ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ದರ್ಶನ್ ಅವರ ಆರೋಗ್ಯ ಹಿತದೃಷ್ಟಿಯಿಂದ ಪ್ರಕರಣವನ್ನು ಮಾನವೀಯತೆಯಿಂದ ಪರಿಗಣಿಸುವಂತೆ ಈ ಪತ್ರದಲ್ಲಿ ಮನವಿ ಮಾಡಲಾಗಿದೆ.

ಬೆಂಗಳೂರು (ಸೆ.24): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿ, ಸತತ ಕಾನೂನು ಹೋರಾಟ ನಡೆಸುತ್ತಿದ್ದರೂ ಜಾಮೀನು (Bail) ಸಿಗದೆ ಕಷ್ಟಪಡುತ್ತಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ (Actor Darshan) ಅವರ ಬೆಂಬಲಕ್ಕೆ ಈಗ ಅವರ ಅಭಿಮಾನಿಗಳು ಮತ್ತೊಮ್ಮೆ ಬೃಹತ್ ಮಟ್ಟದಲ್ಲಿ ನಿಂತಿದ್ದಾರೆ. ದರ್ಶನ್ ಅವರ ಪ್ರಕರಣವನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಬೇಕು ಎಂದು ಕೋರಿ ಅಭಿಮಾನಿಗಳು ನೇರವಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆಪತ್ರ ಬರೆದಿದ್ದಾರೆ.

ದರ್ಶನ್ ಅಭಿಮಾನಿಗಳು ಬರೆದಿರುವ ಭಾವನಾತ್ಮಕ ಪತ್ರದ ಚಿತ್ರಗಳು (Images) ಹಾಗೂ ಪೋಸ್ಟರ್‌ಗಳು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರ ಹಾಗೂ ಚಿತ್ರರಂಗದ ಗಮನ ಸೆಳೆಯುತ್ತಿವೆ.

ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಏನಿದೆ?

ದರ್ಶನ್ ಅಭಿಮಾನಿಗಳು ರಾಷ್ಟ್ರಪತಿ ಭವನಕ್ಕೆ ಬರೆದಿರುವ ಪತ್ರದಲ್ಲಿ ತಮ್ಮ ನೆಚ್ಚಿನ ನಟನ ಆರೋಗ್ಯ, ಅವರ ಕುಟುಂಬ ಹಾಗೂ ಕೋಟ್ಯಂತರ ಅಭಿಮಾನಿಗಳ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

"ಮಾನ್ಯ ಶ್ರೀಮತಿ ದ್ರೌಪದಿ ಮುರ್ಮು ಮೇಡಂ ಅವರಿಗೆ (ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು)

ನಾವು ನಿಮ್ಮನ್ನು ತಾಯಿ ಸ್ಥಾನದಲ್ಲಿ ಕಾಣುತ್ತೇವೆ. ನೀವು ಬಡವರ, ಆದಿವಾಸಿಗಳ, ನೊಂದವರ ಪರವಾಗಿ ನಿಲ್ಲುವ ತಾಯಿ. ನಮ್ಮ ಕರ್ನಾಟಕದ ಹೆಮ್ಮೆಯ ನಟ D Boss ದರ್ಶನ್ ಸರ್ ಅವರು ಈಗ ಸಂಕಷ್ಟದಲ್ಲಿದ್ದಾರೆ. ಅವರು ಕನ್ನಡ ನಾಡಿನ ಕೋಟ್ಯಾಂತರ ಅಭಿಮಾನಿಗಳಿಗೆ ದೇವರ ಸಮಾನ.

