ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಅಪಾಚೆ ಸಿರೀಸ್ ಬೈಕ್‌ಗಳನ್ನು ನವೀಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಗಳಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್, ಟಿಎಫ್‌ಟಿ ಡಿಸ್‌ಪ್ಲೇ ಮತ್ತು ಗೂಗಲ್ ಮ್ಯಾಪ್ ಮಿರರಿಂಗ್‌ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಮುಂಬೈ (ಸೆ.19): ಹಬ್ಬಗಳ ಸಾಲು ಹತ್ತಿರವಾಗುತ್ತಿದ್ದಂತೆ ದ್ವಿಚಕ್ರ ವಾಹನ ತಯಾರಿಕಾ ದೈತ್ಯ ಸಂಸ್ಥೆ ಟಿವಿಎಸ್ ಮೋಟಾರ್ ಕಂಪನಿ (TVS Motor Company), ತನ್ನ ಅತ್ಯಂತ ಜನಪ್ರಿಯ 'ಅಪಾಚೆ' (Apache) ಸಿರೀಸ್‌ ಶ್ರೇಣಿಯನ್ನು ಮತ್ತಷ್ಟು ನವೀಕರಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಟಿವಿಎಸ್ ಅಪಾಚೆ ಆರ್‌ಟಿಆರ್ 160 (Apache RTR 160), ಅಪಾಚೆ ಆರ್‌ಟಿಆರ್ 160 4V (Apache RTR 160 4V) ಹಾಗೂ ಅಪಾಚೆ ಆರ್‌ಟಿಆರ್ 200 4V (Apache RTR 200 4V) ಬೈಕ್‌ಗಳ ಹೊಸ ಆವೃತ್ತಿಗಳನ್ನು ಸುಧಾರಿತ ತಂತ್ರಜ್ಞಾನ ಮತ್ತು ನವೀನ ವಿನ್ಯಾಸದೊಂದಿಗೆ ಬಿಡುಗಡೆ ಮಾಡಿದೆ.

ಈ ನೂತನ ಬೈಕ್‌ಗಳಲ್ಲಿ ಸುರಕ್ಷತೆ ಮತ್ತು ಚಾಲನಾ ಅನುಭವವನ್ನು ಉತ್ತಮಗೊಳಿಸಲು 'ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್' (TCS), TFT ಡಿಸ್‌ಪ್ಲೇ ಹಾಗೂ 'ಗೂಗಲ್ ಮ್ಯಾಪ್ ಮಿರರಿಂಗ್' (Google Map Mirroring) ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ಬೆಲೆಯ ವಿಚಾರಕ್ಕೆ ಬರುವುದಾದರೆ, ನವೀಕರಿಸಿದ ಅಪಾಚೆ ಆರ್‌ಟಿಆರ್ 160 ಬೈಕ್‌ನ ಆರಂಭಿಕ ಬೆಲೆ 1.28 ಲಕ್ಷ ರೂಪಾಯಿಗಳಾಗಿದ್ದರೆ, ಅಪಾಚೆ ಆರ್‌ಟಿಆರ್ 160 4V ಬೈಕ್‌ನ ಹೊಸ ಟಾಪ್ ವೇರಿಯೆಂಟ್ ಬೆಲೆ 1.41 ಲಕ್ಷ ರೂಪಾಯಿಗಳಾಗಿದೆ. ಸಿರೀಸ್‌ ಅತ್ಯಂತ ಶಕ್ತಿಶಾಲಿ ಬೈಕ್ ಆದ ಅಪಾಚೆ ಆರ್‌ಟಿಆರ್ 200 4V ಟಾಪ್ ಮಾಡೆಲ್ ಬೆಲೆಯನ್ನು 1.50 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ (ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್‌-ಶೋರೂಮ್ ದರಗಳಾಗಿವೆ).

2026ರ ಟಿವಿಎಸ್ ಅಪಾಚೆ ಆರ್‌ಟಿಆರ್ 160 ನಲ್ಲೇನೇನಿದೆ ಹೊಸತು?

