RGUHS ಸಂಯೋಜಿತ ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದ ನಿಗದಿತ ಮಿತಿಗಿಂತ ಹೆಚ್ಚಿನ ಪರೀಕ್ಷಾ ಶುಲ್ಕವನ್ನು ನಗದು ರೂಪದಲ್ಲಿ ಅಕ್ರಮವಾಗಿ ವಸೂಲಿ ಮಾಡುತ್ತಿವೆ. ರಸೀದಿ ನೀಡದೆ ನಡೆಯುತ್ತಿರುವ ಈ ದಂಧೆಯ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಕ್ರಮದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಮುಖ್ಯಮಂತ್ರಿಗಳ ಕಚೇರಿಗೆ ದೂರು ನೀಡಲು ಸಿದ್ಧತೆ ನಡೆಸಲಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಸಂಯೋಜನೆಗೆ ಒಳಪಟ್ಟಿರುವ ಹಲವು ಖಾಸಗಿ ವೈದ್ಯಕೀಯ, ನರ್ಸಿಂಗ್ ಹಾಗೂ ಅರೆವೈದ್ಯಕೀಯ (ಪ್ಯಾರಾಮೆಡಿಕಲ್) ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಅಧಿಕೃತ ಶುಲ್ಕಕ್ಕಿಂತ ನಿಗದಿತ ಮಿತಿಗಿಂತ ಹೆಚ್ಚಿನ ಪರೀಕ್ಷಾ ಶುಲ್ಕವನ್ನು ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ವಿಶ್ವವಿದ್ಯಾಲಯ ನಿಗದಿಪಡಿಸಿದ ಪರೀಕ್ಷಾ ಶುಲ್ಕಕ್ಕಿಂತ ಸಾವಿರಾರು ರೂಪಾಯಿ ಹೆಚ್ಚುವರಿ ಹಣವನ್ನು ‘ಕ್ಯಾಶ್’ (ನಗದು) ರೂಪದಲ್ಲಿ ಪಾವತಿಸುವಂತೆ ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿವೆ ಎಂಬ ವೀಡಿಯೋ ಸಾಕ್ಷ್ಯಾಧಾರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ನಿಯಮ ಮೀರಿ ಸಾವಿರಾರು ರೂಪಾಯಿ ಹೆಚ್ಚುವರಿ ವಸೂಲಿ!
ಆರೋಪಗಳ ಪ್ರಕಾರ, ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ವಿದ್ಯಾರ್ಥಿಗಳು ಪಾವತಿಸಬೇಕಾದ ನಿಜವಾದ ಪರೀಕ್ಷಾ ಶುಲ್ಕ ₹4,500 ಇದ್ದರೆ, ಕಾಲೇಜುಗಳು ವಿದ್ಯಾರ್ಥಿಗಳಿಂದ ₹6,500 ವಸೂಲಿ ಮಾಡುತ್ತಿವೆ. ಅದೇ ರೀತಿ, ವಿಶ್ವವಿದ್ಯಾಲಯದ ನಿಯಮದಂತೆ ₹9,000 ಇರಬೇಕಾದ ಪರೀಕ್ಷಾ ಶುಲ್ಕಕ್ಕೆ ಬರೋಬ್ಬರಿ ₹12,000 ರಿಂದ ₹13,000 ಪಾವತಿಸುವಂತೆ ಭೀತಿ ಹುಟ್ಟಿಸಲಾಗುತ್ತಿದೆ. ಇಷ್ಟೇ ಅಲ್ಲದೆ, ಪ್ರಾಯೋಗಿಕ ಪರೀಕ್ಷೆಗೆ (Practical Exam) ನಿಗದಿಯಾಗಿರುವ ₹2,000 ಶುಲ್ಕದ ಬದಲಾಗಿ ₹4,000 ಪಡೆಯಲಾಗುತ್ತಿದೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.
ಗಮನಿಸಬೇಕಾದ ಅಂಶವೇನು?
ಅತ್ಯಂತ ಆತಂಕಕಾರಿ ವಿಷಯವೆಂದರೆ, ಈ ರೀತಿ ವಸೂಲಿ ಮಾಡುತ್ತಿರುವ ಸಾವಿರಾರು ರೂಪಾಯಿ ಹೆಚ್ಚುವರಿ ಹಣಕ್ಕೆ ಕಾಲೇಜು ಆಡಳಿತ ಮಂಡಳಿಗಳು ಯಾವುದೇ ಅಧಿಕೃತ ರಸೀದಿ ಅಥವಾ ಆನ್‌ಲೈನ್ ಪಾವತಿ ಪುರಾವೆಗಳನ್ನು ನೀಡುತ್ತಿಲ್ಲ. ಕೇವಲ ನಗದು ರೂಪದಲ್ಲಿ ಮಾತ್ರ ಹಣ ನೀಡಬೇಕು ಎಂದು ಪಟ್ಟು ಹಿಡಿಯುತ್ತಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ವಿದ್ಯಾರ್ಥಿ ಸಮುದಾಯದ ತೀವ್ರ ಆಕ್ರೋಶ!
