ಆಹಾರ ಸುರಕ್ಷತೆ ಮತ್ತು FSSAI ನಿಯಮಗಳ ಉಲ್ಲಂಘನೆಗಾಗಿ, ಅಧಿಕಾರಿಗಳು ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್, ಹೊಸಕೋಟೆಯ ಜೆಪ್ಟೋ ಗೋದಾಮಿನ ಮೇಲೆ ದಾಳಿ ನಡೆಸಿ ಬೀಗ ಜಡಿದಿದ್ದಾರೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ರಾಜ್ಯದ ಎಲ್ಲಾ ಹೋಟೆಲ್‌ಗಳು ಮತ್ತು ಆಹಾರ ಸೇವಾ ಸಂಸ್ಥೆಗಳಿಗೆ ಮಾರ್ಗಸೂಚಿ ಬಿಡುಗಡೆ.
ಬೆಂಗಳೂರು (ಆ.12): ಆಹಾರ ಸುರಕ್ಷತೆ ಹಾಗೂ ಎಫ್‌ಎಸ್‌ಎಸ್‌ಎಐ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಗೊಟ್ಟಿಗೆರೆ ಕೇಂದ್ರೀಕೃತ ಅಡುಗೆಮನೆ ಹಾಗೂ ಹೊಸಕೋಟೆಯ ಜೆಪ್ಟೋ ದಾಸ್ತಾನು ಮಳಿಗೆಗಳ ಮೇಲೆ ದಾಳಿ ಮಾಡಿ ಬೀಗ ಜಡಿದಿದ್ದಾರೆ.
ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಂಗಳವಾರ ಗೊಟ್ಟಿಗೆರೆ, ಲಿಂಗರಾಜಪುರ, ಸಿಂಗಸಂದ್ರಗಳ ಇಂದಿರಾ ಕ್ಯಾಂಟೀನ್‌ಗಳ ಪರಿಶೀಲನೆ ನಡೆಸಿದ್ದು, ಮತ್ತೊಂದು ತಂಡ ಹೊಸಕೋಟೆಯಲ್ಲಿನ ನಿಪ್ಪಾನ್ ಎಕ್ಸ್‌ಪ್ರೆಸ್ ಎಂಬ ಜೆಪ್ಟೋ ದಾಸ್ತಾನು ಮಳಿಗೆ ಪರಿಶೀಲಿಸಿತು. ಎಫ್‌ಎಸ್‌ಎಸ್‌ಎಐ ಸುರಕ್ಷತೆಗೆ ಅನುಗುಣವಾಗಿ ನೈರ್ಮಲ್ಯ, ಶುಚಿತ್ವ ಹಾಗೂ ಆಹಾರ ಸುರಕ್ಷತೆ ನಿರ್ವಹಣೆ ಸೇರಿದಂತೆ ವಿವಿಧ ನಿಯಮಗಳ ಉಲ್ಲಂಘನೆ ಪರಿಶೀಲಿಸಲಾಯಿತು.
ನೈರ್ಮಲ್ಯದ ಕೊರತೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕೇಂದ್ರೀಕೃತ ಅಡುಗೆ ಘಟಕಗಳಿಗೆ ನೋಟಿಸ್ ಜಾರಿ ಮಾಡಿದ್ದು, ಗೊಟ್ಟಿಗೆರೆ ಕಿಚನ್‌ನಲ್ಲಿನ ಅನೈರ್ಮಲ್ಯ ಕಾರಣದಿಂದ ಬೀಗ ಜಡಿಯಲಾಗಿದೆ. ಅಲ್ಲದೆ ನ್ಯಾಯ ನಿರ್ಣಾಯಾಧಿಕಾರಿಗಳ ಮೂಲಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಹೊಸಕೋಟೆ ಬಳಿಯ ಜೆಪ್ಟೋ ದಾಸ್ತಾನು ಮಳಿಗೆಯಾದ ನಿಪ್ಪಾನ್ ಎಕ್ಸ್‌ಪ್ರೆಸ್‌ನಲ್ಲಿ ಲೇಬಲಿಂಗ್, ಮಿಸ್ ಬ್ರ್ಯಾಂಡಿಂಗ್, ಅನೈರ್ಮಲ್ಯದ ಆಹಾರ ನಿರ್ವಹಣೆ, ಸಂಗ್ರಹಣೆಯ ವ್ಯವಸ್ಥೆಯಲ್ಲಿ ಎಫ್‌ಎಸ್‌ಎಸ್‌ಎಐ ನಿಯಮಗಳ ಉಲ್ಲಂಘನೆ ಕಂಡು ಬಂದಿದೆ. ಹೀಗಾಗಿ ನೋಟಿಸ್ ಜಾರಿ ಮಾಡಿ ಗೋದಾಮಿಗೆ ಬೀಗ ಮುದ್ರೆ ಹಾಕಲಾಗಿದೆ.