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್‌ನ ಹೊಸ ಟಾಪ್ ವೇರಿಯೆಂಟ್‌ನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಲ್ಲಿ 'ಡ್ಯುಯಲ್ ಚಾನೆಲ್ ಎಬಿಎಸ್' (Dual-Channel ABS) ಜೊತೆಗೆ 'ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್' (TCS) ನೀಡಲಾಗಿದೆ. ಇದರೊಂದಿಗೆ ಅಪಾಯಕಾರಿ ಸಂದರ್ಭಗಳಲ್ಲಿ ಸಹಕಾರಿಯಾಗುವ ಹ್ಯಾಝಾರ್ಡ್ ಲ್ಯಾಂಪ್ಸ್ (Hazard Lamps) ಹಾಗೂ ಎಲ್‌ಇಡಿ ಟರ್ನ್ ಸಿಗ್ನಲ್ ಲ್ಯಾಂಪ್‌ಗಳನ್ನು (LED Turn Signals) ಅಳವಡಿಸಲಾಗಿದೆ.

ಕಲರ್ ಆಯ್ಕೆಗಳಲ್ಲಿ ಆರ್ಕ್ಟಿಕ್ ಟೀಲ್ (Arctic Teal) ಮತ್ತು ಗ್ರಾನೈಟ್ ಗ್ರೇ (Granite Grey) ನಂತಹ ಸಿಂಗಲ್-ಟೋನ್ ಬಣ್ಣಗಳ ಜೊತೆಗೆ, ಮ್ಯಾಟ್ ಬ್ಲ್ಯಾಕ್ ವಿತ್ ರೆಡ್ ಅಲಾಯ್ ವೀಲ್ಸ್ ಹಾಗೂ ಪರ್ಲ್ ವೈಟ್ ವಿತ್ ರೆಡ್ ಅಲಾಯ್ ವೀಲ್ಸ್‌ನಂತಹ ಆಕರ್ಷಕ ಡ್ಯುಯಲ್-ಟೋನ್ ಆಯ್ಕೆಗಳನ್ನೂ ನೀಡಲಾಗಿದೆ.

ಅಪಾಚೆ ಆರ್‌ಟಿಆರ್ 160 4V ನಲ್ಲಿ ಟಿಎಫ್‌ಟಿ ಸ್ಕ್ರೀನ್ ಹಾಗೂ ಮ್ಯಾಪ್ ಮಿರರಿಂಗ್!

ಅಪಾಚೆ ಆರ್‌ಟಿಆರ್ 160 4V ಯ ನೂತನ ಆವೃತ್ತಿಯಲ್ಲಿ ಟಿಎಫ್‌ಟಿ ಡಿಸ್‌ಪ್ಲೇ (TFT Display) ನೀಡಲಾಗಿದ್ದು, ಇದರಲ್ಲಿ ಗೂಗಲ್ ಮ್ಯಾಪ್ ಮಿರರಿಂಗ್ ಸೌಲಭ್ಯವಿದೆ. ಇದರ ನೆರವಿನಿಂದ ಸವಾರರು ಬೈಕ್‌ನ ಡಿಜಿಟಲ್ ಸ್ಕ್ರೀನ್‌ನಲ್ಲೇ ನೇರ ನಾವಿಗೇಷನ್ (Navigation) ಮಾಹಿತಿಯನ್ನು ವೀಕ್ಷಿಸಬಹುದಾಗಿದೆ.

ಇದರ ಜೊತೆಗೆ ಪ್ಯಾನಿಕ್ ಬ್ರೇಕ್ ಅಲರ್ಟ್ (Panic Brake Alert) ಮತ್ತು ಮೊಬೈಲ್ ಚಾರ್ಜಿಂಗ್‌ಗಾಗಿ ಟೈಪ್-ಸಿ ಚಾರ್ಜರ್ (Type-C Charger) ಪೋರ್ಟ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಮ್ಯಾಟ್ ಬ್ಲ್ಯಾಕ್, ರೇಸಿಂಗ್ ರೆಡ್ ಹಾಗೂ ಮರೀನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು, ಡ್ಯುಯಲ್-ಟೋನ್ ಆರ್ಕ್ಟಿಕ್ ಟೀಲ್ ಜೊತೆಗೆ ಶ್ಯಾಂಪೇನ್ ಗೋಲ್ಡ್ ಅಲಾಯ್ ವೀಲ್ಸ್‌ಗಳ ವಿಶೇಷ ಆವೃತ್ತಿಯೂ ಸಿಗಲಿದೆ.

