ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ದಶಕದ ನಂತರ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ. ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ನಿವೇಶನಗಳ ಸಂಖ್ಯೆ, ದರ, ಅಳತೆ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿವರ ಇಲ್ಲಿದೆ.
ಬೆಂಗಳೂರು (ಸೆ.2): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನೂತನವಾಗಿ ನಿರ್ಮಿಸುತ್ತಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನಗಳ ಹಂಚಿಕೆ ಪ್ರಕ್ರಿಯೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ ಸುಮಾರು 2,000 ಜನರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ನಿವೇಶನ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಆಸಕ್ತ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 15ರ ಮಧ್ಯಾಹ್ನ 12 ಗಂಟೆಯವರೆಗೆ ಗಡುವು ವಿಧಿಸಲಾಗಿದೆ.
ಎಷ್ಟು ನಿವೇಶನಗಳು? ದರ ಎಷ್ಟು?
ಬಿಡಿಎ ಸಾರ್ವಜನಿಕರ ಹಂಚಿಕೆಗಾಗಿ ಒಟ್ಟು 2,815 ನಿವೇಶನಗಳನ್ನು (Sites) ಮುಕ್ತಗೊಳಿಸಿದೆ. ಪ್ರಾಧಿಕಾರವು ಪ್ರತಿ ಚದರ ಅಡಿಗೆ (Per Sqft) 6,000 ರೂಪಾಯಿ ದರವನ್ನು ನಿಗದಿಪಡಿಸಿದೆ.
ನಿವೇಶನಗಳ ಅಳತೆ ಮತ್ತು ದರದ ವಿವರ
- 9x12 ಮೀಟರ್ (ಸಣ್ಣ ಪ್ರಮಾಣದ ಸೈಟ್‌ಗಳು): ಒಟ್ಟು 2,500 ನಿವೇಶನಗಳು. ಇದರ ಅಳತೆ ಸುಮಾರು 1,162 ಚದರ ಅಡಿ ಇರಲಿದ್ದು, ಬೆಲೆ ₹69.75 ಲಕ್ಷ.
- 12x18 ಮೀಟರ್: ಒಟ್ಟು 300 ನಿವೇಶನಗಳು. ಇದರ ಬೆಲೆ ₹1.39 ಕೋಟಿ.
- 15x24 ಮೀಟರ್ (ದೊಡ್ಡ ಪ್ರಮಾಣದ ಸೈಟ್‌ಗಳು): ಒಟ್ಟು 15 ನಿವೇಶನಗಳು. ಇದರ ಬೆಲೆ ₹2.32 ಕೋಟಿ.
ನಿವೇಶನದ ಅಳತೆಗೆ ಅನುಗುಣವಾಗಿ ಅರ್ಜಿದಾರರು ನೋಂದಣಿ ಶುಲ್ಕ ಹಾಗೂ ಆರಂಭಿಕ ಠೇವಣಿ ಮೊತ್ತವನ್ನು (Initial Deposit) ಪಾವತಿಸಬೇಕಾಗುತ್ತದೆ.
30x40 ಅಡಿ ಸೈಟ್ ದರದ ಗೊಂದಲಕ್ಕೆ ಬಿಡಿಎ ಸ್ಪಷ್ಟನೆ
ಸಾಮಾನ್ಯವಾಗಿ 30x40 ಅಡಿಯ ನಿವೇಶನ ಎಂದರೆ 1,200 ಚದರ ಅಡಿ ಇರಲಿದ್ದು, ಚದರ ಅಡಿಗೆ ₹6,000 ರಂತೆ ಒಟ್ಟು ಮೊತ್ತ ₹72 ಲಕ್ಷ ಆಗಲಿದೆ ಎಂದು ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಬಿಡಿಎ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದು, ಅತ್ಯಂತ ಕನಿಷ್ಠ ಅಳತೆಯ (9x12 ಮೀಟರ್) ನಿವೇಶನವು ವಾಸ್ತವವಾಗಿ 1,162 ಚದರ ಅಡಿ ಹೊಂದಿರಲಿದೆ, ಹೀಗಾಗಿ ಇದರ ಅಂತಿಮ ಬೆಲೆ ₹69.75 ಲಕ್ಷ ಆಗಲಿದೆ ಎಂದು ತಿಳಿಸಿದೆ.
ದಶಕದ ಬಳಿಕ ಬಿಡಿಎಯಿಂದ ಸಾರ್ವಜನಿಕರಿಗೆ ಸೈಟ್ ಆಫರ್!
ನಾಡಪ್ರಭು ಕೆಂಪೇಗೌಡ ಬಡಾವಣೆಯ ನಂತರ, ಅಂದರೆ ಸುಮಾರು 10 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಬಿಡಿಎ ಸಾರ್ವಜನಿಕರಿಗೆ ನೇರ ಅರ್ಜಿಯ ಮೂಲಕ ಸೈಟ್ ಹಂಚಿಕೆ ಮಾಡುತ್ತಿರುವುದು ಇದೇ ಮೊದಲು. ಕಳೆದ 10 ವರ್ಷಗಳಿಂದ ಬಿಡಿಎ ನಿರ್ಮಿತ ಸೈಟ್‌ಗಳು ಸಾರ್ವಜನಿಕರಿಗೆ ಕೇವಲ ಇ-ಹರಾಜು (Auctions) ಮೂಲಕ ಮಾತ್ರ ಲಭ್ಯವಾಗುತ್ತಿದ್ದವು.
ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಪ್ರಕ್ರಿಯೆ
ಅರ್ಹತೆ: ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಅವರು ಕರ್ನಾಟಕದಲ್ಲಿ ಕನಿಷ್ಠ 15 ವರ್ಷಗಳಿಂದ ವಾಸಿಸುತ್ತಿರಬೇಕು (ಸ್ಥಳೀಯ ನಿವಾಸಿ).
ಅರ್ಜಿ ಸಲ್ಲಿಕೆ ಎಲ್ಲಿ?: ಬಿಡಿಎ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ನಿಗದಿತ ಬ್ಯಾಂಕ್‌ಗಳು, ಕರ್ನಾಟಕ ಒನ್ (Karnataka One), ಬೆಂಗಳೂರು ಒನ್ (Bangalore One) ಹಾಗೂ ಗ್ರಾಮ ಒನ್ (Grama One) ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರಂತ ಬಡಾವಣೆಯ ವಿಶೇಷತೆ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಹತ್ತಿರವಿರುವ ಈ ಶಿವಾರಾಮ ಕಾರಂತ ಬಡಾವಣೆಯು, ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿರುವ 'ಬೆಂಗಳೂರು ಬಿಸಿನೆಸ್ ಕಾರಿಡಾರ್' (ಪೆರಿಫೆರಲ್ ರಿಂಗ್ ರೋಡ್) ಯೋಜನೆಗೂ ನೇರ ಸಂಪರ್ಕ ಹೊಂದಲಿದೆ.


