ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಸಮ್ಮತಿಸಿದ್ದು, ನಟ ದರ್ಶನ್‌ಗೆ ಸಂಕಷ್ಟ ಎದುರಾಗಿದೆ. ಇದೇ ವೇಳೆ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಮೂವರು ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಆರೋಪಿ ಲಕ್ಷ್ಮಣ್ ಆರೋಗ್ಯ ವರದಿ ನೀಡಲು ಕೋರ್ಟ್ ಸೂಚಿಸಿದೆ.
ಬೆಂಗಳೂರು: ನಟ ದರ್ಶನ್ ಮತ್ತು ಆತನ ಡಿ ಗ್ಯಾಂಗ್ ಭಾಗಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊ*ಲೆ ಪ್ರಕರಣದಲ್ಲಿ ದರ್ಶನ್ ಗೆ ಮತ್ತೆ ಡಬಲ್ ಶಾಕ್ ಎದುರಾಗಿದೆ. ನಗರದ 59ನೇ ಅಪರ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೂಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ (ಅಪ್ರೂವರ್) ಅರ್ಜಿಯನ್ನು ಪುರಸ್ಕರಿಸಿ ಆದೇಶಿಸಿದೆ.
ಪ್ರದೂಷ್ ಸಲ್ಲಿಕೆ ಮಾಡಿದ್ದ ಮನವಿ ವಜಾ, ಮಾಫಿ ಸಾಕ್ಷಿಗೆ ಒಪ್ಪಿಗೆ
ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರಿದ್ದ ಪೀಠವು ಈ ನಿರ್ಣಾಯಕ ಆದೇಶವನ್ನು ಹೊರಡಿಸಿದೆ. ಪ್ರದೂಷ್ ವಿರುದ್ಧ ದಾಖಲಾಗಿರುವ ಎನ್‌ಸಿಆರ್ (Non-Cognizable Report) ತನಿಖೆ ಪೂರ್ಣಗೊಳ್ಳುವವರೆಗೆ ಮಾಫಿ ಸಾಕ್ಷಿ ಅರ್ಜಿಯ ಆದೇಶವನ್ನು ಕಾಯ್ದಿರಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ತದನಂತರ, ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಅರ್ಜಿಯನ್ನು ಮಾನ್ಯ ಮಾಡಿತು.
ವಿಚಾರಣೆ ವೇಳೆ ನ್ಯಾಯಾಧೀಶರು, "ನಿಮ್ಮನ್ನು ಮಾಫಿ ಸಾಕ್ಷಿಯಾಗಿ ಮಾನ್ಯ ಮಾಡುತ್ತಿರುವುದಕ್ಕೆ ನಿಮ್ಮ ಸಂಪೂರ್ಣ ಸಮ್ಮತಿ ಇದೆಯೇ?" ಎಂದು ಪ್ರದೂಷ್‌ನನ್ನು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರದೂಷ್, "ನನಗೆ ಪೂರ್ಣ ಒಪ್ಪಿಗೆ ಇದೆ" ಎಂದು ಸ್ಪಷ್ಟಪಡಿಸಿದನು. ಇದೇ ವೇಳೆ ಆದೇಶದ ಪ್ರತಿಯನ್ನು ಒದಗಿಸುವಂತೆ ಪ್ರದೂಷ್ ಕೋರಿದಾಗ, ನ್ಯಾಯಾಲಯವು ನಿಯಮಾನುಸಾರ ಆದೇಶದ ಪ್ರತಿ ನೀಡಲಾಗುವುದು ಎಂದು ಹೇಳಿತು.
ಪವಿತ್ರಾ ಗೌಡ ಸೇರಿ ಮೂವರಿಂದ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಕೆ
ಇನ್ನೊಂದೆಡೆ, ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತೆ ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ಜೊತೆಗೆ ಪ್ರಕರಣದ ಇತರ ಆರೋಪಿಗಳಾದ ಜಗದೀಶ್ ಹಾಗೂ ಅನುಕುಮಾರ್ ಕೂಡ ಹೊಸದಾಗಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಪ್ರಕರಣದಲ್ಲಿ ಗಮನ ಸೆಳೆದಿದ್ದಾರೆ.
ಆರೋಪಿ ಲಕ್ಷ್ಮಣ್ ಆರೋಗ್ಯ ಸ್ಥಿತಿಗತಿಯ ಮಾಹಿತಿ ಪಡೆದ ಕೋರ್ಟ್
ಪ್ರಕರಣದ ಎ12 ಆರೋಪಿ ಲಕ್ಷ್ಮಣ್ ಅವರ ಆರೋಗ್ಯದ ಕುರಿತು ನ್ಯಾಯಾಲಯ ವಿಚಾರಣೆ ನಡೆಸಿತು. ಪ್ರಸ್ತುತ ಲಕ್ಷ್ಮಣ್ ಅವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ಈ ಬಗ್ಗೆ ಸಮಗ್ರ ಚಿಕಿತ್ಸಾ ವರದಿಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿತು.


