ರಾಜ್ಯದ 805 ಪೆಟ್ರೋಲ್ ಬಂಕ್‌ಗಳ ಪೈಕಿ 768 ಬಂಕ್‌ಗಳಲ್ಲಿ ಇಂಧನ ಅಳತೆಯಲ್ಲಿ ಭಾರೀ ಗೋಲ್‌ಮಾಲ್ ನಡೆಯುತ್ತಿರುವುದು ತಪಾಸಣೆಯಿಂದ ಬಹಿರಂಗವಾಗಿದೆ. ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಮಾಹಿತಿ ನೀಡಿದ್ದು, ಗ್ರಾಹಕರು ದೂರು ನೀಡಲು ಟೋಲ್ ಫ್ರೀ ಸಂಖ್ಯೆ 18005991100 ಬಿಡುಗಡೆ ಮಾಡಿದ್ದಾರೆ. ಕೇಂದ್ರದ ಹೊಸ ನಿಯಮಗಳನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಿದೆ.
ಬೆಂಗಳೂರು: ಹೋಟೆಲ್, ರೆಸ್ಟೋರೆಂಟ್ ಬಳಿಕ ಈಗ ಪೆಟ್ರೋಲ್ ಬಂಕ್‌ಗಳ ಸರದಿ ಶುರುವಾಗಿದೆ. ರಾಜ್ಯದ 805 ಬಂಕ್ ಗಳಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ, 768 ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಅಳತೆಯಲ್ಲಿ ಗೋಲ್‌ಮಾಲ್ ಮಾಡುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಆಹಾರ ಸಚಿವ ರಿಜ್ವಾನ್ ಅರ್ಷದ್ ಮಾಹಿತಿ ಹಂಚಿಕೊಂಡಿದ್ದರೆ.
ಪೆಟ್ರೋಲ್ ಹಾಕಿಸುವ ಮುನ್ನ ಎಚ್ಚರ: ಬಂಕ್‌ಗಳ ಹಿಂದಿನ ರಹಸ್ಯವೇನು?
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಒಂದು ಮಹತ್ವದ ವಿಚಾರ ಇಂದು ಮಾತನಾಡುತ್ತಿದ್ದೇವೆ. ಇಂಧನ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ವಿಚಾರ, ನಮ್ಮ ರಾಜ್ಯದಲ್ಲಿ 5946 ಪೆಟ್ರೋಲ್ ಬಂಕ್ ಗಳಿವೆ. ಇಲ್ಲಿ ಜನರಿಗೆ ಸರಿಯಾದ ಪ್ರಮಾಣದಲ್ಲಿ ಇಂಧನ ಸಿಗುತ್ತಿದೆಯೇ ಎಂದು ಅಧ್ಯಯನ ಮಾಡಿದ್ದೇವೆ. 805 ಬಂಕ್ ಗಳನ್ನು ತಪಾಸಣೆ ಮಾಡಿದ್ದೇವೆ, ಇದರಲ್ಲಿ 768 ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
