ಬೆಂಗಳೂರಿನಿಂದ ಕೇವಲ 1 ಗಂಟೆ ದೂರಲದಲ್ಲಿದೆ ಈ ಡೇಂಜರಸ್ ಯೂ-ಟರ್ನ್‌. ನೀವು ಅಪ್ಪಿ-ತಪ್ಪಿಯೂ ಇಲ್ಲಿ ಮಾತ್ರ ತಿರುವು ತೆಗೆದುಕೊಳ್ಳಬೇಡಿ. ಲಿಂಗಶೆಟ್ಟಿಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 44, ಎರಡು ವರ್ಷಗಳಲ್ಲಿ 30ಕ್ಕೂ ಹೆಚ್ಚು ಸಾವುಗಳಿಗೆ ಸಾಕ್ಷಿಯಾಗಿ 'ಸಾವಿನ ತಾಣ'ವೆನಿಸಿದೆ. ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.

ಚಿಕ್ಕಬಳ್ಳಾಪುರ (ಸೆ.08): ಬೆಂಗಳೂರಿನಿಂದ ಕೇವಲ 1 ಗಂಟೆ ದೂರದ ಪ್ರಯಾಣದಲ್ಲಿರುವ ಚಿಕ್ಕಮಗಳೂರುತಾಲೂಕಿನ ಲಿಂಗಶೆಟ್ಟಿಪುರ ಗೇಟ್ ಬಳಿ ಹಾದುಹೋಗುವ ಬೆಂಗಳೂರು-ಹೈದರಾಬಾದ್ ‘ರಾಷ್ಟ್ರೀಯ ಹೆದ್ದಾರಿ 44 ಸಾವಿನ ತಾಣ ಅಥವಾ ಬ್ಲಾಕ್ ಸ್ಪಾಟ್ ಎಂದು ಕುಖ್ಯಾತಿ ಪಡೆದಿದೆ.

ಕಳೆದ ಎರಡು ವರ್ಷಗಳಲ್ಲಿ ಇದೇ ಸ್ಥಳದಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಇಶಾ ಫೌಂಡೇಶನ್​ನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಉತ್ತರ ಭಾರತದ ದಂಪತಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಟ್ರಕ್‌ಗೆ ಡಿಕ್ಕಿ ಹೊಡೆದು ನಂತರ ದಂಪತಿ ಮೇಲೆ ಟ್ರಕ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು.

ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಸುರಕ್ಷತಾ ಕ್ರಮಗಳ ಕೊರತೆಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಯಾವುದೇ ಹಂಪ್‌ಗಳು, ಸೂಚನಾ ಫಲಕಗಳು ಇಲ್ಲದಿರುವುದು ಪದೇಪದೇ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ದೂರಿದರು.

ಡೇಂಜರ್ ಯೂ-ಟರ್ನ್

ಪ್ರತಿಭಟನೆಯ ನಂತರ, ಆರ್‌ಟಿಓ, ಪಿಡಬ್ಲ್ಯೂಡಿ, ಎನ್‌ಹೆಚ್‌ಎಐ ಮತ್ತು ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಯಾಣಿಕರ ಸುರಕ್ಷತೆಗಾಗಿ ಅಧಿಕಾರಿಗಳು ತಾತ್ಕಾಲಿಕವಾಗಿ ಹೊಸ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. ಇಶಾ ಫೌಂಡೇಶನ್‌ನಿಂದ ಬೆಂಗಳೂರಿಗೆ ಹಿಂದಿರುಗುವವರು ನೇರವಾಗಿ ಹೆದ್ದಾರಿಗೆ ಪ್ರವೇಶಿಸುವ ಬದಲು, ಎಡಕ್ಕೆ ತಿರುಗಿ ಸೇಠ್ ದಿನ್ನೆ ಬಳಿಯ ಫ್ಲೈಓವರ್ ಕೆಳಗೆ ಯು-ಟರ್ನ್ ಮಾಡಿಕೊಂಡು ಬೆಂಗಳೂರಿನತ್ತ ಸಾಗುವಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆದರೆ ಕಾರ್ ಮತ್ತು ವ್ಯಾನ್ ಹಾಗೂ ಬಸ್ ಗಳವರಲ್ಲಿ ಹಲವರು ಸೇಠ್ ದಿನ್ನೆಯ ವರೆಗೂ ಹೋಗದೇ ದೇವಸ್ಥಾನದ ಹೊಸಹಳ್ಳಿ ಗೇಟ್ ಬಳಿಯೇ ಯೂಟರ್ನ್ ತೆಗೆದು ಕೊಳ್ಳುತ್ತಾರೆ.

ಇನ್ನು ಮುಂದುವರೆದು ದ್ವಿಚಕ್ರ ವಾಹನ ಸವಾರರಂತೂ ಲಿಂಗಶೆಟ್ಟಿಪುರ ಗೇಟ್ ಬಳಿ ಹೆದ್ದಾರಿಗೆ ಹಾಕಿರುವ ಬ್ಯಾರಿಕೇಡ್ ಸರಿಸಿ ಹೆದ್ದಾರಿ ದಾಟುತ್ತಾರೆ. ಇನ್ನು ಕೆಲವರು ಸೇಠ್ ದಿನ್ನೆ ಬಳಿಯ ಫ್ಲೈಓವರ್ ಕೆಳಗೆ ಯು-ಟರ್ನ್ ಮಾಡಿಕೊಂಡು ಸಾಗಲು 3-4 ಕಿಲೋ ಮೀಟರ್ ಆಗುತ್ತದೆ ಎಂದು ಹೂನೆಗಲ್ ಬಳಿಯ ಬ್ಯಾರಿಕೇಡ್ ನ ಸಂದಿಯಲ್ಲಿಯೇ ಯೋಟರ್ನ ಪಡೆಯುತ್ತಾರೆ.

ಜೀವಕ್ಕೆ ಮಾರಕವಾದ ಯೂ-ಟರ್ನ್

ಸೇಠ್ ದಿನ್ನೆ ಬಳಿಯ ಫ್ಲೈಓವರ್ ಕೆಳಗೆ ಯುಟರ್ನ್ ಮಾಡಿಕೊಂಡು ಸಾಗಿದಲ್ಲಿ ಸಾಕಷ್ಟು ಸೇಫ್ಟಿ ಪ್ರಯಾಣವಾಗುತ್ತದೆ. ಆದರೆ ಈ ರೀತಿ ಎಲ್ಲೆಂದರಲ್ಲೇ ಯೂಟರ್ನ್ ತೆಗೆದು ಕೊಳ್ಳುವುದರಿಂದ ಇವರ ಜೀವಕ್ಕೆ ಅಲ್ಲದೇ ಅತ್ತ ಕಡೆಯಿಂದ ಬರುವ ವಾಹನಗಳವರ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂಬುದು ವಾಹನ ಸವಾರರ ದೂರಾಗಿದ್ದು, ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.