ಅಥವಾ ಅನುಮಾನಾಸ್ಪದ ಅಂಶಗಳು ಕಂಡುಬಂದರೆ, ಅಂತಹ ವ್ಯಕ್ತಿಗಳಿಗೆ ಸಿಮ್ ಕಾರ್ಡ್ ವಿತರಿಸದಂತೆ ಪೋರ್ಟಲ್ ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್) ಬ್ಲಾಕ್ ಮಾಡಲಿದೆ. ಪ್ರತಿಯೊಂದು ಹೊಸ ಸಿಮ್ ನೀಡುವ ಮುನ್ನವೂ ಇಂಟೆಲಿಜೆನ್ಸ್ ಆಧಾರಿತ ತನಿಖೆ ನಡೆಸುವುದು ಟೆಲಿಕಾಂ ಆಪರೇಟರ್‌ಗಳಿಗೆ ಕಡ್ಡಾಯವಾಗಲಿದೆ.

ಒಬ್ಬರ ಹೆಸರಿನಲ್ಲಿ ಎಷ್ಟು ಸಿಮ್ ಹೊಂದಬಹುದು?

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲ್ಪಡುವ ಸಿಮ್ ಕಾರ್ಡ್‌ಗಳ ಸಂಖ್ಯೆಯ ಮೇಲೆಯೂ ಸರ್ಕಾರ ತೀವ್ರ ನಿಗಾ ವಹಿಸಲಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಸಾಮಾನ್ಯ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿಯು ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಹೊಂದಲು ಅವಕಾಶವಿದೆ. ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಹಿತದೃಷ್ಟಿಯಿಂದ ಒಬ್ಬ ವ್ಯಕ್ತಿಗೆ ಗರಿಷ್ಠ 6 ಸಿಮ್ ಕಾರ್ಡ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಹೊಸ ಪರಿಶೀಲನಾ ವ್ಯವಸ್ಥೆಯು ಅನುಮಾನಾಸ್ಪದ ರೀತಿಯಲ್ಲಿ ಸಿಮ್ ಕಾರ್ಡ್‌ಗಳನ್ನು ಪಡೆದುಕೊಳ್ಳುವ ಜಾಲವನ್ನು ತಕ್ಷಣವೇ ಪತ್ತೆಹಚ್ಚಲು ಮತ್ತು ಸೈಬರ್ ಅಪರಾಧಗಳಿಗೆ ಮೊಬೈಲ್ ಸಂಖ್ಯೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಸಹಕಾರಿಯಾಗಲಿದೆ.

'ಡಿಜಿಟಲ್ ಅರೆಸ್ಟ್' ವಂಚನೆ ಎಂದರೇನು?

ಇತ್ತೀಚಿನ ದಿನಗಳಲ್ಲಿ 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ಸೈಬರ್ ವಂಚಕರು ಮುಗ್ಧ ಜನರನ್ನು ಬೆದರಿಸಿ ಕೋಟ್ಯಂತರ ರೂಪಾಯಿ ದೋಚುತ್ತಿದ್ದಾರೆ. ವಂಚಕರು ಪೊಲೀಸ್ ಅಧಿಕಾರಿಗಳು, ಸಿಬಿಐ, ಜಾರಿ ನಿರ್ದೇಶನಾಲಯ (ED) ಅಥವಾ ಇತರೆ ಸರ್ಕಾರಿ ಉನ್ನತಾಧಿಕಾರಿಗಳಂತೆ ನಟಿಸಿ, ವಿಡಿಯೋ ಕಾಲ್ ಮೂಲಕ ಜನರನ್ನು ಹೆದರಿಸಿ ಅಕ್ರಮವಾಗಿ ಹಣ ಕೀಳುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ನಕಲಿ ದಾಖಲೆಗಳ ಮೂಲಕ ಪಡೆದ ಸಿಮ್ ಕಾರ್ಡ್‌ಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದ್ದು, ಸರ್ಕಾರದ ಈ ಹೊಸ ನಡೆ ಸೈಬರ್ ಅಪರಾಧಿಗಳಿಗೆ ಸಿಂಹಸ್ವಪ್ನವಾಗಲಿದೆ.