ಭಾರತದ ಕಾನೂನು ಮತ್ತು ನ್ಯಾಯಾಲಯದ ಮೇಲೆ ನಮಗೆ 100% ನಂಬಿಕೆ ಇದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಆದರೆ ಒಬ್ಬ ತಾಯಿಯಾಗಿ, ದಯವಿಟ್ಟು ನಮ್ಮ D Boss ಅವರ ಪ್ರಕರಣವನ್ನು ಮಾನವೀಯ ದೃಷ್ಟಿಯಿಂದ ನೋಡಿ. ಅವರ ಆರೋಗ್ಯ, ಅವರ ಕುಟುಂಬ, ಅವರನ್ನು ನಂಬಿರುವ ಕೋಟ್ಯಾಂತರ ಅಭಿಮಾನಿಗಳನ್ನು ಪರಿಗಣಿಸಿ.

ಕಾನೂನಿನ ಪ್ರಕಾರ ಏನು ನ್ಯಾಯವೋ ಅದು ಸಿಗಲಿ, ಆದರೆ ಅದಷ್ಟು ಬೇಗ ನ್ಯಾಯ ಸಿಗುವಂತೆ ತಮ್ಮ ಕಡೆಯಿಂದ ಸಾಧ್ಯವಾದ ಸಹಾಯ ಮಾಡಬೇಕೆಂದು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇವೆ. ನಿಮ್ಮ ಮಮತೆಯ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಮೇಡಂ."

— ಇಂತಿ ನಿಮ್ಮ ಮಕ್ಕಳಂತೆ, D Boss ಅಭಿಮಾನಿಗಳು, ಕರ್ನಾಟಕ

ಸತತ ಹಿನ್ನಡೆ, ಜೈಲಿನಲ್ಲೇ ಉಳಿದ ನಟ ದರ್ಶನ್

ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗಿನಿಂದ ನಟ ದರ್ಶನ್‌ಗೆ ಹೈಕೋರ್ಟ್ ಹಾಗೂ ಕೆಳ ನ್ಯಾಯಾಲಯಗಳಲ್ಲಿ ಸತತ ಹಿನ್ನಡೆಯಾಗುತ್ತಲೇ ಬಂದಿದೆ. ಸೂಕ್ತ ಜಾಮೀನು ಸಿಗದೆ ಜೈಲಿನಲ್ಲೇ ದಿನ ದೂಡುತ್ತಿರುವ ನಟನ ಬೆನ್ನುಮೂಳೆ ನೋವು ಹಾಗೂ ಆರೋಗ್ಯ ಸಮಸ್ಯೆಯ ಕುರಿತು ಅಭಿಮಾನಿಗಳಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ.

ತಮ್ಮ ನೆಚ್ಚಿನ ನಟನಿಗೆ ಕಾನೂನಿನ ಅಡಿಯಲ್ಲೇ ಶೀಘ್ರ ನ್ಯಾಯ ಸಿಗಲಿ ಮತ್ತು ಸೂಕ್ತ ವೈದ್ಯಕೀಯ ಹಾಗೂ ಮಾನವೀಯ ಸ್ಪಂದನೆ ಸಿಗಲಿ ಎಂಬ ಉದ್ದೇಶದಿಂದ ಅಭಿಮಾನಿಗಳು ಈ ಪತ್ರವನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನದಂತೆ ಹಂಚಿಕೊಳ್ಳುತ್ತಿದ್ದಾರೆ.

ರಾಷ್ಟ್ರಪತಿಗಳ ಗಮನ ಸೆಳೆಯುತ್ತಾ ಈ ವೈರಲ್ ಪತ್ರ?

ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವ ಈ ಪತ್ರ ಹಾಗೂ ಅಭಿಯಾನವು ದೆಹಲಿಯ ರಾಷ್ಟ್ರಪತಿ ಭವನದ ಗಮನ ಸೆಳೆಯುತ್ತದೆಯೇ ಮತ್ತು ನಟ ದರ್ಶನ್ ಅವರ ಸುದೀರ್ಘ ಕಾನೂನು ಹೋರಾಟಕ್ಕೆ ಇದು ಯಾವುದೇ ರೀತಿಯ ಬೆಂಬಲ ತಂದುಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.