ಹೋಟೆಲ್, ರೆಸ್ಟೋರೆಂಟ್, ಡಾಬಾಗಳಿಗೆ ಮಾರ್ಗಸೂಚಿ
ರಾಜ್ಯಾದ್ಯಂತ ಇರುವ ಹೋಟೆಲ್, ಡಾಬಾ, ರೆಸ್ಟೋರೆಂಟ್ ಹಾಗೂ ಆಹಾರ ಸೇವಾ ಸಂಸ್ಥೆಗಳು ಕಡ್ಡಾಯವಾಗಿ ಆಹಾರ ಸುರಕ್ಷತೆ ನಿಯಮ ಪಾಲಿಸಬೇಕು ಎಂದು ಆರೋಗ್ಯ ಇಲಾಖೆಯು ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದೆ.
ಎಲ್ಲ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳ ಆವರಣದ ಪ್ರಮುಖ ಸ್ಥಳದಲ್ಲಿ ಆಹಾರ ವ್ಯವಹಾರದ ಪರವಾನಗಿಯನ್ನು ಕಡ್ಡಾಯ ಪ್ರದರ್ಶಿಸಬೇಕು. ಆಹಾರ ಸೇವಿಸಲು ವ್ಯವಸ್ಥೆಯಿರುವ ಪ್ರತಿ ಕಡೆ ಕುಡಿಯಲು ಉಚಿತ ಹಾಗೂ ಕಡ್ಡಾಯವಾಗಿ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಡುಗೆ ಮಾಡುವ ಸ್ಥಳವನ್ನು ಸದಾ ಸ್ವಚ್ಛವಾಗಿ, ವ್ಯವಸ್ಥಿತವಾಗಿ ಹಾಗೂ ಸಮರ್ಪಕ ಗಾಳಿ ಬೆಳಕು ಇರುವಂತೆ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಪಾತ್ರೆ, ಉಪಕರಣಗಳು ಹಾಗೂ ಕಚ್ಚಾ ಆಹಾರ ಪದಾರ್ಥಗಳನ್ನು ತೊಳೆಯಲು ಪ್ರತ್ಯೇಕ ಸಿಂಕ್‌ಗಳ ವ್ಯವಸ್ಥೆ ಮಾಡಬೇಕು. ಆಡುಗೆ ತಯಾರಿಸಲು ಹಾಗೂ ಆಹಾರ ವಿತರಿಸಲು ಬಳಸುವ ಉಪಕರಣಗಳು, ಪಾತ್ರೆಗಳು ಎಲ್ಲವನ್ನು ಡಿಟರ್ಜೆಂಟ್ ಮತ್ತು ಬಿಸಿ ನೀರು ಬಳಸಿ ತೊಳೆಯಬೇಕು. ಅಡುಗೆಗೆ ಬಳಸುವ ಕಚ್ಚಾ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿದ್ದು, ವಿಶ್ವಾಸಾರ್ಹ ಮೂಲದಿಂದ ಖರೀದಿಸಬೇಕು. ಅವುಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಪರಿಸ್ಥಿತಿಯಲ್ಲಿ ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ ಹಾಳಾಗದಂತೆ ನಿರಂತರವಾಗಿ ಗುಣಮಟ್ಟ ಪರಿಶೀಲಿಸಬೇಕು. ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿ ಸಂಗ್ರಹಿಸಬೇಕು. ಆಗತ್ಯ ಇರುವಲ್ಲಿ ಆಹಾರ ಉತ್ಪನ್ನಗಳಲ್ಲಿ ರಾಸಾಯನಿಕ ಹಾಗೂ ಸೂಕ್ಷ್ಮಜೀವಿ ಮಾಲಿನ್ಯಗಳ ಪರೀಕ್ಷೆಯನ್ನು ಖಚಿತಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಿಬ್ಬಂದಿಯ ನೈರ್ಮಲ್ಯ ಕಡ್ಡಾಯ:
ಎಫ್‌ಎಸ್‌ಎಸ್‌ಎಐ ನಿಯಮಗಳನ್ವಯ ತಯಾರಿಕೆ ಮತ್ತು ವಿತರಣೆ ಸೇರಿ ಆಹಾರ ನಿರ್ವಹಿಸುವ ಸಿಬ್ಬಂದಿ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸ್ವಚ್ಛ ಸಮವಸ್ತ್ರ, ತಲೆಕವಚ, ಮಾಸ್ಕ್, ಏಪ್ರಾನ್ ಕಡ್ಡಾಯ ಧರಿಸಬೇಕು. ಸಿಬ್ಬಂದಿಗೆ ವಾರ್ಷಿಕ ವೈದ್ಯಕೀಯ ಆರೋಗ್ಯ/ಫಿಟ್ನೆಸ್ ದಾಖಲೆಗಳನ್ನು ನವೀಕರಿಸಿ ನಿರ್ವಹಿಸಬೇಕು. ಇವುಗಳ ಮೇಲ್ವಿಚಾರಣೆಗೆ ಆಹಾರ ಸುರಕ್ಷತೆ ಮೇಲ್ವಿಚಾರಕರನ್ನು ನಿಯೋಜಿಸಬೇಕು. ಹಾಗೆಯೇ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಳಸುವ ಶೌಚಾಲಯವನ್ನು ಸ್ವಚ್ಚವಾಗಿಡಬೇಕು.
