ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಚರ್ಚೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರ ವೈಯಕ್ತಿಕ ಬದುಕಿನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಹೇಳುವ ಮೂಲಕ ಸದನದಲ್ಲಿ ನಗುವಿನ ಅಲೆ ಎಬ್ಬಿಸಿದರು.
ಬೆಂಗಳೂರು (ಸೆ.24): ಕರ್ನಾಟಕ ವಿಧಾನಸಭೆಯ ಕಲಾಪದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರ ವೈಯಕ್ತಿಕ ಬದುಕಿನ ಕುರಿತು ನೀಡಿದ ಸ್ಪೋಟಕ ಹೇಳಿಕೆಯೊಂದು ಸದನದಲ್ಲಿ ಭಾರಿ ನಗುವಿನ ಅಲೆ ಎಬ್ಬಿಸಿದೆ. ಬೆಂಗಳೂರಿಗೆ ಬಂದು ನೆಲೆಸಿದ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಎಲ್ಲರ ಗಮನ ಸೆಳೆದರು. ಬೆಂಗಳೂರು ನಗರ ಬೆಳೆಯುತ್ತಿರುವ ವೇಗ ಹಾಗೂ ಇಲ್ಲಿನ ಜಲ ಮತ್ತು ವಾತಾವರಣದ ಪ್ರಭಾವದ ಕುರಿತು ಮಾತನಾಡುತ್ತಾ ಶಿವಕುಮಾರ್ ಈ ವಿಚಾರವನ್ನು ವಿಧಾನಸಭೆಯಲ್ಲಿ ಹೇಳಿದರು.
ಕಾವೇರಿ ನೀರು, ವಾತಾವರಣದ ಪ್ರಭಾವ!
ಸದನದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, 'ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸ್ ತಮ್ಮ ಊರುಗಳಿಗೆ ಹೋಗುವುದೇ ಇಲ್ಲ. ಇಲ್ಲಿನ ಕಾವೇರಿ ನೀರು ಹಾಗೂ ಇಲ್ಲಿನ ಹವಾಮಾನವೇ ಹಾಗಿದೆ. ಬೆಂಗಳೂರಿನ ಜನಸಂಖ್ಯೆ ಹಿಂದೆ ಶೇ. 35 ರಷ್ಟಿತ್ತು, ಈಗ ಶೇ. 47 ಕ್ಕೆ ಏರಿಕೆಯಾಗಿದೆ. ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದ ಶಾಸಕರು ಕೂಡ ಆಮೇಲೆ ಈ ನಗರವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ' ಎಂದರು.
ಇಷ್ಟಕ್ಕೇ ನಿಲ್ಲಿಸದ ಅವರು, ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ! ನನ್ನ ಬಳಿ ಅಂತಹ ಡಜನ್‌ಗಟ್ಟಲೆ ಶಾಸಕರ ಸಂಪೂರ್ಣ ಲಿಸ್ಟ್ ಇದೆ. ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಿಂದ ಬಂದವರ ಹಿಸ್ಟರಿಯನ್ನೂ ನಾನು ಹೇಳಬಲ್ಲೆ. ಆದರೆ ಈಗ ಆ ಇತಿಹಾಸವನ್ನೆಲ್ಲಾ ಬಿಚ್ಚಿಡುವುದು ಬೇಡ ಎಂದು ತಮಾಷೆಯಾಗಿ ಟಾಂಗ್ ನೀಡಿದರು.
ನೀವು ಎಂಥಾ ಕಲಾವಿದರಿರಬೇಕು ಸರ್: ಬಿ.ಪಿ. ಹರೀಶ್ ಟಾಂಗ್
ಡಿ.ಕೆ. ಶಿವಕುಮಾರ್ ಅವರ ಈ 'ಎರಡು ಮದುವೆ' ಹೇಳಿಕೆ ಹೊರಬೀಳುತ್ತಿದ್ದಂತೆಯೇ ಶಾಸಕ ಬಿ.ಪಿ. ಹರೀಶ್ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಕಾಲೆಳೆದರು. "ಸರ್ ಅದೇನೋ ಎರಡು-ಮೂರು ಮದುವೆ ಅಂತ ಹೇಳ್ತಿದ್ದೀರಲ್ಲ, ಯಾರದ್ದು ಸರ್ ಅದು? ಅವರ ಎರಡು-ಮೂರು ಮದುವೆಯ ಕಥೆ ನಿಮಗೆ ಹೇಗೆ ಗೊತ್ತು ಸರ್? ಅದನ್ನು ಹುಡುಕಿಕೊಂಡು ಹೊರಟಿದ್ದೀರಲ್ಲ, ಅದನ್ನು ನೋಡಿದರೆ ನೀವು ಎಂತಾ ಮಹಾನ್ ಕಲಾವಿದ ಇರಬೇಕು ಸರ್!" ಎಂದು ತಮಾಷೆಯಾಗಿ ಹೇಳಿದರು.
ಶಾಸಕ ಹರೀಶ್ ಅವರ ಈ ಹಾಸ್ಯಮಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, "ಅದೆಲ್ಲಾ ಈಗ ಬೇಡ ಬಿಡಿ, ವೈಯಕ್ತಿಕ ವಿಷಯಗಳನ್ನು ಸದನದಲ್ಲಿ ಚರ್ಚಿಸುವುದು ಬೇಡ. ಅದನ್ನೆಲ್ಲಾ ಆಮೇಲೆ ಪರ್ಸನಲ್ ಆಗಿ ಕುಳಿತು ಮಾತನಾಡೋಣ," ಎಂದು ನಗುತ್ತಲೇ ವಿಷಯಕ್ಕೆ ತೆರೆ ಎಳೆದರು.


