ಯಶವಂತಪುರ ಎಪಿಎಂಸಿಗೆ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ರೈತರು ಮತ್ತು ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಮಾರುಕಟ್ಟೆಯ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದರು. ಶ್ರಮಿಕರ ಜೊತೆ ಕುಳಿತು ಇಡ್ಲಿ-ಕಾಫಿ ಸವಿದ ಸಿಎಂ, ಹೋಟೆಲ್ ಬಿಲ್ ಪಾವತಿಸಿ ಅಲ್ಲಿನ ಉಳಿದ ಗ್ರಾಹಕರಿಗೂ ಉಚಿತ ಉಪಹಾರದ ವ್ಯವಸ್ಥೆ ಮಾಡಿ ಅಚ್ಚರಿ ಮೂಡಿಸಿದರು.
ಬೆಂಗಳೂರು: ರಾಜಧಾನಿಯ ಜನನಿಬಿಡ ಮಾರುಕಟ್ಟೆ ಯಶವಂತಪುರ ಎಪಿಎಂಸಿಯಲ್ಲಿ ಇಂದು ಮುಂಜಾನೆ ವಿಶೇಷ ದೃಶ್ಯವೊಂದು ಕಂಡುಬಂದಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಠಾತ್ ಭೇಟಿ ನೀಡಿ, ಅಲ್ಲಿನ ಶ್ರಮಜೀವಿಗಳ ಜೊತೆ ಸಾಮಾನ್ಯರಲ್ಲಿ ಒಬ್ಬರಂತೆ ಬೆರೆತರು. ಕೇವಲ ಸಮಸ್ಯೆಗಳನ್ನು ಆಲಿಸುವುದು ಮಾತ್ರವಲ್ಲದೆ ಅಲ್ಲಿನ ಕಾರ್ಮಿಕರ ಜೊತೆ ಕುಳಿತು ಉಪಹಾರ ಸೇವಿಸಿ ಎಲ್ಲರ ಗಮನ ಸೆಳೆದರು.
ಶ್ರಮಿಕರ ನೋವಿಗೆ ಕಿವಿಯಾದ ಸಿಎಂ
ಮುಂಜಾನೆಯೇ ಮಾರುಕಟ್ಟೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ರೈತರು ಮತ್ತು ವ್ಯಾಪಾರಸ್ಥರ ಬಳಿ ತೆರಳಿ ಮಾರುಕಟ್ಟೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಯಾವ ರಾಜ್ಯಗಳಿಂದ ಪದಾರ್ಥಗಳು ಬರುತ್ತಿವೆ? ದರ ಎಷ್ಟಿದೆ? ಮಾರುಕಟ್ಟೆಯ ವ್ಯವಸ್ಥೆ ಹೇಗಿದೆ? ಎಂಬುದನ್ನು ಖುದ್ದಾಗಿ ಕೇಳಿ ತಿಳಿದುಕೊಂಡರು. ಹುದ್ದೆ ಏನೇ ಇರಲಿ, ಜನರ ಜೊತೆಗಿನ ಈ ಆತ್ಮೀಯತೆ ಯಾವತ್ತೂ ಬದಲಾಗದು ಎಂದು ಹೇಳುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಬಿಸಿ ಇಡ್ಲಿ ಸವಿದು ಬಿಲ್ ಪಾವತಿ
ಮಾರುಕಟ್ಟೆಯ ವೀಕ್ಷಣೆಯ ನಂತರ.. ಅಲ್ಲೇ ಇದ್ದ ಸಣ್ಣ ಕ್ಯಾಂಟೀನ್ ಒಂದಕ್ಕೆ ತೆರಳಿದ ಸಿಎಂ, ಅಲ್ಲಿನ ಶ್ರಮಜೀವಿಗಳ ಜೊತೆ ಬೆಂಚ್ ಮೇಲೆ ಕುಳಿತು ಬಿಸಿ ಬಿಸಿ ಇಡ್ಲಿ ಮತ್ತು ಕಾಫಿ ಸವಿದರು. ಉಪಹಾರ ಮುಗಿಸಿದ ನಂತರ ಕ್ಯಾಂಟೀನ್ ಮಾಲೀಕನಿಗೆ ಸ್ವತಃ ತಾವೇ ಹಣ ಪಾವತಿ ಮಾಡಿದರು. ಈ ವೇಳೆ ಸಿಎಂ ಮಾಡಿದ ಒಂದು ಕೆಲಸ ಅಲ್ಲಿನವರ ಮೆಚ್ಚುಗೆಗೆ ಪಾತ್ರವಾಯಿತು. ಕ್ಯಾಂಟೀನ್ ಮಾಲೀಕನಿಗೆ ಸೂಚನೆ ನೀಡಿದ ಡಿ.ಕೆ.ಶಿ, ಇಲ್ಲಿ ಯಾರೆಲ್ಲಾ ಉಪಹಾರ ಸೇವನೆ ಮಾಡಿದ್ದಾರೋ ಅವರ ಬಳಿ ಯಾರಿಂದಲೂ ಹಣ ಇಸ್ಕೋಬೇಡಿ, ಎಲ್ಲವನ್ನೂ ನಾನೇ ಪಾವತಿ ಮಾಡುತ್ತೇನೆ ಎಂದು ಹೇಳಿ ಉದಾರತೆ ಮೆರೆದರು.
ಟ್ವಿಟರ್‌ನಲ್ಲಿ ಭಾವನಾತ್ಮಕ ಪೋಸ್ಟ್!
ಮಾರುಕಟ್ಟೆ ಭೇಟಿಯ ನಂತರ ತಮ್ಮ ಅನುಭವವನ್ನು ಟ್ವಿಟರ್‌ನಲ್ಲಿ (X) ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಬಹಳ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಬೆವರ ಹನಿಯನ್ನೇ ಬಂಡವಾಳವಾಗಿಸಿ ದುಡಿಯುವ ನಿಮ್ಮ ಈ ಮುಖಗಳಲ್ಲೇ ನನಗೆ ಕಾಯಕವೇ ಕೈಲಾಸದ ನಿಜವಾದ ದರ್ಶನವಾಗಿದೆ. ನಿಮ್ಮ ಪ್ರೀತಿಯ ನಡುವೆ ಒಟ್ಟಿಗೆ ಸವಿದ ಬಿಸಿ ಇಡ್ಲಿ, ಕುಡಿದ ಒಂದು ಲೋಟ ಕಾಫಿ ನನ್ನ ದಿನದ ಅತ್ಯುತ್ತಮ ಕ್ಷಣಗಳು ಎಂದು ತಿಳಿಸಿದ್ದಾರೆ. ರೈತರ ಮತ್ತು ವ್ಯಾಪಾರಸ್ಥರ ಹಿತ ಕಾಯುವುದು ನಮ್ಮ ಸರ್ಕಾರದ ಆದ್ಯತೆ. ಇಲ್ಲಿ ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಮಾರುಕಟ್ಟೆ ಪರಿಸರವನ್ನು ಮತ್ತಷ್ಟು ಉತ್ತಮಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.


