ನಿರಂತರ ಕೆಲಸದ ಒತ್ತಡ ಮತ್ತು ಓಡಾಟದ ದಣಿವಿನಿಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಇಂದು ವಿಧಾನಸೌಧದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣವೇ ವೈದ್ಯರು ತಪಾಸಣೆ ನಡೆಸಿದ ಬಳಿಕ ಡಿ.ಕೆ.ಶಿ ಅವರ ಆರೋಗ್ಯ ಚೇತರಿಸಿಕೊಂಡಿದ್ದು, ಸದ್ಯ ಬಿಪಿ ಸಹಜ ಸ್ಥಿತಿಗೆ ಮರಳಿದೆ.
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದಲ್ಲಿ ಇಂದು ಸಣ್ಣ ಮಟ್ಟದ ಏರುಪೇರು ಕಂಡುಬಂದಿದ್ದು, ವಿಧಾನಸೌಧದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವಿಧಾನಸೌಧದಲ್ಲೇ ಬಿಪಿ ಚೆಕ್
ಇಂದು ಮಧ್ಯಾಹ್ನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ, ಡಿ.ಕೆ. ಶಿವಕುಮಾರ್ ಅವರಿಗೆ ಅಲ್ಪ ಸುಸ್ತು ಹಾಗೂ ರಕ್ತದೊತ್ತಡದಲ್ಲಿ (BP) ವ್ಯತ್ಯಾಸ ಕಂಡುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ವಿಧಾನಸೌಧದ ವೈದ್ಯರಿಗೆ ಬುಲಾವ್ ನೀಡಲಾಯಿತು.
ಸಿಎಂ ಕಚೇರಿಗೆ ಆಗಮಿಸಿದ ವೈದ್ಯರ ತಂಡ ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ತಪಾಸಣೆ ನಡೆಸಿತು. ಪ್ರಾಥಮಿಕ ತಪಾಸಣೆಯಲ್ಲಿ ರಕ್ತದೊತ್ತಡದಲ್ಲಿ ಏರುಪೇರಾಗಿರುವುದು ಕಂಡುಬಂದಿದೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದ ನಂತರ ಈಗ ಅವರ ಬಿಪಿ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದುಬಂದಿದೆ.
ವಿಶ್ರಾಂತಿ ಇಲ್ಲದ ಕೆಲಸ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ಡಿ.ಕೆ.ಶಿವಕುಮಾರ್ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆಯಿಂದ ರಾಜ್ಯದ ವಿವಿಧೆಡೆ ತೀವ್ರ ಓಡಾಟ ನಡೆಸಿದ್ದ ಅವರು, ಇಂದು ಬೆಳಿಗ್ಗೆಯೂ ಸತತ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ನಿರಂತರ ಓಡಾಟ ಮತ್ತು ಕೆಲಸದ ಒತ್ತಡದಿಂದಾಗಿ ದೇಹ ಬಳಲಿದ್ದು, ರಕ್ತದೊತ್ತಡದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಡಿ.ಕೆ.ಶಿವಕುಮಾರ್ ಅವರು ಚೇತರಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ. ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ತಿಳಿಸಿವೆ.


