ಚುನಾವಣಾ ಆಯೋಗದ ಆಂತರಿಕ ನಿರ್ಧಾರಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ 3 ಪ್ರಮುಖ ಷರತ್ತುಗಳನ್ನು ವಿಧಿಸಿ 48 ಗಂಟೆಗಳ ಗಡುವು ನೀಡಿದೆ. ಬೇಡಿಕೆ ಈಡೇರದಿದ್ದರೆ ದೇಶಾದ್ಯಂತ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.
ಭಾರತೀಯ ಚುನಾವಣಾ ಆಯೋಗದ (ECI) ಆಂತರಿಕ ನಿರ್ಧಾರಗಳ ಸುತ್ತ ಹೊತ್ತಿಕೊಂಡಿರುವ ವಿವಾದ ದಿನದಿಂದ ದಿನಕ್ಕೆ ತೀವ್ರರೂಪ ಪಡೆದುಕೊಳ್ಳುತ್ತಿದ್ದು, ಪ್ರಜಾಪ್ರಭುತ್ವದ ಅಡಿಪಾಯದ ಮೇಲೆಯೇ ಪ್ರಶ್ನೆಗಳು ಏಳತೊಡಗಿವೆ. ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಚಾರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಡೆಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನವದೆಹಲಿಯಲ್ಲಿ ಬೃಹತ್ ಪತ್ರಿಕಾಗೋಷ್ಠಿ ನಡೆಸಿದೆ. ಈ ವೇಳೆ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಮುಖ್ಯ ವಕ್ತಾರ ಸೌರವ್ ದಾಸ್ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ 48 ಗಂಟೆಗಳ ಗಡುವು (Dead-Line) ನೀಡಿದ್ದು, 3 ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದ್ದಾರೆ. ಗಡುವಿನೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶಾದ್ಯಂತ ಬೃಹತ್ ಮಟ್ಟದ ಜನಸಾಮಾನ್ಯರ ಹಾಗೂ ವಿದ್ಯಾರ್ಥಿಗಳ ಹೋರಾಟವನ್ನು ರೂಪಿಸುವುದಾಗಿ ಸಂಘಟನೆ ಎಚ್ಚರಿಸಿದೆ.
CJPಯ 3 ಪ್ರಮುಖ ಬೇಡಿಕೆಗಳು!
1. ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಕ್ರಿಮಿನಲ್ ತನಿಖೆ!
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ಅವರ ವಿರುದ್ಧ ತಕ್ಷಣವೇ ಕ್ರಿಮಿನಲ್ ನಡಾವಳಿಗಳನ್ನು (Criminal Proceedings) ಪ್ರಾರಂಭಿಸಬೇಕು. "ಜ್ಞಾನೇಶ್ ಕುಮಾರ್‌ಗೆ ಇಂತಹ ಆದೇಶಗಳನ್ನು ನೀಡಿದ ಸರ್ಕಾರದ ರಹಸ್ಯ ಸೂತ್ರಧಾರ ಯಾರು?" ಎಂದು ಪ್ರಶ್ನಿಸಿರುವ CJP, ಒಬ್ಬರೇ ವ್ಯಕ್ತಿ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಇದರ ಹಿಂದೆ ಕಾರ್ಯಾಂಗದ ಆಡಳಿತಾರೂಢರ ಹಸ್ತಕ್ಷೇಪವಿದೆ ಎಂದು ಆರೋಪಿಸಿದೆ.
2. ಎಸ್‌ಐಆರ್ (SIR) ದಾಖಲೆಗಳ ಮುಟ್ಟುಗೋಲು ಮತ್ತು ಸ್ವತಂತ್ರ ತನಿಖೆ!
ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ನಡೆದಿರುವ ನಿರ್ಧಾರಗಳು ಮತ್ತು ತೆಗೆದುಹಾಕಲಾದ ಕೋಟ್ಯಂತರ ಮತದಾರರ ಪಟ್ಟಿಗೆ ಸಂಬಂಧಿಸಿದ ಎಲ್ಲಾ ಮೂಲ ಫೈಲ್‌ಗಳನ್ನು ಸುಪ್ರೀಂ ಕೋರ್ಟ್ ತಕ್ಷಣವೇ ತನ್ನ ಸುಪರ್ದಿಗೆ (Custody) ತೆಗೆದುಕೊಳ್ಳಬೇಕು. "ನಾಳೆ ದಿನ ಆಯೋಗದ ಕಟ್ಟಡದಲ್ಲೇ ಬೆಂಕಿ ಬಿತ್ತು, ಫೈಲ್‌ಗಳು ನಾಶವಾದವು ಎಂಬ ನಾಟಕಗಳನ್ನು ಹೇಳಬಾರದು" ಎಂದಿರುವ ನಾಯಕರು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಜನರ ನಂಬಿಕೆ ಗಳಿಸುವ ರೀತಿಯಲ್ಲಿ ಸ್ವತಂತ್ರ ತನಿಖಾ ಆಯೋಗ (Independent Inquiry Commission) ರಚನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
3. 2023 ರ ನೇಮಕಾತಿ ಕಾಯ್ದೆ ರದ್ದತಿ!
ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ 2023 ರಲ್ಲಿ ತರಲಾದ ನೂತನ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಾಯ್ದುಕೊಳ್ಳಲು ನಾಗರಿಕ ಸಮಾಜದ (Civil Society) ಪ್ರತಿನಿಧಿಗಳು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಪಾರದರ್ಶಕ ನೇಮಕಾತಿ ಪ್ರಕ್ರಿಯೆ ರೂಪಿಸಬೇಕು ಎಂಬುದು CJPಯ ಮೂರನೇ ಷರತ್ತಾಗಿದೆ.
ಆಂತರಿಕ ಬಿಕ್ಕಟ್ಟು ಮತ್ತು 48 ಗಂಟೆಗಳ ಅಲ್ಟಿಮೇಟಮ್!
ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ ಸುಮಾರು 14 ಬಾರಿ ಆಯೋಗದ ಹಲವು ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಅಧಿಕೃತವಾಗಿ ಆಕ್ಷೇಪಣೆ ಎತ್ತಿದ್ದಾರೆ. ಹೊಸ ಮತದಾರರ 'ಫಾರ್ಮ್ 6' ತಿದ್ದುಪಡಿ ಹಾಗೂ ಇಸಿಐ ನೆಟ್ (ECINet) ಡೇಟಾಬೇಸ್ ಕೇಂದ್ರೀಕರಣದ ಕುರಿತು ಆಯುಕ್ತರನ್ನು ಕತ್ತಲಲ್ಲಿಟ್ಟು ಆದೇಶ ಹೊರಡಿಸಲಾಗಿದೆ ಎಂಬ ವಿಚಾರ ಬಹಿರಂಗವಾಗಿತ್ತು.
ಸೌರವ್ ದಾಸ್ ಹೇಳಿದ್ದೇನು?
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ CJP ನಾಯಕ ಸೌರವ್ ದಾಸ್, "ಪ್ರಜಾಪ್ರಭುತ್ವದ ಅಂತಿಮ ಅಸ್ತ್ರವಾದ 'ಮತದಾನದ ಹಕ್ಕನ್ನೇ' ಕಸಿದುಕೊಳ್ಳಲಾಗುತ್ತಿದ್ದರೆ, ನಾವು ಶಿಕ್ಷಣ, ರಸ್ತೆ ಅಥವಾ ಉದ್ಯೋಗದ ಬಗ್ಗೆ ಎಷ್ಟೇ ಹೋರಾಟ ನಡೆಸಿದರೂ ಪ್ರಯೋಜನವಿಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 48 ಗಂಟೆಗಳ ಒಳಗಾಗಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ, ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡದಿದ್ದರೆ ದೇಶದ ಪ್ರತಿಯೊಂದು ನಗರದಲ್ಲೂ ಪ್ರಜಾಪ್ರಭುತ್ವ ರಕ್ಷಣಾ ಚಳವಳಿ ರೂಪಿಸುವುದಾಗಿ CJP ಅಂತಿಮ ಎಚ್ಚರಿಕೆ ನೀಡಿದೆ.


