ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಗಿನ್ನೆಸ್ ವಿಶ್ವ ದಾಖಲೆಗಾಗಿ ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ ಅಭಿಯಾನಕ್ಕೆ ಬರೋಬ್ಬರಿ 12.5 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು (ಆ.19): ಕಳೆದ ಜೂನ್ ತಿಂಗಳಿನಲ್ಲಿ ಒಂದೇ ದಿನ ಬರೋಬ್ಬರಿ 15 ಲಕ್ಷ ಸಸಿಗಳನ್ನು ನೆಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ (Guinness World Record) ಬರೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೊಂಡಿದ್ದ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಬರೋಬ್ಬರಿ 12.5 ಕೋಟಿ ರೂಪಾಯಿ ವೆಚ್ಚವಾಗಿದೆ.

ವಿಧಾನಸಭೆಯ ಅಧಿವೇಶನದಲ್ಲಿ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಮಾಹಿತಿಯನ್ನು ಸದನಕ್ಕೆ ಹಂಚಿಕೊಂಡಿದ್ದಾರೆ. ಗಿನ್ನೆಸ್ ದಾಖಲೆಯ ಪ್ರಯತ್ನಕ್ಕಾಗಿ ಸಸಿಗಳ ಖರೀದಿ, ಸಾಗಣೆ, ಗಿನ್ನೆಸ್ ಪ್ರೊಫೆಷನಲ್ ಕನ್ಸಲ್ಟೆಂಟ್‌ಗಳ ನೇಮಕ, ಡಿಜಿಟಲ್ ಪ್ಲಾಟ್‌ಫಾರ್ಮ್ ವೆಚ್ಚ ಹಾಗೂ ಜಾಹೀರಾತುಗಳಿಗಾಗಿ ಒಟ್ಟು 12.5 ಕೋಟಿ ರೂ. ವೆಚ್ಚವಾಗಿದೆ ಎಂದು ಅವರು ವಿವರಿಸಿದ್ದಾರೆ.

3 ಪ್ರಮುಖ ವಿಭಾಗಗಳಲ್ಲಿ 15 ಲಕ್ಷ ಸಸಿಗಳ ಖರೀದಿ

ಈ ಬೃಹತ್ ಹಸಿರು ಅಭಿಯಾನಕ್ಕಾಗಿ ಬಿಡಿಎ ಮೂರು ಪ್ರಮುಖ ವಿಭಾಗಗಳಲ್ಲಿ ವಿವಿಧ ತಳಿಯ ಸಸಿಗಳನ್ನು ಖರೀದಿ ಮಾಡಿತ್ತು. ಸುಮಾರು 5 ಲಕ್ಷ ಸಾಮಾನ್ಯ ಸ್ಥಳೀಯ ಮರದ ತಳಿಗಳ ಸಸಿಗಳನ್ನು ತಲಾ 54.70 ರೂ. ನಂತೆ ಖರೀದಿಸಲಾಗಿತ್ತು. ಸುಮಾರು 3 ಲಕ್ಷ ಪೊದೆ ಸಸ್ಯಗಳು ಮತ್ತು ಗಿಡಮೂಲಿಕೆ (ಔಷಧೀಯ) ಸಸಿಗಳನ್ನು ತಲಾ 45 ರೂ. ನಂತೆ ತರಿಸಲಾಗಿತ್ತು. ಉಳಿದ 7.5 ಲಕ್ಷ ಸಸಿಗಳು ಅತ್ಯಂತ ಅಪರೂಪದ, ಅಳಿವಿನಂಚಿನಲ್ಲಿರುವ ಹಾಗೂ ಅಪಾಯ ಎದುರಿಸುತ್ತಿರುವ (Rare, Endangered and Threatened) ವಿಶೇಷ ಜಾತಿಯ ಗಿಡಗಳಾಗಿದ್ದವು.

ನೆಟ್ಟ ಸಸಿಗಳು ಒಣಗಿ ಹೋಗದಂತೆ ಪೋಷಿಸಿ, ಅವುಗಳ ಉಳಿವು ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಬಿಡಿಎ ಒಟ್ಟು 23 ಬಿಡಿಎ-ಯೇತರ ಸ್ವಯಂಸೇವಾ ಸಂಸ್ಥೆಗಳನ್ನು (NGOs) ನೇಮಿಸಿಕೊಂಡಿದೆ.

ಎರಡು ನರ್ಸರಿಗಳಿಂದ ಸಸಿಗಳ ಪೂರೈಕೆ

ಒಟ್ಟು 350 ವಿವಿಧ ತಳಿಗಳನ್ನೊಳಗೊಂಡ ಈ 15 ಲಕ್ಷ ಸಸಿಗಳನ್ನು ಬಿಡಿಎ ಇಬ್ಬರು ಪ್ರಮುಖ ಪೂರೈಕೆದಾರರಿಂದ ಪಡೆದುಕೊಂಡಿತ್ತು. ಹೆಸರಘಟ್ಟ ಸಮೀಪದ ಕೊಂಡಶೆಟ್ಟಿಹಳ್ಳಿಯ 'ಈಶಾನ್ ನೇಟಿವ್ ಪ್ಲಾಂಟ್ಸ್' (Ishan Native Plants) ಸಂಸ್ಥೆಯು 10.5 ಲಕ್ಷ ಸಸಿಗಳನ್ನು ಪೂರೈಸಿತ್ತು. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳಿಯ ಶಿವಣ್ಣ ಎಂಬುವವರು ಉಳಿದ 5 ಲಕ್ಷ ಸಸಿಗಳನ್ನು ಪೂರೈಸಿದ್ದರು.

ಎಲ್ಲೆಲ್ಲಿ ಎಷ್ಟು ಸಸಿಗಳನ್ನು ನೆಡಲಾಗಿತ್ತು?

ಸುಮಾರು 200 ಎಕರೆಗೂ ಪ್ರದೇಶದಲ್ಲಿ ಹರಡಿಕೊಂಡಿರುವ ಮೂರು ಪ್ರಮುಖ ಬಡಾವಣೆಗಳಲ್ಲಿ ಈ ಸಸಿ ನೆಡುವ ಬೃಹತ್ ಕಾರ್ಯಕ್ರಮ ನಡೆದಿತ್ತು. ಕೆಂಪೇಗೌಡ ಲೇಔಟ್ ಮತ್ತು ಬನಶಂಕರಿ 6ನೇ ಹಂತದ ಒಟ್ಟು 103.6 ಎಕರೆ ಪ್ರದೇಶದಲ್ಲಿ 8,29,251 ಸಸಿಗಳನ್ನು ನೆಡಲಾಗಿತ್ತು. ಡಾ. ಶಿವರಾಮ ಕಾರಂತ ಲೇಔಟ್ (ಯಲಹಂಕ)ದ ಒಟ್ಟು 94.7 ಎಕರೆ ಪ್ರದೇಶದಲ್ಲಿ 7,31,350 ಸಸಿಗಳನ್ನು ನೆಡಲಾಗಿತ್ತು.