2,618 ಗನ್ ಗಳಲ್ಲಿ ಇಂಧನ ಕಡಿಮೆ
ದೂರು ಬಂದ ತಪಾಸಣೆ ಮಾಡುವುದು ಸಾಮಾನ್ಯ, ಆದರೆ ವೈಜ್ಞಾನಿಕವಾಗಿ ಸರ್ಕಾರದಿಂದ ತಪಾಸಣೆ ಮಾಡಿದ್ದೇವೆ. ನಾವು ತಪಾಸಣೆ ಮಾಡಿರುವ ಬಂಕ್ ಗಳಲ್ಲಿ, 768 ಬಂಕ್ ಗಳಲ್ಲಿ ಅಳತೆ ಯಲ್ಲಿ ಹೆಚ್ಚು ಕಡಿಮೆ ಇರುವುದು ತಿಳಿದು ಬಂದಿದೆ. ಇದರಿಂದ ನಾವು ಅಂತಹ ಬಂಕ್‌ಗಳಿಗೆ ದಂಡ ಕೂಡ ಹಾಕುತ್ತಿದ್ದೇವೆ. 805 ಬಂಕ್ ಗಳಲ್ಲಿ, 3071 ಪೆಟ್ರೋಲ್ ಗನ್ ಗಳಿದೆ. ಅದರಲ್ಲಿ 2,618 ಗನ್ ಗಳಲ್ಲಿ ಇಂಧನ ಕಡಿಮೆ ಬಂದಿವೆ. ಈ ರೀತಿಯ ಪೆಟ್ರೋಲ್ ಗನ್ ಗಳಲ್ಲಿ ಇಂಧನ ಕಡಿಮೆ ಬರುವುದಾದರೆ ಪೆಟ್ರೋಲ್ ಬಂಕ್ ನವರೇ ಮಾಹಿತಿ ಕೊಡಬೇಕು. ಬಂಕ್ ನವರು ಪ್ರತಿದಿನ ಚೆಕ್ ಮಾಡುವ ಬೇಕು. 85 ಪರ್ಸೆಂಟ್ ಗನ್ ಗಳಲ್ಲಿ ಇಂಧನ ಸರಿಯಾಗಿ ಬರುತ್ತಿಲ್ಲ ಎಂದು ಸಚಿವರು ವಿವರಿಸಿದರು.
ಕೇಂದ್ರ ರಾಜ್ಯ ಸರ್ಕಾರದ ಪತ್ರ
ಇನ್ನು, ಈ ಸಂಬಂಧ ಕೇಂದ್ರ ಸರ್ಕಾರದಿಂದ ಒಂದು ನೋಟಿಫಿಕೇಶನ್ ಬಂದಿದೆ. 2025ರ ಡಿಸೆಂಬರ್ 18ರಂದು ಬಂದಿರುವ ನೋಟಿಫಿಕೇಶನ್ ಪ್ರಕಾರ, ಮೊದಲು ಪ್ರತಿವರ್ಷ ಎಲ್ಲಾ ಬಂಕ್ ಗಳಲ್ಲಿ ಪೆಟ್ರೋಲ್ ಅಳತೆ ಸರಿಯಾಗಿ ಬರುತ್ತಿದೆಯೇ ಎಂದು ಚೆಕ್ ಮಾಡಬೇಕು ಎಂದು ಇತ್ತು. ಆದರೆ ಹೊಸ ನೋಟಿಫಿಕೇಶನ್ನಲ್ಲಿ ಎರಡು ವರ್ಷಕ್ಕೆ ಒಮ್ಮೆ ಚೆಕ್ ಮಾಡಬೇಕು ಅಂತ ನೋಟಿಫಿಕೇಷನ್ ಹೊರಡಿಸಿದ್ದಾರೆ. ಅಳತೆಗೆ ಸರಿಯಾಗಿ ಬರಲಿಲ್ಲ ಅಂದರೆ ಜನರಿಗೆ ಮೋಸ ಆಗುತ್ತದೆ. ಈ ಸಂಬಂಧ ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದರು.
