ಬೆಂಗಳೂರಿನಲ್ಲಿ ಸಿನಿಮೀಯ ಮಾದರಿಯಲ್ಲಿ ಕಿಡ್ನ್ಯಾಪ್ ಯತ್ನ ನಡೆದಿದೆ. ಪ್ರಕರಣದಲ್ಲಿ ಹೆತ್ತವರೇ ಮಗಳಿಗೆ ವಿಲನ್ ಆಗಿರುವ ಅನುಮಾನ ಇದೆ. ಅಪಹರಣ ಮಾಡುವ ವೇಳೆ ರಸ್ತೆಯಲ್ಲಿ ಸರಣಿ ಅಪಘಾತ ಮಾಡಿ ತೊಂದರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಾರ್ವಜನಿಕರು ರೋಚಕವಾಗಿ ಚೇಸ್ ಮಾಡಿ ಹಿಡಿದಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ಮಾದರಿಯ ಕಿಡ್ನ್ಯಾಪ್ ಯತ್ನ ನಡುರಸ್ತೆಯಲ್ಲಿ ನಡೆದಿದೆ. ಇಲ್ಲಿ ಹೆತ್ತವರೇ ತಮ್ಮ ಮಗಳನ್ನ ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಯುವತಿಯನ್ನ ಕಾರಿನಲ್ಲಿ ತುಂಬಿಕೊಂಡು ಹೋಗುವ ವೇಳೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಮಾಡಿದ್ದಾರೆ!
ಪ್ರಕರಣದ ಹಿನ್ನೆಲೆ?
ರೋಚಕ ಸ್ಟೋರಿಯ ಹಿನ್ನೆಲೆ ಏನೆಂದು ನೋಡೋದಾದರೆ, ಪೊಲೀಸ್ ಮೂಲಗಳ ಪ್ರಕಾರ.. ರಾಜಸ್ಥಾನ ಮೂಲದ ಯುವತಿ ಯುವಕನೊಬ್ಬನನ್ನು ಪ್ರೀತಿಸಿದ್ದಳು. ಇದಕ್ಕೆ ಕುಟುಂಬದವರ ವಿರೋಧ ಇತ್ತು. ಹೀಗಿದ್ದೂ ಆಕೆ ಆತನನ್ನ ಮದುವೆ ಆಗಿದ್ದಳು. ರಾಜಸ್ಥಾನದಲ್ಲಿದ್ದರೆ ಅಪಾಯ ಇದೆ ಎಂದು ನವ ಜೋಡಿ ಬೆಂಗಳೂರಿಗೆ ಬಂದು ಅಗ್ರಹಾರ ದಾಸರಹಳ್ಳಿಯಲ್ಲಿ ನೆಲೆಸಿದ್ದರು. ಕಳೆದ 15 ದಿನಗಳಿಂದ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿತ್ತು.
ಇತ್ತ ಮಗಳಿಗಾಗಿ ಹುಡುಕಾಟ ನಡೆಸ್ತಿದ್ದ ಪೋಷಕರಿಗೆ ಆಕೆ ಬೆಂಗಳೂರಲ್ಲಿ ನೆಲೆಸಿರೋದು ಗೊತ್ತಾಗಿದೆ. ಅಂತೆಯೇ ಇಂದು ರಾತ್ರಿ ಸುಮಾರು 8 ಗಂಟೆಯ ವೇಳೆಗೆ Hyundai Venue ಕಾರಿನಲ್ಲಿ ಅಗ್ರಹಾರ ದಾಸರಹಳ್ಳಿಯ ಮನೆಗೆ ಬಂದಿದ್ದಾರೆ. ಮನೆಯೊಳಗೆ ನುಗ್ಗಿದ ಮೂವರು ಯುವಕರು ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದಾರೆ.
