ಬೆಂಗಳೂರಿನ 'ನಮ್ಮ ಮೆಟ್ರೋ' ಪ್ರಯಾಣಿಕರ 'ಲಾಸ್ಟ್ ಮೈಲ್ ಕನೆಕ್ಟಿವಿಟಿ' ಸಮಸ್ಯೆಗೆ ಪರಿಹಾರವಾಗಿ, ಬಿಎಂಟಿಸಿ ಶೀಘ್ರದಲ್ಲೇ 200 ಹೊಸ ಎಸಿ ಮಿನಿ ಎಲೆಕ್ಟ್ರಿಕ್ ಬಸ್‌ಗಳನ್ನು ಮೆಟ್ರೋ ಫೀಡರ್ ಸೇವೆಗಾಗಿ ರಸ್ತೆಗಿಳಿಸಲಿದೆ. ಈ ಬಸ್‌ಗಳು ಮೆಟ್ರೋ ನಿಲ್ದಾಣಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ, ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿವೆ.
ಬೆಂಗಳೂರು (ಸೆ.09): ಬೆಂಗಳೂರಿನ 'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಭರ್ಜರಿ ಸಿಹಿಸುದ್ದಿ ನೀಡಿದೆ. ಮೆಟ್ರೋ ನಿಲ್ದಾಣಗಳಿಗೆ ತೆರಳಲು ಬಡಾವಣೆಗಳ ಜನತೆ ಎದುರಿಸುತ್ತಿರುವ 'ಲಾಸ್ಟ್ ಮೈಲ್ ಕನೆಕ್ಟಿವಿಟಿ' (ಕಡೆಯ ಹಂತದ ಸಂಪರ್ಕ) ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ, ಶೀಘ್ರದಲ್ಲೇ 200 ಹೊಸ ಎಸಿ ಮಿನಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಸಜ್ಜಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ ಇ-ಡ್ರೈವ್’ (PM E-DRIVE) ಯೋಜನೆಯಡಿ ಬಿಎಂಟಿಸಿಗೆ ಹಂತ-ಹಂತವಾಗಿ ಒಟ್ಟು 4,500 ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಸೇರ್ಪಡೆಯಾಗಲಿವೆ. ಈ ಬೃಹತ್ ಜಾಲದ ಪೈಕಿ 200 ಅತ್ಯಾಧುನಿಕ ಮಿನಿ ಎಸಿ ಬಸ್‌ಗಳನ್ನು ಪ್ರತ್ಯೇಕವಾಗಿ 'ಮೆಟ್ರೋ ಫೀಡರ್' ಸೇವೆಗಾಗಿ ಮೀಸಲಿಡಲು ಸಂಸ್ಥೆ ಮಹತ್ವದ ಯೋಜನೆ ರೂಪಿಸಿದೆ.
5 ಕಿ.ಮೀ. ವ್ಯಾಪ್ತಿಯ ಗಲ್ಲಿಗಳಲ್ಲೂ ಸಂಚಾರ:
ಪ್ರಸ್ತುತ ದೊಡ್ಡ ಗಾತ್ರದ ಬಸ್‌ಗಳು ಒಳಭಾಗದ ಕಿರಿದಾದ ರಸ್ತೆಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಹೊಸ ಮಿನಿ ಬಸ್‌ಗಳು ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಲಿವೆ. ಬಡಾವಣೆಗಳ ಕಟ್ಟಕಡೆಯ ಭಾಗಗಳು ಹಾಗೂ ಕಾಲೋನಿಗಳ ಒಳರಸ್ತೆಗಳಿಂದ ನೇರವಾಗಿ ಸಾರ್ವಜನಿಕರನ್ನು ಪಿಕಪ್ ಮಾಡಿ ಮೆಟ್ರೋ ನಿಲ್ದಾಣಗಳಿಗೆ ತಲುಪಿಸಲಿವೆ.
ಖಾಸಗಿ ವಾಹನಗಳ ದಟ್ಟಣೆಗೆ ಬ್ರೇಕ್:
ಮನೆಯಿಂದ ಮೆಟ್ರೋ ನಿಲ್ದಾಣಕ್ಕೆ ಹೋಗಲು ಆಟೋಗಳಿಗೆ ದುಬಾರಿ ಬಾಡಿಗೆ ತೆರಬೇಕಿತ್ತು ಅಥವಾ ಸ್ವಂತ ಬೈಕ್-ಕಾರುಗಳ ಮೊರೆ ಹೋಗಬೇಕಿತ್ತು. ಈ ಮಿನಿ ಎಸಿ ಫೀಡರ್ ಬಸ್‌ಗಳ ಆಗಮನದಿಂದಾಗಿ ಜನರು ಸುಲಭವಾಗಿ, ಕಡಿಮೆ ಖರ್ಚಿನಲ್ಲಿ ಮತ್ತು ಹವಾನಿಯಂತ್ರಿತ (AC) ಸೌಕರ್ಯದೊಂದಿಗೆ ಮೆಟ್ರೋ ತಲುಪಬಹುದು. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ಕಡಿಮೆಯಾಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