ಕೇಂದ್ರ ನೋಟಿಫಿಕೇಶನ್‌ನನ್ನು ನಾವು ಒಪ್ಪುವುದಿಲ್ಲ
ನಾವು ಪರಿಶೀಲನೆ ನಡೆಸಿದ ಸಂದರ್ದಲ್ಲಿ ಗ್ರೌಂಡ್ ರಿಯಾಲಿಟಿ ಈ ರೀತಿ ಇದೆ ತಿಳಿದು ಬಂದಿದೆ. ಯಾವ ಆಧಾರದ ಮೇಲೆ ನೀವು ಎರಡು ವರ್ಷಕ್ಕೆ ಒಮ್ಮೆ ಚೆಕ್ ಮಾಡಲು ಹೇಳಿದ್ದೀರಿ ಅಂತ ಕೇಳುತ್ತೇವೆ. ಈಗ ಮತ್ತೊಂದು ನೋಟಿಫಿಕೇಶನ್ ಬಂದಿದೆ. ತಪಾಸಣೆ ಮಾಡುವ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದ್ದಾರೆ. ಆ ರೀತಿ ಯಾರು ಬೇಕಾದರೂ ತಪಾಸಣೆ ಮಾಡುವುದಾದರೆ ಅದರ ಮೇಲೆ ನಿಯಂತ್ರಣ ಇರುತ್ತಾ? ಪೆಟ್ರೋಲ್ ಬಂಕ್ ಮಾಲೀಕರು ಅವರಿಗೆ ಬೇಕಾದ ಕಡೆ ಚೆಕ್ ಮಾಡಿಸಿ ಸರ್ಟಿಫಿಕೇಟ್ ಪಡೆದರೆ ಅದರ ನಷ್ಟ ಗ್ರಾಹಕರಿಗೆ ಆಗಲ್ವಾ? ಎಂದು ಸಚಿವರು ಕೇಂದ್ರ ಸರ್ಕಾರ ನಿರ್ಧಾರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಈ ಎರಡೂ ನೋಟಿಫಿಕೇಶನ್‌ಗಳನ್ನೂ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2015ರಲ್ಲೇ ಮೋದಿ ಸರ್ಕಾರ ನೋಟಿಫಿಕೇಶನ್ ತಿರಸ್ಕಾರ
ಐದು ಲೀಟರ್ ಇಂಧನದ ಅಳತೆ ಚೆಕ್ ಮಾಡಿದಾಗ, ಸುಮಾರು ಐವತ್ತರಿಂದ ಎಪ್ಪತ್ತು ಎಂಎಲ್ ಗಳು ಕಡಿಮೆ ಬಂದಿದೆ. 3071 ನಾಸಲ್ಸ್ ತಪಾಸಣೆ ಮಾಡಿದ್ದೇವೆ, ಆದರೆ ಈ ಪೈಕಿ 2618 ನಾಸಲ್ಸ್ (ಪೆಟ್ರೋಲ್ ಗನ್)ನಲ್ಲಿ ಲೋಪ ಕಂಡು ಬಂದಿದೆ. 2015ರಲ್ಲೇ ಮೋದಿ ಸರ್ಕಾರ ರಾಜ್ಯಕ್ಕೆ ಒಂದು ನೋಟಿಫಿಕೇಶನ್ ಕಳಿಸಿತ್ತು. ಖಾಸಗಿಯವರಿಂದ ಪೆಟ್ರೋಲ್ ಬಂಕ್ ಅಳತೆ ಮಾಪನವನ್ನು ಚೆಕ್ ಮಾಡಿಸುವ ನೋಟಿಫಿಕೇಶನ್ ಹೊರಡಿಸಿತ್ತು. ಆಗಲೂ ಇದನ್ನು ಒಪ್ಪಿರಲಿಲ್ಲ, ಈಗ ಮತ್ತೆ ಹೊರಡಿಸಿದ್ದಾರೆ. ನಾವು ಮತ್ತೆ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಟೋಳ್ ಫ್ರೀ ಸಂಖ್ಯೆ, ಇಮೇಲ್ಗೆ ದೂರು ಕೊಡಿ