ಅಪಾಚೆ ಆರ್‌ಟಿಆರ್ 200 4V ನಲ್ಲಿ ಅತಿಹೆಚ್ಚು ಅಪ್‌ಗ್ರೇಡ್ಸ್

ಮೂರೂ ಬೈಕ್‌ಗಳ ಪೈಕಿ ಅಪಾಚೆ ಆರ್‌ಟಿಆರ್ 200 4V ಬೈಕ್ ಅತ್ಯಂತ ಹೆಚ್ಚಿನ ಬದಲಾವಣೆಗಳನ್ನು ಕಂಡಿದೆ. ಈ ಬೈಕ್‌ನ ಮುಂಭಾಗದಲ್ಲಿ 'ಅಡ್ಜಸ್ಟಬಲ್ ಯುಎಸ್‌ಡಿ ಸಸ್ಪೆನ್ಷನ್' (Adjustable USD Suspension) ನೀಡಲಾಗಿದೆ. ಇದರಲ್ಲೂ ಗೂಗಲ್ ಮ್ಯಾಪ್ ಮಿರರಿಂಗ್, ಪ್ಯಾನಿಕ್ ಬ್ರೇಕ್ ಅಲರ್ಟ್ ಹಾಗೂ ಟೈಪ್-ಸಿ ಚಾರ್ಜರ್ ಫೀಚರ್‌ಗಳಿವೆ.

ಈ ಮಾದರಿಯು ಆರ್ಮರಿ ಗ್ರೀನ್, ರೇಸಿಂಗ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಹಾಗೂ ಕೆಂಪು ಅಲಾಯ್ ವೀಲ್ಸ್ ಹೊಂದಿರುವ ಡ್ಯುಯಲ್-ಟೋನ್ ‘ಸೆಪಾಂಗ್ ಬ್ಲೂ’ (Sepang Blue) ಬಣ್ಣದಲ್ಲೂ ಖರೀದಿಗೆ ಲಭ್ಯವಿರಲಿದೆ.

ಅಪಾಚೆ ಸರಣಿಯ ಹೊಸ ಬಿಡುಗಡೆ ಕುರಿತು ಮಾತನಾಡಿರುವ ಟಿವಿಎಸ್ ಮೋಟಾರ್ ಕಂಪನಿಯ ಪ್ರೀಮಿಯಂ ಬಿಸಿನೆಸ್ ಹೆಡ್ ವಿಮಲ್ ಸುಂಬ್ಲಿ, "ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಚಾಲನಾ ಅನುಭವ ನೀಡುವ ನಿಟ್ಟಿನಲ್ಲಿ ಪರ್ಫಾರ್ಮೆನ್ಸ್, ವಿನ್ಯಾಸ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿ ಈ ನವೀಕೃತ ಮಾದರಿಗಳನ್ನು ರೂಪಿಸಲಾಗಿದೆ," ಎಂದು ತಿಳಿಸಿದ್ದಾರೆ. ಹೊಸ ಆವೃತ್ತಿಗಳ ಆಗಮನದೊಂದಿಗೆ ಹಳೆಯ ಟಾಪ್ ಮಾಡೆಲ್‌ಗಳ ಉತ್ಪಾದನೆ ನಿಲ್ಲಲಿದ್ದು, ಇವುಗಳೇ ಪ್ರಮುಖ ಸ್ಥಾನ ಪಡೆದುಕೊಳ್ಳಲಿವೆ.

ಇನ್ನು ಜಾಗತಿಕ ಮಟ್ಟದಲ್ಲಿ ಟಿವಿಎಸ್ ಅಪಾಚೆ ಬೈಕ್ ಸರಣಿಯು ಬೃಹತ್ ಸಾಧನೆ ಮಾಡಿದ್ದು, ಇದುವರೆಗೆ ಪ್ರಪಂಚದಾದ್ಯಂತ 70 ಲಕ್ಷಕ್ಕೂ ಹೆಚ್ಚು ಸವಾರರ ಬಳಗವನ್ನು ಸಂಪಾದಿಸಿದೆ. ಅಲ್ಲದೆ, 'ಅಪಾಚೆ ಓನರ್ಸ್ ಗ್ರೂಪ್' (AOG) ನೆಟ್‌ವರ್ಕ್‌ನಲ್ಲಿ 5 ಲಕ್ಷಕ್ಕೂ ಅಧಿಕ ನೊಂದಾಯಿತ ಸದಸ್ಯರಿದ್ದಾರೆ ಎಂಬುದು ಈ ಬ್ರಾಂಡ್‌ನ ಜನಪ್ರಿಯತೆಗೆ ಸಾಕ್ಷಿಯಾಗಿದೆ.