"ಶಿಕ್ಷಣ ಸಂಸ್ಥೆಗಳನ್ನು ಧಂದೆ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ. ವಿಶ್ವವಿದ್ಯಾಲಯದ ನಿಯಮಗಳನ್ನು ಕಡೆಗಣಿಸಿ ಖಾಸಗಿ ಕಾಲೇಜುಗಳು ನಡೆಸುತ್ತಿರುವ ಈ ಪರೀಕ್ಷಾ ಶುಲ್ಕದ ದಂದೆಗೆ ಕೊನೆ ಹಾಡುವವರು ಯಾರು? ಕಾಲೇಜು ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರ ಸ್ವಂತ ಖರ್ಚು-ವೆಚ್ಚಗಳಿಗೆ ವಿದ್ಯಾರ್ಥಿಗಳ ಹಣವೇ ಬೇಕೇ?" ಎಂದು ಬಾಧಿತ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲಾಹಲದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಪರೀಕ್ಷೆಯಿಂದ ವಂಚಿತರಾಗುವ ಭಯದಲ್ಲಿ ಹಲವು ವಿದ್ಯಾರ್ಥಿಗಳು ಅನಿವಾರ್ಯವಾಗಿ ಸಾಲ ಸೋಲ ಮಾಡಿ ಕಾಲೇಜುಗಳು ಕೇಳಿದಷ್ಟು ಹಣ ಪಾವತಿಸುತ್ತಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿಗೆ ದೂರು ಸಲ್ಲಿಕೆಗೆ ಸಿದ್ಧತೆ!
ಈ ಅಕ್ರಮದ ಕುರಿತು ಧ್ವನಿ ಎತ್ತಿರುವ ವಿದ್ಯಾರ್ಥಿ ಹಿತರಕ್ಷಣಾ ಹೋರಾಟಗಾರರು, ಈಗಾಗಲೇ ರಾಜ್ಯದ ವಿವಿಧ ಮೂಲಗಳಿಂದ ನೂರಾರು ಬಾಧಿತ ವಿದ್ಯಾರ್ಥಿಗಳಿಂದ ಸಾಕ್ಷ್ಯಾಧಾರಗಳು ಮತ್ತು ಪಾವತಿ ವಿವರಗಳನ್ನು ಸಂಗ್ರಹಿಸಿದ್ದಾರೆ. ಈ ಸಂಪೂರ್ಣ ಅಕ್ರಮ ದಂದೆಯ ಪ್ರಕರವನ್ನು ಸೂಕ್ತ ಸಾಕ್ಷ್ಯಗಳೊಂದಿಗೆ ಮುಖ್ಯಮಂತ್ರಿಗಳ ಕಚೇರಿಯ (CM Office) ಓಎಸ್‌ಡಿ (OSD) ಅವರಿಗೆ ತಲುಪಿಸಿ, ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲು ಸಿದ್ಧತೆ ನಡೆಸಿದ್ದಾರೆ.
ವಿದ್ಯಾರ್ಥಿ ಪರ ಹೋರಾಟಗಾರರು ಹೇಳಿದ್ದೇನು?
RGUHS ಅಡಿಯಲ್ಲಿ ಬರುವ ಪ್ರತಿಯೊಂದು ಕಾಲೇಜಿನಲ್ಲಿಯೂ ಈ ರೀತಿಯ ನಿಗೂಢ ವಸೂಲಿ ದಂದೆ ನಡೆಯುತ್ತಿದೆ. ಕಷ್ಟಪಟ್ಟು ಓದುತ್ತಿರುವ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪರವಾಗಿ ನಾವು ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇಂತಹ ಪ್ರತಿಯೊಂದು ಅಕ್ರಮ ಎಸಗುತ್ತಿರುವ ಕಾಲೇಜುಗಳ ಹೆಸರುಗಳನ್ನು ಸಾರ್ವಜನಿಕವಾಗಿ ಬಯಲು ಮಾಡುತ್ತೇವೆ," ಎಂದು ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳ ಪರ ಹೋರಾಟಗಾರರು ಎಚ್ಚರಿಸಿದ್ದಾರೆ. ಸಂಬಂಧಪಟ್ಟ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರ್‌ಜಿಯುಎಚ್‌ಎಸ್ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಖಾಸಗಿ ಕಾಲೇಜುಗಳ ಅನಧಿಕೃತ ನಗದು ವಸೂಲಿಗೆ ತಡೆ ಒಡ್ಡಬೇಕಿದೆ ಈ ,ಊಲಕ ವಿದ್ಯಾರ್ಥಿಗಳ ಮನವಿಯಾಗಿದೆ.