ನಮ್ಮ ರಾಜ್ಯದ ನಿಯಮಗಳ ಪ್ರಕಾರ ಸಾರ್ವಜನಿಕರಿಗೆ ಕಾಣುವಂತೆ ಬೋರ್ಡ್ ಹಾಕಬೇಕು ಅಂತ ಆದೇಶ ಮಾಡುತ್ತೇವೆ. ಯಾವಾಗ ನಿಮ್ಮ ಕ್ಯಾಲಿಬರೇಷನ್ ಆಗಿದೆ ಎಂಬ ವಿಚಾರ ಬೋರ್ಡ್ ಗಳಲ್ಲಿ ಹಾಕಬೇಕು. ಪ್ರತಿ ಬಂಕ್ ಇಲಾಖೆಯಿಂದ ಪ್ರಮಾಣೀಕೃತ ಐದು ಲೀಟರ್ ಕ್ಯಾನ್ ಇಡಬೇಕು. ಗ್ರಾಹಕರಿಗೆ ಅನುಮಾನ ಬಂದರೆ ಬಂಕ್ ನವರು ಅದರಲ್ಲಿ ಪೆಟ್ರೋಲ್ ಅಳತೆ ತೋರಿಸಬೇಕು. ಟಾಯ್ಲೆಟ್, ಹಾಗೂ ಕುಡಿಯುವ ನೀರಿನ ಸೌಲಭ್ಯಗಳನ್ನು ಕೊಡಬೇಕು. ಈಗ ಸದ್ಯಕ್ಕೆ ಕೇವಲ ಪ್ರಧಾನಿಗಳ ಫೋಟೋ ಹಾಕಿದ್ದಾರೆ. ನಮ್ಮ ಇಲಾಖೆಯಿಂದ ಇಂದಿನಿಂದ ಒಂದು ಟೋಲ್ ಫ್ರೀ ಸಂಖ್ಯೆ ಕೊಡ್ತಾ ಇದ್ದೇವೆ. ಜನರಿಗೆ ಕಾಣುವಂತೆ ಬಂಕ್ ಗಳಲ್ಲಿ ಅಳವಡಿಸಬೇಕು. ಗ್ರಾಹಕರಿಗೆ ಏನಾದರೂ ಅನುಮಾನ ಬಂದರೆ ಆ ನಂಬರ್ ಗೆ ಕರೆ ಮಾಡಬಹುದು. ಟ್ರೋಲ್ ಫ್ರೀ ಸಂಖ್ಯೆ 18005991100, ಇದರ ಜೊತೆಗೆ ಒಂದು ಮೇಲ್ ಐಡಿ ಕೂಡಾ ಕೊಡ್ತೀವಿ clm/lm/k@nic.in ನಿಮ್ಮ ದೂರು ಕೂಡ ಕೊಡಬಹುದು ಎಂದು ತಿಳಿಸಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಮಾಡಲು ಆಗ್ರಹ
ನಮ್ಮ ಸರ್ಕಾರದ ಪ್ರಮುಖ ಗ್ಯಾರಂಟಿ ಇದು, ಅಳತೆ ಗ್ಯಾರಂಟಿ. ಮಿಷನ್ ನಿಖರ ಎಂಬ ಅಭಿಯಾನ ನಮ್ಮ ಸರ್ಕಾರದಿಂದ ನಾವು ಮಾಡುತ್ತೇವೆ. ಪ್ರತಿ ಬಂಕ್ ಮಾಲೀಕರು ಸಹಾ ಇಲಾಖೆಯ ಅಳತೆ ಮಾಪನದ ಮೂಲಕ ಅಳತೆ ಮಾಡಬೇಕು. ವ್ಯತ್ಯಾಸ ಕಂಡು ಬಂದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು. ಬೆಲೆ ಏರಿಕೆಯಿಂದ ಗ್ರಾಹಕರಿಗೆ ಬಹಳ ಕಷ್ಟ ಇದೆ, ಮೋದಿ ಬಂದ ತಕ್ಷಣವೇ ಬೆಲೆ ಕಡಿಮೆ ಮಾಡ್ತೀವಿ ಎಂದಿದ್ದರು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಕಡಿಮೆ ಆದರೂ ಸಹ ಇಲ್ಲಿ ಇಂಧನ ಬೆಲೆ ಕಡಿಮೆ ಆಗಿಲ್ಲ. ಪದೇ ಪದೇ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂದರೆ ಅಂತಹ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡ್ತೇವೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.