ಆಹಾರ ಸಾಗಿಸುವ ವಾಹನ ಸ್ವಚ್ಛ ಮತ್ತು ನೈರ್ಮಲ್ಯಯುತವಾಗಿರಬೇಕು. ಆಹಾರ ಉತ್ಪನ್ನ ಸಾಗಣೆ ವಾಹನಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರವೇ ಬಳಸಬೇಕು. ಸಾಗಣೆ ವೇಳೆ ಆಹಾರವನ್ನು ಸೂಕ್ತ ತಾಪಮಾನದೊಂದಿಗೆ ಅಗತ್ಯ ಸೂಕ್ತ ಪ್ರಮಾಣದಲ್ಲಿ ತಲುಪಿಸಬೇಕು ಎಂದು ಹೇಳಲಾಗಿದೆ.
ಅಡುಗೆ ಮನೆ ಉತ್ತಮ ಸ್ಥಿತಿಯಲ್ಲಿಡಬೇಕು:
ಅಡುಗೆ ಮನೆ ಗೋಡೆಗಳು, ನೆಲ ಮತ್ತು ಮೇಲ್ಛಾವಣಿ ಸ್ವಚ್ಛವಾಗಿ ಉತ್ತಮ ಸ್ಥಿತಿಯಲ್ಲಿ ನಿರ್ವಹಣೆ ಮಾಡಬೇಕು. ಧೂಳು, ನೊಣ, ಸೊಳ್ಳೆ ಪ್ರವೇಶಿಸದಂತೆ ಜಾಲರಿ ಅಥವಾ ಮೆಶ್ ಅಳವಡಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಮಾರ್ಗಸೂಚಿ ಅಂಶಗಳು
- ತಾಜಾ ಪದಾರ್ಥಗಳನ್ನೇ ಬಳಸಿ ಆಹಾರವನ್ನು ಚೆನ್ನಾಗಿ ಬೇಯಿಸಿ ತಯಾರಿಸಬೇಕು.
- ಸಸ್ಯಾಹಾರ ಮತ್ತು ಮಾಂಸಾಹಾರದ ತಯಾರಿಕೆ ಮತ್ತು ನಿರ್ವಹಣೆ ಪ್ರತ್ಯೇಕವಾಗಿರಬೇಕು.
- ಕೃತಕ ಬಣ್ಣ ಬಳಕೆ, ಅಡುಗೆ ಎಣ್ಣೆ ಮರುಬಳಕೆ ಮಾಡಬಾರದು.
- ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು.
- ತಣ್ಣನೆ ಆಹಾರವನ್ನು -5 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ ತಾಪಮಾನದಲ್ಲಿಡಬೇಕು.
- ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಿನ ತಾಪಮಾನದಲ್ಲಿ ಇಡಬೇಕು.
- ಫ್ರೋಜನ್ ಆಹಾರ ಪದಾರ್ಥಗಳನ್ನು -18 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಸಂಗ್ರಹಿಸಬೇಕು.
- ಮಾಂಸ ಹಾಳಾದರೆ, ಹಣ್ಣು, ತರಕಾರಿಗಳಲ್ಲಿ ಶಿಲೀಂಧ್ರ ಕಾಣಿಸಿಕೊಂಡರೆ ಕೂಡಲೇ ವಿಲೇವಾರಿ ಮಾಡಬೇಕು.
- ಅಡುಗೆ ತಯಾರಿಕೆ, ಆಹಾರ ಪದಾರ್ಥಗಳು ಮತ್ತು ಪಾತ್ರೆ ಸ್ವಚ್ಛತೆಗೆ ಶುದ್ಧ ನೀರು ಬಳಸಬೇಕು.
- ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು.