ಆಗ ಯುವತಿ ಪ್ರಾಣಭಯದಿಂದ ಜೋರಾಗಿ ಕಿರುಚಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರನ್ನು ತಡೆಯಲು ಮುಂದಾಗಿದ್ದಾರೆ. ಸ್ಥಳೀಯರಿಗೆ ಹೆದರಿದ ಕಾರು ಚಾಲಕ ವಾಹನವನ್ನು ನಿಲ್ಲಿಸದೇ ರಸ್ತೆಯಲ್ಲಿ ಅಡ್ಡಬಂದ ಬೈಕ್, ಕಾರುಗಳಿಗೆ ಗುದ್ದಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ತಪ್ಪಿಸಿಕೊಳ್ಳುವ ಧಾವಂತದಲ್ಲಿ ಸಾರ್ವಜನಿಕರ ಮೇಲೆ ಹಾಗೂ ವಾಹನಗಳ ಮೇಲೆ ಕಾರು ಹತ್ತಿಸಿದ್ದಾನೆ. ಘಟನೆಯಲ್ಲಿ ಒಂದು ಮಗುವಿನ ಕಾಲಿನ ಮೇಲೆ ಕಾರು ಹರಿದಿದೆ. ಜೊತೆಗೆ ಸಾರ್ವಜನಿಕರು ಗಾಯಗೊಂಡಿದ್ದಾರೆ.
ಚೇಸ್ ಮಾಡಿ, ಧರ್ಮದೇಟು ಕೊಟ್ಟ ಸಾರ್ವಜನಿಕರು
ಇನ್ನು, ಕಾರು ನಿಲ್ಲಿಸದೆ ಮುನ್ನುಗ್ಗುತ್ತಿದ್ದಂತೆ ಸಾರ್ವಜನಿಕರು ತಮ್ಮ ಬೈಕ್‌ಗಳಲ್ಲಿ ಕಾರನ್ನು ಚೇಸ್ ಮಾಡಲು ಆರಂಭಿಸಿದ್ದಾರೆ. ಅಗ್ರಹಾರ ದಾಸರಹಳ್ಳಿಯಿಂದ ಗೋವಿಂದರಾಜನಗರ, ವಿಜಯನಗರ ಮಾರ್ಗವಾಗಿ ಹೊಸಹಳ್ಳಿಯವರೆಗೂ ಸುಮಾರು 2-3 ಕಿ.ಮೀ ದೂರ ಕಾರನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದಾರೆ. ಕೊನೆಗೆ ಹೊಸಹಳ್ಳಿ ಬಳಿ ಟ್ರಾಫಿಕ್‌ನಲ್ಲಿ ಕಾರು ಸಿಲುಕಿಕೊಂಡಾಗ ಕಾರಿನ ಮೇಲೆ ಕಲ್ಲಗಳನ್ನ ಎತ್ತಿ ಹಾಕಿ ಅಡ್ಡಗಟ್ಟಿದ್ದಾರೆ. ಯುವತಿಯನ್ನು ರಕ್ಷಿಸಿದ ಜನ ಅಪಹರಣಕ್ಕೆ ಯತ್ನಿಸಿದ ರಾಜಸ್ಥಾನ ಮೂಲದ ಮೂವರಿಗೆ ಧರ್ಮದೇಟು ಕೊಟ್ಟಿದ್ದಾರೆ.
ವಿಚಾರ ಗೊತ್ತಾಗುತ್ತಿದ್ದಂತೆಯೇ ಮಾಗಡಿ ರಸ್ತೆ ಹಾಗೂ ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆರೋಪಿಗಳನ್ನ ವಶಕ್ಕೆ ಪಡೆದಿದ್ದು, ಕಿಡ್ನ್ಯಾಪ್‌ಗೆ ಯತ್ನಿಸಿದ ಕಾರನ್ನೂ ಸೀಜ್ ಮಾಡಿದ್ದಾರೆ. ಅಪಹರಣಕ್ಕೆ ಒಳಗಾದ ಯುವತಿ ಹಾಗೂ ವಶದಲ್ಲಿರುವ ಆರೋಪಿಗಳನ್ನು ವಿಜಯನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಗಾಯಗೊಂಡಿರುವ ಸಾರ್ವಜನಿಕರು ಹಾಗೂ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.


