ಕರ್ನಾಟಕದಲ್ಲಿ ಸಂಚರಿಸುತ್ತಿರುವ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ 8,786 ಬಸ್‌ಗಳು ಇಂದಿಗೂ ಹೆಚ್ಚು ಮಾಲಿನ್ಯಕಾರಕ 'ಬಿಎಸ್-3' ಶ್ರೇಣಿಯದ್ದಾಗಿವೆ. ಬಿಎಂಟಿಸಿ ತನ್ನೆಲ್ಲಾ ಬಿಎಸ್-3 ಬಸ್‌ಗಳನ್ನು ತೆರವುಗೊಳಿಸಿ ಎಲೆಕ್ಟ್ರಿಕ್ ಬಸ್‌ಗಳ ಬಳಕೆಯಲ್ಲಿ ಮುಂದಿದೆ.
ಬೆಂಗಳೂರು (ಸೆ.24): ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಹಾಗೂ ವಿದ್ಯುತ್ ಚಾಲಿತ (EV) ವಾಹನಗಳ ಬಳಕೆಗೆ ಸರ್ಕಾರಗಳು ಭಾರಿ ಉತ್ತೇಜನ ನೀಡುತ್ತಿದ್ದರೂ, ಕರ್ನಾಟಕದ ರಸ್ತೆಗಳಲ್ಲಿ ಸಂಚರಿಸುತ್ತಿರುವ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಬಸ್‌ಗಳು ಇಂದಿಗೂ 'ಬಿಎಸ್-3' (BS III) ನಿಯಮಾವಳಿಯದ್ದಾಗಿವೆ. ಪ್ರಸ್ತುತ ಚಾಲ್ತಿಯಲ್ಲಿರುವ 'ಬಿಎಸ್-6' ಬಸ್‌ಗಳಿಗೆ ಹೋಲಿಸಿದರೆ ಈ 'ಬಿಎಸ್-3' ಬಸ್‌ಗಳು ಶೇಕಡಾ 80 ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಅಪಾಯಕಾರಿ ಮಾಲಿನ್ಯಕಾರಕ ಘಟಕಗಳನ್ನು ವಾತಾವರಣಕ್ಕೆ ಹೊರಸೂಸುತ್ತವೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ (NGT - National Green Tribunal) ರಾಜ್ಯ ಸಾರಿಗೆ ಇಲಾಖೆ ಸಲ್ಲಿಸಿರುವ ಅಧಿಕೃತ ಮಾಹಿತಿಯ ಪ್ರಕಾರ, ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳು (SRTC) ಹೊಂದಿರುವ ಒಟ್ಟು 25,996 ಬಸ್‌ಗಳ ಪೈಕಿ ಬರೋಬ್ಬರಿ 8,786 ಬಸ್‌ಗಳು (ಶೇ. 33.79) ಇಂದಿಗೂ ಬಿಎಸ್-3 ಶ್ರೇಣಿಯ ಹಳೆಯ ಮಾದರಿಯ ಬಸ್‌ಗಳಾಗಿವೆ.
ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಈ ಹಿಂದೆ ಸಲ್ಲಿಸಿದ್ದ ವರದಿಯ ಪ್ರಕಾರ, 'ಬಿಎಸ್-3' ವಾಹನಗಳು 'ಬಿಎಸ್-4' ಗಿಂತ ಶೇ. 90 ರಷ್ಟು ಹೆಚ್ಚು ಮಾಲಿನ್ಯಕಾರಕವಾಗಿದ್ದು, ಇವು 'ಬಿಎಸ್-6' ಗಿಂತ ಹಲವು ಪಟ್ಟು ಅಪಾಯಕಾರಿಯಾಗಿವೆ.
ಬಿಎಮ್‌ಟಿಸಿ ಸಾಧನೆ: ಬಿಎಸ್-3 ಮುಕ್ತಗೊಳಿಸಿದ ಏಕೈಕ ಸಂಸ್ಥೆ!
ಹಲವು ಕೊರತೆಗಳ ನಡುವೆಯೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಮಾಲಿನ್ಯ ತಡೆಗಟ್ಟುವಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಪೈಕಿ ತನ್ನ ಬಳಿಯಿದ್ದ ಎಲ್ಲಾ 'ಬಿಎಸ್-3' ಬಸ್‌ಗಳನ್ನು ಸಂಪೂರ್ಣವಾಗಿ ಕಾರ್ಯಾಚರಣೆಯಿಂದ ತೆರವುಗೊಳಿಸಿದ ಏಕೈಕ ಸಂಸ್ಥೆಯಾಗಿ ಬಿಎಂಟಿಸಿ ಹೊರಹೊಮ್ಮಿದೆ. ಅಷ್ಟೇ ಅಲ್ಲದೆ, ಅತ್ಯಂತ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ (e-buses) ಬಸ್‌ಗಳನ್ನು ಹೊಂದಿರುವ ಹೆಗ್ಗಳಿಕೆಯೂ ಬಿಎಂಟಿಸಿಗಿದೆ. ಬಿಎಂಟಿಸಿಯ ಒಟ್ಟು 6,929 ಬಸ್‌ಗಳ ಪೈಕಿ 1,779 ವಿದ್ಯುತ್ ಚಾಲಿತ ಬಸ್‌ಗಳಾಗಿದ್ದು, ಇದು ಸಂಸ್ಥೆಯ ಒಟ್ಟು ಫ್ಲೀಟ್‌ನ ಶೇಕಡಾ 25.67 ರಷ್ಟಿದೆ.
