ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಆಸ್ತಿ ತೆರಿಗೆದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ₹200 'ಸಾಫ್ಟ್‌ವೇರ್ ಶುಲ್ಕ'ವನ್ನು ಹೊಸದಾಗಿ ವಿಧಿಸಿದೆ. ಸರ್ಕಾರದ ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಇದೊಂದು ಹಗಲು ದರೋಡೆ ಎಂದು ಆರೋಪಿಸಿವೆ.

ಬೆಂಗಳೂರು (ಸೆ.18): ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಗೆ ಒಳಪಡುವ ನಗರದ ಐದು ಮಹಾನಗರ ಪಾಲಿಕೆಗಳು ಆಸ್ತಿ ತೆರಿಗೆದಾರರಿಗೆ ಯಾವುದೇ ಮುನ್ಸೂಚನೆ ಅಥವಾ ಅಧಿಕೃತ ಪ್ರಕಟಣೆ ನೀಡದೆ, ವಾರ್ಷಿಕ ಆಸ್ತಿ ತೆರಿಗೆಯ ಜೊತೆಗೆ ₹200 'ಸಾಫ್ಟ್‌ವೇರ್ ಶುಲ್ಕ'ವನ್ನು (Software Charge) ಹೊಸದಾಗಿ ವಸೂಲಿ ಮಾಡಲು ಆರಂಭಿಸಿವೆ. ಪ್ರಸಕ್ತ ಹಣಕಾಸು ವರ್ಷದ ಮಧ್ಯಭಾಗದಲ್ಲಿ, ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಕದ್ದುಮುಚ್ಚಿ ಈ ಹೊಸ ತೆರಿಗೆಯನ್ನು ಸೇರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ವರದಿಯಾಗಿರುವ ಪ್ರಕಾರ, ವಾಣಿಜ್ಯ ಕಟ್ಟಡಗಳ (Commercial Buildings) ಮಾಲೀಕರಿಗೆ ಈ ಸಾಫ್ಟ್‌ವೇರ್ ಶುಲ್ಕವನ್ನು ₹1,000 ಎಂದು ನಿಗದಿಪಡಿಸಲಾಗಿದೆ.

ಸರ್ಕಾರದ ಈ ನೂತನ ನಡೆಯನ್ನು ವಿಪಕ್ಷಗಳಾದ ಬಿಜೆಪಿ (BJP) ಮತ್ತು ಜೆಡಿಎಸ್ (JD-S) ತೀವ್ರವಾಗಿ ಖಂಡಿಸಿದ್ದು, ಇದನ್ನು "ಸಾರ್ವಜನಿಕರ ಹಗಲು ದರೋಡೆ" ಎಂದು ಬಣ್ಣಿಸಿವೆ. ಆದರೆ, ನಾಗರಿಕರು ಪಾಲಿಕೆ ಕಚೇರಿಗಳಿಗೆ ಅಲೆಯದೆ ಮನೆಯಲ್ಲೇ ಕುಳಿತು ಸುಲಭವಾಗಿ ತೆರಿಗೆ ಪಾವತಿಸಲು ನೆರವಾಗುತ್ತಿರುವ ಡಿಜಿಟಲ್ ಮೂಲಸೌಕರ್ಯ ಹಾಗೂ ತಂತ್ರಜ್ಞಾನದ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಈ ಶುಲ್ಕ ಅಗತ್ಯವಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಪಕ್ಷಗಳ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಜನರು ವಾಸ್ತವವಾಗಿ ಯಾವುದಕ್ಕಾಗಿ ಹಣ ಪಾವತಿಸುತ್ತಿದ್ದಾರೆ? ಸರ್ಕಾರದ ಸಾಫ್ಟ್‌ವೇರ್ ವ್ಯವಸ್ಥೆಗೆ ಸಾರ್ವಜನಿಕರು ಪ್ರತ್ಯೇಕವಾಗಿ ಹಣ ಏಕೆ ನೀಡಬೇಕು? ಈ ತೆರಿಗೆಗೆ ಇರುವ ಕಾನೂನು ಆಧಾರವೇನು, ಇದರ ವೆಚ್ಚದ ವಿವರಣೆ ಹಾಗೂ ಸಾರ್ವಜನಿಕ ಹೊಣೆಗಾರಿಕೆ ಎಲ್ಲಿದೆ? ಇದು ತೆರಿಗೆದಾರರ ಮೇಲೆ ಯಾವುದೇ ಸ್ಪಷ್ಟ ವಿವರಣೆ ನೀಡದೆ ಹೇರಲಾದ ಮತ್ತೊಂದು ಅನಗತ್ಯ ಹೊರೆಯಲ್ಲವೇ? ಇದು ಹಗಲು ದರೋಡೆಯಲ್ಲದೆ ಮತ್ತಿನ್ನೇನು?" ಎಂದು 'ಎಕ್ಸ್' (X) ಖಾತೆಯಲ್ಲಿ ಪ್ರಶ್ನಿಸಿರುವ ಅವರು, ತಕ್ಷಣವೇ ಈ ಶುಲ್ಕವನ್ನು ಹಿಂಪಡೆಯಬೇಕು ಇಲ್ಲವೇ ಸರಿಯಾದ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜೆಡಿಎಸ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, 'ಕಾಂಗ್ರೆಸ್ ಸರ್ಕಾರವು ಹಿಂಬಾಗಿಲ ಮೂಲಕ ಸಾರ್ವಜನಿಕರ ರಕ್ತ ಹೀರುತ್ತಿದೆ. ಬೆಂಗಳೂರಿನ ಆಸ್ತಿ ತೆರಿಗೆಯಲ್ಲಿ ರಹಸ್ಯವಾಗಿ ಸೇರಿಸಲಾದ 'ಸಾಫ್ಟ್‌ವೇರ್ ಶುಲ್ಕ'ವೇ ಇದಕ್ಕೆ ಇತ್ತೀಚಿನ ಉದಾಹರಣೆ. ಈ ಅಕ್ರಮ ಶುಲ್ಕವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು' ಎಂದು ಆಗ್ರಹಿಸಿದೆ.

'ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ವಿಧಿಸಿದ ಸಾಲು ಸಾಲು ತೆರಿಗೆಗಳನ್ನು ಸ್ಮರಿಸಿರುವ ಬೆಂಗಳೂರು ನವನಿರ್ಮಾಣ ಪಾರ್ಟಿ, "ಮೊದಲು ಕಸದ ಸೆಸ್ (Garbage Cess), ನಂತರ ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕ (SWM User Fee), ಈಗ 'ಸಾಫ್ಟ್‌ವೇರ್ ಶುಲ್ಕ'. ಬೆಂಗಳೂರಿನ ತೆರಿಗೆದಾರರಿಂದ ಹಣ ವಸೂಲಿ ಮಾಡಲು ಜಿಬಿಎ ಇನ್ನು ಏನೆಲ್ಲಾ ದಾರಿಗಳನ್ನು ಹುಡುಕಲಿದೆಯೋ?" ಎಂದು ವ್ಯಂಗ್ಯವಾಡಿದೆ.

ಆರಂಭದಲ್ಲಿ ಪಾವತಿಸಿದವರಿಗೆ ಇರಲಿಲ್ಲ ಈ ಶುಲ್ಕ!

ಹಣಕಾಸು ವರ್ಷದ ಆರಂಭದಲ್ಲಿಯೇ (ಏಪ್ರಿಲ್/ಮೇ ತಿಂಗಳಿನಲ್ಲಿ) ಆಸ್ತಿ ತೆರಿಗೆ ಪಾವತಿಸಿದ ಆಸ್ತಿ ಮಾಲೀಕರಿಗೆ ಜಾಲತಾಣದಲ್ಲಿ ಈ 'ಸಾಫ್ಟ್‌ವೇರ್ ಶುಲ್ಕ' ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ಈ ಹೊಸ ಶುಲ್ಕವನ್ನು ತೆರಿಗೆ ಪಾವತಿ ಪೋರ್ಟಲ್‌ನಲ್ಲಿ ಸೇರಿಸಲಾಗಿದೆ ಎಂಬುದು ತಿಳಿದುಬಂದಿದೆ.

ಜಿಬಿಎ ಅಧಿಕಾರಿಗಳ ಸಮರ್ಥನೆ

ಹೊಸ ಶುಲ್ಕದ ಕುರಿತು ಸ್ಪಷ್ಟನೆ ನೀಡಿರುವ ಜಿಬಿಎ ಹಿರಿಯ ಅಧಿಕಾರಿಯೊಬ್ಬರು, "ಈ ಡಿಜಿಟಲ್ ಐಟಿ ವ್ಯವಸ್ಥೆಗಳನ್ನು ನಿರಂತರವಾಗಿ ನಿರ್ವಹಿಸಲು ಮತ್ತು ಉನ್ನತೀಕರಿಸಲು (Upgrading) ಪ್ರಾಧಿಕಾರಕ್ಕೆ ಯಾವುದೇ ಸ್ವತಂತ್ರ ಆದಾಯದ ಮೂಲವಿಲ್ಲ. ಹೀಗಾಗಿ, ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯ ನಿರ್ವಹಣೆಗೆ ಹಣ ಸಂಗ್ರಹಿಸುವ ಉದ್ದೇಶದಿಂದಲೇ ಈ ಸಾಫ್ಟ್‌ವೇರ್ ಶುಲ್ಕವನ್ನು ಜಾರಿಗೆ ತರಲಾಗಿದೆ. ಈಗ ಪ್ರತ್ಯೇಕ ಮಹಾನಗರ ಪಾಲಿಕೆಗಳು ರಚನೆಯಾಗಿರುವುದರಿಂದ, ಅವರಿಂದ ಆಸ್ತಿ ತೆರಿಗೆ ಆದಾಯದ ಪಾಲನ್ನು ಹಂಚಿಕೊಳ್ಳಲು ಕೇಳಲು ಸಾಧ್ಯವಿಲ್ಲ. ಆದ್ದರಿಂದ ಐಟಿ ವೆಚ್ಚಗಳನ್ನು ಭರಿಸಲು ಈ ಸಣ್ಣ ಪ್ರಮಾಣದ ಶುಲ್ಕವನ್ನು ಪರಿಚಯಿಸುವ ಅಗತ್ಯವಿತ್ತು," ಎಂದು ತಿಳಿಸಿದ್ದಾರೆ.

Scroll to load tweet…