ಕೆಎಸ್‌ಆರ್‌ಟಿಸಿಯಲ್ಲೇ ಗರಿಷ್ಠ ಮಾಲಿನ್ಯಕಾರಕ ಬಸ್‌ಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಕೇವಲ ಒಂದೇ ನಿಗಮದಲ್ಲಿ 4,135 'ಬಿಎಸ್-3' ಬಸ್‌ಗಳನ್ನು ಹೊಂದಿದ್ದು, ರಾಜ್ಯದ ಒಟ್ಟು ಮಾಲಿನ್ಯಕಾರಕ ಬಸ್‌ಗಳ ಪೈಕಿ ಅರ್ಧದಷ್ಟು ಪಾಲು ಕೆಎಸ್‌ಆರ್‌ಟಿಸಿಯದ್ದೇ ಆಗಿದೆ. ಇನ್ನುಳಿದ ಭಾಗವನ್ನು ವಾಯುವ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳು ಹಂಚಿಕೊಂಡಿವೆ. ನೋಂದಣಿ ದಿನಾಂಕದಿಂದ 15 ವರ್ಷಗಳನ್ನು ಪೂರ್ಣಗೊಳಿಸಿದ ಬಸ್‌ಗಳನ್ನು ಸಾರ್ವಜನಿಕ ಸೇವೆಯಿಂದ ಹಿಂಪಡೆಯಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ಇಂತಹ 5,451 ಹಳೆಯ ಬಸ್‌ಗಳನ್ನು ಗುಜರಿಗೆ (Scrap) ಹಾಕಲಾಗಿದೆ.
15 ವರ್ಷ ಹಳೆಯ ಬಸ್‌ಗಳಿಗೆ 'ಸ್ಕ್ರಾಪ್' ಭಾಗ್ಯ
ಈ ಕುರಿತು ಮಾಹಿತಿ ನೀಡಿರುವ ಸಾರಿಗೆ, ಪರಿಸರ ಮತ್ತು ಇ-ಆಡಳಿತ ಜಂಟಿ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್, "15 ವರ್ಷಗಳ ನಿಗದಿತ ಕಾರ್ಯಾಚರಣೆಯ ಅವಧಿಯನ್ನು ಪೂರ್ಣಗೊಳಿಸಿದ ಬಸ್‌ಗಳನ್ನು ಗುರುತಿಸಿ, ಪ್ರಯಾಣಿಕರ ಸೇವೆಯಿಂದ ಹಿಂಪಡೆಯಲಾಗುತ್ತದೆ. ಅಂತಹ ವಾಹನಗಳ ನೋಂದಣಿಯನ್ನು ರದ್ದುಗೊಳಿಸಿ, ನಿಗದಿತ ಪ್ರಕ್ರಿಯೆಯಂತೆ ಸ್ಕ್ರ್ಯಾಪಿಂಗ್‌ಗೆ ಒಳಪಡಿಸಲಾಗುತ್ತದೆ," ಎಂದು ತಿಳಿಸಿದ್ದಾರೆ. 15 ವರ್ಷ ಪೂರೈಸಿದ ಎಲ್ಲಾ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಬೇಕೆಂದು ಸರ್ಕಾರವು ಸೆಪ್ಟೆಂಬರ್ 2023 ರಲ್ಲಿ ನಿಯಮವನ್ನು ಅಧಿಸೂಚಿಸಿದೆ. ಇದರ ಅನ್ವಯ, ನಾಲ್ಕೂ ಸಾರಿಗೆ ನಿಗಮಗಳು ಸೇರಿ 2031-32 ರ ವೇಳೆಗೆ 15 ವರ್ಷ ಪೂರೈಸಲಿರುವ ಒಟ್ಟು 9,518 ಬಸ್‌ಗಳನ್ನು ಗುಜರಿಗೆ ಹಾಕಲು (Scrapping) ಯೋಜನೆ ರೂಪಿಸಿವೆ.
ಕಡಿಮೆ ಮಾಲಿನ್ಯ ಕಾರುವ ಬಸ್‌ಗಳಿಗೆ ಶೀಘ್ರವಾಗಿ ಬದಲಾಗಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪರಿಸರಕರ್ತರು 2024 ರಲ್ಲಿ ಎನ್‌ಜಿಟಿ (NGT) ಮೆಟ್ಟಿಲೇರಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣವು ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೋರಿತ್ತು.


